ಕಲಬುರಗಿ; ಕಳೆದ 2022-23ನೇ ಸಾಲಿನ ಮುಂಗಾರು ತೊಗರಿ ಬೆಳೆ ಕಟಾವಿಗೆ ರೈತರು ಸರಿಯಾದ ಕಾರ್ಯವಿಧಾನ ಅನುಸರಿಸಿಲ್ಲ ಎಂದು ಅಕ್ಷೇಪಿಸಿ ಬಾಕಿ ಇರಿಸಿಕೊಂಡಿದ್ದ 12 ಕೋಟಿ ರೂ. ಬೆಳೆ ವಿಮಾ ಪರಿಹಾರವನ್ನು ಕೂಡಲೆ ರೈತರಿಗೆ ವಿತರಿಸುವಂತೆ ಯೂನಿವರಸಲ್ ಸೊಂಪು ಜನರಲ್ ಇನ್ಸುರೆನ್ಸ್ ಕಂಪನಿಗೆ ಜಿಲ್ಲಾಧಿಕಾರಿ ಯಶವಂತ ವಿ. ಗುರುಕರ್ ಆದೇಶಿಸಿದಾರೆ.
ಕಳೆದ ವರ್ಷ ಅಫಜಲಪೂರ ತಾಲೂಕಿನ ಮಾಶಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ 7 (ಮಳೆ ಮತ್ತು ನೀರಾವರಿ ಆಶ್ರಯ), ಆಳಂದ ತಾಲೂಕಿನ ಕಿಣ್ಣಿ ಸುಲ್ತಾನ ಗ್ರಾಮ ಪಂಚಾಯಿತಿ ವ್ಯಾಪ್ತಿಯ 4 (ಮಳೆ ಆಶ್ರಯ) ಮತ್ತು ಕೊಡಲಹಂಗರಗಾ ಗ್ರಾಮ ಪಂಚಾಯತಿಯ 4 (ಮಳೆ ಆಶ್ರಯ) ಹಾಗೂ ಕಲಬುರಗಿ ತಾಲೂಕಿನ ಬಸವ ಪಟ್ಟಣ ಗ್ರಾಮ ಪಂಚಾಯಿತಿಯ 1 (ಮಳೆ ಆಶ್ರಯ) ಬೆಳೆ ಕಟಾವು ಪ್ರಯೋಗಗಳನ್ನು ರೈತರು ಸರಿಯಾದ ಕಾರ್ಯವಿಧಾನ ಅನುಸರಿಸಿಲ್ಲ ಎಂದು ಕೃಷಿ ಆಯುಕ್ತರಲ್ಲಿ ತೀವು ಆಕ್ಷೇಪ ವ್ಯಕ್ತಪಡಿಸಿ ರೈತರಿಗೆ ನೀಡಬೇಕಾದ ತೊಗರಿ ಕೃಷಿ ವಿಮೆ ಪರಿಹಾರ ತಡೆಹಿಡಿದಿದ್ದರು. ಕೃಷಿ ಆಯುಕ್ತರು ಸದರಿ ಸಮಸ್ಯೆಯನ್ನು ಜಿಲ್ಲಾ ಮಟ್ಟದ ಕುಂದುಕೊರತೆ ಪರಿಹಾರ ಸಮಿತಿ ಸಭೆಯಲ್ಲಿ ಮಂಡಿಸಿ ಇತ್ಯರ್ಥಪಡಿಸಿಕೊಳ್ಳಲು ತಿಳಿಸಿದ್ದರು.
ಅದರಂತೆ ಇತ್ತೀಚೆಗೆ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜರುಗಿದ ಜಿಲ್ಲಾ ಕುಂದು ಕೊರತೆ ಪರಿಹಾರ ಸಮಿತಿ ಸಭೆಯಲ್ಲಿ, ಪಂಚಾಯಿತಿವಾರು ಬೆಳೆ ಕಟಾವು ಪ್ರಯೋಗಗಳನ್ನು ಕೈಗೊಂಡ ಮೂಲ ಕಾರ್ಯಕರ್ತರ (ಗ್ರಾಮ ಲೆಕ್ಕಿಗರ), ಹೊಲದ ರೈತರ ವಾದ ಮತ್ತು ವಿಮಾ ಕಂಪನಿಯವರ ಆಕ್ಷೇಪಗಳನ್ನು ಆಲಿಸಿದ ಜಿಲ್ಲಾಧಿಕಾರಿಗಳು, ಪ್ರಕರಣದಲ್ಲಿ ಇನ್ಸೂರೆನ್ಸ್ ಕಂಪನಿ ಲಿಮಿಟೆಡ್ ಕ್ಷೇತ್ರ ಮಟ್ಟದ ಕಾರ್ಯಕರ್ತರು/ ಸಿಬ್ಬಂದಿಗಳು ಕ್ರಮಬದ್ಧವಾಗಿ ಕಾರ್ಯನಿರ್ವಹಿಸಿರುವುದಿಲ್ಲ ಎಂಬುದನ್ನು ತೋರಿಸುತ್ತಿದೆ. ಆಕ್ಷೇಪಗಳಿಗೆ ಪೂರಕವಾಗಿ ಇಂಬು ನೀಡುವ ಯಾವುದೇ ಸಾಕ್ಷಾಧಾರಗಳು, ದಾಖಲೆಗಳು ನೀಡದ ಕಾರಣ ವಿಮಾ ಕಂಪನಿಯ ಆಕ್ಷೇಪಗಳನ್ನು ಅಲ್ಲಗಳೆದು ಆಯಾ ರೈತರ ಖಾತೆಗೆ ಕೂಡಲೆ ಒಟ್ಟಾರೆ 12 ಕೋಟಿ ರೂ. ಬೆಳೆ ವಿಮೆ ಪರಿಹಾರ ನೀಡುವಂತೆ ಡಿ.ಸಿ. ಆದೇಶಿಸಿರುತ್ತಾರೆ.
ಸಭೆಯಲ್ಲಿ ಜಂಟಿ ಕೃಷಿ ನಿರ್ದೇಶಕ ಸಮದ ಪಟೇಲ್, ಕೃಷಿ ಉಪ ನಿರ್ದೇಶಕರು, ತೋಟಗಾರಿಕೆ ಉಪನಿರ್ದೇಶಕರು, ಜಿಲ್ಲಾ ಸಂಖ್ಯೆ ಸಂಗ್ರಹಣಾಧಿಕಾರಿಗಳು, ಲೀಡ್ ಬ್ಯಾಂಕ್ ಅಧಿಕಾರಿಗಳು, ತಹಶೀಲ್ದಾರರು, ಸಹಾಯಕ ಕೃಷಿ ನಿರ್ದೇಶಕರು, ವಿಮಾ ಕಂಪನಿಯ ರಾಜ್ಯ ಪ್ರತಿನಿಧಿ ಮಾರೇಶ ಇದ್ದರು.