ಐತಿಹಾಸಿಕ ನಾಗಾವಿ ವಿಶ್ವವಿದ್ಯಾಲಯ ಪುನರುಜ್ಜೀವನಕ್ಕೆ ಕ್ರಮ: ಹೆಚ್.ಕೆ.ಪಾಟೀಲ

0
28

ಕಲಬುರಗಿ: ಚಿತ್ತಾಪುರ ಪಟ್ಟಣದ ಹೊರವಲಯದಲ್ಲಿರುವ ಐತಿಹಾಸಿಕ ನಾಗಾವಿ ವಿಶ್ವವಿದ್ಯಾಲಯವನ್ನು ಪುನರುಜ್ಜೀವನಕ್ಕೆ ಎಲ್ಲಾ ರೀತಿಯ ಕ್ರಮ ಕೈಗೊಳ್ಳಲಾಗುವುದು ಎಂದು ರಾಜ್ಯದ ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು, ಶಾಸನ ರಚನೆ ಹಾಗೂ ಪ್ರವಾಸೋದ್ಯಮ‌ ಸಚಿವ ಹೆಚ್.ಕೆ.ಪಾಟೀಲ ತಿಳಿಸಿದರು.

ಮಂಗಳವಾರ ಚಿತ್ತಾಪುರ ಪಟ್ಟಣದ ಐತಿಹಾಸಿಕ ನಾಗಾವಿ ಘಟಿಕಸ್ಥಾನದ 60 ಕಂಬ ಸ್ಮಾರಕ ವೀಕ್ಷಿಸಿ “ನಮ್ಮ ಸ್ಮಾರಕ” ಯೋಜನೆಯಡಿ ಸ್ಮಾರಕದ ದತ್ತು ಸ್ವೀಕಾರದ ಒಪ್ಪಂದ ವಿನಿಮಯ ಮಾಡಿಕೊಂಡ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಳಂದ, ತಕ್ಷಶಿಲಾ ಮುನ್ನ ಇಲ್ಲಿ ನಾಗಾವಿ ವಿಶ್ವವಿದ್ಯಾಲಯವಿತ್ತು ಎಂಬುದು ಇತಿಹಾಸಕಾರರಿಂದ ಮತ್ತು ಇಲ್ಲಿ ದೊರೆತಿರುವ ಶಾಸನದಿಂದ ತಿಳಿದುಬರುತ್ತದೆ. ಈ ಐತಿಹಾಸಿಕ ಶಿಕ್ಷಣ ಕೇಂದ್ರವನ್ನು ಮುಂದಿನ ದಿನದಲ್ಲಿ ಪಿ.ಜಿ. ಸೆಂಟರ್ ಅಥವಾ ಸಂಶೋಧನಾ ಕೇಂದ್ರ ತೆರೆಯುವ‌ ಚಿಂತನೆ ಇದ್ದು, ಇದಕ್ಕಾಗಿ ವಿಶ್ವವಿದ್ಯಾಲಯ ‌ಕ್ಯಾಂಪಸ್ ಆವರಣ ಗುರುತಿಸುವ ಕೆಲಸ‌ ಸಂಶೋಧಕರು ಮಾಡಬೇಕಿದೆ ಎಂದರು.

Contact Your\'s Advertisement; 9902492681

ಐತಿಹಾಸಿಕ ನಾಗಾವಿ ಸ್ಮಾರಕ ಸಂರಕ್ಷಿಸುವ‌ ದೃಷ್ಟಿಯಿಂದ ಬೆಂಗಳೂರಿನ ಯೂನೈಟೆಡ್ ವೇ ಸಂಸ್ಥೆ ಜೊತೆಗೆ ಇಂದಿಲ್ಲಿ ಅರಂಭಿಕ ಹಂತವಾಗಿ ನಾಗಾವಿ ಕ್ಷೇತ್ರದ 60 ಕಂಬದ‌ ಸ್ಮಾರಕ, ನಂದಿ ಬಾವಿ, ಮಲ್ಲಪ್ಪನ ಗುಡಿ, ಮಲ್ಲಿಕಾರ್ಜುನ ದೇವಸ್ಥಾನಗಳನ್ನು ಇಂದಿಲ್ಲಿ ಸಂಸ್ಥೆಗೆ ದತ್ತು ನೀಡಿದೆ. ದತ್ತು ಪಡೆದ‌ ಸಂಸ್ಥೆ ಮುಂದಿನ 1 ತಿಂಗಳಿನಲ್ಲಿ ಇದರ ಸಂರಕ್ಷಣೆ, ಅಭಿವೃದ್ಧಿ, ಮೂಲಸೌಕರ್ಯ ಬಲವರ್ಧನೆ ನಿಟ್ಟಿನಲ್ಲಿ ಡಿಟೇಲ್ಡ್ ಪ್ರೊಜೆಕ್ಟ್ ರಿಪೋರ್ಟ್ ಸಲ್ಲಿಸಲಿದ್ದು, ತದನಂತರ ಸರ್ಕಾರ ಇದರ ಸಂರಕ್ಷಣೆಗೆ ಮುಂದಾಗಲಿದೆ ಎಂದರು.

ಐತಿಹಾಸಿಕ ಸ್ಮಾರಕ ಸಂರಕ್ಷಣೆ ಕೇವಲ ಸರ್ಕಾರದಿಂದ ಸಾಧ್ಯವಾಗುವುದಿಲ್ಲ. ಉಳ್ಳವರು, ಕಾರ್ಪೋರೇಟ್ ಕಂಪನಿಗಳು ಸ್ಮಾರಕಗಳನ್ನು ದತ್ತು ಪಡೆದುಕೊಂಡು ಸಂರಕ್ಷಿಸಲು‌ ಮುಂದೆ ಬರಬೇಕಿದೆ. ಸ್ಥಳೀಯರ ಸಹಭಾಗಿತ್ವವು ತುಂಬಾ ಅಗತ್ಯ ಇದೆ. ಈ ನಿಟ್ಡಿನಲ್ಲಿ ಅಮೆರಿಕಾದಲ್ಲಿ ನೆಲಸಿರುವ ಕನ್ನಡಿಗರನ್ನು ಇತ್ತೀಚೆಗೆ ಝೂಮ್ ಮೀಟ್ ಮೂಲಕ ಸಂಪರ್ಕಿಸಿದಾಗ ಸುಮಾರು 20 ಜನರು ತಮ್ಮೂರಿನ ಸ್ಮಾರಕ‌ ಸಂರಕ್ಷಣೆಗೆ ಉತ್ಸುಕರಾಗಿದ್ದು, ನಮ್ಮ ಅಭಿಯಾನಕ್ಕೆ ಸಂತಸ‌ ತಂದಿದೆ ಎಂದರು.

*1000 ಸ್ಮಾರಕ ದತ್ತು ನೀಡಲು ನಿರ್ಧಾರ:*

ರಾಜ್ಯದಲ್ಲಿರುವ ಐತಿಹಾಸಿಕ ಸ್ಮಾರಕಗಳು ಸಮ್ಮ‌ ಸಂಸ್ಕೃತಿ, ನಮ್ಮತನ, ಪರಂಪರೆ ತಿಳಿಸುತ್ತವೆ. ಇದನ್ನು ಸಂರಕ್ಷಿಸಿ ಮುಂದಿನ ಪೀಳಿಗೆಗೆ ಪರಿಚಯಿಸುವ ದೃಷ್ಢಿಯಿಂದ ರಾಜ್ಯದಲ್ಲಿ 25 ಸಾವಿರ ಸ್ಮಾರಕಗಳ ಪೈಕಿ 5 ಸಾವಿರ ಸ್ಮಾರಕಗಳು ಐತಿಹಾಸಿಕ ಹಿನ್ನೆಲೆ ಹೊಂದಿವೆ. ಇದರಲ್ಲಿ 834 ಸ್ಮಾರಕಗಳನ್ನು ಮಾತ್ರ ಸರ್ಕಾರ ಸಂರಕ್ಷಿತ ಪ್ರದೇಶವೆಂದು ಘೋಷಿಸಿ ಇದರಲ್ಲಿ 300 ಮಾತ್ರ ಸಂರಕ್ಷಿಸಲು ಸಾಧ್ಯವಾಗಿದೆ. ಹೀಗಾಗಿ ಉಳಿದ ಪ್ರಮುಖ ಐತಿಹಾಸಿಕ ಸ್ಮಾರಕ‌ ಸಂರಕ್ಷಣೆಗೆ ಕಳೆದ ಸೆ.25 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಮ್ಮ‌ ಸ್ಮಾರಕ ಯೋಜನೆಗೆ ಚಾಲನೆ ನೀಡಿದ್ದು, ಅದರಂತೆ‌ ನಿನ್ನೆಯಿಂದ ಬಸವ ನಾಡು ಭಾಲ್ಕಿಯಿಂದ ನಮ್ಮ‌ ಸ್ಮಾರಕ ಯೋಜನೆಗ ಚಾಲನೆ ನೀಡಲಾಗಿದೆ ಎಂದರು.

*3 ದಿನ ಪ್ರವಾಸಿ ಸರ್ಕೂಟ್:*

ಬೀದರ, ಕಲಬುರಗಿ, ವಿಜಯಪುರ, ಬಾಗಲಕೋಟೆ ಜಿಲ್ಲೆಗಳ ಐತಿಹಾಸಿಕ, ಧಾರ್ಮಿಕ, ಪ್ರವಾಸಿ ತಾಣಗಳನ್ನು ಸಂಪರ್ಕಿಸುವ ದೃಷ್ಠಿಯಿಂದ 3 ದಿನಗಳ ಪ್ರವಾಸ ಕೈಗೊಳ್ಳುವ ಯೋಜನೆ ಪ್ರವಾಸೋದ್ಯಮ ಇಲಾಖೆಯಿಂದ ರೂಪಿಸಲಾಗುತ್ತಿದೆ. ಪ್ರವಾಸಿಗರಿಗೆ ಇದರಿಂದ ರಾಜ್ಯದ ಇತಿಹಾಸ, ಕಲೆ,‌ ಸಂಸ್ಕತಿ ತಿಳಿಯಲು ಸಾದ್ಯವಾಗಲಿದೆ ಎಂದರು.

*ನಾಗಾವಿ ಪ್ರವಾಸಿ ತಾಣವಾಗಿ ಅಭಿವೃದ್ಧಿ:*

ನಾಗಾವಿ ದೇವಸ್ಥಾನ ಸೇರಿದಂತೆ ಪ್ರದೇಶದ ಸಮಗ್ರ ಪ್ರದೇಶವನ್ನು ಪ್ರವಾಸಿ ತಾಣವಾಗಿ ಮುಂದಿನ 2 ವರ್ಷದಲ್ಲಿ ಅಭಿವೃದ್ಧಿಪಡಿಸಲಾಗುವುದು ಎಂದು ಹೆಚ್.ಕೆ.ಪಾಟೀಲ ತಿಳಿಸಿದರು. ಈಗಾಗಲೆ ಕ್ಷೇತ್ರದ ಅಭಿವೃದ್ಧಿಗೆ ಈಗಾಗಲೆ 20 ಕೋಟಿ ರೂ. ಮೊತ್ತದ ನೀಲಿ ನಕ್ಷೆ ಸಚಿವ ಪ್ರಿಯಾಂಕ್ ಖರ್ಗೆ ಅವರು ತುಂಬಾ ದೂರದೃಷ್ಟಿಯಿಂದ ತಯ್ಯಾರಿಸಿದ್ದು, ಇಲ್ಲಿ ರಸ್ತೆ, ಯಾತ್ರಿಕ‌ ನಿವಾಸ, ಕುಡಿಯುವ ನೀರು, ಶೌಚಾಲಯ, ಅಡುಗೆ ಕೋಣೆ ಹೀಗೆ ಪ್ರತಿ ಹಂತದಲ್ಲಿ ಅನುಷ್ಠಾಗೊಳಿಸಲಾಗುವುದು ಎಂದರು.

*ನಾಗಾವಿ ಎಜುಕೇಷನ್ ಹಬ್ಆಗಿ ಪರಿವರ್ತನೆ:*

ಚಿತ್ತಾಪೂರ ಹೆಸರಿನ ಅರ್ಥ ಜ್ಞಾನದ ತವರೂರು. ಹೀಗಾಗಿ ನಾಗಾವಿಯನ್ನು ಎಜುಕೇಶನ್ ಹಬ್ ಆಗಿ ಪರಿವರ್ತಿಸಲಾಗಿದೆ. 20 ಕೋಟಿ ರೂ. ವೆಚ್ಚದಲ್ಲಿ ಯಲ್ಲಮ್ಮ ದೇವಸ್ಥಾನ ಅಭಿವೃದ್ಧಿಪಡಿಸಲಾಗುತ್ತಿದೆ. ಕಲಬುರಗಿ ಕೋಟೆ ಸುತ್ತಮುತ್ತ ಸ್ವಚ್ಚತೆ ಮಾಡಿ ಫೆನ್ಸಿಂಗ್ ಮಾಡಿ ಸಂರಕ್ಷಿಸಲಾಗುವುದು. ಬೌದ್ಧನ‌ ನೆಲೆಯಾಗಿರುವ ಸನ್ನತ್ತಿ ಮುಂದಿನ‌ ದಿನದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ. ಕಲಬುರಗಿ ಕೋಟೆ ಅತಿಕ್ರಮಣವನ್ನು ಕಾನೂನಾತ್ಮಕವಾಗಿ ಪರಿಹರಿಸಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಐ.ಟಿ.-ಬಿ.ಟಿ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.

*ದತ್ತು ಒಪ್ಪಂದಕ್ಕೆ ಸಹಿ:*

ನಮ್ಮ ಸ್ಮಾರಕ ಯೋಜನೆಯಡಿ ನಾಗಾಗವಿಯ 60 ಕಂಬ ಸ್ಮಾರಕ ಸೇರಿದಂತೆ 4 ಐತಿಹಾಸಿಕ ಸ್ಥಳವನ್ನು ಕರ್ನಾಟಕ ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಮತ್ತು ಬೆಂಗಳೂರಿನ ಯೂನೈಟೆಡ್ ವೇ ಸಂಸ್ಥೆಯ ರಾಜೇಶ ಕೃಷ್ಣನ್‌ ಅವರು ಪರಸ್ಪರ ಒಪ್ಪಂದಕ್ಕೆ ಸಹಿ ಹಾಕಿ ಪತ್ರ‌ ವಿನಿಮಯ ಮಾಡಿಕೊಂಡರು. ಇದಕ್ಕೆ ಸಚಿವ ಹೆಚ್.ಕೆ.ಪಾಟೀಲ, ಪ್ರಿಯಾಂಕ್ ಖರ್ಗೆ ಸಾಕ್ಷಿಯಾದರು. ಇದೇ ಸಂದರ್ಭದಲ್ಲಿ ದತ್ತು ಸ್ವೀಕಾರಕ್ಕೆ ಡಿಜಿಟಲ್ ವೇದಿಕೆ ಕಲ್ಪಿಸಿರುವ ಕಲ್ಕಿ ಫೌಂಡೇಷನ್ ಜೊತೆ ಕೈಜೋಡಿಸಿರುವ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಆರ್ಟಿ ಟೆಕ್ಟ್ ನಡುವಿನ ಒಪ್ಪಂದಕ್ಕೂ ಸಹಿ ಹಾಕಲಾಯಿತು. ಕರ್ನಾಟಕ ಚಾಪ್ಟರ್ ಅಧ್ಯಕ್ಷ ಮೋಯಿನ್ ಹರೀಸ್ ಇದ್ದರು.

ಈ ಸಂದರ್ಭದಲ್ಲಿ ಕಲಬುರಗಿ ದಕ್ಷಿಣ ಶಾಸಕ ಅಲ್ಲಮಪ್ರಭು ಪಾಟೀಲ, ವಿಧಾನ ಪರಿಷತ್ ಶಾಸಕ ತಿಪ್ಪಣ್ಣಪ್ಪ ಕಮಕನೂರ, ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್, ಜಿಲ್ಲಾ ಪಂಚಾಯತ್ ಸಿ.ಇ.ಓ ಭಂವರ್ ಸಿಂಗ್ ಮೀನಾ, ಎಸ್.ಪಿ. ಅಡ್ಡೂರು ಶ್ರೀನಿವಾಸಲು, ಕರ್ನಾಟಕ ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯ ಆಯುಕ್ತ ಎ.ದೇವರಾಜು, ಉಪನಿರ್ದೇಶಕಿ ಮಂಜುಳಾ ಸೇರಿದಂತೆ ಮತ್ತಿತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here