ಶಹಾಬಾದ: ಎರಡನೇ ಸ್ವಾತಂತ್ರ್ಯ ಹೋರಾಟವೆಂದೇ ಬಣ್ಣಿಸಲಾಗುವ ಹೈದ್ರಾಬಾದ ಕರ್ನಾಟಕ ವಿಮೋಚನಾ ಹೋರಾಟದಲ್ಲಿ ಪಾಲ್ಗೊಂಡು ತ್ಯಾಗ, ಬಲಿದಾನ ಮಾಡಿದ ಅನೇಕ ಹೋರಾಟ ಮಾಡಿದ ಮಹನೀಯರ ಕೆಚ್ಚು ಮತ್ತು ಅವರ ಆದರ್ಶ ನಮ್ಮೆಲ್ಲರ ಬದುಕಿಗೆ ಸ್ಪೂರ್ತಿಯಾಗಲಿ ಎಂದು ತಹಸೀಲ್ದಾರ ಗುರುರಾಜ ಸಂಗಾವಿ ಹೇಳಿದರು.
ಅವರು ರವಿವಾರ ನಗರದ ಸರಕಾರಿ ಬಾಲಕರ ಪ್ರೌಢಶಾಲೆಯಲ್ಲಿ ತಾಲೂಕಾಡಳಿತ ವತಿಯಿಂದ ಹಮ್ಮಿಕೊಂಡಿದ್ದ ಕಲ್ಯಾಣ ಕರ್ನಾಟಕ ಉತ್ಸವ ಕಾರ್ಯಕ್ರಮದ ಧ್ವಜಾರೋಹಣ ನೇರವೇರಿಸಿ ಮಾತನಾಡಿದರು.
ಸ್ವಾತಂತ್ಯ್ರ ಹೋರಾಟಕ್ಕಿಂತ ನಿಜಾಮಶಾಹಿ ವಿರುದ್ಧದ ಹೋರಾಟದಲ್ಲಿ ಸಕ್ರೀಯವಾಗಿ ನಾಯಕರು ಪಾಲ್ಗೊಂಡು ಹೈದ್ರಬಾದ ಸಂಸ್ಥಾನ 1948 ಸೆಪ್ಟೆಂಬರ್ 17 ರಂದು ವಿಮೋಚನೆ ಪಡೆಯುವಂತಾದುದು ಚಾರಿತ್ರಿಕ ಸಂಗತಿ. ಹೈದ್ರಬಾದ ಕರ್ನಾಟಕ ವಿಮೋಚನಾ ದಿನಾಚಾರಣೆಯನ್ನು ನಾವು ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆಯಾಗಿ ಆಚರಿಸುತ್ತಿದ್ದೆವೆ ಎಂದು ಹೇಳಿದರು.
ತಾಪಂ ಇಓ ಮಲ್ಲಿನಾಥ ರಾವೂರ ಮಾತನಾಡಿ, ದೇಶದಲ್ಲಿ ಭ್ರಷ್ಟಾಚಾರ,ಅನೈತಿಕತೆಗಳು ತಾಂಡವವಾಡುತ್ತಿದ್ದು ಇದನ್ನು ತೊಲಗಿಸಿ ಮಾನವೀಯ ಗುಣಗಳನ್ನು ಬೆಳೆಸಬೇಕು.ಅನ್ಯಾಯಗಳ ವಿರುದ್ಧ ಧ್ವನಿ ಎತ್ತಿ ಸತ್ಯಕ್ಕಾಗಿ ಹೋರಾಟ ಮಾಡಬೇಕಾಗಿದೆ. ಸ್ವಾತಂತ್ರ್ಯಕ್ಕಾಗಿ ಪ್ರಾಣ ತ್ಯಾಗ ಮಾಡಿದವರನ್ನು ಸ್ಮರಿಸುವ ಮೂಲಕ ಎರಡನೇ ಸ್ವತಂತ್ರೋತ್ಸವವನ್ನು ಅರ್ಥ ಗರ್ಭಿತಗೊಳಿಸಬೇಕೆಂದು ಹೇಳಿದರು.
ನಗರಸಭೆಯ ಪೌರಾಯುಕ್ತೆ ಪಂಕಜಾ, ಮುಖ್ಯಗುರು ಏಮನಾಥ ರಾಠೋಡ, ವಿಜಯಲಕ್ಷ್ಮಿ ಪಾಟೀಲ, ಕಂದಾಯ ಇಲಾಖೆ, ತಾಪಂ, ನಗರಸಭೆಯ ಸಿಬ್ಬಂದಿಗಳು, ಶಾಲಾ ಶಿಕ್ಷಕರು ಹಾಗೂ ಶಾಲಾ ಮಕ್ಕಳು ಹಾಜರಿದ್ದರು.