ಸೇಡಂ: ಕಲಬುರಗಿ ಜಿಲ್ಲೆಯಲ್ಲಿ ಬರಗಾಲದಿಂದ ತತ್ತರಿಸಿರುವ ರೈತರಿಗೆ ಸೂಕ್ತ ಪರಿಹಾರ ನೀಡುವುದರ ಜೊತೆಗೆ ಸಹಕಾರ ಸಂಘಗಳಿಂದ ರೈತರು ಪಡೆದ ಸಾಲ ಮನ್ನಾ ಮಾಡಬೇಕು ಮತ್ತು ಹಿಂಗಾರು ಬೆಳೆಯಲು ಪುನ: ಬೆಳೆಸಾಲ ದೊರೆಯುವಂತೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸೇಡಂ ಮತಕ್ಷೇತ್ರದ ಜೆಡಿಎಸ್ ಪಕ್ಷದ ಮುಖಂಡ ಬಾಲರಾಜ್ ಗುತ್ತೇದಾರ ಒತ್ತಾಯಿಸಿದ್ದಾರೆ.
ಈ ಕುರಿತು ಪತ್ರಿಕಾಪ್ರಕಟಣೆ ಹೊರಡಿಸಿರುವ ಅವರು ರಾಷ್ಟ್ರೀಕೃತ ಬ್ಯಾಂಕುಗಳಿಂದ ಈಗಾಗಲೇ ಸಾಲ ಪಡೆದ ರೈತರ ಸಾಲ ವಸೂಲಿ ಮಾಡದಂತೆ ಸೂಚನೆ ನೀಡಬೇಕು ಮತ್ತು ರಾಷ್ಟ್ರೀಕೃತ ಬ್ಯಾಂಕುಗಳಿಂದ ಸಾಲ ಪಡೆಯಲು ಬ್ಯಾಂಕ್ ನಿಯಮಗಳನ್ನು ಸರಳೀಕರಿಸಬೇಕು, ಸಹಕಾರ ಸಂಘಗಳಿಂದ ಸಾಲ ಸಿಗುವಂತೆ ವಾಣಿಜ್ಯ ಬ್ಯಾಂಕುಗಳಿಂದಲೂ ಸಹ ರೈತರಿಗೆ ಸಾಲ ಸಿಗುವಂತೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಕೇಂದ್ರ ಮಾರ್ಗಸೂಚಿಯಂತೆ ಕರ್ನಾಟಕ ರಾಜ್ಯದ 160 ತಾಲ್ಲೂಕುಗಳು ಬರ ಘೋಷಣೆ ಮಾಡಲಾಗಿದ್ದು, ಇನ್ನೂ 37 ತಾಲ್ಲೂಕುಗಳನ್ನು ಕೇಂದ್ರ ಮಾರ್ಗಸೂಚಿಯಂತೆ ಬರಗಾಲ ಪೀಡಿತ ತಾಲ್ಲೂಕುಗಳೆಂದು ಘೋಷಣೆ ಮಾಡಬೇಕು ಎಂದು ಗುತ್ತೇದಾರ ಅವರು ಒತ್ತಾಯಿಸಿದ್ದಾರೆ.