ತ್ಯಾಗ ಬಲಿದಾನದಿಂದ ವಿಮೋಚನೆ ಸಾಧ್ಯವಾಯಿತು: ಪ್ರೊ. ದಯಾನಂದ ಅಗಸರ್

0
29

ಕಲಬುರಗಿ: ಕಲ್ಯಾಣ ಕರ್ನಾಟಕ ಪ್ರದೇಶ ಐತಿಹಾಸಿಕ ಹಾಗೂ ಸಾಂಸ್ಕೃತಿಕವಾಗಿ ಹೆಚ್ಚು ಮಹತ್ವ ಪಡೆದಿರುವ ಪ್ರದೇಶವಾಗಿದೆ. ಹಲವು ಮಹಾನ್ ನಾಯಕರ ತ್ಯಾಗ ಮತ್ತು ಬಲಿದಾನದಿಂದ ವಿಮೋಚನೆ ಪಡೆದ ನಂತರ ಕಲ್ಯಾಣ ಕರ್ನಾಟಕ ಭಾಗದ ಶಿಕ್ಷಣ, ಆರ್ಥಿಕ, ಸಾಂಸ್ಕೃತಿಕ, ಸಾಹಿತ್ಯ, ಕಲೆ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ಅಭಿವೃದ್ಧಿ ಸಾಧಿಸಲು ಸಾಧ್ಯವಾಗಿದೆ. ಅದರ ಹಿನ್ನೆಲೆಯಲ್ಲಿ ಶೈಕ್ಷಣಿಕ ಸಂಸ್ಥೆಗಳು ನೀಡುತ್ತಿರುವ ಉತ್ಕೃಷ್ಠ ಗುಣಮಟ್ಟದ ಶಿಕ್ಷಣ ಮತ್ತು ಸಂಶೋಧನಾ ಕ್ಷೇತ್ರದಲ್ಲಿನ ಅವಿಷ್ಕಾರದಿಂದ ಬದುಕಿನ ವಾಸ್ತವತೆಗಳನ್ನು ಅರಿತು ಸುಂದರ ಭವಿಷ್ಯವನ್ನು ವಿದ್ಯಾರ್ಥಿಗಳು ರೂಪಿಸಿಕೊಳ್ಳಬೇಕಿದೆ ಎಂದು ಕುಲಪತಿ ಪ್ರೊ. ದಯಾನಂದ ಅಗಸರ ಹೇಳಿದರು.

ಗುಲಬರ್ಗಾ ವಿಶ್ವವಿದ್ಯಾಲಯದ ಕಾರ್ಯಸೌಧದ ಮುಂಭಾಗ ಕಲ್ಯಾಣ ಕರ್ನಾಟಕ ವಿಮೋಚನಾ ದಿನದ ಅಂಗವಾಗಿ ಆಯೋಜಿಸಿದ ‘ಕಲ್ಯಾಣ ಕರ್ನಾಟಕ ಉತ್ಸವ’ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಹಾತ್ಮ ಗಾಂಧಿ, ಡಾ. ಬಿ. ಆರ್. ಅಂಬೇಡ್ಕರ್ ಹಾಗೂ ಸರ್ದಾರ್ ವಲ್ಲಭ ಬಾಯಿ ಪಟೇಲ್ ಅವರ ಭಾವಚಿತ್ರಕ್ಕೆ ಪುಷ್ಪ ಸಮರ್ಪಸಿ ಮಾತನಾಡಿದರು.

Contact Your\'s Advertisement; 9902492681

ನಿಜಾಮರ ಆಳ್ವಿಕೆಯಲ್ಲಿನ ದಬ್ಬಾಳಿಕೆ ಮತ್ತು ದೌರ್ಜನ್ಯದಿಂದ ಬೇಸತ್ತು ನಡೆಸಿದ ಹೋರಾಟ ಸ್ವಾತಂತ್ರ್ಯ ಚಳುವಳಿಯ ಭಾಗವಾಗಿತ್ತು. ಸರ್ದಾರ್ ವಲ್ಲಬಾಯಿ ಪಟೇಲ್ ಅವರ ನಿರ್ಧಾರದಿಂದ 1948 ಸೆಪ್ಟಂಬರ್ 17 ರಂದು ಕಲ್ಯಾಣ ಕರ್ನಾಟಕ ವಿಮೋಚನೆಗೊಂಡು ಭಾರತದ ಒಕ್ಕೂಟದಲ್ಲಿ ಸೇರ್ಪಡೆಗೊಂಡಿತ್ತು. ರಜಾಕರು ನಡೆಸಿದ ಅಮಾನವೀಯ ಘಟನೆಗಳು ಮತ್ತು ಕ್ರೂರತನದ ವಿರುದ್ಧ ಹೋರಾಟ ನಡೆಸಿ ಹಲವಾರು ನಾಯಕರು ಪ್ರಾಣ ತೆತ್ತಿದ್ದಾರೆ ಅವರನ್ನು ಇಂದು ಸ್ಮರಿಸಿಕೊಳ್ಳಬೇಕು ಎಂದರು.

ರಾಜ್ಯಶಾಸ್ತ್ರ ವಿಭಾಗದ ಹಿರಿಯ ಪ್ರಾಧ್ಯಾಪಕ ಪ್ರೊ. ಚಂದ್ರಕಾಂತ ಎಂ ಯಾತನೂರ್ ‘ಕಲ್ಯಾಣ ಕರ್ನಾಟಕ ವಿಮೋಚನೆ ಹೋರಾಟ’ ಕುರಿತು ಮಾತನಾಡಿ ಕಲ್ಯಾಣ ಕರ್ನಾಟಕ ಪ್ರದೇಶಗಳಲ್ಲಿ 75ನೇ ವರ್ಷದ ವಿಮೋಚನಾ ದಿನವನ್ನು ಆಚರಿಸಲಾಗುತ್ತಿದೆ. ಭಾರತದ ಮೊದಲ ಪ್ರಧಾನಿ ನೆಹರು ಅವರು ಭಾರತದ ಒಕ್ಕೂಟ ವ್ಯವಸ್ಥೆಗೆ ಸೇರಲು ಹೈದ್ರಾಬಾದ ನಿಜಾಮನಿಗೆ ಆಹ್ವಾನ ನೀಡಲಾಯಿತು.

ಆಹ್ವಾನವನ್ನು ದಿಕ್ಕರಿಸಿದ ನಿಜಾಮನ ಸರ್ವಾಧಿಕಾರದ ವಿರುದ್ಧ ಅಂದಿನ ಗೃಹ ಮಂತ್ರಿ ಹಾಗೂ ಉಕ್ಕಿನ ಮನುಷ್ಯನೆಂದು ಖ್ಯಾತಿ ಪಡೆದ ಸರ್ದಾರ್ ವಲ್ಲಬಾಯಿ ಪಟೇಲ್ ಅವರು ಕೈಗೊಂಡ ‘ಆಪರೇಷನ್ ಪೋಲೋ’ ಯಶಸ್ವಿಯಿಂದಾಗಿ ಕಲ್ಯಾಣ ಕರ್ನಾಟಕ ವಿಮೋಚನೆಗೊಂಡಿತು. ಈ ಹೋರಾಟದಲ್ಲಿ ಪಂಡಿತ ತಾರನಾಥ, ಗಾಣದಾಳ ನಾರಾಯಣಪ್ಪ, ಶಂಕರಗೌಡ ಬೆಟ್ಟದೂರು, ಶರಣಗೌಡ ಪಾಟೀಲ್ ಮುಂತಾದ ಮಹಾನ್ ನಾಯಕರು ಶ್ರಮಿಸಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಕುಲಸಚಿವ ಡಾ. ಬಿ. ಶರಣಪ್ಪ, ವಿತ್ತಾಧಿಕಾರಿ ಪ್ರೊ. ರಾಜನಾಳ್ಕರ್ ಲಕ್ಷ್ಮಣ ಮೌಲ್ಯಮಾಪನ ಕುಲಸಚಿವ ಪ್ರೊ. ಜ್ಯೋತಿ ಧಮ್ಮ ಪ್ರಕಾಶ, ಆಡಳಿತ ವಿಶೇಷಾಧಿಕಾರಿ ಪ್ರೊ. ಚಂದ್ರಕಾಂತ ಕೆಳಮನಿ, ಉಪ ಹಣಕಾಸು ಅಧಿಕಾರಿ ಪ್ರೊ. ಶಿವಾಜಿ ವಾಘ್ಮೋರೆ, ಪರೀಕ್ಷಾ ವಿಭಾಗದ ವಿಶೇಷಾಧಿಕಾರಿ ಪ್ರೊ. ಬಸವರಾಜ ಸಣ್ಣಕ್ಕಿ, ಕಲಾ ನಿಕಾಯದ ಡೀನ್ ಪ್ರೊ. ರಮೇಶ್ ರಾಥೋಡ್, ವಾಣಿಜ್ಯ ಮತ್ತು ನಿರ್ವಹಣಾ ನಿಕಾಯದ ಡೀನ್ ಪ್ರೊ. ಬಿ. ವಿಜಯ್, ಕಾನೂನು ನಿಕಾಯದ ಡೀನ್ ಪ್ರೊ. ದೇವಿದಾಸ ಮಾಲೆ, ಪ್ರೊ. ಹೆಚ್. ಟಿ. ಪೋತೆ, ಪ್ರೊ. ಅಬ್ದುಲ್ ರಬ್ ಉಸ್ತಾದ, ಪ ಪ್ರೊ. ಪಾಸೋಡಿ, ಡಾ. ಹನುಮಂತ ಜಂಗೆ ಹಾಗೂ ಸ್ನಾತಕೋತ್ತರ ವಿಭಾಗಗಳ ಮುಖ್ಯಸ್ಥರು, ಪ್ರಾಧ್ಯಾಪಕರು, ಶಿಕ್ಷಕೇತರ ಸಿಬ್ಬಂದಿ, ಆಡಳಿತ ವರ್ಗ, ಅತಿಥಿ ಉಪನ್ಯಾಸಕರು, ಸ್ನಾತಕೋತ್ತರ ಹಾಗೂ ಸಂಶೋಧನಾ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ವಿಶ್ವವಿದ್ಯಾಲಯ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಮಕ್ಕಳು ದೇಶಭಕ್ತಿಗೀತೆಗಳಿಗೆ ಸಮೂಹ ನೃತ್ಯ ಪ್ರದರ್ಶಿಸಿದರು. ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ. ಎನ್. ಜಿ . ಕಣ್ಣೂರು ವಂದಿಸಿದರು. ವಿದ್ಯಾರ್ಥಿ ಕಲ್ಯಾಣಾಧಿಕಾರಿ ಪ್ರೊ. ಕೆ. ಲಿಂಗಪ್ಪ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

ಕಲ್ಯಾಣ ಕರ್ನಾಟಕ ವಿಮೋಚನೆ ನಂತರ ಹೈದ್ರಾಬಾದ ಕರ್ನಾಟಕ ಭಾಗ ತೀರ ಹಿಂದುಳಿದಿತ್ತು. ಪ್ರೊ. ಡಿ. ಎಂ. ನಂಜುಂಡಪ್ಪ ವರದಿ ಅನ್ವಯ ವಿವಿಧ ಯೋಜನೆ ಸವಲತ್ತುಗಳ ಅನುಷ್ಠಾನದ ಮೂಲಕ ಈ ಭಾಗದ ಅಭಿವೃದ್ದಿಗೆ ವಿಶೇಷ ಕಾಳಜಿ ನೀಡಲಾಯಿತು. ಸಂವಿಧಾನದ 371ಜೆ ತಿದ್ದುಪಡಿ ಮೂಲಕ ವಿಶೇಷ ಸ್ಥಾನಮಾನ ಕಲ್ಪಿಸಲಾಯಿತು. ಆರ್ಥಿಕ, ಶೈಕ್ಷಣಿಕ, ಸಾಂಸ್ಕೃತಿಕ ಕ್ಷೇತ್ರಗಳ ಅಭಿವೃದ್ಧಿ ಕಾರ್ಯಗಳಿಗಾಗಿ ಕೆಕೆಆರ್‌ಡಿಬಿ ಸ್ಥಾಪನೆಯಾಗಿ ಅಭಿವೃದ್ಧಿ ಚಟುವಟಿಕೆಗಳಿಗೆ ಆರ್ಥಿಕ ನೆರವು ಲಭಿಸಿತು. ಆದರೂ ಕಲ್ಯಾಣ ಕರ್ನಾಟಕದ ಸರ್ವತೋಮುಖ ಅಭಿವೃದ್ಧಿ ಇನ್ನು ಸಾಕಷ್ಟು ಕೆಲಸ ಆಗಬೇಕಿದೆ.
ಈ ಭಾಗದ ವಿವಿಧ ಕ್ಷೇತ್ರಗಳಲ್ಲಿನ ಮಾನವ ಸಂಪನ್ಮೂಲ ಅಭಿವೃದಿಗ್ದೆ ಒತ್ತು ನೀಡಬೇಕಿದೆ. ಉದ್ಯೋಗ ಮತ್ತು ಕೌಶಲ್ಯ ತರಬೇತಿಗೆ ವಿಶೇಷ ಅವಕಾಶ ನೀಡಬೇಕಿದೆ. ಶಿಕ್ಷಣ ಮತ್ತು ಅರ್ಹತೆ ಆಧಾರದ ಮೇಲೆ ಉದ್ಯೋಗದಲ್ಲಿ ವಿಶೇಷ ಅವಕಾಶಗಳನ್ನು ಒದಗಿಸಬೇಕಿದೆ. ಐಟಿ-ಬಿಟಿ ಮತ್ತು ಕೈಗಾರಿಕೆ ಸ್ಥಾಪನೆ ಮೂಲಕ ಹೊಸ ಉದ್ಯೋಗ ಸೃಷ್ಠಸಿ ಯುವಕರಿಗೆ ಆಧ್ಯತೆ ನೀಡಬೇಕಿದೆ. ಕೃಷಿ, ನೀರಾವರಿ ಮತ್ತು ಪರಿಸರ ಸಂರಕ್ಷಣೆಗೆ ಹೊಸ ಯೋಜನೆಗಳನ್ನು ಕಾರ್ಯರೂಪಕ್ಕೆ ತಂದಾಗ ಮಾತ್ರ ಕಲ್ಯಾಣದ ಸಮಗ್ರ ಅಭಿವೃದ್ಧಿ ಸಾಧ್ಯವಾಗುತ್ತದೆ. -ಪ್ರೊ. ಚಂದ್ರಕಾಂತ ಯಾತನೂರ್, ಪ್ರಾಧ್ಯಾಪಕರು, ರಾಜ್ಯಶಾಸ್ತ್ರ ವಿಭಾಗ, ಗುಲಬರ್ಗಾ ವಿಶ್ವವಿದ್ಯಾಲಯ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here