ಕರ್ನಾಟಕದಲ್ಲಿ ಇತ್ತೀಚಗಿನ ಮಹತ್ವದ ಕಾರ್ಯಕ್ರಮ ಮತ್ತೆ ಕಲ್ಯಾಣ. ಶರಣರ ವಚನಗಳನ್ನು ಪ್ರಸ್ತುತ ಸಮಾಜದಲ್ಲಿ ಮರುಜೀವ ಕೊಡುವ ಪ್ರಯತ್ನ. ಬಹಳ ಮುಖ್ಯವಾಗಿ ಯುವಕರಲ್ಲಿ ವಚನ ಮತ್ತು ಶರಣರ ಜೀವನಾನುಭವ ಸದೃಢಗೊಳಿಸುವ ಸಲುವಾಗಿ ರೂಪುಗೊಂಡ ಅದ್ಭುತ ಆಲೋಚನೆ. ಬಸವ ಇಹ ಲೋಕದಲ್ಲಿನ ಅನೇಕ ಸಮಸ್ಯೆಗಳನ್ನು ತನ್ನ ಅಮೃತದಂತಹ ವಚನಗಳ ಮೂಲಕ ಹೋಗಲಾಡಿಸುವ ಪ್ರಯತ್ನ ಮಾಡಿದರು. ಅವರು ನುಡಿದಂತೆ ನಡೆದರು. ಕಾಯಕ ಮತ್ತು ದಾಸೋಹದ ಮೂಲಕ ಸಮಸಮಾಜ ನಿರ್ಮಾಣ ಮಾಡಿದರು.
ನಡೆ ನುಡಿಯಲ್ಲಿ ಒಂದಾಗಿದ್ದ ಬಸವನ ಸಾವಿನ ಕುರಿತು ಇವತ್ತಿಗೂ ಚರ್ಚೆಯಿದೆ. ಲಿಂಗೈಕ್ಯರಾದರು ಎಂದು ಒಂದು ಪಂಥ ಹೇಳಿದರೆ, ಕೊಲ್ಲಲ್ಪಟ್ಟರು ಎಂದು ಇನ್ನೊಂದು ಪಂಥದ ಜನರು ಹೇಳುತ್ತಾರೆ. ಲಿಂಗಾಯತರು ಮಾತ್ರ ಬಸವನ ಅನುಯಾಯಿ ವೈದಿಕರಲ್ಲ ಎಂದು ಲಿಂಗಾಯತರು ಹೇಳುತ್ತಾರೆ. ಹೀಗೆ ಇವತ್ತಿಗೂ ಕಗ್ಗಂಟಾಗಿಯೇ ಅನೇಕ ವಿಚಾರಗಳು ಪ್ರಸ್ತುತ ನಾಗರಿಕ ಸಮಾಜದಲ್ಲಿವೆ. ಎಲ್ಲರೂ ಒಂದೇ ಎಂದು ಸಾರುವ ಈ ಸಮಾಜದಲ್ಲಿ ಇವತ್ತಿಗೂ ತಾರತಮ್ಯ ಅಷ್ಪ್ರಶ್ಯತೆ ನಿಂತಿಲ್ಲ. ಜಾತಿ ಪದ್ಧತಿ ಇವತ್ತಿಗೂ ತಾಂಡವಾಡುತ್ತಿದೆ. ಪ್ರತಿದಿನ ಕೊಲೆ ಸುಲಿಗೆ ಹತ್ಯೆ ಅಹಿಂಸೆ ಮಾನವ ಸಮಾಜ ತಲೆತಗ್ಗಿಸುವಂತಹ ವಾಸ್ತವದಲ್ಲಿದೆ.
ಈ ಸಂದರ್ಭದಲ್ಲಿ ಮತ್ತೆ ಕಲ್ಯಾಣ ಎನ್ನುವ ವಿನೂತನ ಕಾರ್ಯಕ್ರಮ ರೂಪಿಸಿ ಯುವ ನಾಗರಿಕರಲ್ಲಿ ಬಸವ ಚೈತನ್ಯ ಮೂಡಿಸುವ ಪ್ರಯತ್ನ ಮೆಚ್ಚುವಂತಹದ್ದು ಯುವಕರಲ್ಲಿ ವಚನ ಶಕ್ತಿಯನ್ನು ಪಚನಗೊಳಿಸಲು ಹೊರಟಿರುವುದು ಸ್ವಾಗರ್ಹವಾಗಿದೆ. ಇವತ್ತಿಗೂ ಕಲ್ಲ ದೇವರ ಕಂಡು ಕೈ ಮುಗಿಯುವ ನಾವುಗಳೆಲ್ಲರೂ ಬಸವನ ವಚನಗಳ ಬಗ್ಗೆ ಮಾತಾಡಲು ಅನರ್ಹರಾಗಿದ್ದೇವೆ. ಈ ಕಾರ್ಯಕ್ರಮದಲ್ಲಿ ಬಸವನ ವಚನದ ಹಾದಿಯನ್ನು ಈ ನಾಡಿನ ಹೆಸರಾಂತ ವ್ಯಕ್ತಿಗಳು ಬಹಳ ಅದಮ್ಯವಾಗಿ ಮಾತನಾಡಿದ್ದಾರೆ. ನಾಟಕಗಳ ಪ್ರದರ್ಶನವಾಗಿದೆ. ಬಸವ ಹೇಗಿದ್ದರು ಅವರ ವಚನಗಳು ಹೇಗಿದ್ದವು ಎಂಬುವುದರ ಅರ್ಥ ತಿಳಿಸಿಕೊಡುವ ಪ್ರಯತ್ನ ಮಾಡಿದ್ದಾರೆ ಆದರೆ ಈ ಕಾರ್ಯಕ್ರಮದ ಮೂಲಕ ಕಾಯಕ ಜೀವಿಗಳೆಂದು ಹೇಳಿಕೊಂಡು ಬಸವ ತತ್ವಗಳಿಗೆ ಕೊಳ್ಳಿಯಿಡುವ ಜನ ಹೆಚ್ಚಾಗಿರುವುದು ದುರಂತದ ಸಂಗತಿಯಾಗಿದೆ.
ಬಾಯಲ್ಲಿ ಬಸವ ಮಂತ್ರ ಮನೆಯಲ್ಲಿ ಕಲ್ಲದೇವರ ಪೂಜೆ ಮಾಡುವ ಜನಸಂಸ್ಕೃತಿ ಹೆಚ್ಚಾಗಿದೆ. ಕಲ್ಲ ನಾಗರ ಕಂಡರೆ ಹಾಲು ಎರೆಯುವವರು ಇವರೆ ಹಾಲು ಹುತ್ತಲಿ ಹಾಕಬೇಡಿ ಹಸಿದ ಹೊಟ್ಟೆಗೆ ಉಣಿಸಿ ಎಂದು ಭಾಷಣ ಮಾಡುವವರೂ ಅವರೇ ಆಗಿದ್ದಾರೆ. ಬರಿ ನುಡಿದು ಬಸವ ತತ್ವದಂತೆ ನಡೆಯದಿರ್ದೊಡೆ ಇವರನ್ನು ಬಸವ ಮೆಚ್ಚುವನೆ ಎನ್ನುವ ನನ್ನೊಳಗೆ ಹುಟ್ಟುವ ಯಕ್ಷಪ್ರಶ್ನೆ. ಬಸವ ಸಮಸಮಾಜವನ್ನು ಕಟ್ಟಲು ತನ್ನ ಪ್ರಾಣವನ್ನೇ ಪಣಕ್ಕಿಟ್ಟ ವ್ಯಕ್ತಿ ಆದರೆ ನಾವೆಲ್ಲರೂ ಬರಿ ಅವರ ಹೆಸರು ಹೇಳಿ ನಮ್ಮ ಉಸಿರು ಉಳಿಸಿಕೊಳ್ಳುತ್ತಿದ್ದೇವೆಯೆ ಎನ್ನುವ ವಾತಾವರಣ ನಿರ್ಮಾಣವಾಗುತ್ತಿದೆ. ನೆಲಮೂಲದ ಸಂಸ್ಕೃತಿಯನ್ನು ಹತ್ತಿಕ್ಕುವ ಹುನ್ನಾರ ದಶದಿಕ್ಕುಗಳಿಂದ ಸಾಗುತ್ತಿದೆ. ಸಮಾಜದಲ್ಲಿರುವ ಅಜ್ಞಾನದ ಕತ್ತಲೆಯನ್ನು ಹೋಗಲಾಡಿಸಿ ಬಸವ ಬೆಳಕು ನೀಡಬಲ್ಲ ಜ್ಯೋತಿಗಳ ಸಂಖ್ಯೆ ಕ್ಷೀಣವಾಗುತ್ತಿದೆ. ಎಲ್ಲರೂ ಬರಿ ಭಾಷಣಕಾರರೂ ಮಾತುಗಾರರಾಗಿದ್ದೇವೆ ಹೊರತು ಆಚರಣೆಗೆ ತರುವಲ್ಲಿ ಯಡುವುತಿದ್ದೇವೆ. ನಾವೆಲ್ಲರೂ ಭಾಷಣ ಮಾಡಿ ಮನೆಗೆ ಹೋದಮೇಲೆ ಮಡದಿ ಜೊತೆಗೆ ಕಲ್ಲದೇವರ ಮುಂದೆ ಕೈಮುಯುತ್ತೇವೆ.
ನಾವು ನುಡಿಯುತ್ತೇವೆ ನಡೆಯುವುದಿಲ್ಲ ಎನ್ನುವ ಹೊಸ ಗಾದೆ ಮಾತು ಕಟ್ಟಿಕೊಂಡು ಓಡಾಡುತ್ತಿದ್ದೇವೆ. ಆಡುವುದು ಒಂದು ಮಾಡುವುದು ಇನ್ನೊಂದು ಎನ್ನುವಂತಾಗಿದೆ ನಮ್ಮ ಬದುಕು. ಕುಲಕೊಬ್ಬ ವ್ಯಕ್ತಿಯನ್ನು ಆಯ್ಕೆ ಮಾಡಿಕೊಂಡು ಅವರಿಗೊಂದು ಜಯಂತಿ ಮಾಡಿಕೊಂಡು ಅವರ ಮೆರವಣಿಗೆ ಮಾಡುತ್ತಿದ್ದೇವೆಯೆ ಹೊರತು ಅವರ ತತ್ವದ ಆಚರಣೆ ನಿಲ್ಲಿಸಿದ್ದೇವೆ. ಇವತ್ತು ಸಮಾಜದಲ್ಲಿ ನೈಜವಾಗಿ ಮಾತನಾಡುವ ವ್ಯಕ್ತಿಗಳನ್ನು ಕೊಲ್ಲಲಾಗುತ್ತಿದೆ. ವಿಚಾರವಾದಿಗಳ ಹತ್ಯೆಗಳಾಗುತ್ತಿವೆ. ಪ್ರಜಾಪ್ರಭುತ್ವ ಪುಸ್ತಕಕ್ಕೆ ಹಾಗೂ ಭಾಷಣಕ್ಕೆ ಸೀಮಿತವಾಗುತ್ತಿದೆ. ಗೋಡ್ಸೆ ಮಾಹಾತ್ಮ ಆಗಿದ್ದಾನೆ ಶಾಲೆಯ ಮಕ್ಕಳು ಯಾವುದು ಸತ್ಯ ಯಾವುದು ಮಿಥ್ಯ ಎನ್ನುವ ಗೊಂದಲದಲ್ಲಿದ್ದಾರೆ. ಟಿಪ್ಪು ಸುಲ್ತಾನನ್ನು ದೇಶದ್ರೋಹಿ ಪಟ್ಟ ಕಟ್ಟುತ್ತಿದ್ದೇವೆ. ಈ ಸಂದರ್ಭದಲ್ಲಿ ಬಸವ ತತ್ವದ ಆಚರಣೆ ಅನುಷ್ಠಾನದ ಅವಶ್ಯಕತೆಯಿದೆಯೆ ಹೊರತು ಭಾಷಣವಲ್ಲ.