-
ಕಲಬುರಗಿ ಮಹಾನಗರ ಪಾಲಿಕೆ ಪ್ರಗತಿ ಪರಿಶೀಲನೆ
ಕಲಬುರಗಿ: ಕಲಬುರಗಿ ನಗರದ ಹೃದಯ ಭಾಗದಲ್ಲಿರುವ ಶ್ರೀ ಶರಣಬಸವೇಶ್ವರ (ಅಪ್ಪನ ಕೆರೆ) ಸುತ್ತಮುತ್ತ ಕರ್ನಾಟಕ ಕೆರೆ ಸಂರಕ್ಷಣಾ ಮತ್ತು ಅಭಿವೃದ್ಧಿ ಪ್ರಾಧಿಕಾರ ಅಧಿನಿಯಮ-2014 ಉಲ್ಲಂಘಿಸಿ ಕೈಗೊಂಡಿರುವ ಸೌಂದರ್ಯೀಕರಣ ಕಾಮಗಾರಿಗಳನ್ನು ತನಿಖೆ ಮಾಡಬೇಕು ಎಂದು ರಾಜ್ಯದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಐ.ಟಿ-ಬಿ.ಟಿ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಪಾಲಿಕೆ ಆಯುಕ್ತರಿಗೆ ಖಡಕ್ ಸೂಚನೆ ನೀಡಿದರು.
ಶನಿವಾರ ಇಲ್ಲಿನ ಡಿ.ಸಿ. ಕಚೇರಿ ಸಭಾಂಗಣದಲ್ಲಿ ಕಲಬುರಗಿ ಮಹಾನಗರ ಪಾಲಿಕೆ, ನಗರಾಭಿವೃದ್ಧಿ ಇಲಾಖೆ ಹಾಗೂ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕೆರೆಯಲ್ಲಿ ಈ ಕಾಮಗಾರಿಗಳಿಂದ ಪಕ್ಷಿ ಸಂಕುಲ ನಾಶಕ್ಕೆ ಎಡೆ ಮಾಡಿಕೊಟ್ಟಂತಾಗುತ್ತದೆ. ಕಾಮಗಾರಿ ಆರಂಭಕ್ಕು ಮುನ್ನ ಪರಿಸರ ಪ್ರಭಾವದ ಮೌಲ್ಯಮಾಪನ ವರದಿ ಪಡೆಯಲಾಗಿದಿಯೇ? ಸರ್ಕಾರವೇ ಕರೆ ಇತ್ತುವರಿ ಮಾಡಿದ್ದರೆ ಹೆಂಗೆ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದ ಅವರು ಇದೆಲ್ಲವು ತನಿಖೆಗೆ ಒಳಪಡಿಸಿ ವರದಿ ಸಲ್ಲಿಸಿ ಎಂದರು.
ಕಲಬುರಗಿ ಮಹಾನಗರ ಪಾಲಿಕೆಯ ಸುಮಾರು 50 ಅಧಿಕಾರಿ-ಸಿಬ್ಬಂದಿ ಬೇರೆ ಇಲಾಖೆಗೆ ನಿಯೋಜನೆ ಮೇಲೆ ಹೋಗಿರುವ ಮಾಹಿತಿ ಇದ್ದು, ಇದರಿಂದ ಪಾಲಿಕೆ ಕೆಲಸ ನಿರೀಕ್ಷಿತ ಮಟ್ಟದಲ್ಲಿ ಸಾಗುತ್ತಿಲ್ಲ. ಕೂಡಲೆ ಅವರೆಲ್ಲರ ನಿಯೋಜನೆ ರದ್ದುಪಡಿಸಿ 10 ದಿನದೊಳಗೆ ಮರಳಿ ಮಾತೃ ಇಲಾಖೆಗೆ ಹಾಜರಾಗುವಂತೆ ಆದೇಶಿಸಬೇಕು ಎಂದು ಸಚಿವ ಪ್ರಿಯಾಂಕ್ ಖರ್ಗೆ ಅವರು ಪಾಲಿಕೆ ಆಯುಕ್ತರಿಗೆ ಖಡಕ್ ಸೂಚನೆ ನೀಡಿದರು.
ಸಿಬ್ಬಂದಿ ಕೊರತೆಯಿಂದ ಕಂದಾಯ ವಸೂಲಾತಿ ಆಗುತ್ತಿಲ್ಲ. ಆರ್ಥಿಕ ಸಂಪನ್ಮೂಲ ಇಲ್ಲದೆ ಹೋದಲ್ಲಿ ನಗರದ ನಿವಾಸಿಗಳಿಗೆ ಸೌಲಭ್ಯ ನೀಡುವುದಾದರೆ ಹೆಂಗೆ ಎಂದು ಪ್ರಶ್ನಿಸಿದ ಸಚಿವರು, 10 ದಿನದಲ್ಲಿ ಕೆಲಸಕ್ಕೆ ವರದಿ ಮಾಡಿಕೊಳ್ಳದಿದ್ದಲ್ಲಿ ಅಂತಹ ನೌಕರರ ವಿರುದ್ಧ ಶಿಸ್ತು ಕ್ರಮಕ್ಕೆ ಸರ್ಕಾರಕ್ಕೆ ಶಿಫಾರಸ್ಸು ಮಾಡಬೇಕು ಎಂದು ಉಪ ಆಯುಕ್ತ ಪ್ರಕಾಶ ರಜಪುತ್ ಅವರಿಗೆ ಸೂಚಿಸಿದರು.
ಕಂದಾಯ ವಸೂಲಾತಿ ಚರ್ಚೆ ವೇಳೆಯಲ್ಲಿ ಸರ್ಕಾರಿ ಸಂಸ್ಥೆಗಳಾದ ರೈಲ್ವೆ, ಲೊಕೋಪಯೋಗಿ, ಗ್ರಾಮೀಣಾಭಿವೃದ್ಧಿ ಇಲಾಖೆಗಳಿಂದ ಹೆಚ್ಚಿನ ಕರ ಬಾಕಿ ಇರುವ ಮಾಹಿತಿ ಪಡೆದುಕೊಂಡ ಸಚಿವ ಪ್ರಿಯಾಂಕ್ ಖರ್ಗೆ ಅವರು, ಮೊದಲು ಸರ್ಕಾರಿ ಸಂಸ್ಥೆಯಿಂದಲೆ ಕರ ಬಾಕಿ ವಸೂಲಿ ಮಾಡಿ ಎಂದರು. ನಂತರ ವಾಣಿಜ್ಯ ಅಂಗಡಿ-ಮುಂಗಟ್ಟು, ತದನಂತರ ವಸತಿ ಪ್ರದೇಶಗಳಲ್ಲಿ ಕಂದಾಯ ವಸೂಲಾತಿ ಅಭಿಯಾನದ ರೂಪದಲ್ಲಿ ನಡೆಸಬೇಕು. ಇನ್ನು ಟ್ರೆಡ್ ಲೈಸೆನ್ಸ್ ಇಲ್ಲದವರಿಗೆ ಪರವಾನಿಗೆ ಪಡೆಯಲು ಅರಿವು ಮೂಡಿಸಬೇಕು. ಅರಿವು ಮೂಡಿಸಿದ ಹೊರತಾಗಿಯೂ ಪರವಾನಿಗೆ ಪಡೆಯದಿದ್ದಲ್ಲಿ ಕಾನೂನು ಕ್ರಮ ಕೈಗೊಳ್ಳಿ ಎಂದರು.
ಸರ್ಕಾರದಿಂದ ಸಾಕಷ್ಟು ಅನುದಾನ ಜಿಲ್ಲೆ, ಪ್ರದೇಶಕ್ಕೆ ತರಲಾಗುತ್ತಿದೆ. ಆದರೆ ಇಲ್ಲಿನ ಅಧಿಕಾರಿಗಳು ನಿರಾಸಕ್ತಿಯಿಂದ ಪ್ರಗತಿ ಕಾಣುತ್ತಿಲ್ಲ. ಪ್ರತಿಯೊಂದು ಕೆಲಸ ಮೇಲೆ ಜನಪ್ರತಿನಿಧಿಗಳಾದ ನಾವೇ ನಿಗಾ ಇಡಬೇಕಾದರೆ ನೀವಿರೋದು ಏಕೆ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದ ಸಚಿವ ಪ್ರಿಯಾಂಕ್ ಖರ್ಗೆ, ಜಿಲ್ಲೆಯಲ್ಲಿ ಕೆಲಸ ಮಾಡಲು ಆಸಕ್ತಿ ಇಲ್ಲದೆ ಹೋದಲ್ಲಿ ಹೆಚ್ಚಿನ ಜನಸಂಪರ್ಕ ಇಲ್ಲದ ಇಲಾಖೆ ಅಥವಾ ಬೇರೆಡೆಗೆ ವರ್ಗಾವಣೆ ಮಾಡಿಕೊಂಡು ಹೋಗಿ ಎಂದರು.
ಕಲಬುರಗಿ ಪಾಲಿಕೆ ವ್ಯಾಪ್ತಿಯಲ್ಲಿನ 1,51,212 ಆಸ್ತಿ ಪೈಕಿ 57,192 ಮಾತ್ರ ಡಿಜಿಟೈಸ್ ಮಾಡಲಾಗಿದೆ. ಇನ್ನು ಸುಮಾರು 95 ಸಾವಿರ ಬಾಕಿ ಇವೆ. ಇದೇ ರೀತಿ ಮನೆ ನಿರ್ಮಾಣ ಪರವಾನಿಗೆ 130 ಬಾಕಿ ಇವೆ. ಪ್ರತಿಯೊಬ್ಬ ವಿಷಯ ನಿರ್ವಾಹಕರ ಬಳಿ ಸಾಕಷ್ಟು ಅರ್ಜಿಗಳು ಬಾಕಿ ಇವೆ. ಕೂಡಲೆ ಇದನ್ನು ವಿಲೇವಾರಿಗೊಳಿಸಬೇಕು. ಕಾನೂನು ಬದ್ಧವಾಗಿದ್ದರೆ ಕಟ್ಟಡ ಪರವಾನಿಗೆ 15 ದಿನದಲ್ಲಿ ನೀಡಬೇಕು. ಲಂಚದ ಕಾರಣಕ್ಕೆ ಅರ್ಜಿ ವಿಲೇವಾರಿ ವಿಳಂಬ ಕುರಿತು ಯಾವುದೇ ಒಂದೇ ದೂರು ಬಂದಲ್ಲಿ ಅಂತಹವರ ವಿರುದ್ಧ ಕಠಿಣ ಕ್ರಮ ಜರುಗಿಸಲು ಹಿಂದೆ ಮುಂದೆ ನೋಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ಕಳೆದ ನಾಲ್ಕೈದು ವರ್ಷಗಳ ಎಸ್.ಸಿ.ಪಿ-ಟಿ.ಎಸ್.ಪಿ ಕಾಮಗಾರಿ ಗಮನಿಸಿದಾಗ ಇನ್ನು ಕಾಮಗಾರಿ ಸಾಗುತ್ತಿವೆ. ವಿಶೇಷ ಘಟಕ-ಗಿರಿಜನ ಉಪ ಯೋಜನೆ ಅನುದಾನ ಆಯಾ ವರ್ಷದಲ್ಲಿ ಖರ್ಚು ಮಾಡಬೇಕೆಂದು ಕಾಯ್ದೆ ಸ್ಪಷ್ಟವಾಗಿ ಹೇಳುತ್ತದೆ. ನೀವು ಇನ್ನು ಖರ್ಚು ಮಾಡಿಲ್ಲ ಎಂದಾದರೆ ಕಾಯ್ದೆಯನ್ವಯ ನಿಮ್ಮನ್ನು ಶಿಸ್ತು ಕ್ರಮಕ್ಕೆ ಒಳಪಡಿಸಬೇಕೆ ಎಂದ ಸಚಿವರು, ಕಾಲಮಿತಿಯಲ್ಲಿ ಪ್ರಗತಿ ಸಾಧಿಸಿ ಎಂದರು.
ಕಾರ್ಪೋರೇಟರ್ ಇಲ್ಲದ ಅವಧಿಯಲ್ಲಿನ ಕಾಮಗಾರಿಗಳು ತನಿಖೆಗೆ ಸೂಚನೆ: ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕಳೆದ 3 ವರ್ಷದ ಅವಧಿಯಲ್ಲಿ ಕಾರ್ಪೋರೇಟರ್ ಇಲ್ಲದೆ ಅಧಿಕಾರಿಗಳು ಕಾಮಗಾರಿ ಕೈಗೊಂಡಿದ್ದು, ಅದರಲ್ಲಿ ಅಕ್ರಮ ನಡೆದಿವೆ ಎಂದು ಶಾಸಕ ಅಲ್ಲಮಪ್ರಭು ಪಾಟೀಲ ಅವರು ಸಭೆಯ ಗಮನಕ್ಕೆ ತಂದರು. ಆಗ ಮಧ್ಯ ಪ್ರವೇಶಿಸಿದ ಸಚಿವ ಪ್ರಿಯಾಂಕ್ ಖರ್ಗೆ ಮಾತನಾಡಿ, ಕಳೆದ 3 ವರ್ಷದ ಕಾರ್ಪೋರೇಟರ್ ಇಲ್ಲದ ಅವಧಿಯಲ್ಲಿ ಪಾಲಿಕೆ ವಿವಿಧ ಯೋಜನೆಯಡಿ ಕೈಗೊಂಡ ಕಾಮಗಾರಿಗಳು ಮತ್ತು ಶೇ.22.75, ಶೇ.7.5 ವೈಯಕ್ತಿಕ ಫಲಾನುಭವಿಗಳ ಕಾರ್ಯಕ್ರಮಗಳ ಕುರಿತು ಸಮಗ್ರ ತನಿಖೆ ಕೈಗೊಳ್ಳಬೇಕು ಎಂದು ಪಾಲಿಕೆ ಆಯುಕ್ತ ಭುವನೇಶ ಪಾಟೀಲ ಅವರಿಗೆ ಸೂಚಿಸಿದರು.
ಪುಷ್ಕರಣಿ, ಕಲ್ಯಾಣಿ ಪುನರುಜ್ಜೀವನಕ್ಕೆ ಕ್ರಿಯಾ ಯೋಜನೆ ರೂಪಿಸಿ: ಜಲ ಮೂಲಗಳ ಸಂರಕ್ಷಿಸುವ ಮತ್ತು ನಗರದಲ್ಲಿನ ನೀರಿನ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಕಲಬುರಗಿ ಮಹಾನಗರದ ವ್ಯಾಪ್ತಿಯಲ್ಲಿ ಕೊಳವೆ ಬಾವಿ, ಬಾವಿ, ಕಲ್ಯಾಣಿ, ಪುಷ್ಕರಣಿಗಳನ್ನು ಗುರುತಿಸಿ ಅವುಗಳನ್ನು ವೈಜ್ಞಾನಿಕ ರೀತಿಯಲ್ಲಿ ಪನರುಜ್ಜೀವನ ಕೈಗೊಳ್ಳಲು ಕ್ರಿಯಾ ಯೋಜನೆ ರೂಪಿಸಬೇಕು ಎಂದು ಪಾಲಿಕೆ ಆಯುಕ್ತ ಭುವನೇಶ ಪಾಟೀಲ ಅವರಿಗೆ ಜಿಲ್ಲಾ ಉಸ್ತುವಾರಿ ಸಚಿವರು ನಿರ್ದೇಶನ ನೀಡಿದರು.
ಟಾಪ್ 10 ಸೂತ್ರ ಸಿದ್ಧಪಡಿಸಿ: ಕಲಬುರಗಿ ನಗರದಲ್ಲಿನ ಒಳಚರಂಡಿ, ಕುಡಿಯುವ ನೀರು, ಸಂಚಾರ ವ್ಯವಸ್ಥೆ ಬಗ್ಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಅಲ್ಪಾವಧಿ, ಮಧ್ಯಮಾವಧಿ ಹಾಗೂ ಧೀರ್ಘಾವಧಿ ಯೋಜನೆಗಳ ಟಾಪ್ 10 ಸೂತ್ರ ಅಳವಡಿಸಿ ಅದರಂತೆ ಕಾರ್ಯನಿರ್ವಹಿಸಬೇಕು ಎಂದರು.
ಸಭೆಯಲ್ಲಿ ಕಲಬುರಗಿ ದಕ್ಷಿಣ ಶಾಸಕ ಅಲ್ಲಮಪ್ರಭು ಪಾಟೀಲ, ಕಲಬುರಗಿ ಉತ್ತರ ಶಾಸಕಿ ಕನೀಜ್ ಫಾತಿಮಾ, ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್, ಜಿಲ್ಲಾ ಪಂಚಾಯತ್ ಸಿ.ಇ.ಓ ಭಂವಾರ್ ಸಿಂಗ್ ಮೀನಾ, ಅಪರ ಜಿಲ್ಲಾಧಿಕಾರಿ ಎಂ.ರಾಚಪ್ಪ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.