ಕಲಬುರಗಿ ವಿಮಾನ ನಿಲ್ದಾಣದ ಕಾರ್ಯಾಚರಣೆಗೆ ಒಪ್ಪಂದ: ಲೋಹದ ಹಕ್ಕಿ ಹಾರಲು ದಿನಗಣನೆ

0
537

ಕಲಬುರಗಿ: ಬೆಂಗಳೂರಿನ ವಿಧಾನಸೌಧದಲ್ಲಿ ಶನಿವಾರ ಬೆಳಿಗ್ಗೆ ಕಲಬುರ್ಗಿ ವಿಮಾನ ನಿಲ್ದಾಣದ ಕಾರ್ಯಾಚರಣೆ ಮತ್ತು ನಿರ್ವಹಣೆಯನ್ನು ಭಾರತೀಯ ವಿಮಾನಯಾನ ಪ್ರಾಧಿಕಾರಕ್ಕೆ ವಹಿಸಲು ರಾಜ್ಯ ಸರ್ಕಾರದ ಪರವಾಗಿ ಕರ್ನಾಟಕ ರಾಜ್ಯ ಕೈಗಾರಿಕಾ ಮೂಲಸೌಲಭ್ಯ ಅಭಿವೃದ್ಧಿ ನಿಗಮ ನಿಯಮಿತ ಹಾಗೂ ಕೇಂದ್ರ ನಾಗರಿಕ ವಿಮಾನಯಾನ ಮಂತ್ರಾಲಯದ ಪರವಾಗಿ ಭಾರತೀಯ ವಿಮಾನಯಾನ ಪ್ರಾಧಿಕಾರದ ಒಪ್ಪಂದಕ್ಕೆ ಸಹಿ ಹಾಕಲಾಗಿದೆ.

ಒಪ್ಪಂದದ ನಂತರ ಸಂಸದ ಡಾ. ಉಮೇಶ್ ಜಾಧವ್ ಅವರು ಮಾತನಾಡಿ, ಕೇಂದ್ರ ಸರ್ಕಾರದ ಭಾರತೀಯ ವಿಮಾನಯಾನ ಪ್ರಾಧಿಕಾರದಿಂದ ವಿಮಾನ ನಿಲ್ದಾಣ ಅಭಿವೃದ್ಧಿ ಕಾರ್ಯನಿರ್ವಹಣೆಯನ್ನು ಕೈಗೊಳ್ಳುವುದರಿಂದ ಕರ್ನಾಟಕ ರಾಜ್ಯದ ಹಿಂದುಳಿದ ಪ್ರದೇಶವಾದ ಹೈದ್ರಾಬಾದ್ ಕರ್ನಾಟಕ ಪ್ರದೇಶಕ್ಕೆ ದೇಶದ ಹಾಗೂ ರಾಜ್ಯದ ರಾಜಧಾನಿಯೊಂದಿಗೆ ವಿಮಾನಯಾನ ಸಂಪರ್ಕವನ್ನು ಕಲ್ಪಿಸುವುದಕ್ಕೆ ಅನುಕೂಲಕರ ಆಗುವುದಲ್ಲದೇ ಹೈದ್ರಾಬಾದ್ ಕರ್ನಾಟಕ ಪ್ರದೇಶದ ಸರ್ವಾಂಗೀಣ ಅಭಿವೃದ್ಧಿಗೆ ಸಹಾಯಕವಾಗಲಿದೆ ಎಂದರು.

Contact Your\'s Advertisement; 9902492681

ಭಾರತ ಸರ್ಕಾರದ ಭಾರತೀಯ ವಿಮಾನಯಾನ ಮಂತ್ರಾಲಯದ ಕಾರ್ಯದರ್ಶಿ ಪ್ರದೀಪ್‌ಸಿಂಗ್ ಕರೋಲಾ ಅವರು ಮಾತನಾಡಿ, ಕಲಬುರ್ಗಿ ವಿಮಾನ ನಿಲ್ದಾಣವನ್ನು ಕೇಂದ್ರ ಸರ್ಕಾರದ ಪ್ರಾದೇಶಿಕ ಸಂಪರ್ಕ ಯೋಜನೆ ೩.೦ ಅಡಿಯಲ್ಲಿ ಪ್ರಾದೇಶಿಕ ವಿಮಾನ ಯಾನ ಕಾರ್ಯಾಚರಣೆಗೆ ಆಯ್ಕೆಯಾಗಿದೆ. ಅಲಯನ್ಸ್ ಏರ್ ಮತ್ತು ಗೋದಾವತ್ ಏರ್ ಪ್ರೈವೇಟ್ ಲಿಮಿಟೆಡ್ ಆಯ್ಕೆಯಾಗಿದ್ದು, ಹಾಲಿಯಲ್ಲಿ ಕಲಬುರ್ಗಿ ವಿಮಾನ ನಿಲ್ದಾಣದಿಂದ ಕಾರ್ಯಾಚರಣೆಗಾಗಿ ಬೆಂಗಳೂರು- ಕಲಬುರ್ಗಿ, ಬೆಂಗಳೂರು- ಕಲಬುರ್ಗಿ, ಕಲಬುರ್ಗಿ- ಹಿಂಡನ್ (ಫಾಜಿಯಾಬಾದ್, ಉತ್ತರ ಪ್ರದೇಶ್, ದೆಹಲಿ ಗಡಿಭಾಗದಿಂದ ಮಾತ್ರ ಹದಿನೈದು ಕಿಲೋಮೀಟರ್ ದೂರದಲ್ಲಿರುವ ಏರ್‌ಪೋರ್ಟ್) ಕಲಬುರ್ಗಿ ಹಾಗೂ ಕಲಬುರ್ಗಿ- ತಿರುಪತಿ- ಕಲಬುರ್ಗಿ ಮಾರ್ಗವೂ ಆಯ್ಕೆಯಾಗಿದೆ ಎಂದರು.

ಈ ಸಂದರ್ಭದಲ್ಲಿ ಶಾಸಕರಾದ ದತ್ತಾತ್ರೇಯ್ ಪಾಟೀಲ್ ರೇವೂರ್, ರಾಜಕುಮಾರ್ ಪಾಟೀಲ್ ತೆಲ್ಕೂರ್, ಡಾ. ಅವಿನಾಶ್ ಜಾಧವ್, ರಾಜ್ಯ ವಿಧಾನ ಪರಿಷತ್ ಸದಸ್ಯ ಎನ್. ರವಿಕುಮಾರ್, ಮಾಜಿ ಸಚಿವ ಬಾಬುರಾವ್ ಚಿಂಚನಸೂರ್, ಮಾಜಿ ಶಾಸಕರಾದ ವಿಶ್ವನಾಥ್ ಪಾಟೀಲ್ ಹೆಬ್ಬಾಳ್, ದೊಡ್ಡಪ್ಪಗೌಡ ಪಾಟೀಲ್ ನರಿಬೋಳ್, ಅಧಿಕಾರಿಗಳಾದ ಕಪಿಲ್ ಮೋಹನ್, ಜೆಎಸ್‌ಐಐಡಿಸಿ ನಿರ್ದೇಶಕ ಗಂಗಾರಾಮ್ ಬಡೇರಿಯಾ, ಜಿಲ್ಲಾಧಿಕಾರಿ ಆರ್. ವೆಂಕಟೇಶಕುಮಾರ್, ವಿಮಾನಯಾನ ಪ್ರಾಧಿಕಾರದ ಅಧಿಕಾರಿಗಳು ಉಪಸ್ಥಿತರಿದ್ದರು.

ಈಗಾಗಲೇ ಕಲಬುರ್ಗಿ ವಿಮಾನ ನಿಲ್ದಾಣದ ಉದ್ಘಾಟನೆಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ವಿಮಾನಯಾನ ಸಚಿವರಿಗೆ ಆಮಂತ್ರಣ ನೀಡಿದ್ದಾರೆ. ಸಾಗಿ ಬಂದ ದಾರಿ: ನಗರದಿಂದ ಸುಮಾರು ೧೫ ಕಿ.ಮಿ ದೂರದ ಶ್ರೀನಿವಾಸ್ ಸರಡಗಿ ಬಳಿ (ಕಲಬುರಗಿ-ಸೇಡಂ ರಸ್ತೆ)ಯಲ್ಲಿ ೭೪೨ ಎಕರೆ ಪ್ರದೇಶದಲ್ಲಿ ನಿರ್ಮಿಸಲಾಗಿರುವ ಕಲಬುರ್ಗಿ ವಿಮಾನ ನಿಲ್ದಾಣದಲ್ಲಿ ಕಳೆದ ವರ್ಷ ೨೦೧೮ರ ಆಗಸ್ಟ್ ೨೬ರಂದು ನಡೆಸಲಾದ ಪ್ರಾಯೋಗಿಕ ವಿಮಾನ ಹಾರಾಟ ಯಶಸ್ವಿಯಾಗಿದ್ದು, ಈ ಮೂಲಕ ಸೂರ್ಯನಗರಿಯ ಜನರ ದಶಕದ ಕನಸು ನನಸಾಗಿದೆ. ಹೈದ್ರಾಬಾದಿನ ಖಾಸಗಿ ಸಂಸ್ಥೆಯಾದ ಏಶಿಯನ್ ಪೆಸಿಫಿಕ್ ಫ್ಲೈಟ್ ಟ್ರೇನಿಂಗ್ ಅಕ್ಯಾಡೆಮಿಗೆ ಸೇರಿದ ಡೈಮಂಡ್ ಡಿಎ-೪೦ ಮತ್ತು ಡೈಮಂಡ್ ಡಿಎ-೪೨ ಸ್ವರೂಪದ ೪ ಅಸನವುಳ್ಳ ಎರಡು ಲಘು ವಿಮಾನಗಳು ಕಲಬುರ್ಗಿ ವಿಮಾನ ನಿಲ್ದಾಣದಲ್ಲಿ ಭೂಸ್ಪರ್ಶ ಮಾಡಿ ಇಲ್ಲಿಂದಲೆ ಗಗನಕ್ಕೆ ಚಿಮ್ಮುವ ಮೂಲಕ ಯಶಸ್ವಿ ಹಾರಾಟ ನಡೆಸಿ ಕಲಬುರಗಿ ಸೇರಿದಂತೆ ಹೈದ್ರಾಬಾದ ಕರ್ನಾಟಕ ಭಾಗದ ಜನರ ಗಗನ ಹಾರಾಟದ ಆಸೆಗೆ ಮುನ್ನುಡಿ ಬರೆದಿದ್ದು, ಲೋಹದ ಹಕ್ಕಿಯಲ್ಲಿ ಹಾರಾಡಬೇಕೆಂಬ ಜನರ ಬಯಕೆಗೆ ರೆಕ್ಕೆ-ಪುಕ್ಕ ಬಂದಂತಾಗಿದೆ.

ಹೈದ್ರಾಬಾದಿನ ರಾಜೀವ ಗಾಂಧಿ ವಿಮಾನ ನಿಲ್ದಾಣದಿಂದ ಬಂದಿಳಿದ ಎರಡು ಲಘು ವಿಮಾನಗಳ ಪೈಕಿ ಮಹಿಳಾ ಪೈಲಟ್ ಕ್ಯಾಪ್ಟನ್ ಜಾಹ್ನವಿ ಅವರ ನೇತೃತ್ವದ ಮೊದಲ ವಿಮಾನ ಕಲಬುರಗಿ ನೆಲಕ್ಕೆ ಚೊಚ್ಚಲ ಭೂಸ್ಪರ್ಶ ಮಾಡಿತು. ಕ್ಯಾಪ್ಟನ್ ಜಾಹ್ನವಿ ಅವರಿದ್ದ ವಿಮಾನ ಲ್ಯಾಂಡಿಂಗ್ ಮುನ್ನ ನಿಲ್ದಾಣದ ಆವರಣದ ಮೇಲೆ ೫೦೦ರಡಿ ಕೆಳಗೆ ಲೋ ಪಾಸ್ ಹಾರಿಸಿದಾಗ ನೆರೆದ ಸಾರ್ವಜನಿಕರ ಖುಷಿಗೆ ಪಾರವೆ ಇರಲಿಲ್ಲ. ನಂತರ ಬಂದಿಳಿದ ಕ್ಯಾಪ್ಟನ್ ಅರುಣ್ ಮತ್ತು ಕ್ಯಾಪ್ಟನ್ ಅಭಿಜಿತ್ ಅವರಿದ್ದ ಎರಡನೇ ವಿಮಾನ ಲ್ಯಾಂಡಿಂಗ್ ನಂತರ ಗಣ್ಯರ ಮತ್ತು ಸಾರ್ವಜನಿಕರ ಗ್ಯಾಲರಿ ಕಡೆ ವಿಮಾನ ಒಮ್ಮೆ ತಿರುಗಿಸಿ ನೆರೆದವರಿಗೆ ಪೈಲಟ್‌ಗಳು ಕೈ ಬೀಸಿ ಶುಭಾಶಯ ಕೋರಿ ರನ್ವೇ ಬಗ್ಗೆ ತೃಪ್ತಿ ವ್ಯಕ್ತಪಡಿಸಿದರು. ವಿಮಾನ ನಿಲ್ದಾಣಕ್ಕೆ ಬಂದಿಳಿದ ಎರಡು ಲಘು ವಿಮಾನಗಳಿಗೆ ಇಲ್ಲಿನ ಜನರು ಮತ್ತು ಜನಪ್ರತಿನಿಧಿಗಳು ಹರ್ಷೋದ್ಘಾರದಿಂದ ಸ್ವಾಗತಿಸಿದರು.

ಬೆಂಗಳೂರು, ಮುಂಬೈ ಮತ್ತು ಹೈದ್ರಾಬಾದ್ ಮೆಟ್ರೋ ನಗರಗಳನ್ನು ಸುತ್ತ ಆವರಿಸಿಕೊಂಡಿರುವ ಕಲಬುರ್ಗಿ ವಿಮಾನ ನಿಲ್ದಾಣದ ಭವಿಷ್ಯದ ಮುಂದಾಲೋಚನೆ ಇಟ್ಟುಕೊಂಡು ಜೆಟ್ ಸೇರಿದಂತೆ ಏರ್ ಬಸ್‌ನಂತಹ ಬೃಹತ್ ವಿಮಾನಗಳು ಸಹ ಇಲ್ಲಿ ಬಂದಿಳಿಯಲು ಅನುವಾಗುವಂತೆ ೩.೭೫ ಕಿ.ಮಿ. ಉದ್ದದ ರನ್ವೇಯನ್ನು ಸಿದ್ದಪಡಿಸಲಾಗಿದ್ದು, ಇದು ದೇಶದ ೧೦ನೇ ಹಾಗೂ ರಾಜ್ಯದ ೨ನೇ ಅತಿ ಉದ್ದದ ರನ್ವೇ ಇದಾಗಿದೆ. ರಾಜ್ಯದಲ್ಲಿರುವ ಇತರೆ ಪ್ರಾದೇಶಿಕ ವಿಮಾನ ನಿಲ್ದಾಣಗಳು ಕ್ರಮೇಣವಾಗಿ ಅಭಿವೃದ್ಧಿಗೊಂಡರೆ ಕಲಬುರ್ಗಿ ವಿಮಾನ ನಿಲ್ದಾಣ ಮಾತ್ರ ಆರಂಭದಲ್ಲಿಯೆ ಸಕಲ ವ್ಯವಸ್ಥೆಯೊಂದಿಗೆ ಪೂರ್ಣ ಪ್ರಮಾಣದಲ್ಲಿ ವಾಣಿಜ್ಯ ಸಂಚಾರಕ್ಕೆ ಸಜ್ಜುಗೊಂಡಿರುವುದು ವಿಶೇಷ. ಇಲ್ಲಿಂದ ವಾಣಿಜ್ಯ ಕಾರ್ಯಾಚರಣೆ (ಸಾರ್ವಜನಿಕರ ಪ್ರಯಾಣ) ಆರಂಭಗೊಂಡಲ್ಲಿ ವಿಮಾನಯಾನ ಸಾರಿಗೆ ಕ್ಷೇತ್ರದಲ್ಲಿ ಮತ್ತು ಈ ಭಾಗದ ಅಭಿವೃದ್ಧಿಗೆ ಮತ್ತೊಂದು ಮೈಲಿಗಲ್ಲಾಗಲಿದೆ.

ಪ್ರಾಯೋಗಿಕ ವಿಮಾನ ಹಾರಾಟ ಯಶಸ್ವಿಯಾದ ನಂತರ ಕಲಬುರ್ಗಿ ವಿಮಾನ ನಿಲ್ದಾಣಕ್ಕೆ ರಾಜ್ಯದ ಹಿಂದಿನ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರಿದ್ದ ವಿಮಾನವೇ ಮೊದಲನೇಯದಾಗಿ ಭೂಸ್ಪರ್ಶಮಾಡಿತು. ಹೈದ್ರಾಬಾದ್ ಕರ್ನಾಟಕ ವಿಮೋಚನೆ ದಿನಾಚರಣೆ ಸಮಾರಂಭದಲ್ಲಿ ಪಾಲ್ಗೊಳ್ಳಲು ವಿಮಾನದ ಮೂಲಕ ಬಂದಿಳಿದರು.

ವಿಭಾಗೀಯ ಕೇಂದ್ರ ಕಲಬುರ್ಗಿಯಲ್ಲಿ ವಿಮಾನ ನಿಲ್ದಾಣ ಸ್ಥಾಪಿಸಬೇಕು ಎಂದು ೧೯೮೦ರಿಂದಲೇ ಕೂಗಿತ್ತು. ೨೦೦೭ರಲ್ಲಿ ಅದಕ್ಕೆ ರಾಜ್ಯ ಸರ್ಕಾರ ಅನುಮೋದನೆ ನೀಡಿ ಮೂರು ಹಂತದಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸಲು ಯೋಜಿಸಲಾಗಿ ಆರಂಭಿಕ ಹಂತದಲ್ಲಿ ೧೨೦ ಕೋಟಿ ರೂ. ವೆಚ್ಚದಲ್ಲಿ ವಿಮಾನ ನಿಲ್ದಾಣ ಅಭಿವೃದ್ಧಿಪಡಿಸಲು ನಿರ್ಧರಿಸಿ ೨೦೦೮ರ ಜೂನ್ ೧೪ರಂದು ಅಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಅಡಿಗಲ್ಲು ಹಾಕಿದರು. ಆರಂಭದಲ್ಲಿ ಪಿಪಿಪಿ ಯೋಜನೆಯಡಿ ಹೈದ್ರಾಬಾದ್ ಮೂಲದ ಸತ್ಯಂ ಕಂಪೆನಿಯ ಅಂಗ ಸಂಸ್ಥೆಯಾದ “ಮೇಟಾಸ್ ಇನ್ಫ್ರಾ ಲಿ.” ಸಂಸ್ಥೆಗೆ ವಿಮಾನ ನಿಲ್ದಾಣದ ಕಾಮಗಾರಿಯನ್ನು ಗುತ್ತಿಗೆ ನೀಡಲಾಗಿತ್ತು. ಸತ್ಯಂ ಹಗರಣ ಬಯಲಿಗೆ ಬಂದ ನಂತರ ಸದರಿ ಒಪ್ಪಂದ ರದ್ದುಪಡಿಸಿ ೨೦೧೦ರಲ್ಲಿ “ರಾಹಿ” ಸಂಸ್ಥೆಗೆ ಜವಾಬ್ದಾರಿ ನೀಡಲಾಗಿತ್ತು. ರಾಹಿ ಸಂಸ್ಥೆಯ ನಿಧಾನಗತಿ ಕಾಮಗಾರಿ ಮತ್ತು ಶೇರುದಾರರ ನಡುವಿನ ಭಿನ್ನಮತದಿಂದ ರಾಜ್ಯ ಸರ್ಕಾರ ಸದರಿ ಸಂಸ್ಥೆಯಿಂದ ಯೋಜನೆಯನ್ನು ಹಿಂಪಡೆದು ನಾಗರಿಕ ವಿಮಾನಯಾನ ಪ್ರಾಧಿಕಾರದಿಂದ ತಾಂತ್ರಿಕವಾಗಿ ಅನುಮೋದನೆ ಪಡೆದು ಉಳಿದ ಕಾಮಗಾರಿಯನ್ನು ಪೂರ್ಣಗೊಳಿಸಲು ೨೦೧೫ರಲ್ಲಿ ಲೋಕೋಪಯೋಗಿ ಇಲಾಖೆಗೆ ವಹಿಸಿತು. ಲೋಕೋಪಯೋಗಿ ಇಲಾಖೆಯು ಪ್ರಸ್ತುತ ೧೭೫.೫೭ ಕೋಟಿ ರೂ.ಗಳ ಪರಿಷ್ಕೃತ ಅಂದಾಜು ಮೊತ್ತದಲ್ಲಿ ವಿಮಾನ ನಿಲ್ದಾಣದ ಬಹುತೇಕ ಎಲ್ಲ ಕಾಮಗಾರಿಗಳನ್ನು ಪೂರ್ಣಗೊಳಿಸಿದ್ದು, ಇನ್ನುಳಿದ ಕಾಮಗಾರಿಗಳು ೨೦೧೮ರ ವರ್ಷಾಂತ್ಯಕ್ಕೆ ಮುಗಿಸಲಾಗಿತ್ತು.

೧೭೫.೫೭ ಕೋಟಿ ರೂ.ಗಳ ವೆಚ್ಚದ ಯೋಜನೆ: ರಾಜ್ಯದ ವಿವಿದೆಡೆ ವಿಮಾನ ನಿಲ್ದಾಣಗಳ ಕಾಮಗಾರಿಗಳನ್ನು ಪಿಪಿಪಿ ಯೋಜನೆಯಡಿ ಅಭಿವೃದ್ಧಿಪಡಿಸಲಾಗಿದೆ. ಆದರೆ ಕಲಬುರ್ಗಿ ವಿಮಾನ ನಿಲ್ದಾಣ ಕಾಮಗಾರಿ ಮಾತ್ರ ಕರ್ನಾಟಕ ಸರ್ಕಾರದ ವಿಶೇಷ ಮುತುವರ್ಜಿಯಿಂದ ಸಂಪೂರ್ಣವಾಗಿ ೧೭೫.೫೭ ಕೋಟಿ ರೂ.ಗಳ ಹಣವನ್ನು ರಾಜ್ಯ ಸರ್ಕಾರವೆ ವೆಚ್ಚ ಮಾಡಿ ಅಭಿವೃದ್ಧಿಪಡಿಸಿದೆ. ಈ ಪೈಕಿ ಹೈದ್ರಾಬಾದ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ೫೮.೫೨ ಕೋಟಿ ರೂ. ಅನುದಾನ ನೀಡುವುದರ ಮೂಲಕ ಹಿಂದುಳಿದ ಪ್ರದೇಶದ ಅಭಿವೃದ್ಧಿಗೆ ಟೊಂಕ ಕಟ್ಟಿ ನಿಂತಿದೆ.

ವಿಮಾನ ನಿಲ್ದಾಣದ ನೋಟ:- ೭೪೨ ಎಕರೆ ಪ್ರದೇಶದ ವಿಮಾನ ನಿಲ್ದಾಣದ ಒಟ್ಟಾರೆ ಕಾಮಗಾರಿಯನ್ನು ೩ ಪ್ಯಾಕೇಜ್ ಅಡಿ ಕೈಗೆತ್ತಿಕೊಳ್ಳಲು ಉದ್ದೇಶಿಸಿ ಮೊದಲನೇ ಹಂತದಲ್ಲಿ ಪ್ರಮುಖವಾಗಿ ೬೦ ಮೀಟರ್ ಅಗಲ ಮತ್ತು ೩೭೨೫ ಮೀಟರ್ ಉದ್ದದ ರನ್ವೇ, ೯.೯೭೫ ಕಿ.ಮಿ. ಬಾಹ್ಯ ರಸ್ತೆ, ಬೇರ್ಪಡಿಸುವ ರಸ್ತೆ, ೨.೫೦ ಕಿ.ಮಿ ಸಂಪರ್ಕ ರಸ್ತೆ, ೧೬೮.೮೦ಮಿ. ಘಿ ೧೧೮.೮೦ಮಿ. ಏಪ್ರನ್, ಚರಂಡಿ, ಕಂಪೌಂಡ್ ವಾಲ್ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಎರಡನೇ ಹಂತದಲ್ಲಿ ಪ್ರಯಾಣಿಕರ ಟರ್ಮಿನಲ್ ಕಟ್ಟಡ, ಏರ್ ಟ್ರಾಫಿಕ್ ಕಂಟ್ರೋಲ್, ಕ್ರ್ಯಾಶ್ ಫೈರ್ ಮತ್ತು ರೆಸ್ಕ್ಯೂ ಬಿಲ್ಡಿಂಗ್, ವಿದ್ಯುತ್ ಉಪನಿಲ್ದಾಣ, ಓವರ್ ಹೆಡ್ ಟ್ಯಾಂಕ್, ಬಾಹ್ಯ ಬೆಳಕಿನ ವ್ಯವಸ್ಥೆ, ಸಿ.ಸಿ.ಟಿ.ವಿ., ಸುರಕ್ಷತಾ ಕ್ರಮ, ಪಬ್ಲಿಕ್ ಅಡ್ರೆಸ್ ಸಿಸ್ಟಂ ಹಾಗೂ ಇನ್ನೀತರ ಉಪಕರಣ ಖರೀದಿ ಕಾಮಗಾರಿಯನ್ನು ತೆಗೆದುಕೊಂಡಿದರೆ ಮೂರನೇ ಪ್ಯಾಕೇಕ್‌ನಡಿ ಏರ್ ಫೀಲ್ಡ್ ಲೈಟಿಂಗ್ ಸಿಸ್ಟಂ, ಆಟೋಮೆಟಿಕ್ ವೆದರ್ ಸೆಷನ್, ವಿ.ಆರ್.ವಿ./ವಿ.ಆರ್.ಎಫ್.(ಏರ್ ಕಂಡಿಷನಿಂಗ್), ಬ್ಯಾಗೇಜ್ ಹ್ಯಾಂಡ್ಲಿಂಗ್ ಸಿಸ್ಟಂ, ವೈಫೈ, ಆಂತರಿಕ ಸೌಂದರ್ಯಿಕರಣ, ವಿಮಾನ ಇಳಿಯುವ/ ಹೊರಡುವ ಮಾಹಿತಿ ಫಲಕ ಅನುಷ್ಟಾನ ಮಾಡುವ ಕೆಲಸಗಳನ್ನು ಸೇರ್ಪಡೆಗೊಳಿಸಿದೆ.

ಕೈಗಾರಿಕೆ, ಪ್ರವಾಸೋದ್ಯಮಕ್ಕೆ ಬೂಸ್ಟ್:- ರಸ್ತೆ ಸಾರಿಗೆ ಮತ್ತು ವಿಮಾನಯಾನ ಸಾರಿಗೆ ಸಂಪರ್ಕ ನೆಪವೊಡ್ಡಿ ರಾಜಧಾನಿ ಬೆಂಗಳೂರಿನಿಂದ  ಈಶಾನ್ಯ ಭಾಗದಲ್ಲಿ ಬಂಡವಾಳ ಹಾಕಲು ಕೈಗಾರಿಕೋದ್ಯಮಿಗಳು ಹಿಂದೇಟು ಹಾಕುತಿದ್ದರು. ಆದರೀಗ ಕಲಬುರಗಿ ನಗರದ ಹೊರವಲಯದಿಂದ ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳ ಹಾಯ್ದುಹೋಗಿವೆ. ಇದೀಗ ವಿಮಾನ ನಿಲ್ದಾಣ ಸ್ಥಾಪನೆಯಿಂದ ಕಲಬುರ್ಗಿ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲ್ಲಿ ಕೈಗಾರಿಕೆ ಸ್ಥಾಪನೆ ಮಾಡಲು ಹೂಡಿಕೆದಾರರಿಗೆ ವಿಫುಲ ಅವಕಾಶ ದೊರೆತಂತಾಗಿದೆ. ಇದಲ್ಲದೆ ಸೂಫಿ-ಸಂತರ ನಾಡಿನ ಪ್ರವಾಸೋದ್ಯಮಕ್ಕೂ ಗಗನ ಸಂಪರ್ಕವು ಬೂಸ್ಟ್ ನೀಡಲಿದೆ.

ಉಡಾನ್ ಯೋಜನೆಯಡಿ ಸೇರ್ಪಡೆಯಾಗಲಿ:- ೩೭೧ಜೆ ವಿಶೇಷ ಸ್ಥಾನಮಾನ ಹೊಂದಿರುವ ಹೈದ್ರಾಬಾದ ಕರ್ನಾಟಕದ ಕಲಬುರ್ಗಿ ವಿಮಾನ ನಿಲ್ದಾಣದಿಂದ ವಾಣಿಜ್ಯ ಕಾರ್ಯಾಚರಣೆಗೆ ರಾಜ್ಯ ಸರ್ಕಾರದಿಂದ ನಾಗರೀಕ ವಿಮಾನಯಾನ ಸಚಿವಾಲಯಕ್ಕೆ ಪತ್ರ ಬರೆಯಲಾಗಿದೆ. ಉಡಾನ್ ಯೋಜನೆಯಡಿ ಕಲಬುರ್ಗಿ ವಿಮಾನ ನಿಲ್ದಾಣ ತೆಗೆದುಕೊಂಡು ಇಲ್ಲಿನ ಜನರ ಗಗನ ಹಾರಾಟಕ್ಕೆ ಕೇಂದ್ರ ಸರ್ಕಾರ ಅವಕಾಶ ಮಾಡಿಕೊಡಬೇಕು ಎನ್ನುತ್ತಾರೆ ಸಮಾಜ ಕಲ್ಯಾಣ ಸಚಿವ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ.

ಫ್ಲೈಟ್ ಟ್ರೇನಿಂಗ್ ಸ್ಕೂಲ್ ಸ್ಥಾಪನೆ:- ೭೪೨ ಎಕರೆ ಬೃಹತ್ ಪ್ರದೇಶ ಹೊಂದಿರುವ ಕಲಬುರಗಿ ವಿಮಾನ ನಿಲ್ದಾಣವನ್ನು ಸಂಪೂರ್ಣವಾಗಿ ಸದ್ಬಳಕೆ ಮಾಡಿಕೊಳ್ಳುವ ಉದ್ದೇಶದಿಂದ ವಿಮಾನಯಾನ ಸೇವೆಗೆ ಸಂಬಂಧಿಸಿದ ಕಾರ್ಯಚಟುವಟಿಕೆಗಳು ನಿರಂತರ ಸಾಗಲು ಹಾಗೂ ನಿಲ್ದಾಣದ ನಿರ್ವಹಣೆಗೆ ನೆರವಾಗುವ ಏಶಿಯಾ ಪೆಸಿಫಿಕ್ ಫ್ಲೈಟ್ ಟ್ರೇನಿಂಗ್ ಸ್ಕೂಲ್ ಮತ್ತು ಇವಿಕಾನ್ ಟ್ರೇನಿಂಗ್ ಇನ್ಸ್‌ಟಿಟ್ಯೂಟ್‌ನಿಂದ ಫ್ಲೈಯಿಂಗ್ ಸ್ಕೂಲ್ ಆರಂಭಿಸಲು ಪ್ರಸ್ತಾವನೆಗಳು ಸರ್ಕಾರಕ್ಕೆ ಬಂದಿವೆ. ಡಿಜಿಸಿಎ ಅನುಮತಿ ನೀಡಿದಲ್ಲಿ ತರಬೇತಿ ಶಾಲೆ ಪ್ರಾರಂಭಿಸಲು ಸರ್ಕಾರ ಉತ್ಸುಕವಾಗಿದೆ. ಇದಲ್ಲದೆ ಫ್ಲೈಟ್ ಅಟೆಂಡರ್‌ಗಳಿಗೆ ತರಬೇತಿ ನೀಡಲು ಮತ್ತು ಕೌಶಲ್ಯ ತರಬೇತಿಗಾಗಿ ಏವಿಯೆಷನ್ ಸ್ಕಿಲ್ ಟ್ರೇನಿಂಗ್ ಸಂಸ್ಥೆಯಿಂದ ಶಾಲೆ ಪ್ರಾರಂಭಿಸುವ ಬಗ್ಗೆಯೂ ಚಿಂತನೆ ನಡೆದಿದೆ.

ಖಾಸಗಿ ವಿಮಾನ ಸಂಸ್ಥೆಗಳೊಂದಿಗೆ ಒಪ್ಪಂದ: ವಾಣಿಜ್ಯ ಕಾಯಾಚರಣೆಗೆ ನಾಗರಿಕ ವಿಮಾನಯಾನ ಪ್ರಾಧಿಕಾರದ ಫ್ಲೈಯಿಂಗ್ ಲೈಸೆನ್ಸ್ ಪಡೆಯವುದು ಸರ್ಕಾರದ ಪ್ರಥಮಾದ್ಯತೆ. ಡಿಜಿಸಿಎ ಅನುಮತಿ ನೀಡಿದ ತಕ್ಷಣವೆ ಖಾಸಗಿ ಸಂಸ್ಥೆಗಳಾದ ಇಂಡಿಗೋ, ಸ್ಪೈಸ್, ಜೆಟ್ ಹಾಗೂ ಇನ್ನೀತರ ಸಂಸ್ಥೆಯ ವಿಮಾನಗಳು ಇಲ್ಲಿಂದ ವಿಮಾನ ಹಾರಾಟ ಪ್ರಾರಂಭಿಸಲು ಅವರೊಂದಿಗೆ ಒಪ್ಪಂದ ಮಾಡಿಕೊಳ್ಳುವ ಉದ್ದೇಶ ಹೊಂದಲಾಗಿದೆ. ಈಗ ಹೈದ್ರಾಬಾದ್ ಕರ್ನಾಟಕ ವಿಮೋಚನೆಯ ದಿನವಾದ ಸೆಪ್ಟೆಂಬರ್ ೧೭ರಂದು ವಿಮಾನಯಾನ ಆರಂಭವಾಗಲಿದೆ ಎಂಬ ವಾತಾವರಣ ಮೂಡಿದ್ದು ಇಡೀ ಹೈದ್ರಾಬಾದ್ ಕರ್ನಾಟಕದ ಜನರು ಸಂಭ್ರಮಿಸುವಂತಾಗಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here