ನೋವು ನುಂಗಿ ಜನರ ಹೃದಯ ಗೆದ್ದ ನಾಯಕ ಪ್ರಿಯಾಂಕ್ ಖರ್ಗೆ

0
185

ವಾಡಿ: ಪ್ರಸಕ್ತ ರಾಜಕೀಯ ವ್ಯವಸ್ಥೆಯಲ್ಲಿ ಅನುಕಂಪದ ಅಲೆಯನ್ನು ತೇಲಿಬಿಟ್ಟರೆ ಗೆಲುವು ಸುಲಭ ಎನ್ನುವ ಲೆಕ್ಕಾಚಾರವಿದೆ. ಪತಿಯ ಅಥವ ತಂದೆಯ ಸಾವನ್ನೋ, ಅಪಘಾತವನ್ನೋ, ಅನಾರೋಗ್ಯವನ್ನೋ ಚುನಾವಣೆಗಳ ಸಂದರ್ಭದಲ್ಲಿ ರಾಜಕೀಯ ಲಾಭಕ್ಕಾಗಿ ಬಳಸಿಕೊಂಡು ಮತದಾರರಿಗೆ ಟೋಪಿ ಹಾಕುವ ರಾಜಕೀಯ ಮಂದಿಗೇನು ಕೊರತೆಯಿಲ್ಲ. ಇದರ ನಡುವೆಯೂ ವೈಯಕ್ತಿಕ ಬದುಕಿನ ನೋವುಗಳನ್ನು ನುಂಗಿ ಸಾರ್ವಜನಿಕವಾಗಿ ಬೆರೆಯುವುದಿದೆಯಲ್ಲ ಅದು ಎಲ್ಲರಿಂದಲೂ ಸಾಧ್ಯವಿಲ್ಲ. ಸಾವು-ನೋವುಗಳನ್ನು ನುಂಗಿ ನಗುವುದಿದೆಯಲ್ಲ ಅದು ಅಷ್ಟು ಸುಲಭದ ಮಾತಲ್ಲ.

ಅಂತಹದ್ದೊಂದು ದೊಡ್ಡ ನೋವು ಎದೆಯೊಳಗಿಟ್ಟುಕೊಂಡು ಎಲ್ಲಿಯೂ ತುಟಿಪಿಟಕ್ಕೆನ್ನದೆ ಚುನಾವಣೆ ಎದುರಿಸುವ ಮೂಲಕ ವಿಜಯದ ಮಾಲೆ ಕೊರಳಿಗೆ ಧರಿಸಿರುವ ಚಿತ್ತಾಪುರ ಮತಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕ್ ಖರ್ಗೆ, ಪತ್ನಿಯ ಅನಾರೋಗ್ಯದ ಚಿಂತೆಯಲ್ಲೇ ಚಿತ್ತಾಪುರದ ಚುನಾವಣೆ ಗೆದ್ದಿದ್ದಾರೆ. ಅವರ ಪತ್ನಿ ಶೃತಿ ಖರ್ಗೆ ಅವರಿಗೆ ಬ್ರೇನ್ ಟ್ಯೂಮರ್ ಕಾಯಿಲೆ ಎಂಬುದು ಬಹುತೇಕ ಯಾರಿಗೂ ಗೊತ್ತಿರಲಿಲ್ಲ. ಯಾವಾಗ ಪ್ರಿಯಾಂಕ್ ಮುಖದಲ್ಲಿ ಗಡ್ಡಗಳು ಕಾಣಿಸಲು ಶುರುವಾದವೋ ಆಗಲೇ ಕಾರ್ಯಕರ್ತರಿಗೆ ಮತ್ತು ಕ್ಷೇತ್ರದ ಜನತೆಗೆ ಆತಂಕ ಮೂಡಿಸಿತು. ಚುನಾವಣಾ ಪ್ರಚಾರ ರಂಗೇರುತ್ತಿದ್ದಂತೆ ಪ್ರಿಯಾಂಕ್ ಮುಖದ ಮೇಲಿನ ಬೆಳ್ಳಿ ಗಡ್ಡವೂ ಬೆಳೆಯ ತೊಡಗಿತು. ಮುಖ ಬಾಡತೊಡಗಿತು. ಆದರೂ ಛಲಬಿಡದೆ ಕ್ಷೇತ್ರದ ಸುತ್ತಾಟ ಆರಂಭಿಸಿದ ಪ್ರಿಯಾಂಕ್, ಯಾವ ಸಭೆಯಲ್ಲೂ ಪತ್ನಿ ಎದುರಿಸುತ್ತಿರುವ ಮಾರಣಾಂತಿಕ ಕಾಯಿಲೆಯ ಬಗ್ಗೆ ಒಂದು ಮಾತೂ ಹೇಳಿರಲಿಲ್ಲ. ಜನರ ಸಂಶಯಕ್ಕೆ ಉತ್ತರವೇ ಸಿಗದಂತಾಗಿ ಅವರ ವರ್ತನೆ ಹಲವರಲ್ಲಿ ಹಲವು ರೀತಿಯ ಅಭಿಪ್ರಾಯಗಳನ್ನು ಮೂಡಿಸಿತು.

Contact Your\'s Advertisement; 9902492681

ಚುನಾವಣೆಗೆ ಒಂದು ಹತ್ತು ದಿನಗಳು ಬಾಕಿ ಇರುವಾಗ ಇತರ ಮೂಲಗಳಿಂದ ಆತಂಕದ ಸಂಗತಿ ಬೆಳಕಿಗೆ ಬಂತು. ಪ್ರಿಯಾಂಕ್ ಅವರ ಪತ್ನಿ ಬ್ರೇನ್ ಟ್ಯೂಮರ್‍ನಿಂದ ಬಳಲುತ್ತಿದ್ದು, ಆಸ್ಪತ್ರೆಯಲ್ಲಿ ಅರೆಪ್ರಜ್ಞಾವಸ್ಥೆಯಲ್ಲಿ ಚಿಕಿತ್ಸೆ ಮುಂದುವರೆದಿದೆ ಎಂದು. ಎಂಥಹ ಕಠೋರ ಹೃದಯವದು. ಓರ್ವ ರಾಜಕಾರಣಿ ತನ್ನ ಪತ್ನಿ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದರೂ ಕ್ಷೇತ್ರವನ್ನು ರೌಡಿ ಶೀಟರ್ ಕೈಗೆ ಕೊಡಬಾರದು. ಜನರ ಭವಿಷ್ಯ ಮತ್ತಷ್ಟು ಹಿಂದಕ್ಕೆ ತಳ್ಳಬಾರದು ಎಂಬ ಕಾರಣಕ್ಕೆ ಹಳ್ಳಿ ಹಳ್ಳಿಗಳನ್ನು ತಿರುಗಾಡಿ ಮತಯಾಚನೆ ಮಾಡಿದರು. ಪತ್ನಿಯ ಅನಾರೋಗ್ಯ ನೋಡಿ ಓಟ್ ಕೊಡಿ ಎಂದು ಕೇಳದೆ, ನಾನು ಕ್ಷೇತ್ರದಲ್ಲಿ ಅಭಿವೃದ್ಧಿ ಮಾಡಿದ್ದೇನೆ ಎಂದು ಖಾತ್ರಿಯಾದರೆ ಮಾತ್ರ ನನಗೆ ಮತ ಕೊಡಿ ಎಂದು ಬೇಡಿಕೊಂಡರು.

ಇವರ ಈ ಬದ್ಧತೆ ಮತದಾರರ ಹೃದಯ ತಟ್ಟಿತು. ಪತ್ನಿಯ ಅನಾರೋಗ್ಯವನ್ನು ಅನುಕಂಪಕ್ಕಿಳಿಸದ ಪ್ರಿಯಾಂಕ್ ಖರ್ಗೆಗೆ ಕೊನೆಗೂ ಚಿತ್ತಾಪುರದ ಜನರು ಕೈ ಹಿಡಿದರು. ಠೇವಣಿ ಕಳೆಯುತ್ತೇವೆ ಎಂದಿದ್ದ ಬಿಜೆಪಿಗೆ ಸೋಲಿನ ಮರ್ಮಾಘಾತ ನೀಡಿದರು. ಒಬ್ಬ ಜನಪರ ರಾಜಕಾರಣಿ ಜನರಿಗಾಗಿ ದುಡಿಯುವುದನ್ನೇ ಜೀವನ ಧ್ಯೇಯ ಮಾಡಿಕೊಂಡಾಗ, ವೈಯಕ್ತಿಕ ಜೀವನದ ಸಂಕಷ್ಟಗಳು ಎರಡನೇ ದರ್ಜೆಗೆ ತಳ್ಳುತ್ತಾನೆ ಎಂಬುದಕ್ಕೆ ಪ್ರಿಯಾಂಕ್ ಸೂಕ್ತ ಉದಾಹರಣೆಯಾಗಿದ್ದಾರೆ. ಈ ಯುವ ರಾಜಕಾರಣಿಯ ಪ್ರಬುದ್ಧತೆ ಇತರರಿಗೂ ಮಾದರಿಯಾಗಿದೆ.

ಕೊನೆಯ ಗಳಿಗೆಯಲ್ಲಿ ಹಾಸಿಗೆಯಿಂದ ಎದ್ದು ತಮ್ಮ ಇಬ್ಬರು ಮಕ್ಕಳ ಆಸರೆಯಲ್ಲೇ ಮತಗಟ್ಟೆಗೆ ಆಗಮಿಸಿದ ಶೃತಿ ಪ್ರಿಯಾಂಕ್ ಖರ್ಗೆ ಅವರು ಪ್ರಜಾಪ್ರಭುತ್ವದ ಹಕ್ಕು ಚೆಲಾಯಿಸಿದರು. ಕೈ ಕಾಲುಗಳಲ್ಲಿ ಉಸಿರಿಲ್ಲದಿದ್ದರೂ ಪತಿ ಪ್ರಿಯಾಂಕ್ ಪರ ನಿಂತು ಜನತೆಗೆ ಕೈಮುಗಿದ ಭಾವುಕ ಪ್ರಸಂಗ ಜನರ ಕಣ್ಣಲ್ಲಿ ನೀರು ತರಿಸಿತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here