ಪ್ರತಿಯೊಬ್ಬರೂ ಕಡ್ಡಾಯವಾಗಿ ಒಂದಾದರೂ ಸಸಿ ನೆಟ್ಟು ಪೋಷಿಸಿ-ಬಡಿಗೇರ್

0
74

ಶಹಾಬಾದ : ಅರಣ್ಯ ನಾಶದಿಂದ ಪರಿಸರದ ತಾಪಮಾನ ಹೆಚ್ಚಾಗಿ ಪ್ರಕೃತಿ ವಿಕೋಪಗಳು ಸಂಭವಿಸುತ್ತಿವೆ. ಆದ್ದರಿಂದ ಈ ತಾಪಮಾನವನ್ನು ತಡೆಯಲು ಪ್ರತಿಯೊಬ್ಬರೂ ಕಡ್ಡಾಯವಾಗಿ ಒಂದಾದರೂ ಸಸಿಯನ್ನು ನೆಟ್ಟು ಪೋಷಿಸಬೇಕೆಂದು ವಲಯ ಅರಣ್ಯಾಧಿಕಾರಿ ವಿಜಯಕುಮಾರ ಬಡಿಗೇರ್ ಹೇಳಿದರು.

ಅವರು ಶನಿವಾರ ಮರತೂರ ಗ್ರಾಮದಲ್ಲಿ ಅರಣ್ಯ ಇಲಾಖೆ ವತಿಯಿಂದ ಸಸಿ ನೆಡುವ ಸಪ್ತಾಹ ಯೋಜನೆಯಡಿ ನನ್ನ ಗಿಡ-ನನ್ನ ಹೆಮ್ಮೆ ಅಂಗವಾಗಿ ಆಯೋಜಿಸಲಾಗಿದ್ದ ಸಸಿ ನೆಡುವ ಕಾರ್ಯಕ್ರಮದಲ್ಲಿ ಮಾತನಾಡಿದರು.

Contact Your\'s Advertisement; 9902492681

ಮಕ್ಕಳು ಶಾಲೆಯಲ್ಲಿ ಪರಿಸರದ ಕುರಿತು ಅಭ್ಯಾಸ ಮಾಡಿದ್ದಿರಿ.ಗಿಡಮರಗಳು ಇಲ್ಲದೇ ಹೋದರೆ ಉಸಿರಾಡಲು ಆಮ್ಲಜನಕವಿಲ್ಲದೇ ಯಾವ ಜೀವಿಗಳು ಬದುಕುಳಿಯಲಾರವು. ಆದ್ದರಿಂದ ಸಸಿಗಳನ್ನು ನೆಟ್ಟರೆ ಸಾಲದು ಅವುಗಳನ್ನು ಸೂಕ್ತ ರೀತಿಯಲ್ಲಿ ಪೋಷಣೆ ಮಾಡಿ ಸಂರಕ್ಷಣೆ ಮಾಡುವ ನಿಟ್ಟಿನಲ್ಲಿ ಶಾಲಾ ವಿದ್ಯಾರ್ಥಿಗಳು ಪ್ರತಿಜ್ಞೆ ಮಾಡಬೇಕೆಂದು ಹೇಳಿದರು.

ಉಪವಲಯ ಅರಣ್ಯಾಧಿಕಾರಿ ಮಂಜುನಾಥ ಹಂದರಾಳ ಮಾತನಾಡಿ, ಹಿಂದೆ ರೈತರು ತಮ್ಮ ಹೊಲದ ಬದುವಿನಲ್ಲಿ ಅನೇಕ ಮರಗಳನ್ನು ಬೆಳೆಯುವ ಮೂಲಕ ಪರಿಸರದ ಉಳಿವಿಗೆ ಕಾರಣರಾಗಿದ್ದರು. ಆದರೆ ಇಂದು ಗಿಡ ಮರಗಳನ್ನು ಬೆಳೆಸಲು ನಿರಾಸಕ್ತಿ ತೋರುತ್ತಿರುವುದರಿಂದ ಪರಿಸರ ನಾಶವಾಗುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ಭೂಮಿಯಲ್ಲಿ ಸಸಿಗಳನ್ನು ನೆಡುವುದರ ಮೂಲಕ ಉತ್ತಮ ಪರಿಸರವನ್ನು ನಿರ್ಮಾಣ ಮಾಡಲು ಮುಂದಾಗಿ ಎಂದು ಹೇಳಿದರು.

ಸಾಮಾಜಿಕ ಅರಣ್ಯಾಧಿಕಾರಿ ಗುರುರಾಜ ಕಮತರ ಮಾತನಾಡಿ, ಮರಗಳನ್ನು ಬೆಳೆಸಿ ಸೂಕ್ತವಾದ ಪೋಷಣೆ ಮಾಡಿದರೆ ಕಾಲಕಾಲಕ್ಕೆ ಮಳೆಯಾಗುತ್ತದೆ. ಆದರೆ ಇಂದು ದೇಶದ ಎಲ್ಲಾ ಕಡೆ ಮುಂಗಾರು ಮಳೆ ಸರಿಯಾದ ವೇಳೆಗೆ ಬರದೇ ಇರುವದಕ್ಕೆ ಈ ಪರಿಸರ ನಾಶವೇ ಕಾರಣ. ಕೇವಲ ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ ಎಂದು ಹೇಳಿಕೊಂಡು ಕೂಡದೇ ಅದನ್ನು ಕಾರ್ಯರೂಪಕ್ಕೆ ತಂದರೆ ಮಾತ್ರ ಆ ಘೋಷ ವಾಕ್ಯಕ್ಕೆ ಮನ್ನಣೆ ಬರುತ್ತದೆ. ಇದನ್ನು ಪ್ರತಿಯೊಬ್ಬರೂ ಪಾಲಿಸಬೇಕು.ಹೆಚ್ಚು ಹೆಚ್ಚು ಮರಗಳನ್ನು ಬೆಳೆಸುವುದರಿಂದ ಉತ್ತಮ ಪರಿಸರದೊಂದಿಗೆ ಆರೋಗ್ಯಕರ ವಾತಾವರಣ ನಿರ್ಮಾಣವಾಗುತ್ತದೆ ಎಂದು ಹೇಳಿದರು.

ಉಪವಲಯ ಅರಣ್ಯಾಧಿಕಾರಿ ಸಂತೋಷ ಬಾಬು, ಜೆಟ್ಟೆಪ್ಪ, ಗಸ್ತು ಅರಣ್ಯಾಧಿಕಾರಿ ಪರಸಪ್ಪ , ಮರತೂರ ಗ್ರಾಪಂ ಸದಸ್ಯರು, ಪ್ರೌಢಶಾಲಾ ಮುಖ್ಯಗುರುಗಳು, ಶಿಕ್ಷಕರು, ಶಾಲಾಮಕ್ಕಳು ಹಾಗೂ ಗ್ರಾಮದ ಮುಖಂಡರು ಹಾಜರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here