ಸುರಪುರ: ಕೃಷ್ಣಾ ನದಿಯಲ್ಲಿ ಉಂಟಾದ ಪ್ರವಾಹದಿಂದ ಸಂತ್ರಸ್ಥರಾದ ತಾಲೂಕಿನ ವಿವಿಧ ಗ್ರಾಮಗಳ ನೆರೆ ಪೀಡಿತ ಗ್ರಾಮಸ್ಥರಿಗೆ ಸ್ಥಳೀಯ ಡಾ.ಬಿ.ಆರ್.ಅಂಬೇಡ್ಕರ ವಿದ್ಯಾವರ್ಧಕ ಸಂಘ ಶಿಕ್ಷಣ ಸಂಸ್ಥೆಯ ವತಿಯಿಂದ ಬುಧುವಾರದಂದು ನಗರದ ಕುಂಬಾರಪೇಟ ಗಂಜ್‌ನಲ್ಲಿರುವ ಪ್ರವಾಹ ಸಂತ್ರಸ್ಥರಿಗೆ ಆಶ್ರಯ ಕಲ್ಪಿಸಿರುವ ಗಂಜಿ ಕೇಂದ್ರಕ್ಕೆ ತೆರಳಿ ೨೫ ಕ್ವಿಂಟಾಲ್ ಅಕ್ಕಿ ಹಾಗೂ ಇತರ ದಿನಬಳಕೆಯ ಆಹಾರ ಧಾನ್ಯಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಶಾಸಕ ರಾಜುಗೌಡ ಮಾತನಾಡಿ ಅಂಬೇಡ್ಕರ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಭೀಮಣ್ಣ ಬಿಲ್ಲವ್ ಹಾಗೂ ಸಂಸ್ಥೆಯ ಇತರರು ಕೃಷ್ಣಾ ನದಿಯ ಪ್ರವಾಹದಿಂದ ಸಂಕಷ್ಟಗೊಳಗಾದ ಜನರಿಗೆ ಅಕ್ಕಿ ಹಾಗೂ ಆಹಾರ ಧಾನ್ಯಗಳನ್ನು ವಿತರಿಸಿ ನೆರವು ನೀಡಿರುವುದು ಶ್ಲಾಘನೀಯ ಕಾರ್ಯ ಎಂದು ಹೇಳಿದರು, ತಮ್ಮ ಮನೆ, ಮಠಗಳನ್ನು ಕಳೆದುಕೊಂಡು ನಿರಾಶ್ರಿತರಾಗಿರುವ ಹಾಗೂ ಸಾವಿರಾರು ಎಕರೆ ಜಮೀನಿನಲ್ಲಿ ಬೆಳೆದು ನಿಂತಿದ್ದ ಕೋಟ್ಯಾಂತರ ರೂಪಾಯಿ ಮೌಲ್ಯದ ಬೆಳೆ ಹಾನಿಗೊಂಡು ಸಂಕಷ್ಟದಲ್ಲಿರುವ ಜನರಿಗೆ ಇತರೆ ಸಂಘ-ಸಂಸ್ಥೆಗಳು ನೆರವು ನೀಡಬೇಕು, ಅಂಬೇಡ್ಕರ ಶಿಕ್ಷಣ ಸಂಸ್ಥೆಯು ಇತರರಿಗೆ ಮಾದರಿಯಾಗಿದೆ ಎಂದು ಹೇಳಿದರು.
ಶಿಕ್ಷಣ ಸಂಸ್ಥೆಯ ಮುಖಂಡರಾದ ಭೀಮಣ್ಣ ಬಿಲ್ಲವ್ ಮಾತನಾಡಿ ಅಂಬೇಡ್ಕರ ಶಿಕ್ಷಣ ಸಂಸ್ಥೆಯು ಕಳೆದ ೪೦ ವರ್ಷಗಳಿಂದ ಸುರಪುರ, ರಂಗಂಪೇಟ, ಕಲಬುರಗಿ, ಹುಣಸಗಿ, ಕಕ್ಕೇರಾ, ಶಹಾಪುರ ಸೇರಿದಂತೆ ಅನೇಕ ಕಡೆಗಳಲ್ಲಿ ವಿವಿಧ ಶಾಲಾ-ಕಾಲೇಜುಗಳನ್ನು ಹಾಗೂ ವಸತಿ ನಿಲಯಗಳನ್ನು ನಡೆಸುತ್ತಿದ್ದು ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸುವ ಮೂಲಕ ಈ ಭಾಗದ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ಕೆಲಸವನ್ನು ಕೈಗೊಳ್ಳುತ್ತಾ ಬಂದಿದ್ದು ಈಗ ನಮ್ಮ ತಾಲೂಕಿನಲ್ಲಿ ಕೃಷ್ಣಾ ನದಿಯಲ್ಲಿ ಪ್ರವಾಹದಿಂದಾಗಿ ತೊಂದರೆಯಲ್ಲಿರುವ ಸಂತ್ರಸ್ಥರಿಗೆ ನೆರವು ನೀಡುವ ಸಂಕಲ್ಪ ಹೊಂದುವ ಮೂಲಕ ಅವರಿಗೆ ದಿನಬಳಕೆಗಾಗಿ ಅಗತ್ಯವಿರುವ ಆಹಾರ ಸಾಮಗ್ರಿಗಳನ್ನು ವಿತರಿಸುವ ಮೂಲಕ ಕೈಲಾದ ಮಟ್ಟಿಗೆ ಸಹಾಯ ಮಾಡುತ್ತಿದ್ದೇವೆ ಎಂದು ಹೇಳಿದರು, ಪ್ರವಾಹ ಸಂತ್ರಸ್ಥರು ಯಾವುದೇ ರೀತಿಯಲ್ಲಿ ಧೈರ್ಯ ಕಳೆದುಕೊಳ್ಳಬಾರದು, ಮುಂದಿನ ದಿನಗಳಲ್ಲಿ ನಿಮ್ಮ ಸಂಕಷ್ಟಕ್ಕೆ ಸರಕಾರ ನಿಮ್ಮ ನೆರವಿಗೆ ಬರುತ್ತದೆ ಎಂದು ಹೇಳಿದರು, ಸಂಘ-ಸಂಸ್ಥೆಗಳು ನೆರೆ ಪೀಡಿತ ಜನರಿಗೆ ನೆರವು ನೀಡುವುದು ಅವಶ್ಯಕ ಎಂದು ಹೇಳಿದರು.
ಈ ಸಂದರ್ಭದಲ್ಲಿ ನೆರೆ ಪೀಡಿತರಿಗೆ ವಿತರಿಸಲು ಸಂಸ್ಥೆಯ ವತಿಯಿಂದ ೨೫ ಕ್ವಿಂಟಾಲ್ ಸೋನಾ ಮಸೂರಿ ಅಕ್ಕಿ, ೧ ಕ್ವಿಂಟಾಲ್ ತೊಗರಿಬೇಳೆ, ೧೦೦ಲೀಟರ್ ಅಡುಗೆ ಎಣ್ಣೆ, ೧ಕ್ವಿಂಟಾಲ್ ಉಪ್ಪು ಹಾಗೂ ೫೦ಕಿಲೋ ಮೆಣಸಿನಕಾಯಿ ಖಾರದ ಪುಡಿಯನ್ನು ತಹಶೀಲ್ದಾರರಿಗೆ ನೀಡಲಾಯಿತು, ತಹಶೀಲ್ದಾರ ಸುರೇಶ ಅಂಕಲಗಿ, ಉದ್ದಿಮೆದಾರರಾದ ಗ್ಯಾನಚಂದ ಜೈನ, ಮಲ್ಲಿಕಾರ್ಜುನ ಬಿಲ್ಲವ್, ಅಂಬೇಡ್ಕರ ಶಿಕ್ಷಣ ಸಂಸ್ಥೆಯ ವಿವಿಧ ಶಾಲಾ-ಕಾಲೇಜುಗಳ ಡಾ.ಮಲ್ಲಿಕಾರ್ಜುನ ಕುಲಕರ್ಣಿ ಗೌಡಗೇರ, ಡಾ.ಉಮಾದೇವಿ ದಂಡೋತಿ, ಗಂಗಾಧರ ರುಮಾಲ, ರೇಣುಕಾ ಕನಕಗಿರಿ, ಪರಶುರಾಮ ಚಾಮನಾಳ, ಕೆ.ಎಲ್.ಚವ್ಹಾಣ, ಮಾನಪ್ಪ ಬಾಚಿಮಟ್ಟಿ, ದಿಗಂಬರ್ ಬಾಬರೆ, ಅಬ್ದುಲ್ ರಹೀಮ ಸೇರಿದಂತೆ ಉಪ್ಯಾಸಕರು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.