Monday, July 15, 2024
ಮನೆಬಿಸಿ ಬಿಸಿ ಸುದ್ದಿಹಳಕರ್ಟಿ: ಶ್ರೀವೀರಭದ್ರೇಶ್ವರ ಜಾತ್ರೆ 27 ರಿಂದ | ಡಿ.2 ರಂದು ಭವ್ಯ ರಥೋತ್ಸವ

ಹಳಕರ್ಟಿ: ಶ್ರೀವೀರಭದ್ರೇಶ್ವರ ಜಾತ್ರೆ 27 ರಿಂದ | ಡಿ.2 ರಂದು ಭವ್ಯ ರಥೋತ್ಸವ

ವಾಡಿ: ಸುಕ್ಷೇತ್ರ ಹಳಕರ್ಟಿ ಗ್ರಾಮದ ಐತಿಹಾಸಿಕ ಶ್ರೀ ವೀರಭದ್ರೇಶ್ವರ ಜಾತ್ರಾ ಮಹೋತ್ಸವಕ್ಕೆ ನ.27 ರಿಂದ ವಿದ್ಯುಕ್ತ ಚಾಲನೆ ದೊರೆಯಲಿದೆ. ಕಟ್ಟಿಮನಿ ಹಿರೇಮಠದ ಪೀಠಾಧಿಪತಿ ಪೂಜ್ಯ ಶ್ರೀಮುನೀಂದ್ರ ಶಿವಾಚಾರ್ಯ ಅವರ ನೇತೃತ್ವದಲ್ಲಿ ಸಕಲ ಸಂಪ್ರದಾಯಗಳು ಆಚರಣೆಯಾಗಲಿವೆ. ಡಿ.1 ರಂದು ರಾತ್ರಿ ಅಗ್ನಿಪ್ರವೇಶ ಹಾಗೂ ಡಿ.2 ರಂದು ಸಂಜೆ 6:00 ಗಂಟೆಗೆ ಭವ್ಯ ರಥೋತ್ಸವ ನಡೆಯಲಿದೆ ಎಂದು ದೇವಸ್ಥಾನ ಟ್ರಸ್ಟ್ ಸಮಿತಿ ಕಾರ್ಯದರ್ಶಿ ಚಂದ್ರಕಾಂತ ಮೇಲಿನಮನಿ ತಿಳಿಸಿದ್ದಾರೆ.

“ರಾಜ್ಯದ ವಿವಿಧ ಜಿಲ್ಲೆಯಲ್ಲಿ ಭಕ್ತರನ್ನು ಹೊಂದಿರುವ ಶ್ರೀಕ್ಷೇತ್ರ ಹಳಕರ್ಟಿ ಗ್ರಾಮವು ಶ್ರೀವೀರಭದ್ರೇಶ್ವರರ ರಥೋತ್ಸವಕ್ಕಾಗಿ ಸಜ್ಜಾಗಿದೆ. ಭಕ್ತರು, ಗ್ರಾಮಸ್ಥರು ಹಾಗೂ ಜಾತ್ರಾ ಸಮಿತಿಯ ಪದಾಧಿಕಾರಿಗಳು ಸಕಲ ಸೌಲಭ್ಯಗಳ ವ್ಯವಸ್ಥೆ ಮಾಡಿದ್ದಾರೆ. ವೀರಭದ್ರೇಶ್ವರ ಹಾಗೂ ಮೈಲಾರಲಿಂಗೇಶ್ವರ ದೇಗುಲಗಳಿರುವ ಶಕ್ತಿಪೀಠದ ಊರಾಗಿದ್ದು, ಭಕ್ತಿಯ ಜಾತ್ರೆ ನೋಡುವುದೇ ಸೊಗಸು. ಬರುವ ಲಕ್ಷಾಂತರ ಭಕ್ತರಿಗಾಗಿ ಭಕ್ತಸಮೂಹವೇ ಅನ್ನಸಂತರ್ಪಣೆ ಮಾಡುತ್ತಿರುವುದು ಸಂತಸದ ಸಂಗತಿ. ಮೈಲಾರಲಿಂಗ ದೇವಸ್ಥಾನದಲ್ಲಿ ನಡೆಯುವ ಸರಪಳಿ ಹರಿಯುವ ಸಡಗರ ಮತ್ತು ಅಗ್ನಿ ಪ್ರವೇಶದಂತಹ ಸಾಂಪ್ರದಾಯಿಕ ಆಚರಣೆಗಳನ್ನು ಭಕ್ತರು ಕಣ್ತುಂಬಿಕೊಂಡು ದೇವರ ಕೃಪೆಗೆ ಪಾತ್ರರಾಗಬೇಕು”. -ಶ್ರೀಮುನೀಂದ್ರ ಸ್ವಾಮೀಜಿ. ಪೀಠಾಧಿಪತಿಗಳು, ಕಟ್ಟಿಮನಿ ಹಿರೇಮಠ ಹಳಕರ್ಟಿ.

ಶನಿವಾರ ಹಳಕರ್ಟಿ ಕಟ್ಟಿಮನಿ ಹಿರೇಮಠದಲ್ಲಿ ಶ್ರೀಮುನೀಂದ್ರ ಸ್ವಾಮೀಜಿ ಅವರ ಸಾನಿಧ್ಯದಲ್ಲಿ ಜಾತ್ರಾಮಹೋತ್ಸವದ ಬಿತ್ತಿಪತ್ರ ಬಿಡುಗಡೆ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು ನ.27 ರಂದು ರಾತ್ರಿ 10:00 ಗಂಟೆಗೆ ಚಿಕ್ಕವೀರಪ್ಪ ಅವರ ಮನೆಯಿಂದ ಮೈಲಾರಲಿಂಗೇಶ್ವರ ದೇವಸ್ಥಾನ ವರೆಗೆ ಸಕಲ ವಾಧ್ಯಗಳೊಂದಿಗೆ ಅಂಬಲಿ ಬಂಡಿ ತರಲಾಗುವುದು. ನ.28 ರಂದು ಸಂಜೆ 4:00 ಗಂಟೆಗೆ ಜೋಡು ಪಲ್ಲಕ್ಕಿಯೊಂದಿಗೆ ರುದ್ರಭೂಮಿಗೆ ಹೋಗುವುದು. ಅಂದು ಸಂಜೆ 6:00 ಗಂಟೆಗೆ ಚೌಡಮ್ಮನ ಗಂಗಸ್ಥಾಳ. ಡಿ.29 ರಂದು ಪಲ್ಲಕ್ಕಿ ಸೇವೆ ನಡೆಯಲಿದೆ.

ಡಿ.30 ರಂದು ರಾತ್ರಿ 1:00 ಗಂಟೆಗೆ ಮೈಲಾರಲಿಂಗೇಶ್ವರ ದೇವಸ್ಥಾನದಲ್ಲಿ ಕಳ್ಳ ಸರಪಳಿ ಹರಿಯುವುದು. ಡಿ.1 ರಂದು ಸಂಜೆ 4:00 ಗಂಟೆಗೆ ಮೈಲಾರಲಿಂಗೇಶ್ವರ ದೇವಸ್ಥಾನದಲ್ಲಿ ದೈವದ ಸರಪಳಿ ಹಾಗೂ ವಗ್ಗಯಗಳಿಗೆ ಸನ್ಮಾನ ನಡೆಯುವುದು. ರಾತ್ರಿ 11:00 ಗಂಟೆಗೆ ಪುರವಂತರ ಆಡುವಿಕೆ ಮತ್ತು ಭಕ್ತರಿಂದ ಅಗ್ನಿಪ್ರವೇಶ, ಪುರವಂತರ ಸೇವೆ ನಡೆಯುವುದು. ಡಿ.2 ರಂದು ಸಂಜೆ 4:00 ಗಂಟೆಗೆ ಚೌಡೇಶ್ವರಿ ದೇವಿ ಆಡುವಿಕೆ, ಹಿರೇಮಠದಲ್ಲಿ ಉಡಿ ತುಂಬುವ ಕಾರ್ಯಕ್ರಮ, ಸಂಜೆ 6:00 ಗಂಟೆಗೆ ಶಶಿಧರ ದೇಶಮುಖ ಮನೆಯಿಂದ ಕುಂಭ ತರುವದು. ನಂತರ ಭಕ್ತರ ಜಯಘೋಷಗಳ ಮಧ್ಯೆ ಶ್ರೀವೀರಭದ್ರೇಶ್ವರರ ಭವ್ಯ ರಥೋತ್ಸವ ನಡೆಯುವುದು. ಇದೇ ವೇಳೆ ಶಂಕರ ಮಹಾದೇವ ಮತ್ತು ವೀರೇಶ ಮಹಾದೇವ ಹಳಕಟ್ಟಿ ವಿಜಯಪುರ ಅವರಿಂದ ಮದ್ದು ಸುಡುವ ಕಾರ್ಯಕ್ರಮ ನಡೆಯಲಿದೆ. ಡಿ.1 ಮತ್ತು 2 ರಂದು ದಿ.ದಾನಮ್ಮ ಪುಟ್ಟಪ್ಪ ಮಲೆಬೆನ್ನೂರ ಸ್ಮರಣಾರ್ಥ ಬೆನಕೂಂಡಿ ಪರಿವಾರದಿಂದ ಮಹಾ ಪ್ರಸಾದ ಸೇವೆ ಇರಲಿದೆ. ಡಿ.1,2,3 ರಂದು ಪ್ರತಿದಿನ ರಾತ್ರಿ 10:30ಕ್ಕೆ ಸಾಮಾಜಿಕ ನಾಟಕ ಪ್ರದರ್ಶನ ನಡೆಯಲಿದೆ ಎಂದು ಚಂದ್ರಕಾಂತ ಮೇಲಿನಮನಿ ವಿವರಿಸಿದರು.

ಜಾತ್ರಾಮಹೋತ್ಸವ ಸಮಿತಿಯ ರಾಜುಗೌಡ ಪೊಲೀಸ್ ಪಾಟೀಲ, ಬಸವರಾಜ ಲೋಕನಳ್ಳಿ, ಪ್ರಕಾಶ ಚಂದನಕೇರಿ, ರವಿಸಾಹು ಸಂಗಶೆಟ್ಟಿ, ಸಿದ್ದು ಮುಗುಟಿ, ನೀಲಕಂಠ ಸಂಗಶೆಟ್ಟಿ, ಫಯ್ಯಾಜ್ ಪಟೇಲ್, ಜಗದೀಶ ಚಂದನಕೇರಿ, ಕರಣಪ್ಪ ಇಸಬಾ, ಭೀಮಾಶಂಕರ ಕುಲಕುಂದಿ, ಭಾಗಣ್ಣ ಹೊನಗುಂಟಿ, ಇಬ್ರಾಹಿಂ ಖುರೇಶಿ, ಶರಣು ಬೊಮ್ಮನಳ್ಳಿ, ನಿಂಗಪ್ಪ ಬೊಮ್ಮನಳ್ಳಿ ಪಾಲ್ಗೊಂಡಿದ್ದರು.

RELATED ARTICLES

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here

- Advertisment -

Most Popular