ಆಳಂದ ಮತಕ್ಷೇತ್ರದಲ್ಲಿ ಶಾಸಕ ಬಿ ಆರ್ ಪಾಟೀಲ ದ್ವೇಷದ ರಾಜಕಾರಣ ಮುಂದುವರೆಸಿದ್ದು ಮತಕ್ಷೇತ್ರದ ಕೆಲವು ಕಡೆ ಭೇಟಿ ನೀಡಿ ಮಾಧ್ಯಮಗಳಿಗೆ ಸುಳ್ಳು ಮಾಹಿತಿ ನೀಡಿ ಜನರಿಗೆ ದಿಕ್ಕು ತಪ್ಪಿಸುವ ಪ್ರಯತ್ನ ಮಾಡುತಿದ್ದಾರೆ ಎಂದು ಜಿ.ಪಂ ಮಾಜಿ ಉಪಾಧ್ಯಕ್ಷ ಹರ್ಷಾನಂದ ಗುತ್ತೇದಾರ ಆರೋಪಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ತಮ್ಮ ಸಹೋದರನ ಒಡೆತನದ ಕಂಕರ್ ಮಶೀನ ಮತ್ತು ಸಂತೋಷ ಧಾಬಾಗೆ ಅಕ್ರಮವಾಗಿ ಸಂಪರ್ಕ ಪಡೆದಿಲ್ಲ ಎಲ್ಲವೂ ನಿಯಮಗಳಿಗೆ ಅನುಗುಣವಾಗಿಯೇ ದಾಖಲಾತಿ ಮತ್ತು ಹಣ ಪಾವತಿಸಿ ಸಂಪರ್ಕ ಪಡೆಯಲಾಗಿದೆ ಆದರೆ ಕೀಳು ಮಟ್ಟದ ಪ್ರಚಾರಕ್ಕೊಸ್ಕರ ಸುಖಾಸುಮ್ಮನೆ ನಮ್ಮ ಹೆಸರು ಎಳೆದು ತಂದು ಆರೋಪ ಮಾಡುತ್ತಿದ್ದಾರೆ. ಒಂದು ವೇಳೆ ನಾವು ಅಕ್ರಮ ಸಂಪರ್ಕ ಪಡೆದಿದ್ದರೇ ತನಿಖೆ ಮಾಡಲಿ ನಾವು ತನಿಖೆಗೆ ಸಿದ್ಧರಾಗಿದ್ದೇವೆ ಎಂದು ತಿಳಿಸಿದ್ದಾರೆ.
ಶಾಸಕ ಬಿ ಆರ್ ಪಾಟೀಲರು ತಾವೇ ಸ್ವ:ತ ಅಮರ್ಜಾ ಅಣೆಕಟ್ಟೆಯ ಮೇನ್ ಪೈಪಲೈನ್ ಮೂಲಕ ಸಿಬಿಎಸ್‍ಇ ಶಾಲೆ, ವೈದ್ಯಕೀಯ ಕಾಲೇಜುಗಳಿಗೆ ಅಕ್ರಮ ಸಂಪರ್ಕ ಪಡೆದು ನೀರು ಬಳಸುತ್ತಿದ್ದಾರೆ. ಜೊತೆಗೆ ಆಳಂದ ಪಟ್ಟಣದ ತಾ.ಪಂ ಕಚೇರಿಯ ಹತ್ತಿರ ಇರುವ ನೀರಿನ ಟ್ಯಾಂಕನಿಂದ ಎದುರುಗಡೆ ಇರುವ ತಮ್ಮ ಆರ್‍ಎಂಎಲ್ ಕಾಲೇಜಿಗೆ ನೇರ ಸಂಪರ್ಕ ಪಡೆದು ನೀರು ಬಳಸುತ್ತಿದ್ದಾರೆ. ಅಲ್ಲದೇ ಆಳಂದ ಪಟ್ಟಣದಲ್ಲಿ ಅನ್ಸಾರಿ ವಾಟರ್ ಸರ್ವಿಸ್ ಸೆಂಟರ್, ಬಸ್ ಡೀಪೋ, ಪ್ರವಾಸಿ ಮಂದಿರ, ದರ್ಗಾ, ಮುಸ್ಲಿಂ ಸ್ಮಶಾನ ಭೂಮಿ, ಸಂಗೋಳಗಿ ಶೇಡ್‍ನಲ್ಲಿ ಅನೇಕ ಸಂಪರ್ಕಗಳು ಅಕ್ರಮವಾಗಿವೆ ಅದರ ಕುರಿತು ಶಾಸಕರು ಮಾತನಾಡಲಿ ಎಂದಿದ್ದಾರೆ.
ಸಿಡ್ಸ ಫಾರ್ಮ ತಾಂಡಾಕ್ಕೆ ಹತ್ತಿಕೊಂಡಿರುವ ಅವರ ಜಮೀನಿನಲ್ಲಿ ತಾಂಡಾಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸುವ 63ಕೆವಿ ಟಿಸಿಯ ಮೇಲೆ ಅನಧಿಕೃತ ವಿದ್ಯುತ್ ಸಂಪರ್ಕ ಪಡೆದು 5 ಏಕರೆ ಜಮೀನಿನಲ್ಲಿ ಮೇವು ಬೆಳೆಯುತ್ತಿದ್ದಾರೆ ನಿಯಮಾವಳಿಗಳಂತೆ ಗ್ರಾಮಗಳಿಗೆ ವಿದ್ಯುತ್ ಕಲ್ಪಿಸುವ ಟಿಸಿಗಳ ಮೇಲೆ ಸಂಪರ್ಕ ಪಡೆಯುವಂತಿಲ್ಲ ಆದರೂ ನಿಯಮ ಮೀರಿ ತಮ್ಮ ಅಧಿಕಾರ ದುರುಪಯೋಗ ಪಡಿಸಿಕೊಂಡು ಸಂಪರ್ಕ ಪಡೆದುಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.
ಎಫ್2 ವಾಟರ್ ಸಪ್ಲೈ ಫೀಡರ್ ಸಂಪರ್ಕದ ಮೇಲೆ ಕಳೆದ 10-15 ವರ್ಷಗಳಿಂದ ಅವರ ಬೆಂಬಲಿಗರೇ ಸ್ಟೋನ್ ಕ್ರಶರಗಳಿಗೆ ಸಂಪರ್ಕ ಪಡೆದು ಮಶೀನ್ ನಡೆಸುತ್ತಿದ್ದಾರೆ. ನಾವು ಕಳೆದ ಮೂರು ವರ್ಷಗಳ ಹಿಂದೆ ಎಫ್2 ಸಂಪರ್ಕ ಪಡೆದು ನಿಯಮದಂತೆ ಕೋಟ್ಯಾಂತರ ಬಿಲ್ ಪಾವತಿಸಿದ್ದೇವೆ ಇದಕ್ಕೆ ಬೇಕಾದ ದಾಖಲಾತಿ ನೀಡಲು ಸಿದ್ಧರಿದ್ದೇವೆ. ಶಾಸಕ ಬಿ ಆರ್ ಪಾಟೀಲರು ಸಿಡ್ಸ್ ಫಾರ್ಮ ತಾಂಡಾದ ಟಿಸಿಯ ಮೇಲೆ ಪಡೆದಿರುವ ಸಂಪರ್ಕದ ವಿದ್ಯುತ್ ಬಿಲ್ ಕಟ್ಟಿರುವ ಕುರಿತು ದಾಖಲಾತಿ ನೀಡಲು ಸಿದ್ಧರಿದ್ದಾರೇಯೇ? ಇದ್ದರೇ ಸಾರ್ವಜನಿಕರ ಎದುರು ಬಹಿರಂಗಪಡಿಸಲಿ ಎಂದು ಒತ್ತಾಯಿಸಿದ್ದಾರೆ.
ತಾವು ತಮ್ಮ ಹೊಲಕ್ಕೆ 24 ಗಂಟೆ ವಿದ್ಯುತ್ ಸಂಪರ್ಕ ಪಡೆಯುತ್ತೀದ್ದೀರಿ ಅದೇ ರೀತಿ ತಾಲೂಕಿನ ಎಲ್ಲ ರೈತರಿಗೂ 24 ಗಂಟೆ ವಿದ್ಯುತ್ ಸಿಗುವಂತೆ ಮಾಡಲು ಜೆಸ್ಕಾಂ ಅಧಿಕಾರಿಗಳಿಗೆ ತಿಳಿಸಬೇಕು. ತಾಲೂಕಿನಲ್ಲಿ ತಮಗೊಂದು, ರೈತರಿಗೊಂದು ಕಾನೂನು ಇದೆಯೇ ಎಂದು ಪ್ರಶ್ನಿಸಿದ್ದಾರೆ.
ಶಾಸಕ ಬಿ ಆರ್ ಪಾಟೀಲರು ಮಾಡುತ್ತಿರುವ ದ್ವೇಷದ ರಾಜಕಾರಣದಿಂದ ಭೂಸನೂರ, ಕೋರಹಳ್ಳಿ, ಕೋರಹಳ್ಳಿ ತಾಂಡಾ, ನೆಹರೂ ನಗರ ತಾಂಡಾ, ಸಂಗೋಳಗಿ ನಂ.3 ಗ್ರಾಮಗಳ ಜನರಿಗೆ ವಿದ್ಯುತ್ ಸಮಸ್ಯೆ ಆಗುತ್ತಿದೆ ಅಲ್ಲದೇ ರಾತ್ರಿ ಹೊತ್ತಿನಲ್ಲಿ ಮೇಲಿಂದ ಮೇಲೆ ವಿದ್ಯುತ್ ಟ್ರಿಪ್ ಆಗುತ್ತಿದೆ ಇದಕ್ಕೆ ನೇರ ಹೊಣೆ ಶಾಸಕ ಬಿ ಆರ್ ಪಾಟೀಲ ಅವರೇ ಆಗಿದ್ದಾರೆ ಎಂದಿದ್ದಾರೆ.