ಬೆಂಗಳೂರು; ಬೆಂಗಳೂರು ನಗರದ ಮೀನು ಪ್ರಿಯರಿಗೆ ತಾಜಾ ಮೀನು ಸುಲಭವಾಗಿ ದೊರೆಯುವಂತೆ ಮಾಡಲು“ಮತ್ಸ್ಯವಾಹಿನಿ” ಯೋಜನೆಯಡಿ 150-ಪರಿಸರ ಸ್ನೇಹಿ ತ್ರಿಚಕ್ರ ವಾಹನಗಳನ್ನು ವಿತರಣೆ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಮೀನುಗಾರಿಕೆ ಇಲಾಖೆಯು ಹಮ್ಮಿಕೊಂಡಿದ್ದ ವಿಶ್ವ ಮೀನುಗಾರಿಕೆ ದಿನಾಚರಣೆ-2023 ಹಾಗೂ ಮತ್ಸ್ಯ ವಾಹಿನಿ-ಪರಿಸರ ಸ್ನೇಹಿ ತ್ರಿಚಕ್ರ ವಾಹನ ವಿತರಣಾ ಕಾರ್ಯಕ್ರಮದ ಅಂಗವಾಗಿ ಇಂದು ವಿಧಾನಸೌಧದ ಭವ್ಯ ಮೆಟ್ಟಿಲುಗಳ ಮುಂಭಾಗ ತ್ರಿಚಕ್ರವಾಹನಗಳನ್ನು ವಿತರಿಸಿ, ಬ್ಯಾಂಕ್ವೆಟ್ ಹಾಲ್‍ನಲ್ಲಿ ವಿವಿಧ ಜಿಲ್ಲೆಗಳಿಂದ ಸಂಗ್ರಹಿಸಿದ್ದ ವಿವಿಧ ತಳಿಗಳ ಮೀನುಗಳನ್ನು ಬೌಲ್‍ನಲ್ಲಿ ಬಿಡುವ ಮೂಲಕ “ವಿಶ್ವ ಮೀನುಗಾರಿಕೆ ದಿನಾಚರಣೆಯನ್ನು ಉದ್ಘಾಟಿಸಿದರು.
ನಂತರ ಮಾತನಾಡಿದ ಮುಖ್ಯಮಂತ್ರಿಗಳು ಮುಂದಿನ ದಿನಗಳಲ್ಲಿ ಈ ಯೋಜನೆಯನ್ನು ಜಿಲ್ಲೆಗಳಿಗೂ ವಿಸ್ತರಿಸಲಾಗುವುದು. ಮೀನುಗಾರಿಕೆಯನ್ನು ಕರಾವಳಿ ಮತ್ತು ಒಳನಾಡು ಪ್ರದೇಶದ ಬಹಳಷ್ಟು ಜನ ಅವಲಂಬಿಸಿದ್ದು, ಅದರಲ್ಲಿ ಕರಾವಳಿ ಪ್ರದೇಶದಲ್ಲಿ 4 ಸಾವಿರ ದೋಣಿಗಳಿದ್ದು, ಮೀನುಗಾರರು ಬಳಸುವ ದೋಣಿಗಳಿಗೆ ಸರಿಯಾದ ಸಮಯಕ್ಕೆ ಮತ್ತು ಅಗತ್ಯವಿರುವಷ್ಟು ಪ್ರಮಾಣದಲ್ಲಿ ಸೀಮೆಎಣ್ಣೆ ದೊರೆಯದೆ ತೀವ್ರ ತೊಂದರೆಯಾಗುತ್ತಿತ್ತು. ಈ ಸಮಸ್ಯೆಯನ್ನು ಹೋಗಲಾಡಿಸಲು ಸರ್ಕಾರವು ರಾಜ್ಯದಲ್ಲಿ ಪ್ರಪ್ರಥಮ ಬಾರಿಗೆ ಕೈಗಾರಿಕಾ ಸೀಮೆಎಣ್ಣೆಯನ್ನು ಪ್ರತಿ ಲೀಟರ್‍ಗೆ ರೂ.35/- ರಿಯಾಯಿತಿ ದರದಲ್ಲಿ ಪ್ರತಿ ದೋಣಿಗೆ 300 ಲೀಟರ್‍ನಂತೆ ಪೂರೈಸಲಾಗುತ್ತಿದೆ ಎಂದು ಹೇಳಿದರು.
ಮೀನುಗಾರ ಮಹಿಳೆಯರಿಗೆ ಆರ್ಥಿಕ ಸ್ವಾವಲಂಬನೆ ಕಲ್ಪಿಸಲು ಹಾಗೂ ವಹಿವಾಟು ವಿಸ್ತರಣೆಗೆ ಅನುಕೂಲವಾಗಲು ಬಡ್ಡಿರಹಿತವಾಗಿ ನೀಡುತ್ತಿದ್ದ ರೂ. 50 ಸಾವಿರಗಳ ಸಾಲವನ್ನು ರೂ. 3 ಲಕ್ಷಗಳಿಗೆ ಹೆಚ್ಚಿಸಲಾಗಿದೆ. ಯಾಂತ್ರೀಕೃತ ದೋಣಿಗಳಿಗೆ ಇದುವರೆಗೆ ವಾರ್ಷಿಕ ಮಿತಿ 1.50 ಕಿಲೋ ಲೀಟರ್ ಕರರಹಿತ ಡೀಸಲ್‍ನ್ನು ವಿತರಿಸಲಾಗುತ್ತಿತ್ತು. ಪ್ರಸ್ತುತ ಸಾಲಿನಿಂದ ಯಾಂತ್ರೀಕೃತ ದೋಣಿಗಳಿಗೆ ಡೀಸೆಲ್ ವಾರ್ಷಿಕ ಮಿತಿಯನ್ನು 1.50 ಲಕ್ಷ ಕಿಲೋ ಲೀಟರ್‍ನಿಂದ 2ಲಕ್ಷ ಕಿಲೋ ಲೀಟರ್‍ವರಗೆ ಹೆಚ್ಚಿಸಿ ಕರ ರಹಿತ ಡೀಸೆಲ್‍ನ್ನು ವಿತರಿಸಲಾಗುತ್ತಿದೆ ಎಂದರು.
ಇಲಾಖೆಯ ವಿವಿಧ ಯೋಜನೆಯಡಿ ಕರಾವಳಿ ಹಾಗೂ ಒಳನಾಡು ಮೀನುಗಾರಿಕಾ ಕ್ಷೇತ್ರಗಳಲ್ಲಿ ಇತ್ತೀಚಿನ ತಂತ್ರಜ್ಞಾನಗಳಾದ ಆರ್‍ಎಎಸ್, ಬಯೋಫ್ಲಾಕ್, ಅಕ್ವಾಫೋನಿಕ್ಸ್, ಕೇಜ್ ಕಲ್ಚರ್ ಇತ್ಯಾದಿ ಘಟಕಗಳನ್ನು ಸ್ಥಾಪಿಸಲು ನೆರವು ನೀಡುವುದರೊಂದಿಗೆ ಅವಕಾಶ ಕಲ್ಪಿಸಲಾಗಿದೆ. ಮೀನುಗಾರರು ಸಮುದ್ರದಲ್ಲಿ ಹೋಗಿ ಮೀನು ಹಿಡಿಯುವುದು ಕಷ್ಟಕರವಾಗಿದ್ದು ಅನೇಕ ಸಂದರ್ಭದಲ್ಲಿ ಪ್ರಾಣ ಕಳೆದುಕೊಳ್ಳುವ ಪರಿಸ್ಥಿತಿ ಉಂಟಾಗುತ್ತಿದ್ದು, ಸರ್ಕಾರ “ಸಂಕಷ್ಟ ಪರಿಹಾರ ನಿಧಿ” ಕಾರ್ಯಕ್ರಮವನ್ನು ಜಾರಿ ಮಾಡುತ್ತಿದೆ. ಮುಂದಿನ ವರ್ಷದಲ್ಲಿ ಮನೆ ಇಲ್ಲದವರಿಗೆ ಮನೆ ಕಟ್ಟಿಸಿ ಕೊಡುವ ಕೆಲಸವನ್ನು ಮಾಡಲಾಗುವುದು ಎಂದರು.
ಮೀನುಗಾರಿಕೆ ಸಚಿವರಾದ ಮಂಕಾಳ ಎಸ್.ವೈದ್ಯ ಅವರು ಮೀನುಗಾರಿಕೆ ವಿಶ್ವವಿದ್ಯಾಲಯ ಸ್ಥಾಪನೆ ಕುರಿತು ಪ್ರಸ್ತಾಪಿಸಿದ್ದು, ಮುಂದಿನ ವರ್ಷ ಇದರ ಬಗ್ಗೆ ವಿಚಾರ ಮಾಡುತ್ತೇವೆ ಎಂದು ಭರವಸೆ ನೀಡಿದರು.
ಮೀನಿನಲ್ಲಿ ಪೌಷ್ಠಿಕಾಂಶ ಹೆಚ್ಚಾಗಿದ್ದು, ಮೀನುಗಾರಿಕೆಯು ಆಹಾರ ಭದ್ರತೆಯನ್ನು ಒದಗಿಸುವುದರ ಜೊತೆಗೆ ಆರ್ಥಿಕ ಶಕ್ತಿ ನೀಡುತ್ತದೆ. ಸರ್ಕಾರ ಮೀನುಗಾರರ ಪರವಾಗಿದ್ದು ಮೀನುಗಾರರಿಗೆ ಎಲ್ಲಾ ರೀತಿಯ ಸಹಾಯವನ್ನ ನೀಡಲಾಗುವುದು ಎಂದು ತಿಳಿಸಿ, ಮೀನುಗಾರಿಕೆಯಲ್ಲಿ ಸಾಧನೆ ಮಾಡಿದ ಸಂಘ-ಸಂಸ್ಥೆಗಳನ್ನು ಗೌರÀವಿಸಿ, ಇಲಾಖೆಯ ಅಂಕಿ- ಅಂಶಗಳ ಕಿರು ಹೊತ್ತಿಗೆ ಬಿಡುಗಡೆ ಮಾಡಿದರು.
ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮಾತನಾಡಿ, ಮೀನುಗಾರಿಕೆ ವೃತ್ತಿಯನ್ನು ಅವಲಂಬಿಸಿ ಬದುಕು ನಡೆಸುತ್ತಿರುವ ಕರಾವಳಿ ಪ್ರದೇಶದ ಜನರ ಮೀನುಗಾರಿಕೆಯ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ ಎಂದರು. ಇದೇ ಸಂಧರ್ಭದಲ್ಲಿ “ಮತ್ಸ್ಯವಾಣಿ” ಮಾಸಿಕದ ವಿಶೇಷ ಸಂಚಿಕೆಯನ್ನು ಬಿಡುಗಡೆ ಮಾಡಿದರು.
ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರಾದ ಮಂಕಾಳ ಎಸ್.ವೈದ್ಯ ಅವರು ಮಾತನಾಡಿ, ರಾಜ್ಯವು ಒಳನಾಡು ಮೀನು ಉತ್ಪಾದನೆಯಲ್ಲಿ 7ನೇ ಸ್ಥಾನ ಹಾಗೂ ಕರಾವಳಿ ಮೀನು ಉತ್ಪಾದನೆಯಲ್ಲಿ 5ನೇ ಸ್ಥಾನ ಹೊಂದಿದ್ದು ಒಟ್ಟು ಉತ್ಪಾದನೆಯಲ್ಲಿ 3ನೇ ಸ್ಥಾನದಲ್ಲಿದ್ದೇವೆ. ಮೀನುಗಾರರ ಅಭಿವೃದ್ಧಿಗಾಗಿ ಮುಖ್ಯಮಂತ್ರಿ ಹಾಗೂ ಉಪಮುಖ್ಯ ಮಂತ್ರಿಗಳು ಹೆಚ್ಚಿನ ಪ್ರೋತ್ಸಾಹ ನೀಡುತ್ತಿದ್ದು, ಅವರಿಗೆ ಅನುಕೂ¯ವಾಗುವ ಯೋಜನೆಗಳನ್ನು ಜಾರಿಗೊಳಿಸುತ್ತಿದ್ದಾರೆ. 320 ಕಿ.ಮೀ ಕರಾವಳಿ ತೀರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮೀನುಗಾರರಿದ್ದು, ಅವರನ್ನು ಒಂದುಗೂಡಿಸಿ, ಗೌರವಿಸಲು ವಿಜೃಂಭಣೆಯಿಂದ ದಿನಾಚರಣೆ ಆಚರಿಸಲು ಮುಖ್ಯಮಂತ್ರಿಗಳು ಸೂಚಿಸಿದರು ಎಂದರು.
ರಾಜ್ಯದಲ್ಲಿ 85 ಲಕ್ಷ ಮೀನುಗಾರರಿದ್ದು, ಎಲ್ಲರಿಗೂ ಎಲ್ಲಾ ರೀತಿಯಲ್ಲಿ ಮೀನುಗಾರಿಕೆ ಮಾಡಲು ಅನುಕೂಲ ಕಲ್ಪಿಸಿದ್ದು, ಮೀನುಗಾರಿಕೆ ಮತ್ತು ಶಿಕ್ಷಣಕ್ಕೆ ತೊಂದರೆಯಾಗದಂತೆ ಅನುಕೂಲ ಕಲ್ಪಿಸಿದ್ದು, ವಿದ್ಯಾ ನಿಧಿ ಯೋಜನೆಯಡಿ 46 ಲಕ್ಷ ನೀಡಿದ್ದೇವೆ ಇತ್ತೀಚೆಗೆ ಭಟ್ಕಳದಲ್ಲಿ ಬೋಟ್ ಮುಳುಗಿದಾಗ ಹೆಲಿಕ್ಯಾಪ್ಟರ್ ಮೂಲಕ 7 ಜನರ ಜೀವ ಉಳಿಸಲಾಗಿದೆ ಎಂದರು.
ಪಶುಸಂಗೋಪನೆ ಸಚಿವರಾದ ಕೆ. ವೆಂಕಟೇಶ್ ಅವರು ಬೆಂಗಳೂರಿನಲ್ಲಿ 3 ಎಕರೆ ಜಾಗ ನೀಡಿದ್ದು, ಅದರಲ್ಲಿ ಮತ್ಸ್ಯ ಭವನ ನಿರ್ಮಿಸಿ, ಮ್ಯೂಜಿಯಂ ಮತ್ತು ತರಬೇತಿ ಕೇಂದ್ರ ಸ್ಥಾಪಿಸಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು, ಪಶು ಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಶ್ರೀಮತಿ ಸಲ್ಮಾ ಕೆ.ಫಾಹಿಮ್, ಮೀನುಗಾರರು, ಮೀನು ಕೃಷಿಕರು, ಸಂಘ-ಸಂಸ್ಥೆಯ ಸದಸ್ಯರುಗಳು ಉಪಸ್ಥಿತರಿದ್ದರು.