ಕಲಬುರಗಿ: ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದಾಗಿನಿಂದ ಜಿಲ್ಲೆಯಲ್ಲಿ ಗೂಂಡಾಗಿರಿ, ದೌಜನ್ರ್ಯ, ದಬ್ಬಾಳಿಕೆಯಂತಹ ಪ್ರಕರಣಗಳು ಹೆಚ್ಚಾಗುತ್ತಿದ್ದು, ಜಿಲ್ಲೆಯಲ್ಲಿ ಭಯ, ಆತಂಕದ ವಾತಾವರಣ ಉಂಟಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಬಿ.ಜಿ. ಪಾಟೀಲ. ಮಾಜಿ ಶಾಸಕರಾದ ದತ್ತಾತ್ರೇಯ ಪಾಟೀಲ ಹಾಗೂ ರಾಜಕುಮಾರ ಪಾಟೀಲ ತೆಲ್ಕೂರ್ ತಿಳಿಸಿದರು.
ಶನಿವಾರ ಮಧ್ಯರಾತ್ರಿ ಚಿತ್ತಾಪುರ ತಾಲ್ಲೂಕಿನ ಮಾಲಗತ್ತಿ ಸಮೀಪ ಹಲ್ಲೆಗೊಳಗಾದ ಬಿಜೆಪಿ ಮುಖಂಡ ಮಣಿಕಂಠ ರಾಠೋಡ ಹಾಗೂ ಅವರ ಆಪ್ತ ಸ್ನೇಹಿತ ಶ್ರೀಕಾಂತ ಸುಲೇಗಾಂವ ಚಿಕಿತ್ಸೆ ಪಡೆಯುತ್ತಿದ್ದ ನಗರದ ಖಾಸಗಿ ಆಸ್ಪತ್ರೆಗೆ ಭಾನಿವಾರ ಮಧ್ಯಾಹ್ನ ಭೇಟಿ ನೀಡಿ ಸಾಂತ್ವನ ಹೇಳಿದ ಅವರು, ಸುದ್ದಿಗಾರರೊಂದಿಗೆ ಮಾತನಾಡಿ, ಮಣಿಕಂಠ ರಾಠೋಡ್ ಮತ್ತು ಶ್ರೀಕಾಂತ ಸುಲೇಗಾಂವ ಮೇಲೆ ಎಂಟತ್ತು ಜನ ಆಗುಂತಕರು ಬಂದು ಮಾರಣಾಂತಿಕ ಹಲ್ಲೆ ಮಾಡಿ ಪರಾರಿಯಾಗಿದ್ದಾರೆ. ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ತೀರಾ ಹದಗೆಟ್ಟಿದೆ ಎಂದು ಆಕ್ರೋಶ ವ್ಯಕ್ಯಪಡಿಸಿದರು.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ದ್ವೇಷದ ರಾಜಕಾರಣ ಹೆಚ್ಚಾಗುತ್ತಿದ್ದು, ಮಣಿಕಂಠ ರಾಠೋಡ ಮೇಲೆ ಹಲ್ಲೆ ಮಾಡಿದವರನ್ನು 24 ಗಂಟೆಯೊಳಗೆ ಬಂಧಿಸಬೇಕು. ಇಲ್ಲದಿದ್ದಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಕ್ರೆಡೆಲ್ ಮಾಜಿ ಅಧ್ಯಕ್ಷ ಚಂದು ಪಾಟೀಲ, ಬಿಜೆಪಿ ವಿಭಾಗೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಅರುಣ ಬಿನ್ನಾಡಿ, ಜಿಲ್ಲಾ ಮಾಧ್ಯಮ ಸಂಚಾಲಕ ಸಂತೋಷ ಹಾದಿಮನಿ ಇತರರಿದ್ದರು.
ಉಸ್ತುವಾರಿ ಸಚಿವರ ಬೆಂಬಲಿಗರ ಕೃತ್ಯ: ಶನಿವಾರ ಮಧ್ಯರಾತ್ರಿ ಎರಡುವರೆ ಸುಮಾರಿಗೆ ಕಲಬುರಗಿಗೆ ಬರುವಾಗ ರಸ್ತೆ ಬದಿಯ ಬ್ರಿಡ್ಜ್ ಕೆಲಸ ನಡೆದಿರುವುದರಿಂದ ಗಾಡಿ ನಿಧಾನವಾದಹ ಎಂಟತ್ತು ಜನ ಆಗುಂತಕರು ಬಂದು ಬೀಯರ್ ಬಾಟಲಿಯಿಂದ ವಾಹನದ ಗ್ಲಾಸ್ ಚೂರು ಮಾಡಿ ನನ್ನ ಮೇಲೆ ಅಟ್ಯಾಕ್ ಮಾಡಿದರು. ಹೀಗಾಗಿ ನನ್ನ ಕಿವಿ ಹಾಗೂ ಕೈಗೆ ಬಲವಾದ ಗಾಯಗಳಾಗಿವೆ. 12 ಟಾಕಿ ಕೂಡ ಬಿದ್ದಿವೆ ಎಂದು ಹಲ್ಲೆಗೊಳಗಾದ ಬಿಜೆಪಿ ಮುಖಂಡ ಮಣಿಕಂಠ ರಾಠೋಡ್ ತಿಳಿಸಿದರು.
ಕೆಲ ದಿನಗಳ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಅಧಿಕಾರಿಗಳ ವಿರುದ್ಧ ಆಸ್ಪತ್ರೆಯ ಅವ್ಯವಸ್ಥೆ, ಅಕ್ರಮ ಅಕ್ಕಿ ಸಾಗಣೆ ಕುರಿತು ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದೆ. ಹೀಗಾಗಿ ಈ ಘಟನೆಯ ಹಿಂದೆ ಉಸ್ತುವಾರಿ ಸಚಿವರ, ಅಧಿಕಾರಿಗಳ ಹಾಗೂ ಅವರ ಬೆಂಬಲಿಗರ ಕೈವಾಡವಿದೆ ಎಂದು ನನಗೆ ಅನುಮಾನವಿದೆ ನೇರವಾಗಿ ಆರೋಪಿಸಿದರು.
ಅವರು ಎಷ್ಟೇ ಬಾರಿ ಹಲ್ಲೆ ನಡೆಸಿದರೂ ನಾನು ಇವರ ಹಗರಣವನ್ನು ಬಯಲಿಗೆಳೆದು ಜನರ ಮುಂದಿಡುವಲ್ಲಿ ಹಿಂದೇಟು ಹಾಕುವುದಿಲ್ಲ. ಹಿಂಜರಿಯುವುದಿಲ್ಲ ಎಂದು ತಿಳಿಸಿದರು.
ಭದ್ರತೆಗೆ ಮನವಿ: 2022ರಲ್ಲಿ ಬಿಜೆಪಿ ಸರ್ಕಾರವಿದ್ದಾಗ ನನಗೆ ಭದ್ರತೆ ಇತ್ತು. 2023ರ ವಿಧಾನಸಭೆ ಚುನಾವಣೆ ತರುವಾಯ ನನಗಿದ್ದ ಭದ್ರತೆ ವಾಪಸ್ ಪಡೆಯಲಾಗಿದೆ. ರಕ್ಷಣೆಗಾಗಿ ಗನ್ ಮ್ಯಾನ್ ಕೊಡುವಂತೆ ಪೊಲೀಸ್ ಕಮಿಷನರ್‍ಗೆ ಹಲವು ಬಾರಿ ಮನವಿ ಮಾಡಿದ್ದೇನೆ. ಆದರೂ ಈವರೆಗೆ ನನಗೆ ಗನ್ ಮ್ಯಾನ್ ಒದಗಿಸಿಲ್ಲ ಎಂದು ದೂರಿದರು.