ಕಲಬುರಗಿ: ನಮ್ಮ ಮುಂದಿನ ಪೀಳಿಗೆಗಾಗಿ ಪರಿಸರ ಸಂರಕ್ಷಣೆ ಮಾಡಿ ಕಾಪಾಡುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಚೇತನ್ ಆರ್. ಅಭಿಪ್ರಾಯಪಟ್ಟರು.
ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತ ದ ವತಿಯಿಂದ ನಗರದ ತಾರಫೈಲ್ ಏರಿಯಾದಲ್ಲಿರುವ ಮಲ್ಲಿಕಾರ್ಜುನ ಖರ್ಗೆ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಶುಕ್ರವಾರ ಆಯೋಜಿಸಿದ ಇಂಧನ ಹಾಗೂ ಪರಿಸರ ಸಂರಕ್ಷಣೆ ಬಗ್ಗೆ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಅಭಿವೃದ್ಧಿ ಹೆಸರಿನಲ್ಲಿ ಮರಗಳ ಕಡಿತ, ಅತೀಯಾದ ಪ್ಲಾಸ್ಟಿಕ್ ಬಳಕೆಯಿಂದ ಪರಿಸರ ನಾಶವಾಗುತ್ತಿದೆ. ಇದರಿಂದ ಹವಾಮಾನ ವೈಪರೀತ್ಯ ಉಂಟಾಗಿ ಕಾಲ ಕಾಲಕ್ಕೆ ಮಳೆಯಾಗುತ್ತಿಲ್ಲ. ಪ್ರಕೃತಿ ವಿಕೋಪಗಳು ಸಂಭವಿಸುತ್ತಿವೆ. ಹೊಸ ಹೊಸ ಸಾಂಕ್ರಾಮಿಕ ರೋಗಗಳು ಹುಟ್ಟಿಕೊಳ್ಳುತ್ತಿವೆ. ಇವುಗಳಿಂದ ಮುಂದಿನ ಪೀಳಿಗೆಯನ್ನು ರಕ್ಷಿಸುವ ದೃಷ್ಟಿಯಿಂದ ಪರಿಸರವನ್ನು ನಾವೆಲ್ಲರೂ ಕಾಪಾಡಬೇಕು. ಪ್ರತಿಯೊಬ್ಬರೂ ಮರಗಿಡಗಳನ್ನು ನೆಟ್ಟು, ಬೆಳೆಸಿ ಪರಿಸರವನ್ನು ರಕ್ಷಿಸಿ ಎಂದು ಸಲಹೆ ನೀಡಿದರು.
ಕ್ರೆಡಲ್ ನ ಎಇಇ ಮಾಲಿನಿ ಸ್ವಾಮಿ ಮಾತನಾಡಿ, ಇಂದಿನ ಜಾಗತಿಕ ಬದಲಾವಣೆಯಿಂದ ಫಾಸಿಲ್ ಇಂಧನಗಳು ಮುಗಿದು ಹೋಗುತ್ತಿರುವುದರಿಂದ ಭವಿಷ್ಯದಲ್ಲಿ ಎದುರಾಗಬಹುದಾದ ಇಂಧನ ಕೊರತೆ ನೀಗಿಸಲು ನಾವು ಪರಿಸರ ಸ್ನೇಹಿ ಸೌರಶಕ್ತಿ ಮತ್ತಿತರ ಪರ್ಯಾಯ ಇಂಧನ ಬಳಕೆ ಮಾಡುವ ಮೂಲಕ ಪರಿಸರ ಸಂರಕ್ಷಣೆಗೆ ಪಣ ತೊಡಬೇಕು. ಈ ನಿಟ್ಟಿನಲ್ಲಿ ನಮ್ಮ ಕ್ರೆಡಲ್ ವತಿಯಿಂದ ಜಿಲ್ಲೆಯಾದ್ಯಂತ ಪರಿಸರ ಸಂರಕ್ಷಣೆ ಕುರಿತಾದ ಹಲವು ಜನೋಪಯೋಗಿ ಕಾರ್ಯಕ್ರಮಗಳನ್ನು ಹಾಕಿಕೊಳ್ಳಲಾಗಿದೆ ಎಂದರು.
ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಮಾತನಾಡಿ, ಪರಿಸರ ಮಾಲಿನ್ಯ ತಡೆಗಟ್ಟಬೇಕಾದರೆ ಮತ್ತು ಹಸಿರು ಪರಿಸರ ಕಾಪಾಡಿಕೊಳ್ಳುವಲ್ಲಿ ಶ್ರದ್ಧೆ ಮತ್ತು ಬದ್ಧತೆಯಿಂದ ತೊಡಗಿಕೊಳ್ಳುತ್ತೇವೆ ಎಂದು ನಮ್ಮ ಇಂದಿನ ಯುವ, ವಿದ್ಯಾರ್ಥಿ ಜನಾಂಗ ಪಣ ತೊಡಬೇಕು. ಪರಿಸರಕ್ಕೆ ಹಾನಿಯುಂಟು ಮಾಡುವುದನ್ನು ತಡೆಯುವ ಮನೋಭಾವ ಇಂದಿನ ಮಕ್ಕಳಲ್ಲಿ ಮೂಡಬೇಕು. ಆಗ ಮಾತ್ರವೇ ಈ ಜಾಗೃತಿ ಕಾರ್ಯಕ್ರಮ ಸಾರ್ಥಕವಾಗುತ್ತದೆ ಎಂದರು.
ದಕ್ಷಿಣ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಶಂಕ್ರೆಮ್ಮಾ ಢವಳಗಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವಿಜ್ಞಾನಿ ಪ್ರೊ. ಬಿ.ಎ.ಪಾಟೀಲ ಮಹಾಗಾಂವ, ಸಮಾಜ ಸೇವಕಿ ಮಾಲಾ ದಣ್ಣೂರ, ವೈಶಾಲಿ ಎಸ್. ಡಿಗ್ಗಿ ಪಾಟೀಲ, ಜಿಲ್ಲಾ ಕಸಾಪ ದ ಶಿವರಾಜ ಅಂಡಗಿ, ಶರಣರಾಜ ಛಪ್ಪರಬಂದಿ, ಪ್ರಮುಖರಾದ ಭುವನೇಶ್ವರಿ ಹಳ್ಳಿಖೇಡ, ಶರಣು ಸಾಲೇರ್, ಶಾಲೆಯ ಮುಖ್ಯಗುರುಗಳಾದ ಪ್ರಕಾಶ ಪಾಟೀಲ, ಶಿಕ್ಷಕರಾದ ಹಣಮಂತ ಮರಡಿ, ಶಿವರಾಜ ಪಾಟೀಲ, ಸೂರ್ಯಕಾಂತ ಪಾಟೀಲ, ಶಾರದಾಬಾಯಿ, ಗೀತಾ, ಪಲ್ಲವಿ, ಸಂದೀಪ, ಮಲ್ಲಿಕಾರ್ಜುನ ಸಿರಿ, ಸಂತೋಷ ಬಂಡೆ, ವೀರೇಶ, ಕಿರಣ, ಪ್ರಸಾದ ಜೋಶಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.
ಪರಿಸರ ಸಂರಕ್ಷಣೆ ಮತ್ತು ಪ್ಲಾಸ್ಟಿಕ್ ಬಳಕೆ ಕಡಿಮೆಗೊಳಿಸಬೇಕೆಂಬ ಸಂದೇಶ ಸಾರುವ ನಿಟ್ಟಿನಲ್ಲಿ ಭಾಗವಹಿಸಿದ ಮಕ್ಕಳಿಗೆ ಸ್ಟೀಲ್ ವಾಟರ್ ಬಾಟಲ್‍ಗಳು ಹಾಗೂ ಸಸಿಗಳನ್ನು ವಿತರಿಸುವ ಮೂಲಕ ವಿಶೇಷ ಗಮನ ಸೆಳೆದರು.