ಕಲಬುರಗಿ: ಭಾರತೀಯ ಬೌದ್ಧ ಮಹಾಸಭಾದ ಕರ್ನಾಟಕ ರಾಜ್ಯ ಘಟಕದ ಅಧ್ಯಕ್ಷರಾಗಿ ಹಿರಿಯ ದಲಿತ ಮುಖಂಡ ಸೂರ್ಯಕಾಂತ ನಿಂಬಾಳ್ಕರ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಚಂದ್ರಬೋಧಿ ಪಾಟೀಲ್ ತಿಳಿಸಿದರು.
ನಗರದಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶನಿವಾರ (ಏ.22)ರಂದು ಕಲಬುರಗಿಯಲ್ಲಿ ನಡೆದ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ರಾಜ್ಯ ಘಟಕ ಹಾಗೂ ಬೀದರ್ ಜಿಲ್ಲಾ ಘಟಕದ ಪದಾಧಿಕಾರಿಗಳನ್ನು ಪ್ರಜಾಸತ್ತಾತ್ಮಕ ಪ್ರಕ್ರಿಯೆ ಮೂಲಕ ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು.
ರಾಜ್ಯ ಘಟಕದ ಉಪಾಧ್ಯಕ್ಷರಾಗಿ ದೀನಾ ವೀರಶೆಟ್ಟಿ, ಪ್ರಧಾನ ಕಾರ್ಯದರ್ಶಿಯಾಗಿ ಸುರೇಶ್ ಕಾಣೆಕರ್, ಖಜಾಂಚಿಯಾಗಿ ಶಿವರಾಜ್ ಜುಲಂದೆ ಅವರನ್ನು ಆಯ್ಕೆ ಮಾಡಲಾಯಿತು ಎಂದು ಅವರು ಹೇಳಿದರು.
ನೂತನ ಅಧ್ಯಕ್ಷ ಸೂರ್ಯಕಾಂತ್ ನಿಂಬಾಳ್ಕರ್ ಮಾತನಾಡಿ, ಡಾ.ಬಿ.ಆರ್. ಅವರ ಸ್ಥಾಪಿತ ಭಾರತೀಯ ಬೌದ್ಧ ಮಹಾಸಭಾವು ಶೋಷಿತ ಸಮಾಜಕ್ಕೆ ಸಾಮಾಜಿಕ ಹಾಗೂ ಧಾರ್ಮಿಕ ಅರಿವು ಮೂಡಿಸುವುದು ಹಾಗೂ ಮೂಢನಂಬಿಕೆಗಳಿಂದ ಹೊರತಂದು ಅವರ ಶೈಕ್ಷಣಿಕ ಉನ್ನತಿಗೆ ಶ್ರಮಿಸುವುದು ಮುಖ್ಯ ಧ್ಯೇಯವಾಗಿದೆ. ಸದ್ಯ 21 ರಾಜ್ಯಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಬೌದ್ಧ ಮಹಾಸಭಾವು ಶೋಷಿತ ಸಮುದಾಯಕ್ಕೆ ಉಚಿತ ಶಿಕ್ಷಣ ನೀಡುವ ನಿಟ್ಟಿನಲ್ಲಿ ಶಾಲಾ ಕಾಲೇಜುಗಳನ್ನು ನಡೆಸುತ್ತಿದೆ. ಬಾಬಾ ಸಾಹೇಬರ ಮಾರ್ಗದಲ್ಲಿ ನಡೆಯುವ ನಿಟ್ಟಿನಲ್ಲಿ ಶೋಷಿತ ಸಮಾಜದ ಜನರನ್ನು ಮಾನಸಿಕವಾಗಿ ಸಜ್ಜುಗೊಳಿಸುವ ಕೆಲಸ ಮಾಡುತ್ತಿದೆ. ಇದರಲ್ಲಿ ತೊಡಗಿಕೊಳ್ಳಲು ಎಲ್ಲ ವರ್ಗದ ಜನರಿಗೂ ಮುಕ್ತ ಅವಕಾಶವಿದೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಭಾರತೀಯ ಬೌದ್ಧ ಮಹಾಸಭಾದ ರಾಷ್ಟ್ರೀಯ ಕಾರ್ಯದರ್ಶಿ ಸತ್ಯಜಿತ್ ಚಂದ್ರಿಕಾಪುರೆ, ಪ್ರಧಾನ ಕಾರ್ಯದರ್ಶಿಗಳಾದ ಶಂಕರ್ ದೆಂಗ್ರೆ, ಅಂಬರ ಸಹಾರೆ, ರಾಜ್ಯ ಉಸ್ತುವಾರಿ ಎಸ್. ಆರ್.ಕಂಡೆ ಉಪಸ್ಥಿತರಿದ್ದರು.