ಶರಣರು ತಮ್ಮ ಲೀಲೆಗಳಿಂದ ದೇವರಾದರು

0
46

ಶರಣಬಸವೇಶ್ವರರು ತಮ್ಮ ಅನೇಕ ಲೀಲೆಗಳನ್ನು ಮಾಡಿ ಜಗತ್ತಿಗೆ ದೇವರಾಗಿದ್ದರು ಎಂದು ಗೋದುತಾಯಿ ದೊಡ್ಡಪ್ಪ ಅಪ್ಪ ಕಲಾ ಮತ್ತು ವಾಣಿಜ್ಯ ಪದವಿಪೂರ್ವ ಮಹಿಳಾ ಮಹಾವಿದ್ಯಾಲಯದ ಸಹ ಪ್ರಾಧ್ಯಾಪಕ ಪ್ರೊ. ಜಗದೀಶ ಬಿಜಾಪೂರೆ ಹೇಳಿದರು.

ಕಲಬುರಗಿಯ ಶರಣಬಸವೇಶ್ವರ ಸಂಸ್ಥಾನದ ಅಖಿಲ ಭಾರತ ಶಿವಾನುಭವ ಮಂಟಪದಲ್ಲಿ ಶ್ರಾವಣ ಮಾಸದ ಪ್ರಯುಕ್ತ ಹಮ್ಮಿಕೊಂಡಿರುವ ೪೦ ದಿನಗಳ ಉಪನ್ಯಾಸ ಮಾಲಿಕೆಯಲ್ಲಿ ಶನಿವಾರ ’ಮಹಾದಾಸೋಹಿ ಶರಣಬಸವರ ಶಿವಲೀಲೆಗಳ’ ಕುರಿತು ಉಪನ್ಯಾಸ ನೀಡಿದರು. ಕುಂಬಾರ ನಿಂಬೆವ್ವ ಎನ್ನುವ ಭಕ್ತೆ ಪ್ರತಿವರ್ಷ ಎರಡು ಕೊಡ ನೀರು ಹಿಡಿಯುವ ೨೫ ಗಡಿಗೆಗಳನ್ನು ತಂದು ದಿನಾಲು ಅದರಲ್ಲಿ ನೀರು ತುಂಬುತ್ತಿದ್ದಳು.

Contact Your\'s Advertisement; 9902492681

ಬಂದ ಭಕ್ತರು ಪ್ರಸಾದ ಪಡೆದ ಮೇಲೆ ಅವರಿಗೆ ನಿಂಬೆವ್ವ ನೀರು ಕೊಡುತ್ತಿದ್ದಳು. ಒಂದು ದಿನ ಕೊಡ ತೆಗೆದುಕೊಂಡು ಹೋಗುವಾಗ ಕಾಲು ಜಾರಿ ಬಿದ್ದಳು. ಅಸಾಧ್ಯ ನೋವು. ಆದರೂ ಆಕೆಯ ಬಾಯಿಯಲ್ಲಿ ಶರಣರ ನಾಮಸ್ಮರಣೆ. ಶರಣರು ಆಕೆಯ ಹಣೆಗೆ ವಿಭೂತಿ ಹಚ್ಚುತ್ತಾರೆ. ತಕ್ಷಣವೇ ನೋವು ಮಾಯೆಯಾಗಿ ಕಾಲು ಮೊದಲಿನಂತಾಗುತ್ತದೆ.

ಒಂದು ಸಲ ಆದಿ ದೊಡ್ಡಪ್ಪ ಶರಣರಿಗೆ ಜ್ವರ ಬಂದು ನಿಶ್ಯಕ್ತಗೊಂಡಿದ್ದರು. ಆದರೂ ಕುದುರೆ ಏರಿ ತಮ್ಮ ಹೊಲಕ್ಕೆ ಹೊರಟರು. ಹೋಗುವಾಗ ತಲೆ ತಿರುಗಿ ಕುದುರೆಯ ಮೇಲಿಂದ ಕೆಳಗೆ ಬಿದ್ದರು. ಆ ಕಡೆ ಶರಣರು ತಮ್ಮ ಆಸನದಲ್ಲಿ ಕುಳಿತಿದ್ದರು. ಅವರಿಗೆ ಅದು ತಿಳಿಯಿತೋ ಎನ್ನುವಂತೆ ಕೈ ಎತ್ತಿ ಇಲ್ಲಿಂದಲೆ ಅವರು ಹಿಡಿಯುತ್ತಾರೆ. ದಾಸೋಹ ಮಹಾಮನೆಯಲ್ಲಿ ನಿತ್ಯ ದಾಸೋಹ ನಡೆಯುತ್ತಿತ್ತು. ಒಮ್ಮೆ ದಾಸೋಹಕ್ಕೆ ಹಣವು ಕಡಿಮೆ ಬೀಳಲು ದೊಡ್ಡಪ್ಪಶರಣರು ಚಿಂತಾಕ್ರಾಂತರಾದರು. ಇನ್ನೂ ಬೆಳಕು ಹರಿದಿರಲಿಲ್ಲ. ಮಹಾಮನೆಯಲ್ಲಿ ಒಂದೆಡೆ ಶರಣಬಸವರ ಇಷ್ಟಲಿಂಗ ಪೂಜೆ, ಇನ್ನೊಂದಡೆ ಆದಿ ದೊಡ್ಡಪ್ಪ ಶರಣರದು, ಮಗದೊಂದೆಡೆ ನೀಲಮ್ಮ ತಾಯಿಯವರ ಲಿಂಗಪೂಜೆ ನಡೆಯುತ್ತಿತ್ತು. ಹೊತ್ತು ಹೊರಡುವಾಗ ಅದೆಷ್ಟೋ ಬಂಡಿಗಳು ದಾಸೋಹಕ್ಕೆ ಬೇಕಾದ ವಸ್ತುಗಳು ಹೊತ್ತುಕೊಂಡು ದಾಸೋಹ ಮಹಾಮನೆಗೆ ಎದುರಿಗೆ ಬಂದು ನಿಂತಿವೆ.

ಆದಿದೊಡ್ಡಪ್ಪ ಶರಣರು ಶರಣರ ಪಾದೋದಕವನ್ನು ತೀರ್ಥರೂಪದಲ್ಲಿ ದಿನನಿತ್ಯ ತಪ್ಪದೆ ತೆಗೆದುಕೊಳ್ಳುತ್ತಿದ್ದರು. ಅಷ್ಟೇ ಅಲ್ಲ ದಿನಾಲೂ ದಾಸೋಹ ಮಹಾಮನೆಯ ತುಂಬಾ ಆ ಪಾದೋದಕ ಸಿಂಪಡಿಸುತ್ತಿದ್ದರು. ಕೆಲ ಬ್ರಾಹ್ಮಣರು ಇದನ್ನು ಟೀಕಿಸುತ್ತಿದ್ದರು. ಒಬ್ಬ ವ್ಯಕ್ತಿಯ ಪಾದೋದಕ ಅದು ಹೇಗೆ ತೀರ್ಥವಾಗುತ್ತದೆಯೆಂದು ಮೊಂಡು ಹಿಡಿದರು. ಮುಂದೆ ಕೆಲವೇ ದಿನಗಳಲ್ಲಿ ಹೀಗೆ ವಾದ ಮಾಡುವುದರಲ್ಲಿ ಒಬ್ಬರಿಗೆ ಕಾಲಿಗೆ, ಕೈಗೆ ಪೆಟ್ಟಾಗಿ ರಕ್ತ ಸುರಿಯಲಾರಂಭಿಸಿತು. ಕೆಲವೇ ದಿನಗಳಲ್ಲಿ ಅದರೊಳಗೆ ಹುಳುಗಳು ಬರತೊಡಗಿದವು. ಎಲ್ಲಿಯೂ ತೋರಿಸಿದರೂ ಕಡಿಮೆಯಾಗಲಿಲ್ಲ. ಶರಣಬಸವರ ಹತ್ತಿರ ತಂದರು . ಆದಿ ದೊಡ್ಡಪ್ಪ ಶರಣರು ಅಲ್ಲಿಯೇ ಇದ್ದರು ಶರಣರ ಪಾದೋದಕ ತಂದು ಹಾಕಿದಾಗ ನೋವು ಮಾಯವಾಯಿತು.

ಒಮ್ಮೆ ದುಷ್ಟ ಪ್ರವೃತ್ತಿಯುಳ್ಳ ಇಬ್ಬರು ವ್ಯಕ್ತಿಗಳು ಶರಣರಲ್ಲಿಗೆ ಬಂದರು. ಮಾತು ಒರಟು, ನಡತೆ ಅತಿ ಒರಟು. ಶರಣರ ಮುಂದೆ ಕುಳಿತು ದೊಡ್ಡ ದೊಡ್ಡ ಮಾತುಗಳನ್ನಾಡತೊಡಗಿದರು. ಅದನ್ನು ನೋಡುತ್ತಿದ್ದ ಶರಣರು ಅವರಿಗೆ ಏನೇನೂ ಅನ್ನದೆ ಸುಮ್ಮನೆ ಕುಳಿತರು. ಪ್ರಾರಂಭವಾಯಿತು ಶಿವನಾಟ ಇಲ್ಲಿಯವರೆಗೆ ಯಾವ ಬಾಯಿಂದ ಆಡುತ್ತಿದ್ದರೋ ಆ ಬಾಯಿ ಮಾತಾಡಲೇ ಇಲ್ಲ. ಎದೆ ಸೆಟಿಸಿ ಹೇಳುತ್ತಿದ್ದರೋ ಆ ಎದೆ ನೋಯಿಸಲಾರಂಭಿಸಿತು. ತಪ್ಪನ್ನು ಅರಿವಾದ ಅವರು ಶರಣರಲ್ಲಿ ಬಂದು ತಮ್ಮ ತಪ್ಪನು ಒಪ್ಪಿಕೊಂಡರು. ಶರಣರು ’ ದೇವರು ಬಾಯಿ ಕೊಟ್ಟಿದ್ದು ಕೆಟ್ಟದಕ್ಕಲ್ಲಪ್ಪ ಒಳ್ಳೆಯದನ್ನು ನುಡಿಯಲ್ಲಿಕ್ಕೆ , ನುಡಿದರೆ ಲಿಂಗ ಮೆಚ್ಚಿ ಅಹುದಹುದೆನ್ನಬೇಕು ಎನ್ನಲಿಲ್ಲವೆ ಬಸವಣ್ಣನವರು . ಅಂತಹ ಲಿಂಗನುಡಿ ನುಡಿಯುತ್ತಾ ಶಿವಾಚಾರದಿಂದ ಬದುಕಬೇಕೆಂದು ಹರಸಿದರು. ಹೀಗೆ ಶರಣರ ಲೀಲೆಗಳು ಅಪಾರವಾಗಿವೆ ಎಂದರು.

ಪ್ರೊ. ಜಗದೀಶ ಬಿಜಾಪೂರೆ, ಪ್ರಾಧ್ಯಾಪಕ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here