ಕಲಬುರಗಿ: ಆಧುನಿಕ ಯುಗದ ಸಂದರ್ಭದಲ್ಲಿ ಕಟ್ಟಡಗಳನ್ನು ಕಟ್ಟಲಾಗುತ್ತಿದೆ. ಆದರೆ ಕನ್ನಡದ ಮನಸ್ಸುಗಳನ್ನು ಕಟ್ಟುವುದು ಯವಾಗ… ಎಂದು ಪ್ರಶ್ನಿಸಿದ ಸಿನೇಮಾ ನಟ, ಸಾಹಿತಿ ಮತ್ತು ಯಾದಗಿರಿ ನಗರಸಭೆ ಆಯುಕ್ತ ಸಂಗಮೇಶ ಉಪಾಸೆ, ಮನಸ್ಸುಗಳನ್ನು ಕಟ್ಟುವ ಕೆಲಸದಲ್ಲಿ ಕಲಬುರಗಿ ಜಿಲ್ಲಾ ಕಸಾಪ ನಿರತವಾಗಿದೆ ಎಂದು ಶ್ಲಾಘಿಸಿದರು.
ಕನ್ನಡ ಸಾಹಿತ್ಯ ಪರಿಷತ್ತಿನ 109 ನೇ ಸಂಸ್ಥಾಪನಾ ದಿನಾಚರಣೆಯ ಪ್ರಯುಕ್ತ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಆಯೋಜಿಸಿದ ಸಾಹಿತ್ಯ – ಪುಸ್ತಕೋತ್ಸವ ಸಂಭ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ವಿಚಾರಗಳು ಮೂಲೆ ಗುಂಪು ಆಗುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದ ಅವರು, ಜನಾಂಗಕ್ಕೆ ಪ್ರಜ್ಞೆ ಬರುವಂತಹ ಕೆಲಸಗಳು ಆಗಬೇಕು. ಬದಲಾವಣೆ ಜಗದ ನಿಯಮ ಹೀಗಾಗಿ ಬದಲಾವಣೆಯತ್ತ ಸಾಗುತ್ತಿದ್ದೇವೆ. ಕನ್ನಡ ಮನಸ್ಸುಗಳು ಬೆಳೆಸಬೇಕು ಮತ್ತು ಅರಳಿಸಬೇಕು ಎಂದರು.
ಇದೀಗ ಓದುವ ಕಾಲ ಹೊರಟು ಹೋಗುತ್ತಿದೆ. ಈಗೇನಿದ್ದರೂ ನೋಡುವ ಕಾಲ ಬರುತ್ತಿದೆ ಎಂದು ಮಾರ್ಮಿಕವಾಗಿ ಹೇಳಿದರು.
ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಮಾತನಾಡಿ, ಜಾತ್ಯತೀತವಾಗಿ ಎಲ್ಲರನ್ನು ಒಗ್ಗೂಡಿಸುವ ಶಕ್ತಿ ಕನ್ನಡ ಭಾಷೆ ಮತ್ತು ಸಾಹಿತ್ಯಕ್ಕೆ ಇದೆ. ನಮ್ಮ ಕನ್ನಡ ಸಾಹಿತ್ಯ ಪರಿಷತ್ತು ಕನ್ನಡಿಗರ ಹೆಮ್ಮೆಯ ಸಂಕೇತವಾಗಿದೆ. ನಮ್ಮ ನಾಡು-ನುಡಿ, ನೆಲ-ಜಲ, ಸಂಸ್ಕøತಿ ಸಾಹಿತ್ಯವನ್ನು ರಕ್ಷಿಸಿ ಬೆಳೆಸುವಲ್ಲಿ ಸಾಹಿತ್ಯ ಪರಿಷತ್ತು ಪ್ರಮುಖ ಪಾತ್ರ ವಹಿಸಿದೆ. ಕನ್ನಡ ಸಾಹಿತ್ಯ ಪರಿಷತ್ತು ಇಂದು ಸಾಹಿತ್ಯ ಪ್ರಸಾರ ಸೇರಿದಂತೆ ನಾಡು-ನುಡಿಯ ಸೇವೆಯ ಮೂಲಕ ಜನರ ಸ್ವಾಭಿಮಾನದ ಸಂಕೇತವಾಗಿದೆ ಎಂದ ಅವರು, ಈ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಪರಿಷತ್ತು ಇತ್ತೀಚೆಗೆ ಹಮ್ಮಿಕೊಂಡು ಬರುತ್ತಿರುವ ಕಾರ್ಯಕ್ರಮಗಳು ಜನರ ಹೃದಯವನ್ನು ತಟ್ಟಿವೆ ಎಂದು ಹೇಳಿದರು.
ಹಿರಿಯ ಕಥೆಗಾರ ಸಿದ್ಧರಾಮ ಹೊನ್ಕಲ್, ಹಿರಿಯ ಲೇಖಕರಾದ ನಾರಾಯಣ ಕುಲಕರ್ಣಿ, ಪ್ರಮೀಳಾ ಜಾನಪ್ದಗೌಡ , ಹಿರಿಯ ಚಿತ್ರ ಕಲಾವಿದ ಡಾ. ಬಸವರಾಜ ಜಾನೆ, ಕಸಾಪ ಮಾಜಿ ಜಿಲ್ಲಾಧ್ಯಕ್ಷರಾದ ಅಪ್ಪಾರಾವ ಅಕ್ಕೋಣೆ, ಮಹಿಪಾಲರೆಡ್ಡಿ ಮುನ್ನೂರ ಮಾತನಾಡಿದರು.
ಜಿಲ್ಲಾ ಕಸಾಪ ಕಾರ್ಯದರ್ಶಿಗಳಾದ ಶಿವರಾಜ ಅಂಡಗಿ, ಸಿದ್ಧಲಿಂಗ ಬಾಳಿ, ಕೋಶಾದ್ಯಕ್ಷ ಶರಶರಣರಾಜ್ ಛಪ್ಪರಬಂದಿ, ಪದಾಧಿಕಾರಿಗಳಾದ ರಾಜೇಂದ್ರ ಮಾಡಬೂಳ, ಶಕುಂತಲಾ ಪಾಟೀಲ, ಡಾ. ಕೆ.ಗಿರಿಮಲ್ಲ, ಧರ್ಮಣ್ಣ ಹೆಚ್ ಧನ್ನಿ, ಶಿಲ್ಪಾ ಜೋಶಿ, ಹೆಚ್ ಎಸ್ ಬರಗಾಲಿ, ಬಾಬುರಾವ ಪಾಟೀಲ, ಸೋಮಶೇಖರಯ್ಯಾ ಹೊಸಮಠ, ಸಿದ್ಧರಾಮ ಹಂಚನಾಳ, ಕಲ್ಯಾಣಕುಮಾರ ಶೀಲವಂತ, ವಿನೋದ ಜೇನವೇರಿ, ಶರಣಬಸಪ್ಪ ನರೂಣಿ, ಸಂಶೋಧಕ ಮುಡುಬಿ ಗುಂಡೇರಾವ, ಬಸ್ವಂತರಾಯ ಕೋಳಕೂರ, ವಿಶ್ವನಾಥ ತೋಟ್ನಳ್ಳಿ ಇತರರಿದ್ದರು.
ಸಂಸ್ಥಾಪನಾ ದಿನಾಚರಣೆಯ ಅಂಗವಾಗಿ ಕನ್ನಡ ಭವನದ ಪ್ರಾಂಗಣದಲ್ಲಿ ಏರ್ಪಡಿಸಿದ ಜಿಲ್ಲೆಯ ಹಿರಿಯ ಮತ್ತು ಯುವ ಲೇಖಕರ ಪುಸ್ತಕಗಳ ಪ್ರದರ್ಶನ ಪ್ರೇಕ್ಷಕರ ಗಮನ ಸೆಳೆಯಿತು.
ಗರಿಮೆ ಹೆಚ್ಚಿಸಿದ ಮಾಜಿ ಜಿಲ್ಲಾಧ್ಯಕ್ಷರು: ಹೊನ್ಕಲ್ ಕಸಾಪ ಸಂಸ್ಥಾಪನಾ ದಿನದ ಹಿನ್ನೆಲೆಯಲ್ಲಿ ಕಸಾಪ ಮಾಜಿ ಜಿಲ್ಲಾಧ್ಯಕ್ಷರನ್ನು ವಿಶೇಷವಾಗಿ ಸತ್ಕರಿಸುವ ಕ್ಷಣಕ್ಕೆ ಕನ್ನಡ ಭವನ ಸಾಕ್ಷಿಯಾಯಿತು.
ಈ ಸಂದರ್ಭದಲ್ಲಿ ಕನ್ನಡ ಭವನದ ಅಂಗಳಕ್ಕೆ ಕಸಾಪ ಮಾಜಿ ಜಿಲ್ಲಾಧ್ಯಕ್ಷರಾದ ಅಪ್ಗಪಾರಾವ ಅಕ್ಕೋಣೆ ಮತ್ತು ಮಹಿಪಾಲರೆಡ್ಡಿ ಮುನ್ನೂರ ಅವರನ್ನು ಕನ್ನಡ ಬಾವುಟಗಳನ್ನು ಕೊರಳಿಗೆ ಹಾಕಿ, ಹೂವಿನ ಪಕಳೆಗಳ ಮೂಲಕ ವಿಶೇಷವಾಗಿ ಸ್ವಾಗತಿಸಿದ ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ, ಕಾರ್ಯದರ್ಶಿ ಶಿವರಾಜ ಅಂಡಗಿ ಹಾಗೂ ಪದಾಧಿಕಾರಿಗಳು, ಕಾರ್ಯಕ್ರಮದ ಸಭಾಂಗಣದವರೆಗೆ ಕರೆದುಕೊಂಡು ಹೋದ ಪ್ರಸಂಗ ಭಾಗವಹಿಸಿದ್ದ ಜನಸ್ತೋಮ ಕಣ್ತುಂಬಿಕೊಂಡರು ಎಂದರು.