ಅಭಿವೃದ್ಧಿ ವೇಗಕ್ಕೆ ನೀತಿಸಂಹಿತೆ ಅಡ್ಡಿ: ಬಿಜೆಪಿಯ ಆರೋಪಕ್ಕೆ ಹೆದರುವುದಿಲ್ಲ: ಮೈನಾಬಾಯಿ

0
92

ವಾಡಿ: ಅಭಿವೃದ್ಧಿ ಹೆಸರಿನಲ್ಲಿ ಪುರಸಭೆಯ ಕಾಂಗ್ರೆಸ್ ಆಡಳಿತದಿಂದ ೨ ಕೋಟಿ ರೂ. ಅನುದಾನ ದುರ್ಬಳಕೆಯಾಗಿದೆ ಎಂಬ ಬಿಜೆಪಿಯ ಆರೋಪ ಅಪ್ಪಟ ಸುಳ್ಳಿನಿಂದ ಕೂಡಿದ್ದು, ರಾಜಕೀಯ ಪ್ರೇರಿತವಾಗಿದೆ. ಇಂತಹ ಆದಾರ ರಹಿತ ಆರೋಪಗಳಿಗೆ ನಾನು ಹೆದರುವುದಿಲ್ಲ ಎಂದು ಪುರಸಭೆ ಅಧ್ಯಕ್ಷೆ ಮೈನಾಬಾಯಿ ಗೋಪಾಲ ರಾಠೋಡ ಪ್ರತಿಕ್ರೀಯಿಸಿದ್ದಾರೆ.

ಪಟ್ಟಣದ ಪುರಸಭೆಯಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಮೈನಾಬಾಯಿ, ಬಿಜೆಪಿ ಮಾಡಿದ ಆರೋಪಗಳಿಗೆ ತಿರುಗೇಟು ನೀಡಿದರು. ಪುರಸಭೆಯ ನನ್ನ ಆಡಳಿತದಲ್ಲಿ ನೂರಾರು ಕೋಟಿಯ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಿದ್ದೇನೆ. ಯಾವೂದೇ ಅಭಿವೃದ್ಧಿ ಟೆಂಡರ್ ಇಲ್ಲದೆ ಆಗುವುದಿಲ್ಲ. ಟೆಂಡರ್ ಮೂಲಕ ನಡೆಯುವ ಕಾಮಗಾರಿಗಳಲ್ಲಿ ಅನುದಾನ ಲೂಟಿ ಅಸಾಧ್ಯ. ನನ್ನ ವಾರ್ಡ್‌ನ ಉದ್ಯಾನವನ ಅಭಿವೃದ್ಧಿ ಹೆಸರಿನಲ್ಲಿ ೭ ಲಕ್ಷ ರೂ. ಸುಳ್ಳು ಬಿಲ್ ಬರೆಯಲಾಗಿದೆ ಎಂದು ಆರೋಪಿಸಿರುವ ಬಿಜೆಪಿ ನಾಯಕರಿಗೆ ಜ್ಞಾನ ಇಲ್ಲ. ಉದ್ಯಾನವನ ಅಭಿವೃದ್ಧಿಯ ಹಣ ಇನ್ನೂ ಖರ್ಚು ಮಾಡಿಲ್ಲ. ಟೆಂಡರ್ ಪ್ರಕ್ರೀಯೆ ಈಗ ಮುಗಿದಿದೆ. ಮುಂದಿನ ದಿನಗಳಲ್ಲಿ ಸುಂದರ ಉದ್ಯಾನವನನ್ನಾಗಿ ಮಿಂಚಲಿದೆ. ರೈಲ್ವೆ ಕಾಲೋನಿಯಲ್ಲೂ ಅನುದಾನ ದುರ್ಬಳಕೆಯಾಗಿಲ್ಲ. ಕಾಂಗ್ರೆಸ್ ಆಡಳಿತ ಪ್ರಕಟಿಸಿರುವ ಕರ್ಚು-ವೆಚ್ಚದ ಪುಸ್ತಕವೇ ಬಿಜೆಪಿಯವರಿಗೆ ಅರ್ಥವಾಗಿಲ್ಲ ಎಂದು ಟೀಕಿಸಿದರು.

Contact Your\'s Advertisement; 9902492681

ನನ್ನ ಆಡಳಿತದಲ್ಲಿ ಶಾಸಕ ಪ್ರಿಯಾಂಕ್ ಖರ್ಗೆ ಅವರ ಸಹಕಾರದಡಿ ೮೨ ಎಕರೆ ಭೂಮಿ ಶಿಕ್ಷಣ ವಲಯ ನಿರ್ಮಿಸಲು ಖರೀದಿಸಲಾಗಿದೆ. ಪ್ರಗತಿ ಕಾಲೋನಿ ನಿರ್ಮಿಸಿ ಸ್ಥಳೀಯ ಸಾವಿರಾರು ಕುಟುಂಬಗಳಿಗೆ ವಸತಿ ಸೌಲಭ್ಯ ಒದಗಿಸಲು ೧೬ ಎಕರೆ ಭೂಮಿ ಪ್ರತ್ಯೇಕವಾಗಿ ಖರೀದಿಸಲಾಗಿದೆ. ವಾರ್ಡ್ ೧ರ ಜನರಿಗೆ ಗೃಹಭಾಗ್ಯ ಕಲ್ಪಿಸಲು ೪ ಎಕರೆ ಭೂಮಿ ಗುರುತಿಸಲಾಗಿದೆ. ವಿವಿಧ ಬಡಾವಣೆಗಳಲ್ಲಿ ಸಿಸಿ ರಸ್ತೆ ಮತ್ತು ಚರಂಡಿ ಕಾಮಗಾರಿಗಳು ನಡೆಯುತ್ತಿವೆ. ಬೇಸಿಗೆ ದಿನಗಳಲ್ಲಿ ನದಿಗಳು ಬತ್ತಿದಾಗ ಬೆಣ್ಣೆತೋರಾ ಜಲಾಶೆಯದಿಂದ ನೀರು ಹರಿಸಿ ಜನರ ಪರದಾಟ ತಪ್ಪಿಸಿದ್ದೇವೆ. ಇದೆಲ್ಲಾ ಬಿಜೆಪಿಯವರ ಕಣ್ಣಿಗೆ ಕಾಣುವುದಿಲ್ಲ. ಕಾಂಗ್ರೆಸ್ ಆಡಳಿತದ ಅಭಿವೃದ್ಧಿ ಸಹಿಸಲಾಗದೆ ಪ್ರತಿಪಕ್ಷದ ಸದಸ್ಯರು ಸಂಕಟ ಅನುಭಿಸುತ್ತಿದ್ದಾರೆ ಎಂದು ಕಿಚಾಯಿಸಿದರು.

ತನಿಖೆಗೆ ಸಿದ್ಧ: ನನ್ನ ವಿರುದ್ಧ ಬಂದಿರುವ ಆರೋಪಗಳು ಸತ್ಯಕ್ಕೆ ದೂರವಾಗಿವೆ. ನನ್ನಿಂದ ಒಂದು ಪೈಸೆ ಹಣ ದುರ್ಬಳಕೆಯಾಗಿಲ್ಲ. ೨ ಕೋಟಿ ರೂ. ಅನುದಾನ ಲೂಟಿ ಮಾಡಿದ್ದೇನೆ ಎಂಬ ಆರೋಪಕ್ಕೆ ಸಾಕ್ಷಾಧಾರಗಳಿಲ್ಲ. ನನ್ನನ್ನು ಅಧಿಕಾರದಿಂದ ಕೆಳಗಿಳಿಸಲು ಈ ಕಳಂಕ ಹಚ್ಚಲಾಗುತ್ತಿದೆ. ಯಾರಿಗೆ ದೂರು ಕೊಡ್ತಾರೋ ಕೊಡಲಿ. ನಾನು ತಪ್ಪೇ ಮಾಡಿಲ್ಲ. ಯಾವೂದೇ ತನಿಖೆಗೂ ನಾನು ಸಿದ್ದಳಿದ್ದೇನೆ. ಪುರಸಭೆ ಆಡಳಿತದಲ್ಲಿ ಹುಳುಕು ಹುಡುಕುತ್ತಿರುವ ಮಾಜಿ ಶಾಸಕ ವಾಲ್ಮೀಕಿ ನಾಯಕ ಅವರು ಕ್ಷೇತ್ರಕ್ಕೆ ತಮ್ಮದೇನು ಕೊಡುಗೆ ಎಂಬುದು ಹೇಳಲಿ. ಚಿತ್ತಾಪುರ-ವಾಡಿ ರಸ್ತೆ ಅಭಿವೃದ್ಧಿ ಮಾಡಲಾಗದ ಮಾಜಿ ಶಾಸಕರು ನಮ್ಮ ವಿರುದ್ಧ ಬೊಟ್ಟು ಮಾಡುತ್ತಿದ್ದಾರೆ ಎಂದು ಹರಿಹಾಯ್ದ ಮೈನಾಬಾಯಿ ರಾಠೋಡ, ಪ್ರಿಯಾಂಕ್ ಖರ್ಗೆ ಅವರು ಶಾಸಕರಾದ ಮೇಲೆ ಕ್ಷೇತ್ರದಾಧ್ಯಂತ ರಸ್ತೆಗಳು ಪ್ರಗತಿ ಕಂಡಿವೆ. ಅಲ್ಲದೆ ನಾನು ಅಧ್ಯಕ್ಷಳಾದ ನಂತರ ವಿಧಾನಸಭೆ, ಲೋಕಸಭೆ ಮತ್ತು ಚಿಂಚೋಳಿ ಉಪಚುನಾವಣೆಗಳು ಎದುರಾಗಿದ್ದರಿಂದ ಜಾರಿಯಾದ ನೀತಿಸಂಹಿತೆ ನಿಯಮಗಳು ಪಟ್ಟಣದ ಅಭಿವೃದ್ಧಿಗೆ ಮತ್ತು ಸಭೆಗಳನ್ನು ನಡೆಸುವುದಕ್ಕೆ ತೊಡಕಾಗಿತ್ತು. ಅಧಿಕಾರಿಗಳು ಬೇರೆ ಸ್ಥಳಕ್ಕೆ ನಿಯೋಜನೆಗೊಂಡಿದ್ದರಿಂದ ಸಮಸ್ಯೆಯಾಯಿತು ಎಂದು ವಿವರಿಸಿದರು.

ಪೌರಕಾರ್ಮಿಕರ ವೇತನಕ್ಕೆ ಕ್ರಮ: ದಿನಗೂಲಿಯಿಂದ ಕಾಯಂ ನೌಕರರಾಗಿ ನೇಮಕಗೊಂಡು ಕಳೆದ ಎಂಟು ತಿಂಗಳಿಂದ ವೇತನವಿಲ್ಲದೆ ದುಡಿಯುತ್ತಿರುವ ೩೦ ಜನ ಪೌರಕಾರ್ಮಿಕರ ಕಷ್ಟ ಅರ್ಥವಾಗಿದೆ. ಅವರ ವೇತನ ಬಿಡುಗಡೆ ಮಾಡುವಂತೆ ಪುರಸಭೆ ವತಿಯಿಂದ ಈಗಾಗಲೇ ಪೌರಾಡಳಿತ ನಿರ್ದೇಶನಾಲಯಕ್ಕೆ ಪತ್ರ ಬರೆಯಲಾಗಿದೆ. ಆದಷ್ಟು ಬೇಗ ವೇತನ ಮಂಜೂರಿಗೆ ಕ್ರಮಕೈಗೊಳ್ಳುತ್ತೇನೆ ಎಂದರು.

ಖರ್ಗೆ ಹೇಳಿದರೆ ಅಧಿಕಾರ ತ್ಯಾಗ: ನನ್ನ ಆಡಳಿತದಲ್ಲಿ ನನ್ನದೇ ಪಕ್ಷದ ಚುನಾಯಿತ ಸದಸ್ಯರು ಅತೃಪ್ತಿ ಹೊಂದಿದ್ದಾರೆ ಎಂಬುದು ಸುದ್ದಿಯಾಗಿದೆ. ನನ್ನ ಅಧಿಕಾರ ಕಸಿಯಲು ಶಢ್ಯಂತ್ರ ನಡೆದಿದೆ ಎಂಬ ಆಂತರಿಕ ಅಸಮಾಧಾನವೂ ಕೇಳಿಬಂದಿದೆ. ಇದನ್ನು ನಾನು ಪಕ್ಷದ ನಾಯಕರ ಗಮನಕ್ಕೆ ತಂದು ಆಂತರಿಕವಾಗಿ ಬಗೆಹರಿಸುತ್ತೇನೆ. ಉಳಿದ ೯ ತಿಂಗಳ ಶಾಡಳಿತವನ್ನು ಜನ ಮೆಚ್ಚುವಂತೆ ಮತ್ತು ಪ್ರತಿಪಕ್ಷದ ಸದಸ್ಯರು ಬೆಚ್ಚಿಬೀಳುವಂತೆ ನಡೆಸುತ್ತೇನೆ ನೋಡುತ್ತಿರಿ. ನನ್ನನ್ನು ಅಧ್ಯಕ್ಷರನ್ನಾಗಿ ಮಾಡಿದ್ದು ಶಾಸಕ ಪ್ರಿಯಾಂಕ್ ಖರ್ಗೆ ಅವರು. ಅವರು ನೀವು ಅಧಿಕಾರದಿಂದ ಕೆಳಗಿಳಿಯಿರಿ ಎಂದರೆ ಇಂದೇ ಪದತ್ಯಾಗ ಮಾಡುತ್ತೇನೆ. ಹೈಕಮಾಂಡ್ ನೀಡುವ ಆದೇಶಕ್ಕೆ ಬದ್ಧಳಾಗಿ ಜನರ ಸೇವೆ ಮಾಡುತ್ತೇನೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here