ಅಧಿಕಾರದ ಅಹಂಕಾರ ಜನರನ್ನು ಹೆದರಿಸುತ್ತಿದೆ: ಕನ್ಹಯ್ಯ ಕುಮಾರ

0
30

ವಾಡಿ: ಕರ್ನಾಟಕದಲ್ಲಿ ಕಮಲಕ್ಕೆ ಮತ ನೀಡಿ ಸರ್ಕಾರ ತರದಿದ್ದರೆ ಪ್ರಧಾನಿಯವರ ಆಶೀರ್ವಾದ ಸಿಗಲ್ಲ ಎನ್ನುವ ಮೂಲಕ ಕೇಂದ್ರ ಸರ್ಕಾರದ ಅನುದಾನ ಬರಲ್ಲ ಎಂದು ಎಚ್ಚರಿಸುತ್ತಿದ್ದಾರೆ. ಅಧಿಕಾರದ ಅಹಂಕಾರ ದೇಶದ ಜನರನ್ನು ಹೆದರಿಸುತ್ತಿದೆ ಎಂದು ಜೆಎನ್‍ಯು ವಿದ್ಯಾರ್ಥಿ ಸಂಘಟನೆಯ ಮಾಜಿ ಅಧ್ಯಕ್ಷ, ಹೋರಾಟಗಾರ ಕನ್ಹಯ್ಯಕುಮಾರ ಆರೋಪಿಸಿದರು.

ಪಟ್ಟಣದಲ್ಲಿ ಶುಕ್ರವಾರ ಸಂಜೆ ಅಂಬೇಡ್ಕರ್ ವೃತ್ತದಲ್ಲಿ ಬೌದ್ಧ ಸಮಾಜದ ವತಿಯಿಂದ ಏರ್ಪಡಿಸಲಾಗಿದ್ದ ಬುದ್ಧಪೂರ್ಣಿಮೆ ಕಾರ್ಯಕ್ರಮದ ಬಹಿರಂಗ ಸಭೆ ಉದ್ಘಾಟಿಸಿ ಅವರು ಮಾತನಾಡಿದರು. ಕಳೆದ ಸಲ ರಾಜ್ಯದಲ್ಲಿ ಬಿಜೆಪಿಗೆ ಬಹುಮತವಿರಲಿಲ್ಲ. ಹೆದರಿಸಿ ಬೆದರಿಸಿ ಅಧಿಕಾರದ ಆಮಿಷ್ಯವೊಡ್ಡಿ ಶಾಸಕರನ್ನು ಖರೀದಿಸಲಾಯಿತು. ವಾಮಮಾರ್ಗದ ಸರ್ಕಾರ ಶೇ.40 ಕಮಿಷನ್ ಹೊಡೆದು ಜನರ ತೆರಿಗೆ ಹಣ ಲೂಟಿ ಮಾಡಿತು. ಬೆಲೆ ಏರಿಕೆ, ಭ್ರಷ್ಟಾಚಾರ, ನೌಕರಿ ಹಗರಣಗಳ ಬಗ್ಗೆ ಕೇಳಿದರೆ ಧರ್ಮದ ಮತ್ತೇರಿಸುತ್ತಾರೆ. ಅಧಿಕಾರಕ್ಕಾಗಿ ಸುಳ್ಳುಗಳನ್ನು ಸಾರುತ್ತಲೇ ಮುಗ್ದ ಭಾರತೀಯರ ಬಲಿ ಕೊಡಲಾಗುತ್ತಿದೆ ಎಂದು ವಾಗ್ದಾಳಿ ನಡೆಸಿದರು.

Contact Your\'s Advertisement; 9902492681

ಪ್ರಧಾನಿ ಬೈಗುಳಗಳ ಲೆಕ್ಕವಿಡುತ್ತಾರೆ: ಕರ್ನಾಟಕದಲ್ಲಿ ಯಾರು ಎಷ್ಟು ಬೈದಿದ್ದಾರೆ ಎಂಬುದು ಪ್ರಧಾನಿ ಮೋದಿ ನೆನಪಿಟ್ಟಿದ್ದಾರೆ. ಒಟ್ಟು 91 ಬೈಗುಳ ನನ್ನವಿರುದ್ಧ ಪ್ರಯೋಗವಾಗಿವೆ ಎಂದು ಹೇಳುತ್ತಾರೆ. ಆದರೆ ದೇಶದಲ್ಲಿ ಎಷ್ಟು ಬಡತನವಿದೆ, ಬೆಲೆ ಏರಿಕೆಯಿಂದ ಎಷ್ಟು ಜನರ ಬದುಕು ಸಂಕಷ್ಟಕ್ಕೀಡಾಗಿದೆ, ನಿರುದ್ಯೋಗದಿಂದ ಎಷ್ಟು ಯುವಕರ ಭವಿಷ್ಯ ಹಳಾಗಿದೆ ಎಂಬುದು ಇವರು ಲೆಕ್ಕವಿಡಲ್ಲ. ಮೋದಿಯವರು ರೈಲು ನಿಲ್ದಾಣದಲ್ಲಿ ಚಹಾ ಮಾರಿದ್ದಾರಂತೆ ನಾವಂತೂ ನೋಡಿಲ್ಲ. ಆದರೆ ಈಗ ರೈಲುಗಳನ್ನು ರೈಲು ನಿಲ್ದಾಣಗಳನ್ನು ಮಾರುತ್ತಿರುವುದನ್ನು ಕಣ್ಣಾರೆ ನೋಡುತ್ತಿದ್ದೇವೆ ಎಂದು ಕಿಚಾಯಿಸಿದರು.

ಬಿಜೆಪಿ ಬರೆಯಿಟ್ಟರೂ ಕಾರ್ಯಕರ್ತರಿಗೆ ಖುಷಿ ನೀಡುತ್ತದೆ: ದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದ ಜನರು ಕಷ್ಟಗಳನ್ನು ಅನುಭವಿಸುತ್ತಿದ್ದಾರೆ. ಸಿಲಿಂಡರ್ ಗ್ಯಾಸ್ ಬೆಲೆ ದುಬಾರಿಯಾಗಿದೆ. ಆಹಾರ ದಾನ್ಯಗಳ ಬೆಲೆ ಗಗನಕ್ಕೇರಿದೆ. ಪೆಟ್ರೋಲ್ ಡೀಸೆಲ್ ಬೆಲೆ ಮಿತಿಮೀರಿದೆ. ಜನರ ಜೀವನ ಅತ್ಯಂತ ದುಸ್ಥಿತಿಗೆ ಸಿಲುಕಿದೆ. ಬಡ ಕುಟುಂಬಗಳು ಕಣ್ಣೀರು ಹಾಕುತ್ತಿವೆ. ಬಡತನ ಏನು ಎಂಬುದು ನಾನು ಪುಸ್ತಕದಲ್ಲಿ ಓದಿ ತಿಳೀದಿಲ್ಲ. ಅದನ್ನು ಅನುಭವಿಸಿದ್ದೇನೆ. ಆದರೂ ಬಿಜೆಪಿ ಕಾರ್ಯಕರ್ತರು ಸರ್ಕಾರದ ಧೋರಣೆಯನ್ನು ಸಮರ್ಥಿಸುತ್ತಿದ್ದಾರೆ. ಬಿಜೆಪಿ ಸರ್ಕಾರ ಬೆನ್ನಿಗೆ ಬಾರ್ಕೋಲು ಬೀಸಿದರೂ ಬರೆಯಿಟ್ಟರೂ ಅವರ ಕಾರ್ಯಕರ್ತರು ಖುಷಿಯಾಗುತ್ತಿದೆ ಎನ್ನುತ್ತಾರೆ. ಭಾವನಾತ್ಮಕ ವಿಷಯಗಳನ್ನು ಮುಂದಿಟ್ಟು ರಾಜಕಾರಣ ಮಾಡುವ ಮೂಲಕ ಬಿಜೆಪಿ ದೇಶದ ಜನರನ್ನು ಸುಲಿಯುತ್ತಿದೆ ಎಂದು ಕಿಡಿಕಾರಿದರು.

ಬಿಜೆಪಿಗೆ ಪ್ರಿಯಾಂಕ್ ಖರ್ಗೆ ಟಾರ್ಗೇಟ್: ಮಲ್ಲಿಕಾರ್ಜುನ ಖರ್ಗೆ ಪುತ್ರ ಎನ್ನುವ ಕಾರಣಕ್ಕೆ ಬಿಜೆಪಿ ಪ್ರಿಯಾಂಕ್ ಖರ್ಗೆ ಅವರನ್ನು ಟಾರ್ಗೇಟ್ ಮಾಡಿದೆ. ತಂದೆಯ ಅಭಿವೃದ್ಧಿಯ ರಥವನ್ನು ಮುಂದುವರೆಸಿರುವ ಪುತ್ರನ ಸಾಧನೆ ಮತ್ತು ಜನಪ್ರಿಯತೆಯನ್ನು ಸಹಿಸಲಾಗುತ್ತಿಲ್ಲ. ಬಿಜೆಪಿ ಅಭ್ಯರ್ಥಿ ಅಕ್ಕಿ ಕಳ್ಳನ ಬಗ್ಗೆ ನಾನು ಮಾತನಾಡುವುದಿಲ್ಲ. ಈತನನ್ನು ಕುಣಿಸುತ್ತಿರುವ ಮೋದಿ ನನ್ನ ಗುರಿ. ಇದರ ಮೇನ್ ಸ್ವಿಚ್ ದೇಹಲಿಯಲ್ಲಿದೆ. ಚಿತ್ತಾಪುರದ ಪ್ರಬುದ್ಧ ಮತದಾರರು ಕರ್ನಾಟಕದಲ್ಲೇ ಅತಿ ಹೆಚ್ಚು ಮತಗಳಿಂದ ಪ್ರಿಯಾಂಕ್ ಅವರನ್ನು ಗೆಲ್ಲಿಸಬೇಕು. ಪಡೆದ ಮತಗಳು ಎಲ್ಲಾ ದಾಖಲೆಗಳನ್ನು ಮುರಿಯಬೇಕು. ಇಡೀ ದೇಶಕ್ಕೆ ಸಂದೇಶ ರವಾನಿಸಬೇಕು. ಬುದ್ಧನ ಶಾಂತಿಯ ಮಾರ್ಗವನ್ನು ಅನುಸರಿಸಬೇಕು. ಸಂದರ್ಭ ಬಂದರೆ ಅಂಬೇಡ್ಕರ್, ಭಗತ್‍ಸಿಂಗ್, ಅಶ್ಪಾಖುಲ್ಲಾ, ರಾಮಪ್ರಸಾದ ಬಿಸ್ಮಿಲ್ಲಾ ಅವರ ಕ್ರಾಂತಿಯ ಮಾರ್ಗವನ್ನೂ ತುಳಿಯಬೇಕು ಎಂದು ಕನ್ಹಯ್ಯ ಜನರಲ್ಲಿ ಮನವಿ ಮಾಡಿದರು.

ಬೌದ್ದ ಬಿಕ್ಕುಣಿ ಮಾತಾ ಅರ್ಚಸ್ಮತಿ ಸಾನಿದ್ಯ ವಹಿಸಿದ್ದರು.  ಬೌದ್ದ ಸಮಾಜದ ಅಧ್ಯಕ್ಷ ಟೋಪಣ್ಣ ಕೋಮಟೆ ಅಧ್ಯಕ್ಷತೆ ವಹಿಸಿದ್ದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸೈಯ್ಯದ್ ಮಹೆಮೂದ್ ಸಾಹೇಬ, ಸಾಹಿತಿ ಡಾ.ಎಸ್.ಪಿ.ಸುಳ್ಳದ್, ಕೆಎಸ್‍ಡಿಎಸ್‍ಎಸ್ ಜಿಲ್ಲಾ ಸಂಚಾಲಕ ಸುರೇಶ ಹಾದಿಮನಿ, ಕೃಷ್ಣಪ್ಪ ಕರಣಿಕ, ಶಕ್ರಯ್ಯಸ್ವಾಮಿ ಮದರಿ, ಆಲಂ ಖಾನ್, ಸೂರ್ಯಕಾಂತ ರದ್ದೇವಾಡಿ, ವಿಕ್ರಮ ನಿಂಬರ್ಗಾ,ನಾಗೇಂದ್ರ ಜೈಗಂಗಾ, ಭಶೀರ ಖುರೇಶಿ, ರಮೇಶ ಬಡಿಗೇರ, ಶೇಖಪ್ಪ ಹೇರೂರ, ಬಸವರಾಜ ಕಾಟಮಳ್ಳಿ, ಸುಭಾಷ ಸನಬಲ್, ಅಮೃತ ಕೋಮಟೆ, ಚಂದ್ರು ಕರಣಿಕ, ವಿಜಯಕುಮಾರ ಸಿಂಗೆ, ಉದಯಕುಮಾರ ಯಾದಗಿರಿ ಸೇರಿದಂತೆ ಸಾವಿರಾರು ಜನರು ಪಾಲ್ಗೊಂಡಿದ್ದರು. ಚಂದ್ರಸೇನ ಮೇನಗಾರ ಸ್ವಾಗತಿಸಿದರು. ಶರಣಬಸು ಸಿರೂರಕರ ನಿರೂಪಿಸಿ, ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here