ಚಿತ್ತಾಪುರ: ನಾಗರ ಪಂಚಮಿ ದಿನದಂದು ಕಲ್ಲಿಗೆ ಹಾಲೇರೆಯುವ ಬದಲು ಬಡ ನಿರ್ಗತಿಕ ಮಕ್ಕಳಿಗೆ ಹಾಲು ನೀಡುವ ಮೂಲಕ ಬಸವ ಪಂಚಮಿಯನ್ನಾಗಿ ಆಚರಿಸಲಾಗಿದೆ ಎಂದು ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋದನೆ ಪರಿಷತ್ತು ತಾಲೂಕು ಘಟಕದ ಅಧ್ಯಕ್ಷ ಶಾಂತಕುಮಾರ ಮಳಖೇಡ ಅಭಿಪ್ರಾಯಪಟ್ಟರು.
ಪಟ್ಟಣದ ದೇವಿದಾಸ್ ಕಾಲೋನಿಯಲ್ಲಿ ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋದನಾ ಪರಿಷತ್ತು ತಾಲೂಕು ಘಟಕದ ವತಿಯಿಂದ ಸೋಮವಾರ ಹಮ್ಮಿಕೊಂಡಿದ್ದ ಬಸವ ಪಂಚಮಿ ಹಬ್ಬದ ನಿಮಿತ್ತ ಬಡ ನಿರ್ಗತಿಕ ಮಕ್ಕಳಿಗೆ ಗುಣಮಟ್ಟದ ಹಾಲು ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪಂಚಮಿ ಹಬ್ಬವನ್ನು ವೈಚಾರಿಕ ಪ್ರವಾದಿ ಬಸವಣ್ಣನವರ ಚಿಂತನೆಗಳಿಗೆ ಗೌರವ ಸಮರ್ಪಿಸಿ ಈ ಹಬ್ಬವನ್ನು ಬಸವ ಪಂಚಮಿ ಹಬ್ಬವಾಗಿ ಆಚರಿಸಲಾಗುತ್ತಿದೆ ಎಂದರು.
ನಾಗರ ಹುತ್ತಕ್ಕೆ, ಕಲ್ಲಿನ ಮೂರ್ತಿಗಳಿಗೆ ಹಾಲು ಸುರಿದು ಅವೈಜ್ಞಾನಿಕವಾಗಿ ಆಚರಣೆಗೆ ಜನರು ಮುಂದಾಗುತ್ತಾರೆ. ಇದರಿಂದ ಅಪಾರ ಪ್ರಮಾಣ ಹಾಲು ವ್ಯರ್ಥವಾಗುತ್ತಿದೆ. ಪ್ರಸ್ತುತ ಅಪೌಷ್ಠಿಕತೆಯಿಂದ ಸಾವಿರಾರು ಮಕ್ಕಳು ಸಾವಿಗೀಡಾಗುತ್ತಿದ್ದಾರೆ ಹಾಲನ್ನು ವ್ಯರ್ಥ ಮಾಡುವ ಬದಲಿಗೆ ಮಕ್ಕಳಿಗೆ ಮತ್ತು ಬಡವರಿಗೆ ಕೊಟ್ಟರೆ ಅದು ಅಮೃತವಾಗುತ್ತದೆ ಎಂದು ಹೇಳಿದರು.
ನಾಗರ ಪಂಚಮಿ ನಿಮಿತ್ತ ಬಡ ಮಕ್ಕಳಿಗೆ ಹಾಲು ವಿತರಣೆ ಮಾಡುವ ಮೂಲಕ ತಾಲೂಕಿನಲ್ಲಿ ಇದೊಂದು ವಿಶಿಷ್ಟ ಮತ್ತು ವಿನೂತನ ಕಾರ್ಯಕ್ರಮವಾಗಿದೆ. ತಾಲೂಕಿನ ಜನರಲ್ಲಿನ ಮೂಢನಂಬಿಕೆಗಳನ್ನು ಹೋಗಲಾಡಿಸಲು ಮುಂದಿನ ದಿನಗಳಲ್ಲಿ ಅನೇಕ ವೈಚಾರಿಕ ಮತ್ತು ವೈಜ್ಞಾನಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದರು.
ಪರಿಷತ್ತಿನ ಗೌರವಾಧ್ಯಕ್ಷ ಕಾಶಿನಾಥ ಗುತ್ತೇದಾರ ಮಾತನಾಡಿ, ನಾಗರ ಪಂಚಮಿ ಹಬ್ಬದ ನೆಪದಲ್ಲಿ ಕೆಲವು ಆಚರಣೆಗಳು ಮೂಢನಂಬಿಕೆಗೆ ಪ್ರಚೋದನೆ ನೀಡುತ್ತಿವೆ ಇದನ್ನು ಹೋಗಲಾಡಿಸಲು ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋದನಾ ಪರಿಷತ್ತು ತಾಲೂಕು ಘಟಕದ ವತಿಯಿಂದ ಬಡ ಮಕ್ಕಳಿಗೆ ಹಾಲು ನೀಡುವ ಮೂಲಕ ಅರ್ಥಪೂರ್ಣವಾಗಿ ಹಬ್ಬ ಆಚರಿಸುತ್ತಿರುವುದು ಬದಲಾವಣೆಯ ಸಂಕೇತವಾಗಿದೆ ಹೀಗಾಗಿ ಎಲ್ಲರೂ ಮೂಢನಂಬಿಕೆಯಿಂದ ಹೊರ ಬರಬೇಕು ಎಂದು ಹೇಳಿದರು.
ಪರಿಷತ್ತಿನ ಪದಾಧಿಕಾರಿಗಳಾದ ನರಸಪ್ಪ ಚಿನ್ನಾಕಟ್ಟಿ, ಮೋಯಿನ್ ಸಾತನೂರ, ದೇವಿಂದ್ರ ಕುಮಸಿ ಮಾತನಾಡಿದಿರು. ಆನಂದ ಕಲ್ಲಕ್, ಸುರೇಶ ಬೆನಕನಳ್ಳಿ, ರವಿಶಂಕರ ಬುರ್ಲಿ, ರಾಮಣ್ಣ ಡೋಣಗಾಂವ, ವೆಂಕಟೇಶ ಸಂದ್ಯನ್, ಚಂದ್ರಕಾಂತ ನಾಟೀಕಾರ, ಸಾಬಣ್ಣ ಕಲಬುರಗಿ ಇತರರು ಇದ್ದರು. ಕಾಶಿರಾಯ ಕಲಾಲ್ ನಿರೂಪಿಸಿದರು, ವೀರುಪಾಕ್ಷರುದ್ರ ಬೆಣ್ಣಿ ವಂದಿಸಿದರು.