ಸುರಪುರ: ಇಂದಿನ ಅಗತ್ಯ ಕಾರ್ಯ ಪರಿಸರ ರಕ್ಷಣೆ. ಉತ್ತಮ ಪರಿಸರದಿಂದ ಆರೋಗ್ಯ ರಕ್ಷಣೆಯಾಗುತ್ತದೆ. ಇದು ಆರ್ಥಿಕ ಅಭಿವೃದ್ಧಿಗೂ ಕಾರಣವಾಗುತ್ತದೆ ಎಂದು ಪ್ರಧಾನ ಸಿವಿಲ್ ನ್ಯಾಯಾಧೀಶ ಚಿದಾನಂದ ಬಡಿಗೇರ ಅಭಿಪ್ರಾಯಪಟ್ಟರು.
ಸಂಕಲ್ಪ ನಗರ ಮತ್ತು ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಹಾಗೂ ವಾಯುವಿಹಾರಿಗಳ ಒಕ್ಕೂಟ ನಗರದ ಫಾಲನ್ ಬಂಗ್ಲಾ ಆವರಣದಲ್ಲಿ ಸೋಮವಾರ ಏರ್ಪಡಿಸಿದ್ದ ಸ್ವಚ್ಛತೆ ಹಾಗು ಸಸಿ ನೆಡುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು. ಇಲ್ಲಿನ ಯಲ್ಲಪ್ಪಬಾವಿಯ ತಪ್ಪಲು ಪ್ರದೇಶ ವಾಯುವಿಹಾರಕ್ಕೆ ಹೇಳಿ ಮಾಡಿಸಿದಂತಿದೆ. ನನ್ನ ಮನೆಯೂ ಈ ರಸ್ತೆಯ ಆರಂಭದಲ್ಲೆ ಬರುತ್ತದೆ. ಒಂದು ದಿನ ನಾನು ಈ ಪ್ರದೇಶದಲ್ಲಿ ವಾಯು ವಿಹಾರಕ್ಕೆ ಬಂದಾಗ ಇಲ್ಲಿನ ಅಸ್ವಚ್ಛತೆ ನೋಡಿ ಬೇಸರಗೊಂಡಿದ್ದೆ,ಇಡೀ ಪ್ರದೇಶ ವಾಯುಮಾಲಿನ್ಯ ಮುಕ್ತವಾಗಿದೆ. ಇಂತಹ ಪ್ರದೇಶವನ್ನು ಅಭಿವೃದ್ಧಿ ಪಡಿಸುತ್ತಿರುವುದು ಶ್ಲಾಘನೀಯ’ ಎಂದರು.
ಡಿವೈಎಸ್‌ಪಿ ಶಿವನಗೌಡ ಪಾಟೀಲ ಮಾತನಾಡಿ, ಈ ಪ್ರದೇಶದಲ್ಲಿ ನಾನು ಪೆಟ್ರೋಲಿಂಗ್ ಮಾಡಿದ್ದೇನೆ. ಕುಡುಕರ ಹಾವಳಿ ಹೆಚ್ಚು. ಅನೈತಿಕ ಚಟುವಟಿಕೆಯೂ ಇದೆ. ನಮ್ಮನ್ನು ನೋಡಿ ಓಡಿ ಹೋಗುವ ಇಂತಹ ಜನ ಮತ್ತೆ ಈ ಕೃತ್ಯದಲ್ಲಿ ತೊಡಗುತ್ತಿರುವುದು ವಿಷಾದನೀಯ ಎಂದರು. ಸಾರ್ವಜನಿಕ ಸ್ಥಳಗಳಲ್ಲಿ ಅನೈತಿಕ ಚಟುವಟಿಕೆ ನಡೆಸುವುದು, ಮದ್ಯಪಾನ ಮಾಡುವುದು ಶಿಕ್ಷಾರ್ಹ ಅಪರಾಧ. ಇನ್ನು ಮುಂದೆ ಈ ಸ್ಥಳದಲ್ಲಿ ಈ ಚಟುವಟಿಕೆ ನಡೆಸುವವರ ಮೇಲೆ ಖಂಡಿತ ಕ್ರಮ ಜರುಗಿಸುತ್ತೇನೆ. ವಾಯುವಿಹಾರಿಗಳು ಕೂಡಾ ಇಂತಹ ಜನರ ಮನವೊಲಿಸಿ ಪೊಲೀಸರ ಜೊತೆ ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ಪರಿಸರ ರಕ್ಷಣೆಗಾಗಿ ಗಣ್ಯರು ಅನೇಕ ಸಸಿಗಳ ನೆಟ್ಟರು. ನಂತರ ವಾಯುವಿಹಾರಿಗಳು ಫಾಲನ್ ಬಂಗ್ಲಾದಿಂದ ಯಲ್ಲಪ್ಪಬಾವಿವರೆಗೆ ಸ್ವಚ್ಛತಾ ಕಾರ್ಯ ಕೈಗೊಂಡರು.
ವಕೀಲ ನಿಂಗಣ್ಣ ಚಿಂಚೋಡಿ ಮಾತನಾಡಿದರು ಪೊಲೀಸ್ ಇನ್‌ಸ್ಪೆಕ್ಟರ್ ಆನಂದರಾವ, ವಕೀಲ ಬಸವಲಿಂಗಪ್ಪ ಪಾಟೀಲ, ದೇವಿಂದ್ರಪ್ಪ ಬೇವಿನಕಟ್ಟಿ, ವಾಯುವಿಹಾರಿಗಳ ಸಂಘದ ಅಧ್ಯಕ್ಷ ರಂಗಪ್ಪನಾಯಕ ಪ್ಯಾಪ್ಲಿ, ಅರಣ್ಯಾಧಿಕಾರಿ ವೆಂಕಟೇಶ ವೇದಿಕೆಯಲ್ಲಿದ್ದರು. ಸಂಕಲ್ಪ ಸಂಸ್ಥೆಯ ಅಧ್ಯಕ್ಷ ಜಾನ್‌ವೆಸ್ಲಿ ದೊಡ್ಡಮನಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೊಟ್ರಯ್ಯಸ್ವಾಮಿ ಬಳ್ಳುಂಡಗಿಮಠ, ಓಂಪ್ರಕಾಶ ವರ್ಮಾ, ಉಮಾಕಾಂತ ಪಂಚಮಗಿರಿ, ರಮೇಶ ದೊರಿ ಅಲ್ದಾಳ, ರಾಜಾ ರಾಮಪ್ಪನಾಯಕ ಜೇಜಿ, ಅಬ್ದುಲ ಖಾದರ ಸೌದಾಗರ, ಪ್ರಕಾಶಚಂದ ಜೈನ್, ರಾಯಚಂದ ಜೈನ್, ಶಾಂತಿಲಾಲ ರಾಠೋಡ, ರಾಧೇಶಾಮ ಭಂಗ, ತೇಜಕಾಂತ ದೇವರಶೆಟ್ಟಿ, ಗೌರಿಶಂಕರ ಯನಗುಂಟಿ, ಭಂಡಾರಿ ನಾಟೇಕಾರ, ಭೀಮಣ್ಣ ಮಾಲಿಪಾಟೀಲ ಇದ್ದರು ಶಿವಕುಮಾರ ಮಸ್ಕಿ ನಿರೂಪಿಸಿದರು. ಕರ್ಣಯ್ಯಸ್ವಾಮಿ ನೀಲಗಾರ ವಂದಿಸಿದರು.