ಆಳಂದ: ಐದು ತಿಂಗಳಲ್ಲಿ 324 ಮಹಿಳೆಯರಿಗೆ ಸಂತಾನ ಹರಣ ಶಸ್ತ್ರ ಚಿಕಿತ್ಸೆ

0
243

ಆಳಂದ: ಬಹುತೇಕ ಜನ ಸಾಮಾನ್ಯರು ತಮ್ಮ ಆರೋಗ್ಯದ ಬಗ್ಗೆ ತಪಾಸಣೆ ಮತ್ತು ಚಿಕಿತ್ಸೆ ಮಾಡಿಕೊಳ್ಳಲು ಎಲ್ಲಿ ತಮ್ಮ ಪ್ರತಿಷ್ಠೆಗೆ ಧಕ್ಕೆ ಬರುತ್ತದೆ ಎಂಬ ಕಾರಣಕ್ಕೊ ಅಥವಾ ಸೂಕ್ತ ಚಿಕಿತ್ಸೆ ದೊರೆಯಲಾರದು ಎಂಬ ಕಾರಣದಿಂದಲೂ ಸರ್ಕಾರಿ ಆಸ್ಪತ್ರೆಗಳಿಗೆ ಹೋಗುವ ಬದಲು ಖಾಸಗಿ ಆಸ್ಪತ್ರೆಗೆ ಹೋಗುವರೆ ಹೆಚ್ಚಿನವರನ್ನು ಕಾಣುತ್ತೇವೆ.

ಸರ್ಕಾರಿ ಆಸ್ಪತ್ರೆಗಳೆಂದರೆ ಮೂಗು ಮುರಿಯುವರೆ ಹೆಚ್ಚು. ಆದರೆ ಈ ನಡುವೆ ಇಬ್ಬರು ಮಹಿಳಾ ಆಧಿಕಾರಿಗಳು (ಪಿಎಸ್‍ಐ) ಇಲ್ಲಿನ ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗಿ ಸಂತಾನ ಹರಣ ಶಸ್ತ್ರ ಚಿಕಿತ್ಸೆ ಪಡೆದುಕೊಳ್ಳುವ ಮೂಲಕ ಸರಳತೆ ಮೆರೆದು ಇನ್ನೊಬ್ಬರಿಗೆ ಮಾದರಿಯಾಗಿದ್ದಾರೆ.

Contact Your\'s Advertisement; 9902492681

ತಾಲೂಕಿನವರೇ ಆಗಿರುವ ಶಹಾಬಾದ ಪಿಎಸ್‍ಐ ಸುವರ್ಣ ವಿನೋಧಕುಮಾರ ಮಲಶೆಟ್ಟಿ, ನರೋಣಾ ಪಿಎಸ್‍ಐ ವಾತ್ಸಲ್ಯ ಕಲ್ಯಾಣರಾವ್ ಬಿರಾದಾರ ಅವರು, ಸ್ಥಳೀಯ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗಿ ಸಂತಾನ ಹರಣ ಶಸ್ತ್ರ ಚಿಕಿತ್ಸೆ ಕೈಗೊಂಡು ಸರಳತೆ ಮೆರೆದಿದ್ದು, ಅಲ್ಲದೆ, ಖಾಸಗಿ ಆಸ್ಪತ್ರೆಗಿಂತಲೂ ಸರ್ಕಾರಿ ಆಸ್ಪತ್ರೆಯಲ್ಲೂ ಉತ್ತಮ ಚಿಕಿತ್ಸೆ ದೊರೆಯುತ್ತದೆ ಎಂಬುದು ಅವರು ಹೇಳಿಕೊಂಡಿದ್ದಾರೆ.

ಕುಟುಂಬ ಕಲ್ಯಾಣ ಯೋಜನೆ ಅಡಿಯಲ್ಲಿ ಸಂತಾನ ಹರಣ ಶಸ್ತ್ರ ಚಿಕಿತ್ಸೆ ಸೇರಿದಂತೆ ಗರ್ಭ ಧಾರಣೆಯಿಂದ ಹೆರಿಗೆವರೆಗೂ ಅನೇಕ ಮಹಿಳೆಯರು ಖಾಸಗಿ ಆಸ್ಪತ್ರೆಗಳಲ್ಲೇ ಚಿಕಿತ್ಸೆ ಮತ್ತು ತಪಾಸಣೆ ಕೈಗೊಳ್ಳುವುದು ಸಾಮಾನ್ಯವಾಗಿದೆ. ಆದರೆ ಇಂದು ಸರ್ಕಾರಿ ಆಸ್ಪತ್ರೆಗಳಲ್ಲೂ ಸರ್ಕಾರ ಸಾಕಷ್ಟು ರೀತಿಯಲ್ಲಿ ಚಿಕಿತ್ಸೆಯ ಸೌಲಭ್ಯಗಳನ್ನು ಒದಗಿಸಿದ ಫಲವಾಗಿ ಪರಿಣಿತ ವೈದ್ಯರು ನೀಡುವ ಚಿಕಿತ್ಸೆ ಯಶಸ್ವಿಗೆ ಕಾರಣವಾಗುತ್ತಿದೆ ಎನ್ನಲಾಗಿದೆ.

ಐದು ತಿಂಗಳಲ್ಲಿ 324 ಮಹಿಳೆರಿಗೆ ಚಿಕಿತ್ಸೆ: ಪಟ್ಟಣದ ಪಟಕಿ ರಸ್ತೆಯಲ್ಲಿರುವ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯೊಂದರಲ್ಲೇ ಜನವರಿ 2023ರಿಂದ ಮೇ 2023ರವರೆಗೆ ಐದು ತಿಂಗಳಲ್ಲಿ ಒಟ್ಟು 324 ಮಹಿಳೆಯರಿಗೆ ಕುಟುಂಬ ಕಲ್ಯಾಣ ಯೋಜನೆಯಲ್ಲಿ ಸಂತಾನ ಹರಣ ಶಸ್ತ್ರ ಚಿಕಿತ್ಸೆ ನೀಡಲಾಗಿದೆ.

2023 ತಿಂಗಳಲ್ಲಿ 20 ಸಂತನಾ ಹರಣ ಶಸ್ತ್ರ್ ಚಿಕಿತ್ಸೆ ಮತ್ತು 15 ಲ್ಯಾಪ್ರೋಸ್ಕೊಪಿ ಉದರ ದರ್ಶಕ ಶಸ್ತ್ರ ಚಿಕಿತ್ಸೆ ಒಟ್ಟು 35, ಫೆಬ್ರುವರಿ ತಿಂಗಳಲ್ಲಿ 15 ಶಸ್ತ್ರ ಚಿಕಿತ್ಸೆ 47 ಲ್ಯಾಪ್ರೋಸ್ಕೋಪಿ ಒಟ್ಟು 62 ಮಾರ್ಚ್‍ನಲ್ಲಿ 11 ಶಸ್ತ್ರ ಚಿಕಿತ್ಸೆ ಮತ್ತು ಲ್ಯಾಪ್ರೋಸ್ಕೋಪಿ 12 ಒಟ್ಟು 23 ಹಾಗೂ ಎಪ್ರಿಲ್‍ನಲ್ಲಿ 11 ಶಸ್ತ್ರ ಚಿಕಿತ್ಸೆ ಮತ್ತು ಲ್ಯಾಪ್ರೋಸ್ಕೋಪಿ 74 ಸೇರಿ ಒಟ್ಟು 85, ಮೇ ತಿಂಗಳಲ್ಲಿ 11 ಶಸ್ತ್ರ ಚಿಕಿತ್ಸೆ ಮತ್ತು ಲ್ಯಾಪ್ರೋಸ್ಕೋಪಿ 108 ಸೇರಿ ಒಟ್ಟು 119 ಗೀಗೆ ಐದು ತಿಂಗಳಲ್ಲಿ ಒಟ್ಟು 324 ಮಹಿಳೆಯರಿಗೆ ಸಂತಾನ ಹರಣ ಶಸ್ತ್ರ ಮತ್ತು ಉದರ ದರ್ಶಕ ಚಿಕಿತ್ಸೆಯನ್ನು ಕೈಗೊಳ್ಳುವ ಮೂಲಕ ಆಸ್ಪತ್ರೆಯ ವೈದ್ಯಕೀಯ ತಂಡವು ಸಾಧನೆ ಮೆರೆದಿದೆ.

ಸರ್ಕಾರಿ ಆಸ್ಪತ್ರೆಯ ಲಾಭ ಪಡೆಯಿರಿ: ಉನ್ನತ ಮಹಿಳಾ ಅಧಿಕಾರಿಗಳು ಸರ್ಕಾರಿ ಆಸ್ಪತ್ರೆಯಲ್ಲೇ ಉದರ ದರ್ಶಕ ಸಂತಾನ ಹರಣ ಶಸ್ತ್ರ ಚಿಕಿತ್ಸೆಯನ್ನು ಪಡೆದುಕೊಂಡಿದ್ದಾರೆ. ಇನ್ನೊಬ್ಬರಿಗೆ ವವರು ಮಾದರಿಯಾಗಿದ್ದಾರೆ. ಕುಟುಂಬ ಕಲ್ಯಾಣ ಯೋಜನೆ ಅಡಿ ಜನ ಸಂಖ್ಯೆ ನಿಯಂತ್ರಣದಲ್ಲಿ ಈ ಶಸ್ತ್ರ ಚಿಕಿತ್ಸೆ ಪ್ರಮುಖ ಪಾತ್ರವಹಿಸುತ್ತದೆ. ಬಡವರು ಮಧ್ಯಮ ವರ್ಗದ ಮಹಿಳೆಯರು ಇಲ್ಲಿನ ಸಾರ್ವಜನಿಕ ಆಸ್ಪತ್ರೆ ಸೌಲಭ್ಯದ ಲಾಭವನ್ನು ಪಡೆದುಕೊಳ್ಳಬೇಕು. ಆಸ್ಪತ್ರೆಯಲ್ಲಿ ನುರಿತ ತಜ್ಞ ವೈದರಿದ್ದಾರೆ. ಉತ್ತಮ ಚಿಕಿತ್ಸೆ ಸೌಲಭ್ಯವಿದೆ. ದೂರದ ಖಾಸಗಿ ಆಸ್ಪತ್ರೆಗೆ ಹೋಗಿ ಸಮಯ ಹಣ ಖರ್ಚು ಮಾಡುವ ಬದಲು ಸರ್ಕಾರಿ ಆಸ್ಪತ್ರೆಯ ಲಾಭವನ್ನು ಪಡೆದುಕೊಳ್ಳಬೇಕು.
ಡಾ. ಮಹಾಂತಪ್ಪಾ ಹಾಳಮಳಿ ಆಡಳಿತ ಮುಖ್ಯ ವೈದ್ಯಾಧಿಕಾರಿ ಸಾರ್ವಜನಿಕ ಆಸ್ಪತ್ರೆ ಆಳಂದ.

ಡಿಎಚ್‍ಒ ಪ್ರಗತಿ ಪರಿಶೀಲನೆ: ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಶನಿವಾರ ತಾಲೂಕಿನ ಸರ್ಕಾರಿ ಆಸ್ಪತ್ರೆಗಳ ವೈದ್ಯಾಧಿಕಾರಿಗಳ ಮತ್ತು ಮೇಲ್ವಿಚಾರಕರಿಗೆ ಕರೆದ ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಜಶೇಖರ ಮಾಲಿ, ಅವರು ರಾಷ್ಟ್ರೀಯ ಕಾರ್ಯಕ್ರಮಗಳ ಕುರಿತು ಪ್ರಗತಿ ಪರಿಶೀಲಿಸಿ ಮಾತನಾಡಿದರು. ಅಲ್ಲದೆ, ಕಟ್ಟು ನಿಟ್ಟಾಗಿ ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತರಬೇಕು ಎಂದು ವೈದ್ಯಾಧಿಕಾರಿಗಳಿಗೆ ಅವರು ತಾಕೀತು ಮಾಡಿದರು. ನೋಡಲ್ ಅಧಿಕಾರಿ ಡಾ. ವಿವೇಕಾನಂದ ರೆಡ್ಡಿ, ತಾಲೂಕು ಆರೋಗ್ಯಾಧಿಕಾರಿ ಡಾ. ಶುಶೀಲಕುಮಾರ ಅಂಬರೆ, ಆಡಳಿತ ವೈದ್ಯಾಧಿಕಾರಿ ಡಾ. ಮಹಾಂತಪ್ಪಾ ಹಾಳಮಳಿ, ಜಿಡಗಾ ಆಸ್ಪತ್ರೆ ಡಾ. ಆಶಾ ಬೇಡಗೆ, ಮೇಲ್ವಿಚಾರಕಿ ವಿಜಯಲಕ್ಷ್ಮೀ ನಂದಿಕೋಲಮಠ ಇನ್ನಿತರು ತಾಲೂಕಿನ ವಿವಿಧ ಆಸ್ಪತ್ರೆಗಳ ವೈದ್ಯಾಧಿಕಾರಿಗಳು ಮತ್ತು ಮೇಲ್ವಿಚಾರಕರು ಸಭೆಯಲ್ಲಿ ಹಾಜರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here