ಶಹಾಬಾದ: ಮುಂಗಾರು ಹಂಗಾಮಿನ ಕೃಷಿ ಚಟುವಟಿಕೆ, ತೊಗರಿ ನೆಟೆ ರೋಗ ನಿರ್ವಹಣೆ, ನಿಯಂತ್ರಣ ಸೇರಿದಂತೆ ಪ್ರಧಾನ ಮಂತ್ರಿ ಕಿಸಾನ ಸಮ್ಮಾನ ಯೋಜನೆಯಡಿ ಇ-ಕೆವೈಸಿ ಮಾಡಿಸಿಕೊಳ್ಳಲು ರೈತ ಬಾಂಧವರಿಗೆ ಹತ್ತಾರು ಮಾಹಿತಿಗಳನ್ನು ಒದಗಿಸುವ ದೃಷ್ಟಿಯಿಂದ ಕೃಷಿ ಇಲಾಖೆ “ಕೃಷಿ ಮಾಹಿತಿ ರಥ” ಸಂಚಾರಿ ವಾಹನ ತಾಲೂಕಿನ ಗ್ರಾಮಗಳಿಗೆ ತೆರಳಿ ಮಾಹಿತಿ ನೀಡುತ್ತಿದೆ ಎಂದು ಕೃಷಿ ಅಧಿಕಾರಿ ಕಾಶಿನಾಥ ದಂಡೋತಿ ಹೇಳಿದರು.
ತಾಲೂಕಿನಲ್ಲಿ ತೊಗರಿ ಬೆಳೆಯನ್ನೇ ಹೆಚ್ಚಾಗಿ ಬೆಳೆಯುತ್ತಾರೆ.ಆದರೆ ಕಳೆದ ವರ್ಷ ಈ ಭಾಗದ ಪ್ರಮುಖ ಬೆಳೆ ತೊಗರಿ ನೆಟೆ ರೋಗದಿಂದ ತತ್ತರಿಸಿ ಬಹಳಷ್ಟು ಹಾನಿಯಾಗಿತ್ತು.ಇದರಿಂದ ರೈತರು ಸಾಕಷ್ಟು ತೊಂದರೆ ಅನುಭವಿಸಿದರು.
ಈ ವರ್ಷ ಅದನ್ನು ಮರುಕಳಿಸದಂತೆ ಹೊಸ ತಳಿಯ ಬೀಜ ನೀಡಲಾಗುತ್ತಿದೆ. ಜತೆಗೆ ನೆಟೆ ರೋಗ ನಿರ್ವಹಣಾ ಕ್ರಮಗಳು, ಪರ್ಯಾಯ ಬೆಳೆ ಬಿತ್ತನೆಗೆ ಸಲಹೆ ಸಂಬಂಧ ರೈತಾಪಿ ವರ್ಗಕ್ಕೆ ಹಳ್ಳಿಗಳಿಗೆ ಹೋಗಿ ಈ ಸಂಚಾರಿ ವಾಹನಗಳು ಮಾಹಿತಿ ನೀಡುತ್ತಿದೆ. ರೈತ ಬಾಂಧವರು ಇದರ ಪ್ರಯೋಜನೆ ಪಡೆಯಬೇಕು. ಕೃಷಿಗೆ ಸಂಬಂಧಿಸಿದ ಯಾವುದೇ ತೊಂದರೆಯಿದ್ದಲ್ಲಿ ರೈತ ಸಂಪರ್ಕ ಕೇಂದ್ರಕ್ಕೆ ಬೇಟಿ ನೀಡಿ ಮಾಹಿತಿಗಳನ್ನು ಪಡೆದುಕೊಳ್ಳಬಹುದೆಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ವಿವಿಧ ಗ್ರಾಮಗಳಲ್ಲಿ ತೆರಳಿ ನೆಟೆರೋಗದ ಹತೋಟಿ ಕ್ರಮದ ಕುರಿತು ಹಾಗೂ ಪ್ರಧಾನ ಮಂತ್ರಿ ಕಿಸಾನ ಸಮ್ಮಾನ ಫಲಾನುಭವಿಗಳು ಬೇಗನೆ ಇ-ಕೆವೈಸಿ ಮಾಡಿಕೊಳ್ಳಬೇಕೆಂದು ಧ್ವನಿವರ್ಧಕ ಮೂಲಕ ಜತೆಗೆ ಕರಪತ್ರಗಳನ್ನು ರೈತರಿಗೆ ಹಂಚುವ ಮೂಲಕ ಮಾಹಿತಿ ನೀಡಿದರು.