ವೈದ್ಯ ವೃತ್ತಿ ವಾಣಿಜ್ಯಮಯವಾಗದಿರಲಿ: ಸಚಿವ ಡಾ.ಶರಣಪ್ರಕಾಶ ಪಾಟೀಲ್

0
22
  • ಇ.ಎಸ್.ಐ.ಸಿ. ಆಸ್ಪತ್ರೆಯಲ್ಲಿ ವೈದ್ಯರ ದಿನಾಚರಣೆ

ಕಲಬುರಗಿ: ಸಮಾಜದಲ್ಲಿ ವೈದ್ಯ ವೃತ್ತಿಗೆ ತುಂಬಾ ಗೌರವ ಇದೆ. ಇತರೆ ವೃತ್ತಿಯಂತಲ್ಲ. ಇದು ಮಾನವೀಯತೆಯ ಸೇವೆ ಒಳಗೊಂಡ ವೃತ್ತಿಯಾಗಿದೆ. ಇದನ್ನು ಉಳಿಸಿಕೊಂಡು ಹೋಗುವ ಜವಾಬ್ದಾರಿ ಪ್ರತಿ ವೈದ್ಯರ ಮೇಲಿದ್ದು, ವೈದ್ಯ ವೃತ್ತಿ ವಾಣಿಜ್ಯಮಯವಾಗದಿರಲಿ ಎಂದು ರಾಜ್ಯದ ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ ಹಾಗೂ ಉದ್ಯಮಶೀಲತೆ ಸಚಿವ ಡಾ.ಶರಣಪ್ರಕಾಶ ಪಾಟೀಲ ಅಭಿಪ್ರಾಯಪಟ್ಟರು.

ಶನಿವಾರ ಕಲಬುರಗಿ ನಗರದ ಸೇಡಂ ರಸ್ತೆಯ ಇ.ಎಸ್.ಐ.ಸಿ ವೈದ್ಯಕೀಯ ಕಾಲೇಜಿನಲ್ಲಿ ಹೆಸರಾಂತ ವೈದ್ಯ ಡಾ.ಬಿ.ಸಿ.ರಾಯ್ ಅವರ ಜನ್ಮ ದಿನದ ಅಂಗವಾಗಿ ಆಯೋಜಿಸಿದ ವೈದ್ಯರ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ರೋಗಿ ವೈದ್ಯರಲ್ಲಿ ದೇವರನ್ನು ಕಾಣುತ್ತಾನೆ. ಆ ನಂಬಿಕೆ ಹಾಗೇ ಉಳಿಸಿಕೊಳ್ಳಬೇಕಿದೆ. ಇ.ಎಸ್.ಐ.ಸಿ. ಆಸ್ಪತ್ರೆಯಲ್ಲಿ ಎಂ.ಆರ್.ಐ ಸ್ಕ್ಯಾನಿಂಗ್ ಸೇವೆ ಅರಂಭಿಸಲು ಕೆ.ಕೆ.ಅರ್.ಡಿ.ಬಿ. ಮಂಡಳಿಯಿAದ ನೆರವು ನೀಡಲಾಗುವುದು ಎಂದರು.

Contact Your\'s Advertisement; 9902492681

ಇ.ಎಸ್.ಐ.ಸಿ. ಆಸ್ಪತ್ರೆಯಲ್ಲಿ ಪ್ರತಿನಿತ್ಯ 1,000 ಹೊರ ರೋಗಿಗಳು ತಪಾಸಣೆಗೆ ಒಳಪಡುತ್ತಿರುವುದು ಸಂತಸದ ವಿಚಾರ ಎಂದ ಸಚಿವರು, ಹಿಂದೆ ಕೇಂದ್ರ ಕಾರ್ಮಿಕ ಖಾತೆ ಸಚಿವರಾಗಿದ್ದ ಪ್ರಸ್ತುತ ರಾಜ್ಯಸಭಾ ಸದಸ್ಯರಾಗಿರುವ ಡಾ.ಮಲ್ಲಿಕಾರ್ಜುನ ಖರ್ಗೆ ಅವರ ಪ್ರಯತ್ನದ ಫಲವಾಗಿ ಇಂತಹ ದೊಡ್ಡ ಕಟ್ಟಡ ಇಲ್ಲಿ ತಲೆ ಎತ್ತಿದೆ. ಇ.ಎಸ್.ಐ.ಸಿ ಕ್ಯಾಂಪಸ್ ನಲ್ಲಿ ಸಾಕಷ್ಟು ಜಾಗ, ಕಟ್ಟಡ ಲಭ್ಯವಿರುವ ಕಾರಣ ಇದರ ಸದ್ಬಳಕೆ ಬಗ್ಗೆ ಅಧಿಕಾರಿಗಳು ಚಿಂತಿಸಬೇಕು ಎಂದರು.

ಜಿಮ್ಸ್ ಆಸ್ಪತ್ರೆಯಲ್ಲಿ ಪ್ರತಿ ದಿನ 40-50 ಹೆರಿಗೆ ಶಸ್ತಚಿಕಿತ್ಸೆ ಮಾಡಲಾಗುತ್ತಿದೆ. ಸರ್ಕಾರಿ ಆಸ್ಪತ್ರೆಯಾದ ಕಾರಣ ಸಹಜವಾಗಿಯೆ ಇಲ್ಲಿ ರೋಗಿಗಳ ಸಂಖ್ಯೆ ಹೆಚ್ಚಿದ್ದು, ವೈದ್ಯರ ಮೇಲೆ ಕೆಲಸದ ಭಾರ ಹೆಚ್ಚಿದೆ. ಇ.ಎಸ್.ಐ.ಸಿ, ಕೆ.ಬಿ.ಎನ್., ಎಂ.ಆರ್.ಎA.ಸಿ. ಕಾಲೇಜುಗಳು ಈ ಭಾರವನ್ನು ಹೊರುವ ಮೂಲಕ ಜನರಿಗೆ ಗುಣಮಟ್ಟದ ಆರೋಗ್ಯ ಸೇವೆ ನೀಡಲು ಪರಸ್ಪರ ಸಹಕಾರದಿಂದ ಕಾರ್ಯನಿರ್ವಹಿಸಬೇಕಿದೆ ಎಂದರು.

ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಕ್ಕೆ ಒತ್ತು:-ತಾಯಿ ಮತ್ತಿ ಮಕ್ಕಳ ಮರಣ ಪ್ರಮಾಣ ತಗ್ಗಿಸಬೇಕಿದೆ. ಈ ನಿಟ್ಟಿನಲ್ಲಿ ಜಿಮ್ಸ್ ಆವರಣದಲ್ಲಿ ತಾಯಿ-ಮಕ್ಕಳ ಆಸ್ಪತ್ರೆ ನಿರ್ಮಿಸುತ್ತಿದ್ದು, ಶೀಘ್ರವೇ ಅದು ಜನರ ಸೇವೆಗೆ ಸಮರ್ಪಣೆಯಾಗಲಿದೆ. ಇದರ ಜೊತೆಗೆ ಟ್ರಾಮಾ ಸೆಂಟರ್, ಜಯದೇವ ಆಸ್ಪತ್ರೆ ಸಹ ಲೋಕಾರ್ಪಣೆ ಮಾಡಲಾಗುತ್ತದೆ. ಒಟ್ಟಿನಲ್ಲಿ ನಮ್ಮ ಸರ್ಕಾರ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಅದ್ಯತೆ ನೀಡುತ್ತಿದೆ ಎಂದರು.

ಇ.ಎಸ್.ಐ.ಸಿ. ಅಸ್ಪತ್ರೆ ಮತ್ತು ವೈದ್ಯಕೀಯ ಕಾಲೇಜಿನ ಡೀನ್ ಡಾ.ಸಂತೊಷ ಬಿ. ಕ್ಷೀರಸಾಗರ್ ಅವರು ಪ್ರಸ್ತಾವಿಕವಾಗಿ ಮಾತನಾಡಿ, ಪ್ರಸಕ್ತ 2023-24ನೇ ಶೈಕ್ಷಣಿಕ ಸಾಲಿನಿಂದ ಕಲಬುರಗಿ ಇ.ಎಸ್.ಐ.ಸಿ. ಕಾಲೇಜಿಗೆ ವೈದ್ಯ ವ್ಯಾಸಂಗದ ಪ್ರವೇಶಾತಿ ಮಿತಿ 100 ರಿಂದ 150ಕ್ಕೆ, ನರ್ಸಿಂಗ್ ಪ್ರವೇಶಾತಿ 40 ರಿಂದ 60 ಸಂಖ್ಯೆಗೆ ಹೆಚ್ಚಳವಾಗಿದ್ದು, ಈ ಭಾಗದ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂದರು.

28 ಪಿ.ಜಿ. ಸೀಟ್ ಮಂಜೂರು: ಕಲಬುರಗಿ ಇ.ಎಸ್.ಐ.ಸಿ. ವೈದ್ಯಕೀಯ ಕಾಲೇಜಿನಲ್ಲಿ ಇದೇ ಸಾಲಿನಿಂದ ಸ್ನಾತಕ್ಕೋತ್ತರ ಪದವಿ ಆರಂಭಕ್ಕೆ ಎನ್.ಎಂ.ಸಿ.ನಿAದ ಅನುಮತಿ ದೊರೆತಿದ್ದು, ಓ.ಬಿ.ಜಿ-4, ಬಯೋಕೆಮಿಸ್ಟ್ರಿ-4, ಮೈಕ್ರೊ ಬಯೋಲಾಜಿ-4, ಪಿಡಿಯಾಟ್ರಿಕ್ಸ್-3, ಜನರಲ್ ಸರ್ಜರಿ-5, ಆಪ್ತಲೊಲೋಜಿ-2 ಹಾಗೂ ಜನರಲ್ ಮೆಡಿಸಿನ್ ವಿಭಾಗದಲ್ಲಿ-6 ಸಂಖ್ಯೆಯ ವಿದ್ಯಾರ್ಥಿಗಳ ಸ್ನಾತಕ್ಕೋತ್ತರ ವ್ಯಾಸಂಗಕ್ಕೆ ಅನುಮತಿ ದೊರೆತಿದೆ ಎಂದು ಡಾ.ಸಂತೊಷ ಬಿ. ಕ್ಷೀರಸಾಗರ್ ಮಾಹಿತಿ ನೀಡಿದರು.

ಇ.ಎಸ್.ಐ.ಸಿ ವೈದ್ಯಕೀಯ ಅಧೀಕ್ಷಕಿ ಡಾ.ಇವಾನೋ ಲೋಬೊ, ಆಡಳಿತ ಕುಲಸಚಿವೆ ಡಾ.ಕೆ.ಪಿ.ಪದ್ಮಜಾ, ಅಕಾಡೆಮಿಕ್ ಕುಲಸಚಿವೆ ಡಾ.ಅಮೃತಾ ಸ್ವಾತಿ ಸೇರಿದಂತೆ ಸಂಸ್ಥೆಯ ವಿವಿಧ ವಿಭಾಗದ ವೈದ್ಯರು, ವಿದ್ಯಾರ್ಥಿಗಳು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here