ಕಲಬುರಗಿ: ಸದ್ಗುರು ಜಗ್ಗಿ ವಾಸುದೇವ್ ನೇತೃತ್ವದ ಕೊಯಂಬತ್ತೂರಿನ ಇಶಾ ಫೌಂಡೇಶನ್ ವತಿಯಿಂದ ಕಲಬುರಗಿಯಲ್ಲಿ ಜೂನ್ 14 ರಿಂದ 20 ರವರೆಗೆ 7 ದಿನಗಳ ಇನ್ನರ್ ಇಂಜಿನಿಯರಿಂಗ್ ಯೋಗ ಮತ್ತು ಧ್ಯಾನ ಹಮ್ಮಿಕೊಳ್ಳಲಾಗಿದೆ ಎಂದು ಫೌಂಡೇಶನ್‍ನ ಸ್ವಯಂ ಸೇವಕ ಮನು ಚಂದ್ರಹಾಸ ತಿಳಿಸಿದರು.
ಜಗತ್ತಿನಾದ್ಯಂತ ಇನ್ನರ್ ಇಂಜಿನಿಯರಿಂಗ್ ಪ್ರಚಲಿತದಲ್ಲಿದ್ದು, ಇದೇ ಮೊದಲ ಬಾರಿಗೆ ಕಲಬುರಗಿ ನಗರದ ಗೋದುತಾಯಿ ನಗರದಲ್ಲಿರುವ ಮದರ್ ತೆರೆಸಾ ಬಿ.ಇಡಿ ಕಾಲೇಜು ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಈ ವೇಳೆ ಪುರಾತನ ಶಂಭಾವಿ ಮಹಾಮುದ್ರಾ ಕ್ರಿಯೆಯನ್ನು ಸಹ ನಡೆಸಲಾಗುತ್ತಿದ್ದು, ಒತ್ತಡದ ಜೀವನ, ವಿಶ್ರಾಂತ ರಹಿತ ಜೀವನ ನಡೆಸುವ ವ್ಯಕ್ತಿಗಳು ಮಾನಸಿಕ ಸಂತುಲನೆ ಮತ್ತು ಆರೋಗ್ಯ ಸುಧಾರಣೆಗಾಗಿ ಯೋಗ ಮತ್ತು ಧ್ಯಾನದಲ್ಲಿ ಭಾಗವಹಿಸಬಹುದಾಗಿದೆ ಎಂದು ಅವರು ಹೇಳಿದರು.
ಇಶಾ ಫೌಂಡೇಶನ್ ಸ್ಥಾಪಕರಾದ ಸದ್ಗುರುಗಳು ಇನ್ನರ್ ಇಂಜಿನಿಯರಿಂಗ್ ಕಾರ್ಯಕ್ರಮವನ್ನು ವಿನ್ಯಾಸಗೊಳಿಸಲಿದ್ದಾರೆ. ಏಳು ದಿನದ ಕಾರ್ಯಕ್ರಮ ಎರಡು ಬ್ಯಾಚ್‍ನಲ್ಲಿ ಹಮ್ಮಿಕೊಳ್ಳಲಾಗಿದ್ದು, ಬುಧವಾರ ಮತ್ತು ಶನಿವಾರ ಬೆಳಗ್ಗೆ 6 ರಿಂದ 9 ಗಂಟೆ ಅಥವಾ ಸಂಜೆ 6 ರಿಂದ 9, ಭಾನುವಾರ ದಿನವಿಡೀ ಬೆಳಗ್ಗೆ 7 ರಿಂದ ಸಂಜೆ 5 ಗಂಟೆ ವರೆಗೆ ಹಾಗೂ ಸೋಮವಾರ ಮತ್ತು ಮಂಗಳವಾರ ಬೆಳಗ್ಗೆ 6 ರಿಂದ 9, ಸಂಜೆ 6 ರಿಂದ 9 ಗಂಟೆ ವರೆಗೆ ನಡೆಯಲಿದೆ. ಹೀಗಾಗಿ 15 ವರ್ಷ ಮೇಲ್ಪಟ್ಟ ಎಲ್ಲರೂ ಈ ಶಿಬಿರರದಲ್ಲಿ ಭಾಗವಹಿಸಬಹುದಾಗಿದೆ. ಯೋಗ ಹಾಗೂ ಧ್ಯಾನದಲ್ಲಿ ಪಾಲ್ಗೊಳ್ಳುವವರು ರು.2000 ಪ್ರವೇಶ ಶುಲ್ಕ ನಿಗದಿ ಮಾಡಲಾಗಿದೆ ಎಂದು ವಿವರಿಸಿದರು.
ಇಶಾ ಫೌಂಡೇಶನ್ ನ ಸ್ವಯಂ ಸೇವಕರಾದ ಗಣೇಶ್, ಅಪರ್ಣ ಹಾಗೂ ಜ್ಯೋತಿ ತೇಗನೂರು, ಕನ್ನೇಶ ಇದ್ದರು.
ನಮ್ಮ ವ್ಯವಸ್ಥೆಯ ಮೇಲೆ ನಮ್ಮ ನಿಯಂತ್ರಣ ತಪ್ಪಿ ಹೋಗಿದ್ದು, ನಮ್ಮೊಳಗಿನ ವಾತಾವರಣವನ್ನು ನಿರ್ವಹಣೆ ಮಾಡುವುದು ಹೇಗೆ? ಮತ್ತು ಆಂತರಿಕ ಸನ್ನಿವೇಶ ಸೃಷ್ಠಿಸಿಕೊಂಡು ನಮ್ಮಷ್ಟಕ್ಕೆ ನಾವೇ ಸಾಂತ್ವನಗೊಳಿಸಿಕೊಳ್ಳುವ ಪ್ರಕ್ರಿಯೆಯೇ ಇನ್ನರ್ ಇಂಜಿನಿಯರಿಂಗ್ ಮುಖ್ಯ ಉದ್ದೇಶವಾಗಿದೆ. -ಮನು ಚಂದ್ರಹಾಸ, ಸ್ವಯಂ ಸೇವಕ, ಇಶಾ ಫೌಂಡೇಶನ್