ಶಹಾಬಾದ: ಒಬ್ಬ ಸಾಹಿತಿ ನಿರಂತರ ಅಧ್ಯಯನದಲ್ಲಿ ತೊಡಗಿದರೆ ಮಾತ್ರ ಗಟ್ಟಿ ಸಾಹಿತ್ಯ ರಚಿಸಲು ಸಾಧ್ಯ ಎಂದು ದಸಂಸ ರಾಜ್ಯ ಸಂಘಟನಾ ಸಂಚಾಲಕ ಮರಿಯಪ್ಪ ಹಳ್ಳಿ ಹೇಳಿದರು.
ಅವರು ಗುರುವಾರ ನಗರದ ಕನ್ನಡ ಭವನದಲ್ಲಿ ಕರ್ನಾಟಕ ದಲಿತ ಸಾಹಿತ್ಯ ಪರಿಷತ್ತ್ ಹಾಗೂ ತಾಲೂಕಾ ಮಕ್ಕಳ ಸಾಹಿತ್ಯ ಪರಿಷತ್ತ್ ವತಿಯಿಂದ ಆಯೋಜಿಸಲಾದ ಯುವ ಸಾಹಿತಿ ಕೆ.ಎಂ.ವಿಶ್ವನಾಥ ಮರತೂರ ಅವರ ಸಾಹಿತ್ಯ ಕುರಿತ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಮಾಜದ ನಡುವೆ ಬದುಕುವ ಕವಿ ನಾನು ಯಾರಿಗಾಗಿ ಹಾಗೂ ಯಾತಕ್ಕಾಗಿ ಬರೆಯಬೇಕೆಂಬ ಕುರಿತು ನೈತಿಕ ಪ್ರಶ್ನೆ ಹಾಕಿಕೊಂಡಾಗ ಮಾತ್ರ ಸಾಮಾಜಿಕ ಕಾವ್ಯ ರಚಿಸಲು ಸಾಧ್ಯ. ತನ್ನ ಸುತ್ತಲ ಸಾಮಾಜಿಕ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲದ ಕವಿ ಉತ್ತಮ ಕವಿಯಾಗಲಾರ. ಆದ್ದರಿಂದ ಚರಿತ್ರೆ, ಪರಂಪರೆಯ ಅರಿವಿನ ಮೂಲಕ ಜನಸಾಮಾನ್ಯರ ಕುರಿತು ಕಾವ್ಯ ರಚಿಸಿ ನವ ಸಮಾಜದ ನಿರ್ಮಾತೃ ಆಗಬೇಕು ಎಂದರು.ಅಲ್ಲದೇ ಈ ಭಾಗದ ಎಲೆಮರೆಯ ಕಾಯಿಯಂತಿರುವ ಸಾಹಿತಿಗಳಿಗೆ ಪೋಷಿಸಿ ಬೆಳೆಸಬೇಕಾದ ಕರ್ತವ್ಯ ನಮ್ಮೆಲ್ಲರದು ಎಂದರು.
ಯುವ ಸಾಹಿತಿ ಕೆ.ಎಂ.ವಿಶ್ವನಾಥ ಮರತೂರ ಮಾತನಾಡಿ,ಒಬ್ಬ ಸಾಹಿತಿಗೆ ಬದುಕಿನ ನೈಜ ಸಂಗತಿಗಳನ್ನು ಕ್ರೋಡಿಕರಿಸುವುದೇ ನಿಜವಾದ ಸಾಹಿತ್ಯ ಎನಿಸಿಕೊಳ್ಳುತ್ತದೆ.ಇಂದು ಹಲವಾರು ಜನರು ಕವನ ಸಂಕಲನ, ಯಾವುದೇ ಕಥೆಗಳನ್ನು, ಇನ್ಯಾರದೋ ಜೀವನ ಚಿರಿತ್ರೆಗಳನ್ನು ಬರೆದು ಸಾಹಿತಿಗಳೆನಿಸಿಕೊಂಡರೇ ಸಾಕು ಎನ್ನುವಷ್ಟರ ಮಟ್ಟಿಗೆ ಇದ್ದಾರೆ.ಇವರಿಂದ ಗಟ್ಟಿ ಸಾಹಿತ್ಯವನ್ನು ನಿರೀಕ್ಷಿಸಲು ಸಾಧ್ಯವಿಲ್ಲ.ಕಾರಣ ಇವರು ಮತ್ತೊಬ್ಬರು ಹೇಳಿದನ್ನು ಆಲಿಸುವುದಿಲ್ಲ. ಅಧ್ಯಯನ ಮಾಡುವುದಿಲ್ಲ. ಇಂದು ಬರೆದು ನಾಳೆ ಫೇಮಸ್ ಆಗುವ ತವಕ ಅವರಲ್ಲಿರುತ್ತದೆ.ಯಾರು ಒಮ್ಮಿಂದೊಮ್ಮೆಲೆ ಫೆಮಸ್ ಆಗಲು ಸಾಧ್ಯವಿಲ್ಲ.
ಸುತ್ತಮುತ್ತಲಿನ ನೈಜ ಸನ್ನಿವೇಶಗಳು, ಬದುಕಿನಲ್ಲಿ ಹಸಿವಿನ ಹಾಗೂ ಕಠಿಣತೆಯ ದಾರಿಯಲ್ಲಿ ಕಂಡುಕೊಂಡ ಅನುಭವಗಳನ್ನು ಅಕ್ಷರ ರೂಪದಲ್ಲಿ ಇಳಿಸಿದಾಗ ಮಾತ್ರ ಒಂದು ಗಟ್ಟಿ ಸಾಹಿತ್ಯ ಹೊರಹೊಮ್ಮಲು ಸಾಧ್ಯ.ಅಲ್ಲದೇ ನಾವು ಬರೆದಿದನ್ನು ಓದುಗರ ಮನಕ್ಕೆ ತಟ್ಟಬೇಕು.ಅದರಿಂದ ಒಬ್ಬರಾದರೂ ಬದಲಾವಣೆಯಾದರೆ ಸಾಕು.ಅದುವೇ ನಮಗೆ ಸಿಕ್ಕ ದೊಡ್ಡ ಪ್ರಶಸ್ತಿ. ನಾನು ಬರೆದ ಅನೇಕ ಕೃತಿಗಳಲ್ಲಿ ಬದುಕಿನ ನೈಜ ಸಂಗತಿಗಳನ್ನು ದಾಖಲಿಸಿದ್ದೆನೆ.ಅದರಲ್ಲೂ ಅನೇಕ ಪತ್ರಿಕೆಗಳಲ್ಲಿ ಅಂಕಣಗಳನ್ನು ಬರೆಯುತ್ತಿದ್ದೆನೆ.ಅದರಲ್ಲೂ ಶೈಕ್ಷಣಿಕ ಕ್ಷೇತ್ರದಲ್ಲಿ ಅಮೂಲಾಗ್ರ ಬದಲಾವಣೆ ಮಾಡುವುದು ನನ್ನ ಆಶಯವಾಗಿದೆ.ಯಾರಿಗೋ ಮೆಚ್ಚಿಸಲೆಂದು ನಾನು ಬರೆಯುವುದಿಲ್ಲ.
ಆ ರೀತಿ ಮಾಡಿದರೆ ಅದು ಕ್ಷಣಿಕ ಸುಖವನ್ನು ನೀಡಬಹುದು.ಆದರೆ ಅದರಿಂದ ಸಮಾಜದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ.ನಾನು ಬರೆದ ಅನೇಕ ಬರವಣಿಗೆಯಿಂದ ಇಂದು ನಾಡಿನ ಖ್ಯಾತ ಸಾಹಿತಿಗಳಾದ ದೇವನೂರ ಮಹಾದೇವ,ಡಾ.ಸಿದ್ದಲಿಂಗಯ್ಯನವರು ಸೇರಿದಂತೆ ಅನೇಕರ ಜತೆ ಒಡನಾಟವನ್ನು ಹೊಂದಿದ್ದೆನೆ.ಅಲ್ಲದೇ ನನ್ನದೊಂದು ಲೇಖನ ಓದಿ ಮಾಜಿ ಶಿಕ್ಷಣ ಸಚಿವರಾದ ಸುರೇಶಕುಮಾರ ಅವರು ಪ್ರಶಂಸನೀಯ ಮಾತುಗಳನ್ನು ಹೇಳಿ ಬೆನ್ನು ತಟ್ಟಿದ್ದರು.ಕಲ್ಯಾಣ ಕರ್ನಾಟಕದಲ್ಲಿ ಅನೇಕ ಪ್ರತಿಭಾವಂತ ಸಾಹಿತಿಗಳಿದ್ದಾರೆ.ಆದರೂ ಅವರನ್ನು ಯಾರು ಗುರುತಿಸುವುದಿಲ್ಲ. ಇಲ್ಲಿನ ಸಾಹಿತಿಗಳು ಮಾಡಿದನ್ನು ಹೇಳಿಕೊಳ್ಳಲು ಮುಂದಾಗುತ್ತಿಲ್ಲ.ಇದುವೇ ಈ ಭಾಗದ ಜನರ ದೌರ್ಭಾಗ್ಯ ಎಂದರು.
ಕಸಾಪ ಗೌರವ ಕಾರ್ಯದರ್ಶಿ ಶರಣು ವಸ್ತ್ರದ್,ಕಸಾಪ ಮಾಜಿ ಅಧ್ಯಕ್ಷ ಶರಣಗೌಡ ಪಾಟೀಲ, ಎಸ್.ಜಿ.ವರ್ಮಾ ಶಾಲೆಯ ಮುಖ್ಯಗುರು ಮಲ್ಲಿನಾಥ ಪಾಟೀಲ ಮಾತನಾಡಿದರು. ಈಡಿಗ ಸಮಾಜದ ಅಧ್ಯಕ್ಷ ಭೀಮಯ್ಯ ಗುತ್ತೆದಾರ, ದಸಾಪ ತಾಲೂಕಾಧ್ಯಕ್ಷ ಶಂಕರ ಜಾನಾ,ಹಣಮಂತ ಕುಂಬಾರ, ಮಸಾಪ ತಾಲೂಕಾಧ್ಯಕ್ಷ ಮರಲಿಂಗ ಯಾದಗಿರಿ ವೇದಿಕೆಯ ಮೇಲಿದ್ದರು. ಪತ್ರಕರ್ತ ಲೋಹಿತ್ ಕಟ್ಟಿ ಅಧ್ಯಕ್ಷತೆ ವಹಿಸಿದ್ದರು.
ಭರತ್ ಧನ್ನಾ ನಿರೂಪಿಸಿದರು, ಶಶಿಕಾಂತ ಮಡಿವಾಳ ಸ್ವಾಗತಿಸಿದರು, ಅನೀಲ ಮೈನಾಳಕರ್ ವಂದಿಸಿದರು.