ಕಲಬುರಗಿ: ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡುವ ಮೂಲಕ ಸಮಾಜ ಪರಿವರ್ತನೆಯಲ್ಲಿ ಶಿಕ್ಷಕರ ಕೊಡುಗೆ ಅನನ್ಯ ಎಂದು ಸಮಗ್ರ ಕರ್ನಾಟಕ ಉಪಾಧ್ಯಾಯರ ಪ್ರಗತಿಪರ ಸಂಘದ ರಾಜ್ಯಾಧ್ಯಕ್ಷ ಗುರುಪಾದ ಕೋಗನೂರ ಹೇಳಿದರು.
ಗಂಜನಗರದ ಸಂಗಮ ವಿದ್ಯಾ ಮಂದಿರದಲ್ಲಿ ಆಯೋಜಿಸಿದ ಸಮಗ್ರ ಕರ್ನಾಟಕ ಉಪಾಧ್ಯಾಯರ ಪ್ರಗತಿಪರ ಸಂಘದ ಉತ್ತರ ವಲಯದ ಘಟಕ ಉದ್ಘಾಟನೆ ಹಾಗೂ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದರು.
ಸತ್ಯ, ನಿಷ್ಠೆ, ಪ್ರಾಮಾಣಿಕ ಹಾಗೂ ಶೈಕ್ಷಣಿಕ ಮೌಲ್ಯಗಳೊಂದಿಗೆ ಶಿಕ್ಷಕರು ಸೇವೆ ಸಲ್ಲಿಸುತ್ತಿದ್ದಾರೆ. ಹೊಸ ಶಿಕ್ಷಣ ನೀತಿ ಜಾರಿಗೊಳಿಸುವಲ್ಲಿ ಈ ಸಂಘಟನೆ ನಿರಂತರವಾಗಿ ಶ್ರಮಿಸುತ್ತಿದೆ. ಆದರೆ, ಶಿಕ್ಷಕರ ಬೇಡಿಕೆ ಈಡೇರಿಸುವ ಸಲುವಾಗಿ ಶೀಘ್ರವೇ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿಗಳಿಗೆ ನಿಯೋಗದೊಂದಿಗೆ ಭೇಟಿ ಮಾಡಿ ಚರ್ಚೆ ನಡೆಸಲಾಗುವುದು ಎಂದರು.
ಸ್ಕೂಪ್ಸ್ ಜಿಲ್ಲಾಧ್ಯಕ್ಷೆ ಸಾವಿತ್ರಿ ಎಸ್ ಪಾಟೀಲ ಅವರು ಕಾರ್ಯಕ್ರಮ ಉದ್ಘಾಟಿಸಿ, ಜಿಲ್ಲೆಯಲ್ಲಿ ಸೃಜನಶೀಲ ಕಲೆಗಳೊಂದಿಗೆ ವೃತ್ತಿ ಜೀವನ ನಡೆಸುತ್ತಿರುವ ಶಿಕ್ಷಕರನ್ನು ಗುರುತಿಸುವ ಕೆಲಸ ನಡೆದಿದೆ. ಬರುವ ಅಗಷ್ಟ ತಿಂಗಳಲ್ಲಿ ಸಮಗ್ರ ಕರ್ನಾಟಕ ಉಪಾಧ್ಯಾಯರ ಪ್ರಗತಿಪರ ಸಂಘದಿಂದ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದರು.
ಸ್ಕೂಪ್ಸ್ ರಾಜ್ಯ ಉಪಾಧ್ಯಕ್ಷರಾದ ಧರ್ಮಣ್ಣ ಧನ್ನಿ, ಝಾಕೀರ ಹುಸೇನ ಕುಪನೂರ, ಸಹ ಕಾರ್ಯದರ್ಶಿ ಶರಣಮ್ಮ ಜಮಾದಾರ ಮಾತನಾಡಿದರು.
ಉತ್ತರ ವಲಯದ ಅಧ್ಯಕ್ಷೆ ಅನ್ನಪೂರ್ಣ ಮಾಲಿಪಾಟೀಲ ಅಧ್ಯಕ್ಷತೆ ವಹಿಸಿ, ಸಮಾಜಮುಖಿ ಕೆಲಸಗಳನ್ನು ಮಾಡುತ್ತ ಶಿಕ್ಷಕರ ಸಂಕಷ್ಟಗಳಿಗೆ ಸ್ಪಂದಿಸುವ ಕಾರ್ಯ ಯೋಜನೆಗಳನ್ನು ರೂಪಿಸಲಾಗುತ್ತದೆ ಎಂದರು. ಸ್ಕೂಪ್ಸ್ ದಕ್ಷಿಣ ವಲಯದ ಅಧ್ಯಕ್ಷೆ ನಂದಿನಿ ಸನಬಾಲ್, ಸಲಹೆಗಾರ ಬಾಬುರಾವ ಕುಲಕರ್ಣಿ, ನಾಗೇಂದ್ರಪ್ಪ ಮುಚ್ಚಟ್ಟಿ, ಜಗನ್ನಾಥ ಬಿಜಾಪೂರೆ, ಈರಮ್ಮ ಅವಧೂತಮಠ, ಶ್ರೀದೇವಿ ವಡ್ಡನಕೇರಿ, ಅನ್ನಪೂರ್ಣ ಗುರಾಗೋಳ, ಗಂಗಮ್ಮ ನಾಲವಾರ, ಕಲಾವತಿ ನೇಲೋಗಿ, ಸುರೇಖಾ ಜೋಶಿ ಸೇರಿ ಮತ್ತಿತರ ಗಣ್ಯರು ಭಾಗವಹಿಸಿದರು.
ಚನ್ನಬಸಪ್ಪ ದೇಸಾಯಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಯಶ್ರೀ ಜಮಾದಾರ ನಿರೂಪಿಸಿದರು. ಸೂರ್ಯಕಾಂತ ಗೊಳುರಗಿ ವಂದಿಸಿದರು. ನಂತರ ಎಲ್ಲಾ ಪಾದಾಧಿಕಾರಿಗಳನ್ನು ಸತ್ಕರಿಸಲಾಯಿತು.