ವಾಡಿ: ದೇಶದ ಶಿಕ್ಷಣ ವ್ಯವಸ್ಥೆಯ ಮೇಲೆ ಕೇಂದ್ರ ಸರ್ಕಾರ ಹೇರಿದ್ದ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‍ಇಪಿ) ರದ್ದುಗೊಳಿಸುವುದಾಗಿ ಘೋಷಿಸಿರುವ ರಾಜ್ಯ ಸರ್ಕಾರದ ಕ್ರಮವನ್ನು ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿ (ಎಐಎಸ್‍ಇಸಿ) ಸ್ವಾಗತಿಸಿದೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಎಐಎಸ್‍ಇಸಿ ರಾಜ್ಯ ಉಪಾಧ್ಯಕ್ಷ ವೀರಭದ್ರಪ್ಪ ಆರ್.ಕೆ, ಕೇಂದ್ರ ಸರ್ಕಾರ ಏಕಾಏಕಿ ಅಪ್ರಜಾತಾಂತ್ರಿಕವಾದ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೊಳಿಸುವ ಮೂಲಕ ದೇಶದ ಶಿಕ್ಷಣ ವ್ಯವಸ್ಥೆಯ ದಿಕ್ಕನ್ನೇ ತಪ್ಪಿಸಿಲು ಹೊರಟಿತ್ತು. ಇದು ದೇಶದ ಶಿಕ್ಷಣ ವ್ಯವಸ್ಥೆಗೆ ದೊಡ್ಡ ಮಾರಕವಾಗಿ ಪರಿಣಮಿಸಿತ್ತು. ಇದರ ವಿರುದ್ಧ ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿ ಹಲವು ಹೋರಾಟಗಳನ್ನು ಸಂಘಟಿಸಿತ್ತು. ನಾಡಿನ ಹೆಸರಾಂತ ಬರಹಗಾರರು, ಶಿಕ್ಷಣ ತಜ್ಞರು, ಪ್ರಜ್ಞಾವಂತ ನಾಗರಿಕರು, ಹೋರಾಟಗಾರರು ಈ ಪ್ರತಿರೋಧಕ್ಕೆ ದನಿಯಾಗಿದ್ದರು. ಪರಿಣಾಮ ರಾಜ್ಯ ಬಜೆಟ್ ಮಂಡಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎನ್‍ಇಪಿ ರದ್ದುಪಡಿಸುವುದಾಗಿ ಅಧಿಕೃತವಾಗಿ ಘೋಷಿಸಿರುವುದು ಅತ್ಯಂತ ಸ್ವಾಗತಾರ್ಹ ಕ್ರಮವಾಗಿದೆ ಎಂದು ಪ್ರತಿಕ್ರೀಯಸಿದ್ದಾರೆ.
ರಾಜ್ಯಕ್ಕೆ ಪ್ರತ್ಯೇಕವಾಗಿ ರಾಜ್ಯ ಶಿಕ್ಷಣ ನೀತಿ(ಎಸ್‍ಇಪಿ) ರೂಪಿಸುತ್ತೇವೆ ಎಂದು ಬಜೆಟ್‍ನಲ್ಲಿ ಘೋಷಿಸಲಾಗಿದೆ. ಸರ್ಕಾರವು ತರಲಿಚ್ಛಿಸಿರುವ ರಾಜ್ಯ ಶಿಕ್ಷಣ ನೀತಿಯು ನಮ್ಮ ನವೋದಯದ ಹರಿಕಾರರು ಹಾಗೂ ಸ್ವಾತಂತ್ರ್ಯ ಹೋರಾಟಗಾರರ ಕನಸ್ಸಾಗಿದ್ದ ಧರ್ಮನೀರಪೇಕ್ಷ, ವೈಜ್ಞಾನಿಕ ಹಾಗೂ ಜನತಾಂತ್ರಿಕ ಶಿಕ್ಷಣವು, ಸಾರ್ವತ್ರಿಕವಾಗಿ ಎಲ್ಲರಿಗೂ ಸಿಗುವಂತಹ ನೀತಿಯಾಗಬೇಕು.
ಶಿಕ್ಷಣ ನೀತಿಯನ್ನು ರೂಪಿಸಲು ಶಿಕ್ಷಣ ತಜ್ಞರು, ಬುದ್ದಿಜೀವಿಗಳು, ಸಾಹಿತಿಗಳು, ಎಲ್ಲಾ ಹಂತದ ಬೋಧಕ ವೃಂದ, ಪಾಲಕರು ಹಾಗೂ ಶೈಕ್ಷಣಿಕ ಸಂಘಟನೆಗಳು, ವಿದ್ಯಾರ್ಥಿ ಸಂಘಟನೆಗಳನ್ನು ಒಳಗೊಂಡ ಪ್ರಜಾತಾಂತ್ರಿಕವಾದ ಸಮಿತಿಯನ್ನು ರಚಿಸಬೇಕು. ಈ ಸಮಿತಿಯು ವ್ಯಾಪಕವಾದ ಸಂವಾದ, ಜನತಾಂತ್ರಿಕ ಚರ್ಚೆಯ ಮೂಲಕ ರಾಜ್ಯಕ್ಕೆ ಸಮಗ್ರವಾದ ಹಾಗೂ ಸಾರ್ವತ್ರಿಕವಾದ ಶಿಕ್ಷಣ ನೀತಿಯನ್ನು ರೂಪಿಸಲು ರಾಜ್ಯ ಸರ್ಕಾರ ಕ್ರಮಕೈಗೊಳ್ಳಬೇಕು ಎಂದು ಇದೇ ವೇಳೆ ರಾಜ್ಯ ಸರ್ಕಾರವನ್ನು ವೀರಭದ್ರಪ್ಪ ಒತ್ತಾಯಿಸಿದ್ದಾರೆ.