ಕಲಬುರಗಿ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಸ್ವೀಪ್ ಸಮಿತಿಯಿಂದ ಮತದಾನ ಜಾಗೃತಿ ಕುರಿತು ನಗೆ ಹಬ್ಬ ಕಾರ್ಯಕ್ರಮಕ್ಕೆ ಕಲಬುರಗಿ ಎ.ಪಿ.ಎಂ.ಸಿ. ಕೃಷಿ ಉತ್ಪನ್ನ ಮುಖ್ಯ ಮಾರುಕಟ್ಟೆ (ಹನುಮಾನ ಮಂದಿರ ಎದುರುಗಡೆ) ಯಲ್ಲಿ ಶನಿವಾರ ಹಾಸ್ಯ ಕಲಾವಿದೆ ಹಾಗೂ ಕಲಬುರಗಿ ಜಿಲ್ಲಾ ಚುನಾವಣಾ ರಾಯಭಾರಿಗಳಾದ ಇಂದುಮತಿ ಸಾಲಿಮಠ ಅವರು ಚಾಲನೆ ನೀಡಿದರು.
ವಿಧಾನಸಭೆ ಸಾರ್ವತ್ರಿಕ ಚುನಾವಣೆ-2023ರ ಹಿನ್ನೆಲೆಯಲ್ಲಿ ಸಾರ್ವಜನಿಕರು ತಪ್ಪದೇ ಮೇ 10 ರಂದು ತಮ್ಮ ಅಮೂಲ್ಯವಾದ ಮತವನ್ನು ಚಲಾಯಿಸಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಕಲಬುರಗಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಡಾ. ಗಿರೀಶ ಡಿ. ಬದೋಲೆ ಅವರು ಎಲ್ಲರಿಗೂ ಮತದಾನ ಪ್ರತಿಜ್ಞಾ ವಿಧಿ ಬೋಧಿಸಿದರು.
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಕಲಬುರಗಿ ಜಿಲ್ಲಾ ಅಧ್ಯಕ್ಷ ರಾಜು ಲೇಂಗಟಿ, ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆಯ ಉಪನಿರ್ದೇಶಕ ಅಬ್ದುಲ್ ಅಜೀಮ್, ಜಿಲ್ಲಾ ಪಂಚಾಯತ್ ಸಹಾಯಕ ಕಾರ್ಯದರ್ಶಿ ಚನ್ನಪ್ಪ ಸೇರಿದಂತೆ ಎ.ಪಿ.ಎಂ.ಸಿ. ಸಮಿತಿಯ ಮುಖಂಡರು, ಹಮಾಲರು, ವರ್ತಕರು ಹಾಗೂ ಕಾಲೇಜಿನ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಕಾಲೇಜಿನ ವಿದ್ಯಾರ್ಥಿಗಳು ನೃತ್ಯ ಮಾಡುವುದರ ಮೂಲಕ ಜನರಲ್ಲಿ ಮತದಾನ ಜಾಗೃತಿ ಮೂಡಿಸಿದರು.