ಕಲಬುರಗಿ: ಇಂದು ನವೆಂಬರ್ 14. ಪರಮಪೂಜ್ಯ ಡಾ. ಶರಣಬಸವಪ್ಪ ಅಪ್ಪಾಜಿಯವರ ಜನ್ಮದಿನೋತ್ಸವ. ಶ್ರೀ ಶರಣಬಸವೇಶ್ವರ ಸಂಸ್ಥಾನದ ಆವರಣದಲ್ಲಿ ಸಂಭ್ರಮದ ಹಬ್ಬದ ವಾತಾವರಣ, ಎಲ್ಲೆಡೆ ಜನಜಂಗುಳಿ, ಡಾ. ಅಪ್ಪಾಜಿಯವರು ದೀರ್ಘಾಯುಷಿಗಳಾಗಲೆಂದು ಶ್ರೀ ಶರಣಬಸವೇಶ್ವರ ದೇವಸ್ಥಾನದಲ್ಲಿ ದೇವರಿಗೆ ಮೊರೆ ಹೋದ ಭಕ್ತರ ದಂಡು, ಶರಣಬಸವೇಶ್ವರ ಮಹಾರಾಜ ಕೀ ಜೈ ಎಂಬ ಭಕ್ತರ ಜಯಘೋಷ ಒಂದು ಕಡೆಯಾದರೆ ಶಾಲು, ಹಾರತುರಾಯಿ, ಹಣ್ಣುಹಂಪಲು, ಸಿಹಿಯನ್ನು ಹಿಡಿದುಕೊಂಡು ಸಂಭ್ರಮದಿಂದ ಮಹಾದಾಸೋಹ ಮಹಾಮನೆಗೆ ಹೆಜ್ಜೆ ಹಾಕುತ್ತಿರುವ ಗಣ್ಯರು ಇನ್ನೊಂದು ಕಡೆ.
ಶ್ರೀ ಶರಣಬಸವೇಶ್ವರ ಸಂಸ್ಥಾನದ 8ನೇ ಪೀಠಾಧಿಪತಿ ಹಾಗೂ ಶರಣಬಸವ ವಿಶ್ವವಿದ್ಯಾಲಯದ ಕುಲಾಧಿಪತಿಗಳಾದ ಪರಮಪೂಜ್ಯ ಡಾ. ಶರಣಬಸವಪ್ಪ ಅಪ್ಪಾಜಿ, ಶ್ರೀ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಚೇರಪರ್ಸನ್ ಡಾ. ದಾಕ್ಷಾಯಿಣಿ ಅವ್ವಾಜಿ ಹಾಗೂ ಶ್ರೀ ಶರಣಬಸವೇಶ್ವರ ಸಂಸ್ಥಾನದ 9ನೇ ಪೀಠಾಧಿಪತಿ ಪೂಜ್ಯ ಚಿರಂಜೀವಿ ದೊಡ್ಡಪ್ಪ ಅಪ್ಪಾಜಿ ಜನ್ಮದಿನೋತ್ಸವ ಆಚರಣೆಯಲ್ಲಿ ಪಾಲ್ಗೊಂಡು, ಜನ್ಮದಿನೋತ್ಸವದ ಶುಭಕೋರಲು ಬಂದ ಭಕ್ತ ಸಮೂಹಕ್ಕೆ ಆಶೀರ್ವದಿಸಿದರು.
ಪೂಜ್ಯ ಡಾ. ಅಪ್ಪಾಜಿಯವರ ಮಕ್ಕಳಾದ ಕು. ಶಿವಾನಿ, ಕು. ಭವಾನಿ ಮತ್ತು ಕು. ಮಹೇಶ್ವರಿ ಸೇರಿಕೊಂಡು ಅಪ್ಪಾಜಿಯವರಿಗೆ 89 ತುಪ್ಪದ ದೀಪಗಳನ್ನು ಹಚ್ಚಿ ಆರತಿ ಮಾಡಿ ಉಡುಗೊರೆ ನೀಡಿದ್ದು ವಿಶೇಷವಾಗಿತ್ತು. ಈ ಜನ್ಮದಿನೋತ್ಸವದಲ್ಲಿ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿಗಳಾದ ಶ್ರೀ ಬಸವರಾಜ ದೇಶಮುಖ, ಶರಣಬಸವ ವಿಶ್ವವಿದ್ಯಾಲಯದ ಸಮಕುಲಪತಿ ಡಾ. ಎನ್. ಎಸ್. ದೇವರಕಲ್, ಪ್ರೊ. ವಿ. ಡಿ. ಮೈತ್ರಿ, ಕುಲಸಚಿವ ಡಾ. ಅನಿಲಕುಮಾರ ಬಿಡವೆ, ಕುಲಸಚಿವ(ಮೌಲ್ಯಮಾಪನ) ಡಾ. ಬಸವರಾಜ ಮಠಪತಿ, ಡೀನ್ ಡಾ. ಲಕ್ಷ್ಮೀ ಪಾಟೀಲ ಮಾಕಾ, ಹಣಕಾಸು ಅಧಿಕಾರಿ ಪ್ರೊ. ಕಿರಣ ಮಾಕಾ, ಪತ್ರಿಕೋದ್ಯಮ ವಿಭಾಗ ಟಿ. ವಿ. ಶಿವಾನಂದನ್ ಸೇರಿದಂತೆ ವಿವಿಧ ವಿಭಾಗಗಳ ಮುಖ್ಯಸ್ಥರು ಹಾಗೂ ಪ್ರಾಧ್ಯಾಪಕರು ಪಾಲ್ಗೊಂಡಿದ್ದರು.
ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಸೇರಿದಂತೆ ನಗರದ ಇತರ ಗಣ್ಯರು ಡಾ. ಅಪ್ಪಾಜಿಯವರಿಗೆ ಶುಭಕೋರಿದರು. ಈ ಸಂಧರ್ಭದಲ್ಲಿ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎಲ್ಲಾ ಶಾಲಾಕಾಲೇಜುಗಳ ಮುಖ್ಯಸ್ಥರು ಹಾಗೂ ಸಿಬ್ಭಂದಿ ವರ್ಗದವರು ಡಾ. ಅಪ್ಪಾಜಿಯವರಿಗೆ ಜನ್ಮದಿನೋತ್ಸವದ ಶುಭಕೋರಿ ಸಂಭ್ರಮಿಸಿದರು. ಎಲ್ಲಾ ಭಕ್ತ ಸಮೂಹಕ್ಕೆ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.