ಪತ್ರಿಕೋದ್ಯಮ ವಿಭಾಗದ ಸಂಯೋಜಕರ ಪ್ರೇರಣೆ ವಿದ್ಯಾರ್ಥಿಗಳ ಸಾಧನೆ
ಕಲಬುರಗಿ: ದೇಶದಲ್ಲಿ ಕೃತಕ ಬುದ್ಧಿಮತ್ತೆಯ ನ್ಯೂಸ್ ಆಂಕರ್ ಗಳ ಸುದ್ದಿ ಸದ್ದು ಮಾಡುತ್ತಿರುವ ಬೆನ್ನಲ್ಲೇ ಗುಲ್ಬರ್ಗ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿಗಳು ಕೃತಕ ಬುದ್ಧಿಮತ್ತೆಯ ನಿರೂಪಕಿಯನ್ನು ಸೃಷ್ಟಿಸಿ ಪ್ರತಿಭೆ ಮೆರೆದಿದ್ದಾರೆ.
ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿಗಳೆಲ್ಲ ಕೂಡಿಕೊಂಡು ವಿದ್ಯಾರ್ಥಿಗಳ ಪ್ರಯೋಗಾತ್ಮಕ ಯೂಟ್ಯೂಬ್ ನ್ಯೂಸ್ ಚಾನೆಲ್ ನಲ್ಲಿ ಮೊದಲ ಬಾರಿಗೆ ಭಾವನಾ ಎಂಬ ಹೆಸರಿನ ಏ ಐ ನಿರೂಪಕಿ ಮೂಲಕ ನ್ಯೂಸ್ ಓದಿಸಲಾಗಿದೆ.ಇಲ್ಲಿನ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಯ ಪ್ರಯತ್ನಕ್ಕೆ ವಿವಿ ಕುಲಪತಿ ದಯಾನಂದ ಅಗಸರ್, ಕುಲಸಚಿವ ಡಾ ಶರಣಪ್ಪ ಶ್ಲಾಘಸಿ ಅಭಿನಂದಿಸಿದ್ದಾರೆ.
ಅಪ್ಪಟ ಭಾರತೀಯ ಮಹಿಳೆಯ ಉಡುಗೆ ತೊಟ್ಟ ಕೃತಕ ಆಂಕರ್ ಭಾವನಾಳ ಸುದ್ದಿ ಓದುವ ಕಾರ್ಯನಿರ್ವಹಣೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
ವಿಭಾಗದ ಸಂಯೋಜಕರಾದ ಡಾಕ್ಟರ್ ಸುರೇಶ್ ಜಂಗೆ ಅವರ ಪ್ರೇರಣೆ ಹಾಗೂ ಮಾರ್ಗದರ್ಶನದಲ್ಲಿ ಅತಿಥಿ ಉಪನ್ಯಾಸಕರಾದ ಡಾ ಕೆ ಎನ್ ಕುಮಾರಸ್ವಾಮಿ, ಡಾ ರಾಜಕುಮಾರ ಧಣ್ಣೂರ್, ರಿತು ತಲ್ವಾರ್, ಅಶೋಕ್ ದೊಡ್ಮನಿ, ಸಂಶೋಧನಾ ವಿದ್ಯಾರ್ಥಿ ಆನಂದ್ ಯಾತನೂರ್ ಅವರು ವಿದ್ಯಾರ್ಥಿಗಳಿಗೆ ಸಹಕಾರ ನೀಡಿದ್ದಾರೆ. ಪತ್ರಿಕೋದ್ಯಮ ವಿದ್ಯಾರ್ಥಿಗಳಾದ ಶ್ರಾವಣಯೋಗಿ ಹಿರೇಮಠ್, ಚಿತ್ರಸೇನ್, ಸಾಯಬಣ್ಣ, ರಮೇಶ,ರಾಮಕೃಷ್ಣ,ನಾಗರಾಜ್, ಕಾಶಿಬಾಯಿ, ಶ್ರೀಮಂತ, ರಂಜಿತಾ, ಕೈಲಾಸ್, ಸೇರಿದಂತೆ ಇತರ ವಿದ್ಯಾರ್ಥಿಗಳು ಸೇರಿಕೊಂಡು ವಿವಿ ಯ ಬಹುಮಾಧ್ಯಮ ಕೇಂದ್ರದ ಸಹಯೋಗದಲ್ಲಿ ಈ ಪ್ರಯೋಗವನ್ನು ಸಾಕರಗೊಳಿಸಿದ್ದಾರೆ.
ಕಲ್ಯಾಣ ಕರ್ನಾಟಕದ ಗುಲ್ಬರ್ಗ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿಗಳ ಸರ್ವಾಂಗೀಣ ಶೈಕ್ಷಣಿಕ ಅಭಿವೃದ್ಧಿ ಹಾಗೂ ಕೌಶಲ ಕಲಿಕೆಗಾಗಿ ವರ್ಷಪೂರ್ತಿ ಹಲವು ಯೋಜನೆ ಹಾಕಿಕೊಂಡಿದ್ದೇವೆ. ಮಾಧ್ಯಮ ಕೇಂದ್ರ ಭೇಟಿ,ಇತರೆ ವಿಷಯಗಳ ಮಾಧ್ಯಮ ಸಂಸ್ಥೆ, ಸ್ಟುಡಿಯೋಗಳಿಗೆ ಭೇಟಿಕೊಟ್ಟು ಅನುಭವಾತ್ಮಕ ಕಾರ್ಯಗಾರ, ವಿಶೇಷ ಉಪನ್ಯಾಸಗಳನ್ನು ಆಯೋಜಿಸುವುದು ಸೇರಿದಂತೆ, ನಮ್ಮ ವಿಶ್ವವಿದ್ಯಾಲಯದ ಅಡಿಯಲ್ಲಿ ಯು ಜಿ ಕೋರ್ಸ್ ಬಿ. ಎ ಇನ್ ಜರ್ನಲಿಸಂ ಆರಂಭಿಸುತ್ತಿದ್ದೇವೆ.– ಡಾ ಸುರೇಶ್ ಜಂಗೆ ಸಂಯೋಜಕರು, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ, ಗುಲ್ಬರ್ಗ ವಿವಿ, ಕಲಬುರಗಿ.