ಶರಣಬಸವರ ಜೀವನವೆಲ್ಲ ಶೀವಲೀಲೆ

0
59

ಮಹಾದಾಸೋಹಿ ಶರಣಬಸವೇಶ್ವರರ ಶಿವಜೀವನವೆಲ್ಲ ಲೀಲೆಯಾಗಿದ್ದು, ಅವರ ಲೀಲೆಗಳು ನಿರಂತರವಾಗಿ ಜರಗುವ ಈ ಮಹಾಮನೆ ಭಕ್ತಿ ದಾಸೋಹದ ಮಂದಿರವಾಗಿದೆ ಎಂದು ನಿವೃತ್ತ ಪ್ರಾಚಾರ್ಯೆ ಪ್ರೊ. ನಿಂಗಮ್ಮ ಪತಂಗೆ ಹೇಳಿದರು.

ಕಲಬುರಗಿಯ ಶರಣಬಸವೇಶ್ವರ ಸಂಸ್ಥಾನದ ಅಖಿಲ ಭಾರತ ಶಿವಾನುಭವ ಮಂಟಪದಲ್ಲಿ ಶ್ರಾವಣ ಮಾಸದ ಪ್ರಯುಕ್ತ ಹಮ್ಮಿಕೊಂಡಿರುವ ೪೦ ದಿನಗಳ ಉಪನ್ಯಾಸ ಮಾಲಿಕೆಯಲ್ಲಿ ಗುರುವಾರ ’ಮಹಾದಾಸೋಹಿ ಶರಣಬಸವರ ಶಿವಲೀಲೆಗಳ’ ಕುರಿತು ಉಪನ್ಯಾಸ ನೀಡಿದರು. ಹೆಣ್ಣಮಗಳೊಬ್ಬಳು ಗಂಡನನ್ನು ಕಳೆದುಕೊಂಡು ಜೀವನ ಸಾಗಿಸುವುದು ದುಸ್ತರವಾಗಿತ್ತು. ಯಾರೂ ಅವಳಿಗೆ ಸಹಾಯಕ್ಕೆ ಬರಲಿಲ್ಲ. ಸದಾ ಶರಣರ ನಾಮಸ್ಮರಣೆಯಲ್ಲಿಯೇ ಇರುತ್ತಿದ್ದಳು. ಆ ತಾಯಿಯ ಸ್ಮರಣೆ ಶರಣರಿಗೆ ಕೇಳಿಸಿತು. ಕುಳಿತ ಸ್ಥಳದಲ್ಲಿಯೇ ಕೈಯೆತ್ತಿ ಆಕೆಗೆ ಮನಮುಟ್ಟಿ ಆಶೀರ್ವದಿಸುತ್ತಾರೆ. ಆಕೆಯ ದುಃಖ ಅಳಿದು ಹೋಗುತ್ತದೆ. ಅವಳು ಮತ್ತು ಅವಳ ಮಕ್ಕಳು ಇದ್ದುದರಲ್ಲಿ ಸುಖವಾಗಿ ಜೀವನ ಕಳೆಯುತ್ತಾರೆ. ಶರಣರ ನಾಮಸ್ಮರಣೆಯಲ್ಲಿಯೇ ಕಾಲ ಕಳೆಯುತ್ತಾರೆ.

Contact Your\'s Advertisement; 9902492681

ಒಬ್ಬ ಶ್ರೀಮಂತ ಮಗನ ಹೆಂಡತಿ, ಮಗನಿಂದ ತಂದೆ ತಾಯಿಯರನ್ನು ದೂರ ಮಾಡಿದ್ದಳು. ಅವರಿಗೆ ಅನ್ನಕ್ಕೂ ಗತಿಯಿಲ್ಲದಂತಾಯಿತು. ಒಂದು ಹೊತ್ತಿನ ಅನ್ನಕ್ಕೆ ಸೊಸೆ ಸಾವಿರ ಮಾತುಗಳನ್ನಾಡಿ ಹಂಗಿಸುತ್ತಿದ್ದಳು. ಅವಳ ಅತ್ತೆ ’ಶರಣಾ’ ಎಂದು ದುಃಖಿಸುತ್ತಾಳೆ. ಅವರನ್ನು ಕರೆಯಿಸಿಕೊಂಡ ಶರಣರು ಅವರಿಗೆ ತಮ್ಮ ಹತ್ತಿರವೇ ಇಟ್ಟುಕೊಳ್ಳುತ್ತಾರೆ. ಆ ಕಡೆ ಕೆಲವೇ ಗಂಟೆಗಳಲ್ಲಿ ಸೊಸೆಗೆ ಪಾರ್ಶ್ವವಾಯು ಆಗುತ್ತದೆ. ಮಗ ಜಾರಿ ಬಿದ್ದು ಕಾಲು ಮುರಿದುಕೊಳ್ಳುತ್ತಾನೆ. ಮನೆಯಲ್ಲಿ ಯಾರೂ ಇಲ್ಲ ಒಂದು ಗುಟುಕು ನೀರು ಸಿಗುವುದಿಲ್ಲ. ಆಗ ಮಗನಿಗೆ ತಾನು ಮಾಡಿದ ತಪ್ಪೆಲ್ಲ ಅರ್ಥವಾಯಿತು. ಆದರೆ ಏಳುವದಕ್ಕೂ ಬರುತ್ತಿಲ್ಲ. ಶರಣರ ನಾಮಸ್ಮರಣೆ ಮಾಡುತ್ತಾನೆ. ತಕ್ಷಣವೇ ಕಾಲಿನ ನೋವು ಕಡಿಮೆಯಾಗಿ ಓಡುತ್ತ ಶರಣರ ಹತ್ತಿರ ಬರುತ್ತಾನೆ. ತಂದೆ, ತಾಯಿ ಹಾಗೇ ಶರಣರ ಪಾದ ಹಿಡಿದು ಕ್ಷಮೇ ಕೇಳಿ ದುಃಖಿಸುತ್ತಾನೆ. ಶರಣರು ವಿಭೂತಿ ಕೊಟ್ಟು ಅವನ ಹೆಂಡತಿಗೆ ಹಚ್ಚಲು ತಿಳಿಸುತ್ತಾರೆ. ಮನೆಗೆ ಬಂದು ಹಾಗೆ ಮಾಡಿದಾಗ ಅವಳು ರೋಗ ಮುಕ್ತಳಾಗುತ್ತಾಳೆ. ಶರಣರ ಹತ್ತಿರ ಹೋಗಿ ಪಾದಿ ಹಿಡಿದು ಸನ್ಮಾರ್ಗದಲ್ಲಿ ನಡೆಯುತ್ತಾರೆ.

ಒಂದು ಮನೆಯಲ್ಲಿ ಸಣ್ಣಸೊಸೆ ಶರಣರ ಪರಮಭಕ್ತಳಾಗಿದ್ದು ಲಿಂಗಪೂಜೆ, ದಾಸೋಹ ಮಾಡುತ್ತಾ ಮನೆಯವರನ್ನು ಗೌರವಿಸುತ್ತಿದ್ದಳು. ಮನೆಯಲ್ಲಿ ಅತ್ತೆ, ನಾದಿನಿ, ನೆಗೆಯಣ್ಣಿಯರಿಗೆ ಇದು ತಮಾಷೆಯ ವಸ್ತುವಾಯಿತು. ಆಕೆ ಮಾಡುವ ಕಾರ್ಯಗಳಲ್ಲಿ ವಿಘ್ನ ತಂದೊಡ್ಡುತ್ತಿದ್ದರು. ಒಂದು ದಿನ ಆಕೆ ಪೂಜೆಗೆ ಕುಳಿತಿದ್ದಾಗ ಪೂಜೆಗೆ ಭಂಗ ತರಲು ಯೋಚಿಸಿ ಎಲ್ಲರು ಜೋರಾಗಿ ಮಾತನಾಡುತ್ತಾ ಚಪ್ಪಾಳೆ ಬಡಿದು ನಗಲು ಪ್ರಾರಂಭಿಸುತ್ತಾರೆ. ಅವರು ಹೇಗೆ ಮಾತಾಡುತ್ತಿದ್ದರೋ ಹಾಗೇ ನಿಂತು ಬಿಟ್ಟರು. ಮಾತಿಲ್ಲ, ನಗುವಿಲ್ಲ. ಸಣ್ಣಸೊಸೆ ’ ಯಪ್ಪಾ ಶರಣಾ ಕಾಪಾಡಪ್ಪ’ ಎಂದು ಸ್ಮರಣೆ ಮಾಡಿದಾಗ ಎಲ್ಲರಿಗೆ ಜೀವ ಬಂದಂತಾಯಿತು. ಹೋಗಿ ಆಕೆಗೆ ತಪ್ಪಾಯ್ತು ಎಂದು ಹೇಳಿ ಸನ್ಮಾರ್ಗದಲ್ಲಿ ನಡೆಯುತ್ತಾರೆ.

ಕಲಬುರಗಿ ಸಮೀಪದ ಸಿರಸಗಿ ಎನ್ನುವ ಗ್ರಾಮಕ್ಕೆ ಶರಣರು ಆಗಾಗ ಬರುತ್ತಿದ್ದರು. ಭಕ್ತರು ತಮ್ಮ ಸುಖ ದುಃಖಗಳನ್ನೆಲ್ಲಾ ಅವರ ಮುಂದೆ ಹೇಳಿಕೊಳ್ಳುತ್ತಿದ್ದರು. ಸಿದ್ದಪ್ಪ ಎನ್ನುವ ಭಕ್ತನೊಬ್ಬ ತನ್ನ ಹೊದಲ್ಲಿ ಬಾವಿ ಹೊಡೆಸಬೇಕೆಂದು ಶರಣರಿಗೆ ಹೇಳಿದಾಗ ಶರಣರು ಅವನ ಹೊಲಕ್ಕೆ ಹೋಗಿ ಆ ಜಾಗವನ್ನು ತೋರಿದರು. ಆ ಸ್ಥಳದಲ್ಲಿ ಎಷ್ಟು ಅಗೆದರೂ ನೀರು ಹತ್ತಲಿಲ್ಲ. ಶರಣರ ಹತ್ತಿರ ಬಂದು ಹೇಳಿದನು. ಆಗ ಶರಣರು ಅವನ ಹೊಲಕ್ಕೆ ಹೋಗಿ ತಾವು ತೋರಿಸಿದ್ದ ಸ್ಥಳ ಇದು ಅಲ್ಲ ಎಂದು ಹೇಳಿ ಅಗೆದ ಬಾವಿಯೊಳಗೆ ತಾವೇ ಇಳಿದು ಒಂದು ಕಡೆ ಕೈ ಮಾಡಿ ಒಂದು ದೊಡ್ಡ ಕಲ್ಲನ್ನು ತೆಗೆಯಲು ಹೇಳಿದರು. ಕಲ್ಲನ್ನು ತೆಗೆದಾಗ ನೀರಿನ ದೊಡ್ಡ ಸೆಲೆಯೇ ಹೊರಟಿತು. ಎಲ್ಲರೂ ಮೇಲಕ್ಕೆ ಬರುವಷ್ಟರಲ್ಲಿಯೇ ಬಾವಿಯೇ ತುಂಬಿ ಬಿಟ್ಟಿತು. ಹೀಗೆ ಶರಣರ ಲೀಲೆಗಳು ಎಷ್ಟೋ ಲೆಕ್ಕವಿಲ್ಲದಷ್ಟು ನಡೆದಿವೆ ಇನ್ನೂ ನಡೆಯುತ್ತಿವೆ ಎಂದು ಹೇಳಿದರು.

ಪ್ರೊ. ನಿಂಗಮ್ಮ ಪತಂಗೆ, ನಿವೃತ್ತ ಪ್ರಾಚಾರ್ಯರರು

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here