ವಾಡಿ: ಮನುಷ್ಯ ರೂಪ ಹೊತ್ತ ಕಲಿಯುಗದ ಮಾನವನ ಆತ್ಮ ಅಶಾಂತಿಯಿಂದ ಕೂಡಿದ್ದು, ಮನುಷ್ಯರನ್ನೇ ಕೊಂದು ರಕ್ತ ಹೀರುವಷ್ಟು ಕ್ರೂರಿಯಾಗಿದ್ದಾನೆ. ಮನಶಾಂತಿ ಮರುಸ್ಥಾಪಿಸಿಲು ರಾಜಯೋಗ ಮೆಚ್ಚಿಕೊಳ್ಳಬೇಕು ಎಂದು ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಚಿತ್ತಾಪುರ ರಾಜಯೋಗ ಸೇವಾ ಕೇಂದ್ರದ ಸಂಚಾಲಕಿ ಬಿ.ಕೆ.ಗಿರಿಜಾ ಹೇಳಿದರು.
ಶುಕ್ರವಾರ ಪಟ್ಟಣದ ಓಂ ಶಾಂತಿ ಸೇವಾ ಕೇಂದ್ರದಲ್ಲಿ ಏರ್ಪಡಿಸಲಾಗಿದ್ದ ಸಾಮೂಹಿಕ ರಕ್ಷಾಬಂಧನ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡಿದರು. ಬ್ರಹ್ಮಕುಮಾರಿಯರ ರಾಜಯೋಗ ಧ್ಯಾನ ಎಂದರೆ ಮನೆ ಮಠ, ಹೆಂಡರು, ಮಕ್ಕಳನ್ನು ತ್ಯಾಗಮಾಡಿಯೇ ಪಾಲಿಸಬೇಕು. ಅಥವ ಎಲ್ಲವೂ ಮುಗಿದ ಮೇಲೆ ಬದುಕಿನ ಕೊನೆಯ ದಿನಗಳಲ್ಲಿ ಪಾಲಿಸಬೇಕು ಎಂಬ ತಪ್ಪು ಕಲ್ಪನೆ ಜನರಲ್ಲಿದೆ. ಗೃಹಸ್ಥರಾಗಿದ್ದೂ ರಾಜಯೋಗ ಜ್ಞಾನ ಸಿದ್ಧಿಸಿಕೊಳ್ಳಬಹುದು ಎಂದರು.
ಕ್ರೌರ್ಯ ಮೈಗೂಡಿಸಿಕೊಂಡ ಮನುಷ್ಯ ಸಹನೆ ಮತ್ತು ತಾಳ್ಮೆ ಕಳೆದುಕೊಳ್ಳುವ ಮೂಲಕ ಮನಸ್ಸಿನ ಶಾಂತಿಯೂ ಕಳೆದುಕೊಂಡು ಸಂಕಟ ಅನುಭವಿಸುತ್ತಿದ್ದಾನೆ. ದುಶ್ಚಟ, ನಾಲಿಗೆ ರುಚಿ, ಸಂಬಂದಗಳಿಗೆ ಗುಲಾಮನಾಗಿ ಶಾಸ್ವತವಲ್ಲದ ಹುದ್ದೆ, ಸೌಂದರ್ಯ ಶ್ರೀಮಂತಿಕೆಗೆ ಮಾರುಹೋಗಿ ಹತಾಶನಾಗುತ್ತಿದ್ದಾನೆ. ಜೀವನದಲ್ಲಿ ಎಲ್ಲವೂ ಕಳೆದುಕೊಂಡ ಮೇಲೆ ನಾನು ನಾನಲ್ಲ ಕೇವಲ ಆತ್ಮ ಎಂಬುದು ಅರಿವಾಗುತ್ತದೆ. ಆತ್ಮ ಪರಮಾತ್ಮನಲ್ಲಿ ಲೀನವಾಗುವುದರಿಂದ ಶಾಂತಿಗಾಗಿ ಧ್ಯಾನ ಸಂಸ್ಕೃತಿ ರೂಢಿಸಿಕೊಳ್ಳಬೇಕು. ದಿನದಲ್ಲಿ ಕೇವಲ ಒಂದು ತಾಸು ಸಮಯವನ್ನು ರಾಜಯೋಗಕ್ಕೆ ನೀಡಬೇಕು ಎಂದರು.
ಓಂ ಶಾಂತಿ ಸೇವಾ ಕೇಂದ್ರದ ನಗರ ಸಂಚಾಲಕಿ ಬಿ.ಕೆ.ಶಾರದಾ ಮಾತನಾಡಿ, ಸಹೋದರತ್ವ ಮೆರೆಯುವ ರಕ್ಷಾಬಂಧನ ಆಚರಣೆ ಕೇವಲ ಒಂದು ದಿನಕ್ಕೆ ಸೀಮಿತವಲ್ಲ. ಎಲ್ಲಾ ಗಳಿಗೆಯಲ್ಲಿಯೂ ತಂಗಿಯ ಕಷ್ಟಗಳಿಗೆ ಒಡಹುಟ್ಟಿದ ಅಣ್ಣನೇ ಬಂದು ಸ್ಪಂಧಿಸಲಾರನು. ಯಾವೂದೇ ಹೆಣ್ಣಿಗೆ ಆಪತ್ತು ಸಂಕಷ್ಟಗಳು ಎದುರಾದಾಗ ಸ್ಥಳದಲ್ಲಿರುವ ಪುರುಷನು ಸಹಾಯಕ್ಕೆ ಮುಂದಾಗುವ ಮೂಲಕ ಸಹೋದರನ ಸ್ಥಾನ ತುಂಬಬೇಕು. ಅದುವೇ ನಿಜವಾದ ಅಣ್ಣ ತಂಗಿಯ ಬಂಧನ ಎಂದು ಹೇಳಿದರು.
ಬಿ.ಕೆ.ನಿವೇದಿತಾ ದಹಿಹಂಡೆ, ಅರುಣಾ ಪಾಟೀಲ, ಪುರಸಭೆ ಸದಸ್ಯ ಭೀಮಶಾ ಜಿರೊಳ್ಳಿ, ಪತಂಜಲಿ ಯೋಗ ಶಿಕ್ಷಕ ವೀರಣ್ಣ ಯಾರಿ, ಹಿರಿಯರಾದ ವಿ.ಕೆ.ಕೆದಿಲಾಯ, ಶಾಂತವೀರಪ್ಪ ಸಾಹು ಇಂಗಳಗಿ, ವಿಠ್ಠಲ ಜ್ಯೋಶಿ, ಅಶೋಕ ಹರನಾಳ, ಚಂದ್ರಶೇಖರ ಹಾವೇರಿ, ಚೆನ್ನಬಸಪ್ಪಗೌಡ ಪಾಟೀಲ, ಸುನೀಲ ವರ್ಮಾ, ಬಸುಗೌಡ ಯರಗಲ ಸೇರಿದಂತೆ ನೂರಾರು ಜನ ಪಾಲ್ಗೊಂಡಿದ್ದರು.