ಕಲಬುರಗಿ: ಚಿಂಚೋಳಿ ತಾಲೂಕಿನ ಶಿರೊಳ್ಳಿ ಗ್ರಾಮದ ಶಿವಕುಮಾರ ಎನ್ನುವವರು ಆತ್ಮಹತ್ಯೆ ಮಾಡಿಕೊಂಡಿದ್ದು ಅವರು ತಮ್ಮ ಆತ್ಮಹತ್ಯೆಗೆ ಸಚಿವ ಶರಣಪ್ರಕಾಶ ಪಾಟೀಲ್ ಅವರು ಹೆಸರು ಹೇಳಿ ಆಡಿಯೋ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆಡಿಯೋಟೇಪ್ ಕುರಿತು ಸಮಗ್ರ ತನಿಖೆ ನಡೆಸಲು ಪ್ರಕರಣವನ್ನು ಸಿಓಡಿಗೆ ವಹಿಸಲಾಗಿದೆ ಎಂದು ಕಲಬುರಗಿ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಶುಕ್ರವಾರ ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಸಚಿವ ಶರಣ ಪ್ರಕಾಶ್ ಪಾಟೀಲ್ ರಾಜೀನಾಮೆ ನೀಡಬೇಕು ಎಂದು ಬಿಜೆಪಿಗರು ಒತ್ತಾಯಿಸಿರುವುದಕ್ಕೆ ಉತ್ತರಿಸಿದ ಸಚಿವರು ಅಂತಹ ಸಂದರ್ಭವನ್ನು ತಳ್ಳಿ ಹಾಕಿದರು.
ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ ಕೃಷಿಗಾಗಿ ಹಾಗೂ ಇತರೆ ಸಾಲ ಮಾಡಿಕೊಂಡಿದ್ದು ಸಾಲದ ಸಮಸ್ಯೆ ಎದುರಿಸುತ್ತಿದ್ದ ಎಂದು ತಿಳಿದು ಬಂದಿದೆ. ಈ ಬಗ್ಗೆ ಆತನ ಮನೆಯವರು ಕೂಡಾ ಹೇಳಿಕೆ ನೀಡಿದ್ದಾರೆ. ವಿಷಯ ಏನೇ ಇರಲಿ ಸಮಗ್ರ ತನಿಖೆ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ವಿಚಾರಣೆ: ಹಲಕರ್ಟಿ ಗ್ರಾಮದಲ್ಲಿ ಬೆಳೆಗಳಿಗೆ ಕೀಟನಾಶಕ ಸಿಂಪಿಡಿಸಿದ ರೈತರು ಅಸ್ವಸ್ಥರಾದ ವಿಚಾರಕ್ಕೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಪ್ರಿಯಾಂಕ್ ಖರ್ಗೆ, ಕೀಟನಾಶಕ ಬ್ಯಾನ್ ಮಾಡಲಾಗಿತ್ತು ಎಂದು ಗೊತ್ತಾಗಿದೆ. ಬ್ಯಾನ್ ಆದ ಕೀಟನಾಶಕ ಹೇಗೆ ರೈತರಿಗೆ ಸಿಕ್ಕಿದೆ ಎನ್ನುವುದರ ಬಗ್ಗೆ ಸಮಗ್ರ ವಿಚಾರಣೆ ನಡೆಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಶಾಸಕರಾದ ಎಂ ವೈ ಪಾಟೀಲ್ ಹಾಗೂ ಅಲ್ಲಮಪ್ರಭು ಪಾಟೀಲ್ ಇದ್ದರು.