ಬೆಂಗಳೂರು; ಸರ್.ಸಿ.ವಿ. ರಾಮನ್ ಸಾರ್ವಜನಿಕ ಆಸ್ಪತ್ರೆಯಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ 1 ಕೋಟಿ 83 ಲಕ್ಷ ರೂ. ವೆಚ್ಚದಲ್ಲಿ ಮಾಡ್ಯುಲರ್ ಶಸ್ತ್ರ ಚಿಕಿತ್ಸಾ ಕೊಠಡಿ, 80 ಲಕ್ಷ ರೂ. ವೆಚ್ಚದಲ್ಲಿ ವಯಸ್ಸಾದವರನ್ನು ನೋಡಿಕೊಳ್ಳಲು ಜೆರಿಯಾಟ್ರಿಕ್ ವಾರ್ಡ್ ಹಾಗೂ ಒಂದೂವರೆ ಕೋಟಿ ವೆಚ್ಚದಲಿ ಪ್ಯಾಲಿಯೋಟಿವ್ ವಾರ್ಡ್‍ನ್ನು ನಿರ್ಮಾಣ ಮಾಡಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ದಿನೇಶ್ ಗುಂಡೂರಾವ್ ಅವರು ತಿಳಿಸಿದರು.
ಅವರು ಇಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆವತಿಯಿಂದ ಸರ್.ಸಿ.ವಿ ರಾಮನ್ ಸಾರ್ವಜನಿಕರ ಆಸ್ಪತ್ರೆಯಲ್ಲಿ ಹಮ್ಮಿಕೊಂಡಿದ್ದ ಮಾಡ್ಯುಲರ್ ಶಸ್ತ್ರ ಚಿಕಿತ್ಸಾ ಕೊಠಡಿ, ಜೆರಿಯಾಟ್ರಿಕ್ ವಾರ್ಡ್ ಹಾಗೂ ಪ್ಯಾಲಿಯೋಟಿವ್ ವಾರ್ಡ್‍ಗಳ ಉದ್ಘಾಟನೆ ನೇರವೇರಿಸಿ ಮಾತನಾಡಿದ ಅವರು, ಮಾಡ್ಯುಲರ್ ಶಸ್ತ್ರಚಿಕಿತ್ಸೆಯಿಂದ ಅನೇಕ ಶಸ್ತ್ರಚಿಕಿತ್ಸೆಗಳನ್ನು ಮಾಡಲು ಅನುಕೂಲವಾಗಲಿದೆ ಎಂದರು.
ತುರ್ತು ಪ್ರಕರಣಗಳ ಸಂದರ್ಭದಲ್ಲಿ ಕ್ರಿಟಿಕಲ್ ಕೇರ್‍ನ ಅವಶ್ಯಕತೆಯಿದ್ದು, ಸುಮಾರು 43 ಕೋಟಿ ರೂ.ವೆಚ್ಚದಲ್ಲಿ 100 ಬೆಡ್‍ನ ಕ್ರಿಟಿಕಲ್ ಕೇರ್, 1 ಕೋಟಿ ರೂ. ವೆಚ್ಚದಲ್ಲಿ ಪಬ್ಲಿಕ್ ಹೆಲ್ತ್ ಲ್ಯಾಬ್ ಹಾಗೂ ಆಸ್ಪತ್ರೆಯಲ್ಲಿ ಇನ್ನೂ ಹೆಚ್ಚಿನ ಸೌಕರ್ಯ ಕಲ್ಪಿಸಲು ಸುಮಾರು 10 ಕೋಟಿ ರೂ.ಗಳ ಅವಶ್ಯಕತೆ ಇದೆ ಎಂದು ಅಂದಾಜಿಸಲಾಗಿದ್ದು ಇದನ್ನು ಒದಗಿಸಲು ಸಹ ತೀರ್ಮಾನಿಸಲಾಗಿದೆ ಎಂದರು.
ಆರೋಗ್ಯ ಸೇವೆ ಬಹಳ ಪ್ರಮುಖವಾಗಿದ್ದು, ಸಾರ್ವಜನಿಕರಿಗೆ ಉತ್ತಮ ಆರೋಗ್ಯ ಸೇವೆ ಒದಗಿಸುವುದು ಸರ್ಕಾರದ ಮೂಲಭೂತ ಕರ್ತವ್ಯವಾಗಿದೆ. ವೈದ್ಯಕೀಯ ಸೇವೆ ಪವಿತ್ರವಾಗಿದ್ದು, ವೈದ್ಯರು ಬರುವ ರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡಬೇಕು ಎಂದರು.
ಈ ಆಸ್ಪತ್ರೆಯ ವೀಕ್ಷಣೆ, ಕಾರ್ಯನಿರ್ವಹಣೆ, ರೋಗಿಗಳಿಗೆ ನೀಡುತ್ತಿರುವ ಚಿಕಿತ್ಸೆ ಕುರಿತು ಪರಿಶೀಲನೆ ನಡೆಸಲು ಅಕ್ಟೋಬರ್ ಕೊನೆಯ ವಾರ ಅಥವಾ ನವೆಂಬರ್ ಮೊದಲ ವಾರದಲ್ಲಿ ಭೇಟಿ ನೀಡಲಾಗುವುದು. ಭೇಟಿ ನೀಡಿದ ಸಂದರ್ಭದಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಸಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತರಾದ ಡಿ.ರಂದೀಪ್, ನಿರ್ದೇಶಕರಾದ ಡಾ. ಬಿ.ಎಸ್. ಪುಷ್ಪಲತಾ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶಕರಾದ ಡಾ: ಎಂ.ಇಂದುಮತಿ, ಬೆಂಗಳೂರು ನಗರ ಜಿಲ್ಲೆಯ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಾದ ಡಾ. ರವೀಂದ್ರನಾಥ ಎಂ.ಮೇಟಿ, ಸರ್.ಸಿ.ವಿ.ರಾಮನ್ ಸಾರ್ವಜನಿಕ ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.