ಬಿಜೆಪಿ ಅಯೋಗ್ಯನಿಗೆ ಟಿಕೇಟ್ ಕೊಟ್ಟಿದೆ: “ಸಾರ್ವಜನಿಕ ಜೀವನದಲ್ಲಿ ಇರಲು ಯೋಗ್ಯತೆಯಿಲ್ಲದ ಅಯೋಗ್ಯನಿಗೆ ಬಿಜೆಪಿ ಚಿತ್ತಾಪುರದ ಅಭ್ಯರ್ಥಿಯನ್ನಾಗಿ ಮಾಡಿದ್ದು, ಹೇಸಿಗೆ ಹುಟ್ಟಿಸುತ್ತಿದೆ. ಹುಟ್ಟು ಹಬ್ಬದ ನೆಪದಲ್ಲಿ ನಂಗಾ ನಾಚ್ ಮಾಡಿಸಿದವ ಶಾಸಕನಾಗಲು ಅರ್ಹನಲ್ಲ. ಅಂತಹವನ ಪಕ್ಕದಲ್ಲಿ ಕುಳಿತವರಿಗೂ ಮರಿಯಾದೆ ಇರಲ್ಲ. ಇಂಥಹ ಕೆಟ್ಟ ವ್ಯಕ್ತಿ ಪರ ಮತಯಾಚಿಸಲು ಮನಸ್ಸು ಒಪ್ಪಲಿಲ್ಲ. ಹೀಗಾಗಿ ನಾನು ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದೇನೆ. ನನ್ನನ್ನು ಕಾಂಗ್ರೆಸ್ ನಾಯಕರು ಪಕ್ಷಕ್ಕೆ ಸೇರಿಸಿಕೊಳ್ಳದಿದ್ದರೂ ವೈಯಕ್ತಿಕವಾಗಿ ಹಣ ಖರ್ಚು ಮಾಡಿಕೊಂಡು ಕ್ಷೇತ್ರದಲ್ಲಿ ಸಂಚರಿಸಿ ಪ್ರಿಯಾಂಕ್ ಪರ ಮತಯಾಚನೆ ಮಾಡಲು ನಿರ್ಧರಿಸಿದ್ದೆ. ಚಿತ್ತಾಪುರದ ಬಿಜೆಪಿ ಅಭ್ಯರ್ಥಿಯನ್ನು ಸೋಲಿಸುವುದಷ್ಟೇಯಲ್ಲ. ಆತ ರಾಜಕೀಯದಿಂದಲೇ ನಿವೃತ್ತಿಯಾಗುವಂತೆ ಪಾಠ ಕಲಿಸಬೇಕು”. -ವಿಶ್ವನಾಥ ಪಾಟೀಲ ಹೆಬ್ಬಾಳ. ಮಾಜಿ ಶಾಸಕ.
ವಾಡಿ: ಪ್ರಿಯಾಂಕ್ ಖರ್ಗೆ ನನ್ನ ಮಗನೆಂದು ಮತ ಕೊಡಬೇಡಿ. ಆತನಲ್ಲಿರುವ ಅಭಿವೃದ್ಧಿಯ ಗುಣ ನೋಡಿ ಓಟ್ ಕೊಡಿ. ಪ್ರಿಯಾಂಕ್ ಭಾರಿ ಬಹುಮತಗಳಿಂದ ಗೆದ್ದರೆ ಮಾತ್ರ ನನ್ನ ಮತ್ತು ಪಕ್ಷದ ಮಾನ ಉಳಿಯುತ್ತದೆ ಎಂದು ಎಐಸಿಸಿ ಅಧ್ಯಕ್ಷ ಡಾ.ಮಲ್ಲಿಕಾರ್ಜುನ ಖರ್ಗೆ ಚಿತ್ತಾಪುರದ ಮತದಾರರಲ್ಲಿ ಮನವಿ ಮಾಡಿದರು.
ಚಿತ್ತಾಪುರ ಮತಕ್ಷೇತ್ರ ವ್ಯಾಪ್ತಿಯ ವಾಡಿ ಪಟ್ಟಣದಲ್ಲಿ ಏರ್ಪಡಿಸಲಾಗಿದ್ದ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕ್ ಖರ್ಗೆ ಪರ ಪ್ರಚಾರ ಸಭೆಯಲ್ಲಿ ಸೇರಿದ್ದ ಬೃಹತ್ ಜನಸ್ತೋಮವನ್ನು ಉದ್ದೇಶಿಸಿ ಅವರು ಮಾತನಾಡಿದರು. ಚುನಾವಣೆ ನಿಮಿತ್ತ ನಾನು ಇಡೀ ಕರ್ನಾಟಕವನ್ನು ಸುತ್ತಿ ಬಂದಿದ್ದೇನೆ. ಎಲ್ಲಾ ಕಡೆಯಲ್ಲೂ ಕಾಂಗ್ರೆಸ್ ಪರ ಅಲೆಯಿದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಬರೋದು ಖಚಿತವಾಗಿದೆ. ಮತ್ತೆ ಬಿಜೆಪಿ ಗೆದ್ದರೆ ಶೇ.40 ಇದ್ದ ಕಮಿಷನ್ ಶೇ.80ಕ್ಕೆ ಏರುತ್ತದೆ ಎಂಬುದು ಜನರಿಗೆ ಅರ್ಥವಾಗಿದೆ. ಭ್ರಷ್ಟಾಚಾರದ ಬೇರನ್ನು ಬಹಳ ಆಳಕ್ಕೆ ಇಳಿಸಿರುವ ಬಿಜೆಪಿಗೆ ಪಾಠ ಕಲಿಸಲು ಜನರು ತುದಿಗಾಲಮೇಲೆ ನಿಂತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೆ ಹೊರ ದೇಶದಲ್ಲಿರುವ ಕಪ್ಪು ಹಣವನ್ನು ತಂದು ಪ್ರತಿಯೊಬ್ಬರ ಖಾತೆಯಲ್ಲೂ ತಲಾ 15 ಲಕ್ಷ ಹಾಕ್ತೀನಿ. ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಠಿ ಮಾಡ್ತೀನಿ. ಭ್ರಷ್ಟಾಚಾರ ಮುಕ್ತ ಭಾರತ ಮಾಡ್ತೀನಿ. ನಾ ಖಾವೂಂಗಾ ನಾ ಖಾನೆದೂಂಗಾ. ಅಳ್ಳೆಯ ದಿನಗಳನ್ನು ತರುತ್ತೇನೆ. ರೈತರ ಆದಾಯ ದುಪ್ಪಟ್ಟು ಮಾಡ್ತೀನಿ ಎಂದು ಮೋದಿ ಹೇಳಿದ್ದರು. ಬಹುಷ್ಯ ಅದನ್ನೆಲ್ಲ ಈಗ ಈಡೇರಿದೆಯಾ? ಎಂದು ಖರ್ಗೆ ಕಿಕ್ಕಿರಿದು ಸೇರಿದ್ದ ಜನರನ್ನು ಕೇಳಿದರು. ಜನರಿಂದ ಇಲ್ಲ ಇಲ್ಲ ಎಂಬ ಉತ್ತರ ಘೋಷಣೆ ರೂಪದಲ್ಲಿ ಮೊಳಗಿತು. ಅರೇ, ಇದನ್ನೆಲ್ಲ ಮೋದಿ ಮಾಡಲಿಲ್ಲವಾ? ಹಾಗಾದರೆ ದೇಶದ ಪ್ರಧಾನಿ ಸುಳ್ಳು ಹೇಳಿದ್ರಾ? ಪ್ರಧಾನಿ ಸುಳ್ಳು ಹೇಳೋದಿಲ್ಲಲ್ವಾ? ಎಂದು ಮರು ಪ್ರಶ್ನೆ ಮಾಡಿದರು. ಆಗಲೂ ಜನರು ‘ಮೋದಿ ಸುಳ್ಳು ಹೇಳಿದ್ದಾರೆ’ ‘ದೇಶದ ಜನರಿಗೆ ಮೋಸ ಮಾಡಿದ್ದಾರೆ’ ಎಂದು ಪ್ರತಿಕ್ರೀಯಿಸಿದರು.
ದೇಶದ ಪ್ರಧಾನಿಗೆ ಜನರು ತಿನ್ನುವ ಆಹಾರದ ಬೆಲೆ ಗಗನಕ್ಕೇರಿದ್ದು ಗೊತ್ತಾಗುತ್ತಿಲ್ಲ. ಕಮಿಷನ್ ಭ್ರಷ್ಟರು ಪಕ್ಕದಲ್ಲೇ ನಿಂತು ರೋಡ್ ಶೋ ನಡೆಸುತ್ತಿದ್ದಾರೆ ಪ್ರಧಾನಿಗೆ ಅರಿವಿಲ್ಲ. ರಾಜ್ಯದ ಗುತ್ತಿಗೆದಾರರು ಬಿಜೆಪಿ ಸರ್ಕಾರದ ವಿರುದ್ಧ ಶೇ.40 ಕಮಿಷನ್ ಆರೋಪ ಮಾಡಿದ್ದಾರೆ. ಮಠಾದೀಶರು ಶೇ.30 ಕಮಿಷನ್ ಆರೋಪ ಮಾಡಿದ್ದಾರೆ. ಇದನ್ನೆಲ್ಲ ನಾವು ಪ್ರಶ್ನಿಸಿದರೆ ಪ್ರಧಾನಿ ಬೇರೆಯದ್ದೇ ಕಥೆ ಹೇಳುತ್ತಾರೆ. ಬಿಜೆಪಿ ಸರ್ಕಾರದ ವಿರುದ್ಧ ಮಾತನಾಡಿದರೆ ಐಟಿ, ಇಡಿ, ಸಿಬಿಐ ಮೂಲಕ ಹೆಸರಿಸುತ್ತಾರೆ. ಕರ್ನಾಟಕದ ಜನರು ಬಿಜೆಪಿಯ ಧಮ್ಕಿಗೆ ಹೆದರುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ಖರ್ಗೆ, ಕರ್ನಾಟಕಕ್ಕೆ ಮೋದಿ ಏನು ಕೊಟ್ಟಿದ್ದಾರೆ ಎಂದು ಮತ ಕೇಳಲು ಬರುತ್ತಿದ್ದಾರೆ? ಮತ ಕೇಳಲು ಇವರಿಗೆ ಏನು ಯೋಗ್ಯತೆಯಿದೆ ಎಂದು ಗುಡುಗಿದರು.
ಮಹಾರಾಷ್ಟ್ರ ಎಂಎಲ್‍ಸಿ ರಾಜೇಶ ರಾಠೋಡ, ವಿಧಾನ ಪರಿಷತ್ ಮಾಜಿ ಸದಸ್ಯರಾದ ತಿಪ್ಪಣ್ಣಪ್ಪ ಕಮಕನೂರ, ಡೇವಿಡ್ ಸಿಮಿಯೋನ್, ಕೆಪಿಸಿಸಿ ಸದಸ್ಯ ನಾಗರೆಡ್ಡಿಗೌಡ ಪಾಟೀಲ ಕರದಾಳ, ಜಿಪಂ ಮಾಜಿ ಅಧ್ಯಕ್ಷ ರಮೇಶ ಮರಗೋಳ, ಮುಕ್ತಾರ ಪಟೇಲ ಮಾತನಾಡಿದರು. ಅಭ್ಯರ್ಥಿ ಶಾಸಕ ಪ್ರಿಯಾಂಕ್ ಖರ್ಗೆ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಶ್ರೀಧರ ಬಾಬು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸೈಯದ್ ಮಹೆಮೂದ್ ಸಾಹೇಬ, ಯುವ ಕಾಂಗ್ರೆಸ್ ಅಧ್ಯಕ್ಷ ಶರಣು ವಾರದ್, ಕಾಂಗ್ರೆಸ್ ಮುಖಂಡರಾದ ಟೋಪಣ್ಣ ಕೋಮಟೆ, ಭೀಮಣ್ಣ ಸಾಲಿ, ಶಿವಾನಂದ ಪಾಟೀಲ ಮರತೂರ, ವೀರಣ್ಣಗೌಡ ಪರಸರೆಡ್ಡಿ, ಅರವಿಂದ ಚವ್ಹಾಣ, ಶಂಕ್ರಯ್ಯಸ್ವಾಮಿ ಮದರಿ, ಶ್ರೀನಿವಾಸ ಸಗರ, ಅಬ್ದುಲ್ ಅಜೀಜ್ ಸೇಠ, ಶಂಭುಲಿಂಗ ಗುಂಡಗುರ್ತಿ, ಬಸವರಾಜ ಚಿನಮಳ್ಳಿ, ಮಲ್ಲಿಕಾರ್ಜುನ ಕಾಳಗಿ, ಸೂರ್ಯಕಾಂತ ಕಟ್ಟಿಮನಿ, ಜುಮ್ಮಣ್ಣ ಪೂಜಾರಿ ಸೇರಿದಂತೆ ಸಾವಿರಾರು ಜನರು ಪಾಲ್ಗೊಂಡಿದ್ದರು. ನಿರೀಕ್ಷೆಗೂ ಮೀರಿ ಜನರು ಸಭೆಗೆ ಆಗಮಿಸಿದ್ದರಿಂದ ಜನದಟ್ಟಣೆ ಹೆಚ್ಚುವ ಮೂಲಕ ಟ್ರಾಫಿಕ್ ಜಾಂ ಸೃಷ್ಠಿಯಾಯಿತು.