ಕಲಬುರಗಿ ಜನರ ಪ್ರೀತಿ ಮರೆಯಲ್ಲ: ಯಶವಂತ ವಿ. ಗುರುಕರ್

0
33
  • ನಿರ್ಗಮಿತ ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್ ಗೆ ಹೃದಯಸ್ಪರ್ಶಿ ಬೀಳ್ಕೊಡುಗೆ
  • ಕಲಬುರಗಿ ಜನರ ಪ್ರೀತಿ ಮರೆಯಲ್ಲ: ಯಶವಂತ ವಿ. ಗುರುಕರ್
  • ಬಡ ಜನರ ಸೇವೆ ಮಾಡಲೆಂದು ಸಾರ್ವಜನಿಕ ಸೇವೆಗೆ ಬಂದೆ: ಯಶವಂತ ವಿ. ಗುರುಕರ್

ಕಲಬುರಗಿ: ದ್ವನಿ ಇಲ್ಲದವರಿಗೆ ಧ್ವನಿಯಾಗಿ ಅವರ ಸೇವೆ ಮಾಡಲೆಂದೇ ಸಾರ್ವಜನಿಕ ಸೇವೆಗೆ ಬಂದಿರುವೆ. ಜಿಲ್ಲಾಧಿಕಾರಿಯಾಗಿ ಇಲ್ಲಿ ಮಾಡಿರುವ ಸೇವೆ ತೃಪ್ತಿ ತಂದಿದೆ. ಕಲಬುರಗಿ ಸೇವಾ ಅವಧಿಯಲ್ಲಿ ಇಲ್ಲಿನ ಜನರು ತೋರಿದ ಪ್ರೀತಿ ಎಂದೂ ಮರೆಯಲ್ಲ ಎಂದು ನಿರ್ಗಮಿತ ಡಿ.ಸಿ. ಯಶವಂತ ವಿ. ಗುರುಕರ್ ಹೇಳಿದರು.

ಸೋಮವಾರ ಇಲ್ಲಿನ ಡಿ.ಸಿ. ಕಚೇರಿ ಸಭಾಂಗಣದಲ್ಲಿ ಕಚೇರಿ ಸಿಬ್ಬಂದಿಯಿಂದ ಆಯೋಜಿಸಿದ ಆತ್ಮೀಯ ಬೀಳ್ಕೊಡುಗೆ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಕಲಬುರಗಿ ಜಿಲ್ಲೆಯ ಜನರು ನೇರವಾಗಿ ಮಾತನಾಡುವರು. ಒಳಗೊಂದು-ಹೊರಗೊಂದು ಮಾತನಾಡುವರಲ್ಲ. ಇನ್ನು ನನ್ನ ಸ್ವಭಾವ ಸಹ ಹೀಗೆ ಇದೆ ಎಂದರು.

Contact Your\'s Advertisement; 9902492681

ಕಲಬುರಗಿ ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ಚೀಕರಿಸಿದ ಸಂದರ್ಭದಲ್ಲಿ ಕೋವಿಡ್ ಎರಡನೇ ಡೋಸ್ ಪ್ರತಿಶತ ಪ್ರಮಾಣದಲ್ಲಿ ಜಿಲ್ಲೆಯ ಸ್ಥಾನ ಹೇಳಿಕೊಳ್ಳುವಂತಿಲ್ಲ. ಆರೋಗ್ಯ ಇಲಾಖೆಯ ಸಹಕಾರದಿಂದ ಮೂರೇ ತಿಂಗಳಲ್ಲಿ ಶೇ.73 ರಿಂದ 93ಕ್ಕೆ ಪ್ರಗತಿ ಸಾಧಿಸಲಾಗಿತ್ತು. ಮುಂದೆ ಸಕಾಲ, ಭೂಮಿ ಅರ್ಜಿ ವಿಲೇವಾರಿಯಲ್ಲಿ ಟಾಪ್ 5 ರಲ್ಲಿ ಬರಲು ಶ್ರಮಿಸಲಾಯಿತು.

ಇದರಲ್ಲಿ ತಹಶೀಲ್ದಾರ ಮತ್ತು ಕಂದಾಯ ಸಿಬ್ಬಂದಿಗಳ ಪಾತ್ರವು ಶ್ಲಾಘನೀಯ ಎಂದು ತಮ್ಮ ಕೆಳ ಹಂತದ ಅಧಿಕಾರಿ-ಸಿಬ್ಬಂದಿಗಳ ಸೇವೆಯನ್ನು ಯಶವಂತ ವಿ. ಗುರುಕರ್ ಸ್ಮರಿಸಿದರು.

ಅಧಿಕಾರ ಇವತ್ತು ಇರುತ್ತೆ, ನಾಳೆ ಇರಲ್ಲ. ಆದರೆ ಅಡಳಿತ ವ್ಯವಸ್ಥೆಯಲ್ಲಿ ಜನಸ್ನೇಹಿ ವ್ಯವಸ್ಥೆ ನಿರ್ಮಿಸುವುದು ತುಂಬಾ ಅವಶ್ಯಕ ಎಂದು ಪ್ರತಿಪಾದಿಸಿದ ಅವರು, 72 ಗಂಟೆಯಲ್ಲಿ ಮನೆ ಬಾಗಿಲಿಗೆ ಸಾಮಾಜಿಕ ಪಿಂಚಣಿ ನೀಡಬೇಕೆಂಬ ನನ್ನ ಕನಸನ್ನು ರಾಜ್ಯ ಸರ್ಕಾರ “ಹಲೋ ಕಂದಾಯ ಸಚಿವರೆ” ಯೋಜನೆ ಮೂಲಕ ಜಾರಿಗೆ ತಂದ ಪರಿಣಾಮ ಇಂದು 1.50 ಲಕ್ಷ ಜನರು ಮನೆಯ ಬಾಗಿಲಲ್ಲೆ ಪಿಂಚಣಿ ಪಡೆದಿದ್ದಾರೆ. ಇನ್ನು ಕಳೆದ ಜನವರಿಯಲ್ಲಿ ಮಳಖೇಡದಲ್ಲಿ ಪ್ರಧಾನಮಂತ್ರಿಗಳು ಜಿಲ್ಲೆಯ 27 ಸಾವಿರ ಸೇರಿ ಒಂದೇ ದಿನ 52 ಸಾವಿರ ತಾಂಡಾ ನಿವಾಸಿಗಳಿಗೆ ಹಕ್ಕು ಪತ್ರ ವಿತರಿಸಿದ್ದು, ತಮಗೆ ಆಂತರಿಕ ತೃಪ್ತಿ ನೀಡಿದೆ ಎಂದು ತಮ್ಮ ಸೇವಾ ಅವಧಿಯನ್ನು ಮೆಲುಕು ಹಾಕಿದರು.

ಇತ್ತೀಚೆಗೆ ಜರುಗಿದ ವಿಧಾನಸಭೆ ಚುನಾವಣೆ ಜಿಲ್ಲೆಯಲ್ಲಿ ಶಾಂತಿಯುತವಾಗಿ ನಡೆಯಿತು. ಎಲ್ಲಿಯೂ ಅಹಿತಕರ ಘಟನೆ ನಡೆಯಲಿಲ್ಲ. ಇನ್ನು ತಮ್ಮ ಅವಧಿಯಲ್ಲಿ ಎಸ್.ಪಿ. ಇಶಾ ಪಂತ್, ಪೊಲೀಸ್ ಆಯುಕ್ತ ಚೇತನ್ ಆರ್., ಮಹಾನಗರ ಪಾಲಿಕೆ ಆಯುಕ್ತ ಭುವನೇಶ ಪಾಟೀಲ, ಹಿಂದಿನ ಎ.ಡಿ.ಸಿ. ಭೀಮಾಶಂಕರ ತೆಗ್ಗೆಳ್ಳಿ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು, ತಾಲೂಕಿನ ತಹಶೀಲ್ದಾರ ಮತ್ತು ಆಪ್ತ ಸಿಬ್ಬಂದಿ ವರ್ಗದವರ ಸಹಕಾರ ಸ್ಮರಿಸಿದ ಅವರು, ಕೆಲಸದ ಒತ್ತಡದಲ್ಲಿ ಕೆಲವೊಮ್ಮೆ ಸಿಬ್ಬಂದಿಗಳ ಮೇಲೆ ಕೋಪಗೊಂಡಿದ್ದು ನಿಜ, ಆದರೆ ಅದು ಕ್ಷಣಿಕ ಎಂದರು.

ಎಸ್.ಪಿ. ಇಶಾ ಪಂತ್ ಮಾತನಾಡಿ, ಯಶವಂತ ವಿ. ಗುರುಕರ್ ಅವಧಿಯಲ್ಲಿ ಆಳಂದ ಪ್ರಕರಣ, ಪ್ರಧಾನಮಂತ್ರಿಗಳ ಕಾರ್ಯಕ್ರಮ, ವಿಧಾನಸಭೆ ಚುನಾವಣೆ ಹೀಗೆ ಎಲ್ಲವು ಅವರ ಮುಂದಾಲೋಚನೆ ಮತ್ತು ದೃಢ ನಿರ್ಧಾರದ ಪರಿಣಾಮ ಸುಗಮವಾಗಿ ಕಾರ್ಯನಿರ್ವಹಿಸಲು ಅನುಕೂಲವಾಗಿತ್ತು ಎಂದರು.

ಮಹಾನಗರ ಪಾಲಿಕೆ ಆಯುಕ್ತ ಭುವನೇಶ ಪಾಟೀಲ ದೇವಿದಾಸ್ ಮಾತನಾಡಿ, ಕೆಳ ಹಂತದ ಸಿಬ್ಬಂದಿಗಳ ಕೆಲಸವನ್ನು ಸೂಕ್ಷ್ಮವಾಗಿ ಗಮನಹರಿಸುವ ಮತ್ತು ಉತ್ತಮ ಮಾನವೀಯತೆ ಹೊಂದಿದ ವ್ಯಕ್ತಿತ್ವ ಯಶವಂತ ವಿ. ಗುರುಕರ್ ಅವರದ್ದು. ಕಲಬುರಗಿಯಲ್ಲಿ ಕೆಲಸ ಮಾಡಿದ್ದರೆ ಎಲ್ಲಿಯೂ ಮಾಡಬಹುದೆಂಬ ಆಡಳಿತಶಾಹಿ ವ್ಯವಸ್ಥೆಯಲ್ಲಿ ಮಾತಿದ್ದು, ಯಶವಂತ ವಿ. ಗುರುಕರ್ ಅವರ ಮುಂದಿನ ಸೇವೆ ಇನ್ನು ಉತ್ತಮವಾಗಿರಲಿ ಎಂದು ಆಶಿಸಿದರು.

*ಜಿಲ್ಲೆಯ ಪ್ರಗತಿಗೆ ಸಹಕರಿಸಿ:*

ನೂತನ ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಮಾತನಾಡಿ, ಕಲಬುರಗಿ ಜಿಲ್ಲೆಯನ್ನು ಮತ್ತಷ್ಟು ಪ್ರಗತಿ ಕಾಣಲು ಎಲ್ಲರು ಸೇರಿ ಸಾಂಘಿಕವಾಗಿ ಶ್ರಮಿಸೋಣ. ಹಿಂದೆ ಯಶವಂತ ವಿ. ಗುರುಕರ್ ಅವರಿಗೆ ನೀಡಿದ ಸಹಕಾರ ತಮಗೂ ನೀಡಬೇಕೆಂದು ನಿರೀಕ್ಷಿಸಿದ್ದೇನೆ. ನಿಮ್ಮಲ್ಲಿ ನಾನು ಒಬ್ಬಳಾಗಿ ಕೆಲಸ ನಿರ್ವಹಿಸುವೆ ಎಂದರು.

ಡಿ.ಸಿ.ಪಿ ಅಡ್ಡೂರು ಶ್ರೀನಿವಾಸಲು, ಅಪರ ಜಿಲ್ಲಾಧಿಕಾರಿ ಎಂ.ರಾಚಪ್ಪ, ಸಹಾಯಕ ಆಯುಕ್ತರಾದ ಮಮತಾ ಕುಮಾರಿ, ಕಾರ್ತಿಕ್ ಎಂ., ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ನವೀನ್ ಯು., ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಶಿವಶರಣಪ್ಪ ಮೂಳೆಗಾಂವ, ಡಿ.ಸಿ. ಕಚೇರಿಯ ಲೆಕ್ಕಾಧಿಕಾರಿ ಮಂಜುಳಾ, ತಹಶೀಲ್ದಾರ ಸಂಜೀವಕುಮಾರ ದಾಸರ್, ಡಿ.ಸಿ. ಅಂಗ ರಕ್ಷಕ ಶಿವಾನಂದ ಜಾಧವ ಸೇರಿದಂತೆ ಅನೇಕ ಅಧಿಕಾರಿಗಳು, ಸಿಬ್ಬಂದಿಗಳು ನಿರ್ಗಮಿತ ಜಿಲ್ಲಾಧಿಕಾರಿಗಳೊಂದಿಗಿನ ಸೇವಾ ಒಡನಾಟವನ್ನು ಹಂಚಿಕೊಂಡರು.

ಸಮಾರಂಭದಲ್ಲಿ ಎ,ಸಿ.ಪಿ. ದೀಪನ್ ಎಂ.ಎನ್., ನಿರ್ಗಮಿತ ಜಿಲ್ಲಾಧಿಕಾರಿ ಪತ್ನಿ ಇಂದು ಗುರುಕರ್, ಜಿಲ್ಲಾ ಮಟ್ಟದ ಅಧಿಕಾರಿಗಳು, ತಾಲೂಕಿನ ತಹಶೀಲ್ದಾರರು, ಪುರಸಭೆ ಮುಖ್ಯಾಧಿಕಾರಿಗಳು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here