ಕಲಬುರಗಿ: ಜ್ಞಾಗಂಗಾ ಆವರಣದಲ್ಲಿನರುವ ಗುಲಬರ್ಗಾ ವಿಶ್ವವಿದ್ಯಾಲಯದ ಪ್ರಸಕ್ತ 2023ನೇ ಶೈಕ್ಷಣಿಕ ಸಾಲಿನ ಎಂ.ಫಿಲ್/ಪಿಎಚ್.ಡಿ ಪ್ರವೇಶ ಪರೀಕ್ಷೆಯನ್ನು ಅ. 19 ಮತ್ತು 20 ರಂದು ನಡೆಸಲು ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳಿಗೆ ಯಾವುದೇ ಗೊಂದಲ ಉಂಟಾಗದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ ಎಂದು ಗುಲಬರ್ಗಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ದಯಾನಂದ ಅಗಸರ ತಿಳಿಸಿದರು.
ಸಮಾಜ ವಿಜ್ಞಾನ ನಿಕಾಯದ – ಸಮಾಜಶಾಸ್ತ್ರ, ರಾಜ್ಯಶಾಸ್ತç ಮತ್ತು ಅರ್ಥಶಾಸ್ತ್ರ ಹಾಗೂ ಶಿಕ್ಷಣ ನಿಕಾಯದ – ಶಿಕ್ಷಣ ಮತ್ತು ದೈಹಿಕ ಶಿಕ್ಷಣ ವಿಷಯಗಳ ಪ್ರಶ್ನೆಪತ್ರಿಕೆಗಳು ಕನ್ನಡ ಮತ್ತು ಇಂಗ್ಲೀಷ್ ಭಾಷೆಗಳಲ್ಲಿರುತ್ತವೆ. ಕಲಾ ನಿಕಾಯದ – ವಿಷಯಗಳ ಪ್ರಶ್ನೆಪತ್ರಿಕೆಗಳು ಆಯಾ ಭಾಷೆಗಳಲ್ಲಿರಲಿವೆ. ವಾಣಿಜ್ಯ ಮತ್ತು ನಿರ್ವಹಣೆ ನಿಕಾಯದ – ವಾಣಿಜ್ಯ ಮತ್ತು ನಿರ್ವಹಣೆ 2 ವಿಷಯಗಳು, ಕಾನೂನು ನಿಕಾಯದ 1 ವಿಷಯ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ನಿಕಾಯದ-10 ವಿಜ್ಞಾನ ವಿಷಯಗಳ ಪ್ರಶ್ನೆ ಪತ್ರಿಕೆಗಳು ಇಂಗ್ಲೀಷ್ ಮಾಧ್ಯಮದಲ್ಲಿಯೇ ಇರುತ್ತವೆ. ನಿಯಮಾವಳಿಯಂತೆ ಎಂ.ಫಿಲ್/ಪಿಎಚ್.ಡಿ ಪ್ರವೇಶ ಪರೀಕ್ಷಾ ಸಮಿತಿಯನ್ನು ರಚಿಸಲಾಗಿದ್ದು, ಸಮಿತಿಯ ಮುಖ್ಯಸ್ಥರು, ಸಂಚಾಲಕರು ಹಾಗೂ ಸದಸ್ಯರುಗಳು ಸಕ್ರಿಯವಾಗಿ ಕಾರ್ಯನಿರ್ವಹಿಸಿದ್ದಾರೆ. ಅಭ್ಯರ್ಥಿಗಳು ಪ್ರವೇಶ ಪತ್ರವನ್ನು ಆಯಾ ಸ್ನಾತಕೋತ್ತರ ವಿಭಾಗಗಳಿಂದ ಪಡೆಯಲು ಸೂಕ್ತ ಕ್ರಮ ಕೈಗೊಳ್ಳಲಾಗಿದೆ. – ಪ್ರೊ. ದಯಾನಂದ ಅಗಸರ, ಕುಲಪತಿಗಳು, ಗುಲಬರ್ಗಾ ವಿಶ್ವವಿದ್ಯಾಲಯ
ವಿಶ್ವವಿದ್ಯಾಲಯದ ಕಾರ್ಯಸೌಧದಲ್ಲಿರುವ ರಾಧಾಕೃಷ್ಣ ಸಭಾಂಗಣದಲ್ಲಿ ಆಯೋಜಿಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಎರಡು ದಿನಗಳು ಪರೀಕ್ಷೆ ನಡೆಸಲು ತೀರ್ಮಾನಿಸಲಾಗಿದ್ದು, ಅ.19 ರಂದು ಬೆಳಿಗ್ಗೆ 11 ಗಂಟೆಯಿಂದ ಮಧ್ಯಾಹ್ನ 2 ಗಂಟೆವರೆಗೆ ವಿಶ್ವವಿದ್ಯಾಲಯದ ಮುಖ್ಯ ಆವರಣದ ವಿಜ್ಞಾನ ವಿಭಾಗಗಳಲ್ಲಿ ಸ್ಥಳ ನಿಗದಿಪಡಿಸಲಾಗಿದೆ. ಅಂದು ಕನ್ನಡ, ರಾಜ್ಯಶಾಸ್ತ್ರ, ಅರ್ಥಶಾಸ್ತ್ರ, ಸಮಾಜಶಾಸ್ತ್ರ, ಶಿಕ್ಷಣ, ಹಿಂದಿ, ನಿರ್ವಹಣೆ ಮತ್ತು ಉರ್ದು ವಿಷಯಗಳಿಗೆ ಪರೀಕ್ಷೆಗಳು ಜರುಗಲಿದೆ.
ಅ.20 ರಂದು ಬೆಳಿಗ್ಗೆ 11 ರಿಂದ ಮಧ್ಯಾಹ್ನ 2 ಗಂಟೆವರೆಗೆ ವಾಣಿಜ್ಯ, ಇಂಗ್ಲೀಷ್, ದೈಹಿಕ ಶಿಕ್ಷಣ, ಗಣಿತ, ಭೌತಶಾಸ್ತ್ರ ಪ್ರಾಣಿಶಾಸ್ತ್ರ, ರಸಾಯನಶಾಸ್ತ್ರ, ಅನ್ವಯಿಕ ವಿದ್ಯುನ್ಮಾನ,ಸೂಕ್ಷ್ಮಜೀವಶಾಸ್ತ್ರ, ಜೈವಿಕ ತಂತ್ರಜ್ಞಾನ, ಸಂಖ್ಯಾಶಾಸ್ತ್ರ, ಪರಿಸರ ವಿಜ್ಞಾನ, ಸಸ್ಯಶಾಸ್ತ್ರ ಮತ್ತು ಕಾನೂನು ವಿಷಯಗಳ ಪರೀಕ್ಷೆಗಳು ಜರುಗಲಿವೆ. ಪ್ರಸ್ತುತ ಸಾಲಿನಲ್ಲಿ ಎಂ.ಫಿಲ್/ಪಿಎಚ್.ಡಿ ಪ್ರವೇಶ ಪರೀಕ್ಷೆಗೆ ಸುಮಾರು 1250 ಅಭ್ಯರ್ಥಿಗಳು ಹಾಜರಾಗಲಿದ್ದಾರೆ ಎಂದು ಹೇಳಿದರು.
ಪರೀಕ್ಷೆ ನಡೆಸಲು ವಿಶ್ವವಿದ್ಯಾಲಯದ ಜ್ಞಾನಗಂಗಾ ಆವರಣದಲ್ಲಿನ ಏಳು ವಿಜ್ಞಾನ ಕಟ್ಟಡಗಳಲ್ಲಿ ಸ್ಥಳ ನಿಗದಿಪಡಿಸಲಾಗಿದ್ದು, ಗಣಿತಶಾಸ್ತ್ರ ವಿಭಾಗ, ಪ್ರಾಣಿಶಾಸ್ತ್ರ ವಿಭಾಗ, ಜೈವಿಕ ತಂತ್ರಜ್ಞಾನ ವಿಭಾಗ, ರಸಾಯನಶಾಸ್ತ್ರ ವಿಭಾಗ, ಸೂಕ್ಷ್ಮ ಜೀವಶಾಸ್ತ್ರ ವಿಭಾಗ, ಸಸ್ಯಶಾಸ್ತ್ರ ವಿಭಾಗ ಮತ್ತು ಭೌತಶಾಸ್ತ್ರ ವಿಭಾಗಗಳಲ್ಲಿ ಸೂಕ್ತ ವ್ಯವಸ್ಥೆ ಮಾಡಲಾಗಿದೆ. ಪರೀಕ್ಷಾ ಕೊಠಡಿಗಳಲ್ಲಿ ಸುಮಾರು 25 ಬ್ಲಾಕ್‌ಗಳನ್ನು ಸುಸಜ್ಜಿತ ರೀತಿಯಲ್ಲಿ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.
ಪರೀಕ್ಷೆ ಕಾರ್ಯ ಸುಸೂತ್ರವಾಗಿ ನಡೆಸಲು ಹಿರಿಯ ಮೇಲ್ವಿಚಾರಕರು -7, ಕೋಠಡಿಯ ಮೇಲ್ವಿಚಾರಕರು-35 ಹಾಗೂ ವಿಶೇಷ ಪರೀಕ್ಷಾ ವೀಕ್ಷಕರು-4, ಪರಿಣಿತರನ್ನು ನಿಯೋಜಿಸಿಕೊಳ್ಳಲಾಗಿದೆ. ಪರೀಕ್ಷೆಯು 100 ಅಂಕಗಳ ಪ್ರಶ್ನೆಪತ್ರಿಕೆಯಿದ್ದು, 4 ಬಹು ಆಯ್ಕೆ ಉತ್ತರಗಳ ಮಾದರಿಯಲ್ಲಿರುತ್ತದೆ. ಪರೀಕ್ಷೆಗೆ 3 ಗಂಟೆಗಳ ಸಮಯಾವಕಾಶವಿರುತ್ತದೆ ಎಂದು ವಿವರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕುಲಸಚಿವ ಡಾ. ಬಿ. ಶರಣಪ್ಪ, ಮೌಲ್ಯಮಾಪನ ಕುಲಸಚಿವ ಪ್ರೊ. ಜ್ಯೋತಿ ಧಮ್ಮ ಪ್ರಕಾಶ್, ಎಂ.ಫಿಲ್/ಪಿಹೆಚ್.ಡಿ ಪ್ರವೇಶ ಪರೀಕ್ಷೆ ಸಮಿತಿಯ ಮುಖ್ಯಸ್ಥ ಹಾಗೂ ಶಿಕ್ಷಣ ನಿಕಾಯದ ಹಿರಿಯ ಡೀನ್ ಪ್ರೊ. ಹೂವಿನಬಾವಿ ಬಾಬಣ್ಣ, ತಂತ್ರಜ್ಞಾನ ನಿಕಾಯದ ಡೀನ ಪ್ರೊ. ಕೆ. ಲಿಂಗಪ್ಪ, ಸಮಾಜ ವಿಜ್ಞಾನ ನಿಕಾಯದ ಡೀನ್ ಪ್ರೊ. ಜಿ. ಶ್ರೀರಾಮುಲು, ಕಲಾ ನಿಕಾಯದ ಡೀನ್ ಪ್ರೊ. ರಮೇಶ್ ರಾಥೋಡ್, ಕಾನೂನು ನಿಕಾಯದ ಡೀನ್ ಡಾ. ದೇವಿದಾಸ ಮಾಲೆ ಉಪಸ್ಥಿತರಿದ್ದರು.