ಸಂವಿಧಾನದ ಕಾನೂನುಗಳನ್ನು ಗೌರವದಿಂದ ಪಾಲಿಸಿ: ಎಸ್. ನಾಗಶ್ರೀ | ಗುಲಬರ್ಗಾ ವಿವಿಯಲ್ಲಿ ಸಂವಿಧಾನ ದಿನ ಆಚರಣೆ

0
74
ದೇಶದ ಎಲ್ಲಾ ರೀತಿಯ ಹೊಸ ಹೊಸ ಕಾನೂನುಗಳಿಗೆ ಸಂವಿಧಾನವೇ ಮೂಲಾಧಾರ. ಸಂವಿಧಾನ ನೀಡಿರುವ ಸಮಾನತೆ ಮತ್ತು ರಕ್ಷಣೆ ಕಾನೂನಿನಿಂದ ಮಹಿಳೆಯರು ವಿಜ್ಞಾನ, ಬಾಹ್ಯಾಕಾಶ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿ ಸಕ್ರಿಯರಾಗಿದ್ದಾರೆ. ಮನೆಯಲ್ಲಿ ಹಾಗೂ ಕಾರ್ಯ ಕ್ಷೇತ್ರಗಳಲ್ಲಿ ನೆಮ್ಮದಿಯಿಂದ ಕೆಲಸ ನಿರ್ವಹಿಸಲು ಸಾಧ್ಯವಾಗಿದೆ. ಬದಲಾಗುತ್ತಿರುವ ದಿನಮಾನಗಳಲ್ಲಿ ಜನಸಾಮಾನ್ಯರೆ ದೈನಂದಿನ ಬದುಕಿನಲ್ಲಿ ಕೆಲವು ಕಾನೂನು ವಿರೋಧಿ ಕೆಲಸಗಳಿಂದ ಹೊಸ ಕಾನೂನುಗಳು ರೂಪಿತವಾಗುತ್ತಿವೆ. ಕಾನೂನು ರಚನೆಯಂತೆ ಶಿಕ್ಷೆಯ ಸ್ವರೂಪವನ್ನು ಸ್ಪಷ್ಠವಾಗಿ ರೂಪಿಸಿ ಜಾರಿಗೊಳಿಸಿದರೆ ಕಾನೂನು ಬಾಹಿರ ಚಟುವಟಿಕೆಗಳನ್ನು ತಡೆದು ಉತ್ತಮ ಸಾಮಾಜಿಕ ಪರಿಸರವನ್ನು ನಿರ್ಮಿಸಲು ಸಾಧ್ಯವಿದೆ. ಇತ್ತೀಚೆಗೆ ಜಾರಿಯಾಗಿರುವ ಜಾತಿನಿಂದನೆ ಕಾನೂನು ಸಮಾಜದ ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಠ ಪಂಗಡದ ಕಟ್ಟಕಡೆಯ ವ್ಯಕ್ತಿಯು ಶಾಂತಿ, ನೆಮ್ಮದಿ ಮತ್ತು ಆತ್ಮಗೌರವದಿಂದ ಬದುಕು ಸಾಗಿಸಲು ಸಂವಿಧಾನ ರಕ್ಷಾಕವಚವಾಗಿದೆ. – ಶ್ರೀಮತಿ. ಎಸ್. ನಾಗಶ್ರೀ, ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರು, ಕಲಬುರಗಿ.

ಕಲಬುರಗಿ: ಆಧುನಿಕತೆಯ ಜೀವನ ಶೈಲಿಯ ಪ್ರಭಾವದಿಂದ ಯುವಜನಾಂಗ ಕಾನೂನುಬಾಹಿರ ಚಟುವಟಿಕೆಗಳಿಗೆ ಬಲಿಯಾಗದೆ ಕಠಿಣ ಪರಿಶ್ರಮದಿಂದ ಅಧ್ಯಯನ ನಡೆಸಿ ಉಜ್ವಲ ಭವಿಷ್ಯವನ್ನು ರೂಪಿಸಿಕೊಳ್ಳಬೇಕು. ಡಾ. ಬಿ.ಆರ್. ಅಂಬೇಡ್ಕರ್ ಅವರು ರಚಿಸಿರುವ ಶ್ರೇಷ್ಠ ಸಂವಿಧಾನದಲ್ಲಿರುವ ಕಾನೂನುಗಳನ್ನು ಪಾಲಿಸುವ ಮೂಲಕ ಗೌರವಿಸಬೇಕು ಎಂದು ಕಲಬುರಗಿ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶೆ ಶ್ರೀಮತಿ ಎಸ್. ನಾಗಶ್ರೀ ಹೇಳಿದರು.

ಗುಲಬರ್ಗಾ ವಿಶ್ವವಿದ್ಯಾಲಯದ ಡಾ. ಬಿ.ಆರ್. ಅಂಬೇಡ್ಕರ್ ಅಧ್ಯಯನ ಹಾಗೂ ಸಂಶೋಧನಾ ಸಂಸ್ಥೆ ವತಿಯಿಂದ ಮಹಾತ್ಮ ಗಾಂಧಿ ಸಭಾಂಗಣದಲ್ಲಿ ಆಯೋಜಿಸಿದ ‘ಸಂವಿಧಾನ ದಿನಾಚರಣೆ’ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಡಾ. ಬಿ. ಆರ್. ಅಂಬೇಡ್ಕರ್ ಅವರ ಭಾವಚಿತ್ರ ಹಾಗೂ ಸಂವಿಧಾನ ಪ್ರಸ್ತಾವನೆಯ ಚಿತ್ರಕ್ಕೆ ಪುಷ್ಪ ಸಮರ್ಪಿಸಿ ಮಾತನಾಡಿದ ಅವರು ಪ್ರಸ್ತುತ ದಿನಗಳಲ್ಲಿ ಹೊಸ ಘಟನೆಗಳಿಗೆ ಅನುಸಾರ ಹೊಸ ಕಾನೂನುಗಳು ರಚನೆಯಾಗುತ್ತಿವೆ. ಅವುಗಳನ್ನು ಅರಿತುಕೊಂಡು ಕಾನೂನು ಪಾಲಿಸುವ ಮೂಲಕ ಮಾನವೀಯತೆಯಿಂದ ತಾನು ಬದುಕಿ ಮತ್ತೊಬ್ಬರನ್ನು ಬದುಕಿಸುವ ಮನಸ್ಥಿತಿ ಬೆಳೆಸಿಕೊಳ್ಳಬೇಕು. ಜನರ ನೆಮ್ಮದಿ ಜೀವನ ನಿರ್ವಹಣೆ ಮತ್ತು ಆದರ್ಶ ಸಾಧನೆಗಾಗಿ ನಿಯಮಗಳನ್ನು ಜಾರಿಗೆ ತರಲಾಗಿದೆ ಎಂದರು.

Contact Your\'s Advertisement; 9902492681

ದೇಶದ ಕಟ್ಟ ಕಡೆಯ ವ್ಯಕ್ತಿಯು ಸಹ ಸ್ವಾತಂತ್ರ್ಯ, ಸಮಾನತೆ, ಬಾತೃತ್ವ ಭಾವನೆಯೊಂದಿಗೆ ಜೀವಿಸುವ ಹಕ್ಕನ್ನು ಸಂವಿಧಾನ ನೀಡಿದೆ. ಇನ್ನೊಬ್ಬರ ನೆಮ್ಮದಿಯ ಬದುಕಿಗೆ ಚ್ಯುತಿ ಬಾರದಂತೆ ಪ್ರತಿಯೊಬ್ಬರು ಬದುಕಬೇಕು. ಕುಟುಂಬ ಹಾಗೂ ಸಮಾಜದೊಂದಿಗೆ ಉತ್ತಮ ಸಂಬಂಧವನ್ನು ಕಾಯ್ದುಕೊಂಡು ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು. ಸಂವಿಧಾನದ 14ನೇ ವಿಧಿಯ ಕಾನೂನಿನ ಮುಂದೆ ಎಲ್ಲರೂ ಸಮಾನರು ಹಾಗೆಯೇ ಸಮಾನ ರಕ್ಷಣೆಯನ್ನು ನೀಡಿದೆ ಜೊತೆಗೆ ಸ್ವಾತಂತ್ರ್ಯದ ಹಕ್ಕು ಮತ್ತು ರಕ್ಷಣೆಯಿಂದ ಪ್ರಜೆಗಳಿಗೆ ವಂಚನೆಯಾಗದಂತೆ ಸಂವಿಧಾನ ರಕ್ಷಣೆ ನೀಡಿದೆ ಎಂದರು.

ಕುಲಪತಿ ಪ್ರೊ. ದಯಾನಂದ ಅಗಸರ ಅಧ್ಯಕ್ಷತೆ ವಹಿಸಿ ಮಾತನಾಡಿ ಇಡೀ ದೇಶವೇ ಇಂದು ಸಂವಿಧಾನ ದಿನವನ್ನು ಆಚರಿಸುತ್ತಿದೆ. ಡಾ. ಬಿ.ಆರ್. ಅಂಬೇಡ್ಕರ್ ಜಗತ್ತಿನ ವಿವಿಧ ರಾಷ್ಟ್ರಗಳ ಸಂವಿಧಾನವನ್ನು ಅಧ್ಯಯನ ಮಾಡಿ ಆದರ್ಶ ಸಂವಿಧಾನವನ್ನು ರಚಿಸಿದ್ದಾರೆ. ಅದರಲ್ಲಿರುವ ಮೂಲಭೂತ ಹಕ್ಕುಗಳು ಮತ್ತು ಕರ್ತವ್ಯಗಳನ್ನು ಅರಿತುಕೊಂಡು ಶಾಂತಿ, ಸಮಾನತೆ, ಮತ್ತು ಸದೃಡತೆಯಿಂದ ಕಾಪಾಡಿ ಕರ್ತವ್ಯಗಳನ್ನು ನಿರ್ವಹಿಸುತವ ಮೂಲಕ ಉತ್ತಮ ನಡತೆ ಮತ್ತು ಮಾನವೀಯ ಸಂಬಂಧಗಳನ್ನು ಕಂಡುಕೊಳ್ಳಬೇಕು. ಕಾನೂನುಗಳು ಕಾಲಕಾಲಕ್ಕೆ ಬದಲಾವಣೆ ಆದರೂ ಅವುಗಳು ಸಂವಿಧಾನದ ಚೌಕಟ್ಟಿನಲ್ಲಿರಬೇಕು ಎಂದು ಹೇಳಿದರು.

ಡಾ. ಬಿ. ಆರ್. ಅಂಬೇಡ್ಕರ್ ಅಧ್ಯಯನ ಹಾಗೂ ಸಂಶೋಧನಾ ಸಂಸ್ಥೆ ನಿರ್ದೇಶಕ ಪ್ರೊ. ಚಂದ್ರಕಾಂತ್ ಎಂ. ಯಾತನೂರ್ ಅತಿಥಿ ಗಣ್ಯರನ್ನು ಸ್ವಾಗತಿಸಿ ಪ್ರಾಸ್ತವಿಕವಾಗಿ ಮಾತನಾಡಿ 75ನೇ ಅಮೃತ ಮಹೋತ್ಸವದ ಸಂದರ್ಭದಲ್ಲಿ ದೇಶದ ಸಂವಿಧಾನ ದಿನವನ್ನು ಆಚರಿಸುತ್ತಿರುವುದು ಹೆಮ್ಮೆಯ ಸಂಗತಿ. ಸಂವಿಧಾನ ಪ್ರಸ್ತಾವನೆಯಲ್ಲಿರುವ ಸ್ವಾತಂತ್ರ್ಯ, ಸಮಾನತೆ, ಮತ್ತು ಬಾತೃತ್ವ ತತ್ವಗಳ ಅನುಸಾರ ಸರ್ಕಾರಗಳು ಆಡಳಿತ ನಡೆಸುತ್ತಿವೆ. ಜಾತಿ, ಧರ್ಮ, ಲಿಂಗ ಬೇಧವಿಲ್ಲದೆ ಸರ್ವರಿಗೂ ಸಮಾನ ಅವಕಾಶ ನೀಡಿರುವ ಸಂವಿಧಾನ ಜಗತ್ತಿನ ಸಂವಿಧಾನಗಳಿಗೆ ಮಾದರಿ. ಸಮಾಜದ ಕಟ್ಟ ಕಡೆಯ ವ್ಯಕ್ತಿಯು ಸ್ವಾಭಿಮಾನ ಮತ್ತು ಆತ್ಮಸ್ಥೈರ್ಯದೊಂದಿಗೆ ಮುಖ್ಯವಾಹಿನಿಯಲ್ಲಿ ಗುರುತಿಸಿಕೊಂಡು ಉನ್ನತ ಅಧಿಕಾರ ಹಾಗೂ ಉತ್ತಮ ಸ್ಥಾನಮಾನಗಳನ್ನು ಪಡೆಯುವ ಮಹತ್ವದ ಅವಕಾಶವನ್ನು ನೀಡಿರುವ ಡಾ. ಬಿ. ಆರ್. ಅಂಬೇಡ್ಕರ್ ಅವರನ್ನು ಪ್ರತಿಯೊಬ್ಬ ಪ್ರಜೆಯು ಸ್ಮರಿಸಬೇಕು ಎಂದರು.

ಕುಲಸಚಿವ ಡಾ. ಬಿ. ಶರಣಪ್ಪ ಸಂವಿಧಾನ ಪೀಠಿಕೆ ವಾಚಿಸಿದರು. ಸಿಂಡಿಕೇಟ್ ಸದಸ್ಯ ರಾಘವೇಂದ್ರ ಎಮ್ ಭೈರಪ್ಪ, ವಿದ್ಯಾ ವಿಷಯಕ ಪರಿಷತ್ ಸದಸ್ಯ ಪ್ರೊ. ಕೆ. ಲಿಂಗಪ್ಪ, ಮೌಲ್ಯ ಮಾಪನ ಕುಲಸಚಿವ ಪ್ರೊ. ಜ್ಯೋತಿ ಧಮ್ಮ ಪ್ರಕಾಶ್ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಶಿಕ್ಷಣ ನಿಕಾಯದ ಡೀನ್ ಪ್ರೊ. ಹೂವಿನಬಾವಿ ಬಾಬಣ್ಣ, ಕಾನೂನು ನಿಕಾಯದ ಡೀನ್ ಡಾ. ದೇವಿದಾಸ ಮಾಲೆ, ಆಡಳಿತ ವಿಶೇಷಾಧಿಕಾರಿ ಪ್ರೊ. ಚಂದ್ರಕಾಂತ್ ಕೆಳಮನಿ, ಪ್ರೊ. ಗಾಯಕವಾಡ, ಪ್ರೊ. ಶಂಕ್ರಪ್ಪ ಸೇರಿದಂತೆ ವಿವಿಧ ವಿಭಾಗಗಳ ಮುಖ್ಯಸ್ಥರು, ಶಿಕ್ಷಕ ಮತ್ತು ಶಿಕ್ಷಕೇತರ ಸಿಬ್ಬಂದಿ, ಸ್ನಾತಕೋತ್ತರ ಹಾಗೂ ಸಂಶೋಧನಾ ವಿದ್ಯಾರ್ಥಿಗಳು, ಅತಿಥಿ ಉಪನ್ಯಾಸಕರು ಭಾಗವಹಿಸಿದ್ದರು. ಅತಿಥಿ ಉಪನ್ಯಾಸಕ ಡಾ. ಬುದ್ಧಭಾರತ ಬೆಂಡೆ ವಂದಿಸಿದರು. ಅನಿಲ್ ಬನಸೋಡೆ ಬುದ್ಧಿವಂದನೆ ಗೀತೆ ಹಾಡಿದರು. ಅತಿಥಿ ಉಪನ್ಯಾಸಕ ಡಾ. ಕಾಶಿನಾಥ್ ನೂಲಕರ್ ಕಾರ್ಯಕಮ ನಿರ್ವಹಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here