ಕಲಬುರಗಿ: ಚಿತ್ತಾಪುರ ತಾಲೂಕಿನ ಹಲಕರ್ಟಿ ಗ್ರಾಮದಲ್ಲಿ ಗುರು ಬಸವಣ್ಣನವರ ಭಾವಚಿತ್ರಕ್ಕೆ ಕಿಡಿಗೇಡಿಗಳು ಅಪಮಾನ ಎಸಗಿರುವ ಘಟನೆ ನಡೆದಿದೆ. ಈ ಘಟನೆ ಬೆಳಕಿಗೆ ಬರುತ್ತಿದ್ದಂತೆಯೇ ಪೊಲೀಸರು ಕಾರ್ಯಪ್ರವೃತ್ತರಾಗಿ ಎಫ್‌ಐಆರ್ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದ್ದಂತೆ ಸಾಕಷ್ಟು ಮಾಹಿತಿ ಕಲೆಹಾಕಲಾಗಿದ್ದು ತನಿಖೆ ಪೂರ್ಣಗೊಳ್ಳುವ ಹಂತದಲ್ಲಿದೆ. ತಪ್ಪಿತಸ್ಥರು ಯಾರೇ ಇರಲಿ ಅವರಿಗೆ ಕಾನೂನಿನ ಅಡಿಯಲ್ಲಿ ತಕ್ಕ ಶಿಕ್ಷೆಗೆ ಗುರಿಪಡಿಸಲು ನಾವು ಬದ್ಧರಾಗಿದ್ದೇವೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಿಯಾಂಕ್ ಖರ್ಗೆ ಭರವಸೆ ನೀಡಿದ್ದಾರೆ.
ಬಿಜೆಪಿಗೆ ಟಾಂಗ್ ಕೊಟ್ಟ ಸಚಿವ: ಇದೇ ವಿಚಾರವಾಗಿ ರಾಜಕೀಯ ದುರುದ್ದೇಶದಿಂದ ಪ್ರತಿಭಟನೆಗೆ ಇಳಿದಿರುವ ಬಿಜೆಪಿ ನಾಯಕರು ಇದೇ ಆವೇಶವನ್ನ ಪಠ್ಯಪುಸ್ತಕ ಪರಿಷ್ಕರಣೆ ವೇಳೆ ಬಸವಣ್ಣನವರ ಪಠ್ಯವನ್ನು ಕೈಬಿಟ್ಟು ಅವಮಾನ ಮಾಡಿದಾಗ ತೋರಿದಿದ್ದರೆ ಇಂದು ಬೀದಿಯಲ್ಲಿ ನಿಲ್ಲುವ ಪರಿಸ್ಥಿತಿ ಎದುರಾಗುತ್ತಿರಲಿಲ್ಲವೇನೋ? ಎಂದು ಸಚಿವರು ಬಿಜೆಪಿ ನಾಯಕರಿಗೆ ಟಾಂಗ್ ಕೊಟ್ಟಿದ್ದಾರೆ.
ಹುತ್ತವ ಬಡಿದರೆ ಉರಗ ಸಾಯುವುದೇ? ಘೋರತಪವ ಮಾಡಿದರೇನು, ಅಂತರಂಗ-ಆತ್ಮಶುದ್ಧಿಯಿಲ್ಲದವರನೆಂತು ನಂಬುವನಯ್ಯ
ಕೂಡಲಸಂಗಮದೇವ? ಎನ್ನುವ ಬಸವವಣ್ಣನವರ ವಚನ ಉಲ್ಲೇಖಿಸಿ ಬಿಜೆಪಿಗರಿಗೆ ತಿರುಗೇಟು ನೀಡಿದ್ದಾರೆ.