ಬೆಂಗಳೂರು/ ಧಾರವಾಡ; ಕೃಷಿ ಕ್ಷೇತ್ರವನ್ನು ಭಾರತದ ಆರ್ಥಿಕತೆಯಲ್ಲಿ ಅತ್ಯಂತ ಪ್ರಮುಖವಾದುದು ಎಂದು ಪರಿಗಣಿಸಲಾಗಿದೆ. ದೇಶದ ಕೃಷಿ ಕ್ಷೇತ್ರದ ಸುಧಾರಣೆಗಾಗಿ ಮತ್ತು ಗ್ರಾಮೀಣಾಭಿವೃದ್ಧಿಗಾಗಿ ಭಾರತ ಸರ್ಕಾರವು ಅನೇಕ ಯೋಜನೆಗಳನ್ನು ಜಾರಿಗೊಳಿಸುತ್ತಿದೆ. ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕರ್ನಾಟಕದ ಗೌರವಾನ್ವಿತ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ಹೇಳಿದರು.
ಕೃಷಿ ವಿಜ್ಞಾನ ವಿಶ್ವವಿದ್ಯಾಲಯ ಧಾರವಾಡದ 36ನೇ ಘಟಿಕೋತ್ಸವದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಭಾರತದ ಕೃಷಿ ಸಂಶೋಧನಾ ವ್ಯವಸ್ಥೆಯು ಕೃಷಿ ಉತ್ಪಾದನೆ ಮತ್ತು ಉತ್ಪಾದಕತೆಯನ್ನು ಹೆಚ್ಚಿಸುವಲ್ಲಿ ಭಾರಿ ಕೊಡುಗೆ ನೀಡಿದೆ. ಹೆಚ್ಚಿನ ಇಳುವರಿ ಮತ್ತು ರೋಗ ನಿರೋಧಕ ತಳಿಗಳ ಅಭಿವೃದ್ಧಿ ಇದರ ಮುಖ್ಯ ಗುರುತಾಗಿದೆ. ಭಾರತೀಯ ಕೃಷಿ ಸಂಶೋಧನಾ ಮಂಡಳಿ ಮತ್ತು ರಾಜ್ಯ ಕೃಷಿ ವಿಶ್ವವಿದ್ಯಾಲಯಗಳು ತಂತ್ರಜ್ಞಾನದ ಉತ್ಪಾದನೆ ಮತ್ತು ವರ್ಗಾವಣೆಯಲ್ಲಿ ಅಪಾರ ಕೊಡುಗೆ ನೀಡುತ್ತಿವೆ ಎಂದರು.
ಭಾರತ ಕೃಷಿ ಪ್ರಧಾನ ದೇಶ. ಕೃಷಿಯನ್ನು “ಆತ್ಮ” ಮತ್ತು “ಭಾರತದ ಬೆನ್ನೆಲುಬು” ಎಂದು ಪರಿಗಣಿಸಲಾಗುತ್ತದೆ. ಮತ್ತಷ್ಟು ಕೃಷಿ ಕ್ಷೇತ್ರದಲ್ಲಿ ಅಭಿವೃದ್ಧಿಗೊಳ್ಳಲು ಶ್ರಮಿಸಬೇಕು. ಕೃಷಿ ಪದವಿಧರರು ಆತ್ಮ ನಿರ್ಭರ ಭಾರತ ಮತ್ತು ಏಕ ಭಾರತಕ್ಕೆ ಜೋಡಿಸಬೇಕು. ಕಲಿತ ಜ್ಞಾನವನ್ನು ಇತರರೊಂದಿಗೆ ಹಂಚಿಕೊಳ್ಳಬೇಕು. ವಿಶ್ವ ಶಾಂತಿ ಹಾಗೂ ವಿಶ್ವ ಕಲ್ಯಾಣಕ್ಕಾಗಿ ಭಾರತ ಮುಂದಾಳತ್ವ ವಹಿಸುತ್ತಿದೆ. ಯುವ ಪೀಳಿಗೆಯ ಜನರು, ಯುವ ನಾಯಕರು ಕೃಷಿ ದೃಷ್ಟಿಯಿಂದ ಹೆಚ್ಚು ಆಧ್ಯತೆಯಿಂದ ಶ್ರಮಿಸಬೇಕೆಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಸಚಿವರಾದ ಎನ್.ಚಲುವನಾರಾಯಣಸ್ವಾಮಿ, ಭಾರತ ಸರಕಾರದ ಕೃಷಿ ಸಂಶೋಧನೆ ಹಾಗೂ ಶಿಕ್ಷಣ ವಿಭಾಗದ ಕಾರ್ಯದರ್ಶಿ ಹಾಗೂ ಭಾರತೀಯ ಕೃಷಿ ಅನುಸಂದಾನ ಪರಿಷÀತ್ತಿನ ಮಹಾನಿರ್ದೇಶಕರಾದ ಡಾ.ಹಿಮಾಂಶು ಪಾಠಕ್, ಕುಲಪತಿಗಳಾದ ಡಾ.ಪಿ.ಎಲ್.ಪಾಟೀಲ ಮುಂತಾದ ಗಣ್ಯರು ಉಪಸ್ಥಿತರಿದ್ದರು.