ಆಳಂದ: ಪ್ರಜಾಪ್ರಭುತ್ವದ ಕಾವಲುನಾಯಿಯಾಗಿರುವ ಮಾಧ್ಯಮ ಇಂದು ತನ್ನ ಜವಾಬ್ದಾರಿಯನ್ನು ಮರೆತಿರುವಂತೆ ಕಾಣುತ್ತಿದ್ದರೂ ಮುದ್ರಣ ಮಾಧ್ಯಮ ತನ್ನ ವಾಸ್ತವಿಕತೆ ಹಾಗೂ ವಿಶ್ವಾಹಾರ್ಹತೆಯಿಂದಾಗಿ ಇಂದಿಗೂ ತನ್ನ ಇರುವಿಕೆಯನ್ನು ಸಾಬೀತುಪಡಿಸುತ್ತಿದೆ ಎಂದು ಶಾಸಕ ಬಿ.ಆರ್.ಪಾಟೀಲ್ ಹೇಳಿದರು.
ಪಟ್ಟಣದ ಎ.ವ್ಹಿ. ಪಾಟೀಲ್ ಪದವಿ ಮಹಾವಿದ್ಯಾಲಯದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ತಾಲ್ಲೂಕು ಘಟಕ ಏರ್ಪಡಿಸಿದ್ದ ಓದುಗರ ಮತ್ತು ಪತ್ರಕಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಈ ಹಿಂದೆ ಸುದ್ದಿಗಳು ಗುಣಮಟ್ಟದಿಂದ ಕೂಡಿರುತ್ತಿದ್ದವು ಇತ್ತೀಚಿನ ದಿನಗಳಲ್ಲಿ ಮಾಧ್ಯಮಗಳಲ್ಲಿ ವಿಶ್ವಾಸಾರ್ಹತೆಯ ಕೊರತೆ ಎದುದ್ದು ಕಾಣುತ್ತಿದೆ. ವಿದ್ಯಾರ್ಥಿಗಳು ಪತ್ರಿಕೆ ಓದುವುದು ರೂಢಿ ಮಾಡಿಕೊಳ್ಳಬೇಕು. ಅದರಲ್ಲೂ ಸಂಪಾದಕೀಯ ಪುಟ ಹಾಗೂ ಅಂಕಣ ಬರಹಗಳನ್ನು ಓದುವ ಮೂಲಕ ಜ್ಞಾನ ವೃದ್ಧಿ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಸಂಘದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಡಾ. ಶಿವರಂಜನ ಸತ್ಯಂಪೇಟೆ ಮಾತನಾಡಿ, ಜನರೇ ಜರ್ನಲಿಸ್ಟ್‍ಗಳಾಗಿರುವ ಈ ತಾಂತ್ರಿಕ ಯುಗದಲ್ಲಿ ಮಾಧ್ಯಮದವರು ತಮ್ಮ ಸಾಮಾಜಿಕ ಜವಾಬ್ದಾರಿಯನ್ನು ಕಾಪಾಡಿಕೊಂಡು ಬರಬೇಕು ಎಂದು ತಿಳಿಸಿದರು.
ಸಂಘದ ಜಿಲ್ಲಾಧ್ಯಕ್ಷ ಬಾಬುರಾವ ಯಡ್ರಾಮಿ ಅಧ್ಯಕ್ಷತೆ ವಹಿಸಿದ್ದರು. ಪದವಿ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಎಸ್.ಎಚ್. ಹೊಸಮನಿ ಮಾತನಾಡಿದರು. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಸಂಗಮನಾಥ ರೇವತಗಾಂವ, ತಾಪಂ ಇಒ ಮಾನಪ್ಪ ಕಟ್ಟಿಮನಿ, ಸಮಾಜ ಕಲ್ಯಾಣ ಇಲಾಖೆಯ ಮೋನಮ್ಮ ಸುತಾರ, ಸಂಘದ ತಾಲ್ಲೂಕು ಅಧ್ಯಕ್ಷ ತಯಬಲಿ ಜರದಿ ಇದ್ದರು. ರಾಜಕುಮಾರ ಹಿರೇಮಠ ನಿರೂಪಿಸಿದರು. ಪ್ರಭಾಕರ ಸಲಗರೆ ಸ್ವಾಗತ ಕೋರಿದರು. ಶಿವಲಿಂಗ ತೇಲ್ಕರ್ ವಂದಿಸಿದರು.
ಒಂದು ಪತ್ರಿಕೆ ಸರಿ ಸುಮಾರು 32 ರಿಂದ 38 ರೂ. ವರೆಗೆ ಖರ್ಚು ಆಗುತ್ತದೆ. ಮಾರುಕಟ್ಟೆಯಲ್ಲಿ ಮಾರುವುದು 5 ರಿಂದ 7 ರೂ.ಗೆ ಮಾತ್ರ. ಈ ರೀತಿಯ ವ್ಯತ್ಯಾಸ ಇರುವುದರಿಂದ ಪತ್ರಿಕೆಗಳು ಜಾಹೀರಾತುಗಳ ಮೇಲೆ ಅವಲಂಬಿತವಾಗಿರುತ್ತವೆ. ಮುಂಬರುವ ದಿನಗಳಲ್ಲಿ ತಾಲ್ಲೂಕಿನಲ್ಲಿ ಪತ್ರಕರ್ತರ ಭವನಕ್ಕೆ ಶಾಸಕರು ಹೆಚ್ಚು ಕಾಳಜಿ ವಹಿಸಿ ಭವನ ನಿರ್ಮಾಣ ಮಾಡಿಕೊಡಬೇಕು. – ಬಾಬುರಾವ ಯಡ್ರಾಮಿ, ಜಿಲ್ಲಾಧ್ಯಕ್ಷ, ಕ.ಕಾ.ನಿ.ಪ, ಕಲಬುರಗಿ.