ಕಲಬುರಗಿ: ವಿವಿಧ ಆಟೋಟಗಳಿಗೆ ಸ್ಪೂರ್ತಿ ಹಾಗೂ ಪ್ತೇರಣೆ ದೊರಕುವ ನಿಟ್ಟಿನಲ್ಲಿ ಮಹಾನಗರದ ನಾಲ್ಕು ಕಡೆ ಕ್ರೀಡಾ ಸಂಕಿರಣ ನಿರ್ಮಿಸುವ ಯೋಜನೆ ಹೊಂದಲಾಗಿದೆ ಎಂದು ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ್ ಹೇಳಿದರು.
ನಗರದ ಕನ್ನಡ ಭವನದಲ್ಲಿ ಸೆಲ್ಫ್ ಡಿಫಿನ್ಸ್ ಸ್ಕೂಲ್ ಆಫ್ ಇಂಡಿಯನ್ ಕರಾಟೆ ಹಾಗೂ ಅಜಯಕುಮಾರ ಸ್ಪೋಟ್ರ್ಸ್ ಕರಾಟೆ ಅಸೋಸಿಯೇಷನ್ ಆಯೋಜಿಸಿದ್ದ ಕರಾಟೆ ತರಬೇತಿಯ ಪ್ರಮಾಣ ಪತ್ರ ವಿತರಣಾ ಸಮಾರಂಭ ಉದ್ಘಾಟಿಸಿ ಹಾಗೂ ಪ್ರಮಾಣಪತ್ರ ವಿತರಣೆ ನೆರವೇರಿಸಿ ಮಾತನಾಡಿದರು.
ಇಂಡಿಯನ್ ಕರಾಟೆ ಸುವರ್ಣ ಮಹೋತ್ಸವ ಈ ಸಂದರ್ಭದಲ್ಲಿ ಸಂಕಷ್ಟದಲ್ಲಿ ನೆರವಿಗೆ ಬರುವ ಕರಾಟೆ ತರಬೇತಿ ಸರಳವಾಗಿ ದೊರಕುವ ನಿಟ್ಟಿನಲ್ಲಿ ಸಿಎ ನಿವೇಶನ ಇಲ್ಲವೇ ನಿರ್ಮಿಸಲಾಗುವ ಕ್ರೀಡಾ ಸಂಕಿರಣದಲ್ಲಿ ಸ್ಥಳಾವಕಾಶ ಕಲ್ಪಿಸಲು ಯತ್ನಿಸುವುದಾಗಿ ನೂತನ ಶಾಸಕರು ಹೇಳಿದರು.
ಹಿರಿಯ ಪತ್ರಕರ್ತ ಹಣಮಂತರಾವ ಭೈರಾಮಡಗಿ ಅತಿಥಿಗಳಾಗಿ ಮಾತನಾಡಿ, ಶಾಲಾ- ಕಾಲೇಜುಗಳಲ್ಲಿ ಪಠ್ಯಕ್ಕೆ ಹೆಚ್ಚಿನ ಮಹತ್ವ ನೀಡಲಾಗುತ್ತಿದೆ. ಇದರ ಜತೆಗೆ ಪಠ್ಯೇತರ ಚಟುವಟಿಕೆಗಳಾದ ಆಟೋಟಗಳಿಗೂ ಮಹತ್ವ ಕೊಡುವುದು ಅಗತ್ಯವಾಗಿದೆ. ದೈಹಿಕವಾಗಿ ಸದೃಢವಾಗಿದ್ದಲ್ಲಿ ಏನೆಲ್ಲ ಸಾಧನೆ ಮಾಡಬಹುದು. ಕಲಬುರಗಿ ಜಿಲ್ಲೆಯಲ್ಲೇ 80 ಸರ್ಕಾರಿ ಪ್ರೌಢ ಶಾಲೆಗಳಲ್ಲಿ ದೈಹಿಕ ಶಿಕ್ಷಕರಿಲ್ಲ. ಇದನ್ನು ಶಾಸಕರು ನಿವಾರಿಸಲು ಮುಂದಾಗಬೇಕೆಂದರು.
ರೈತ ಮುಖಂಡ ಅವ್ವಣ್ಣಗೌಡ ಎನ್. ಪಾಟೀಲ್ ಪ್ರಾಸ್ತಾವಿಕ ಮಾತನಾಡಿದರು. ಯುನೈಟೆಡ್ ಆಸ್ಪತ್ರೆಯ ಡಾ. ಚೇತನ, ಇಂಡಿಯನ್ ಕರಾಟೆ ಮಾಸ್ಟರ್ ಚೀಫ್ ಟೆಕ್ನಿಕಲ್ ಡೈರೆಕ್ಟರ್ ಶ್ರೀನಿವಾಸ, ಕಲಬುರ್ಗಿ ಜಿಲ್ಲೆಯ ಚೀಫ್ ಇನ್ಸ್ಟ್ರಕ್ಟರ್ ರಾಜವರ್ಧನ ಜಿ. ಚವ್ಹಾಣ, ಅಜಯಕುಮಾರ ಸ್ಪೋಟ್ರ್ಸ್ ಕರಾಟೆ ಅಸೋಸಿಯೇಷನ್ ಪದಾಧಿಕಾರಿಗಳಾದ ಪ್ರತಾಪಸಿಂಗ್ ಜಿ. ಪವಾರ್, ಮಂಜುಳಾ ಎನ್. ಸುತ್ತಾರ, ಅಂಬರೀಶ್ ಜೋಗಿ, ಶ್ರೀಕಾಂತ ಪಿಸಾಳ, ಸುನೀಲಕುಮಾರ ರಾಠೋಡ ಸೇರಿದಂತೆ ಮುಂತಾದವರಿದ್ದರು.
ತರಬೇತಿ ಪಡೆದ ವಿದ್ಯಾರ್ಥಿಗಳು ಕರಾಟೆಯ ವಿವಿಧ ಕಲೆಗಳನ್ನು ಈ ಸಂದರ್ಭದಲ್ಲಿ ಪ್ರಸ್ತುತ ಪಡಿಸಿದರು. ಶಬಾ ಕ್ಯಾಲಿಕಟ್ ಕಾರ್ಯಕ್ರಮ ನಿರೂಪಿಸಿದರು.