-
ಉತ್ತಮ ಪರಿಸರ ಇದ್ದಲ್ಲಿ ಗುಣಮಟ್ಟದ ಶಿಕ್ಷಣ, ಆರೋಗ್ಯ ಪಡೆಯಬಹುದು
ಕಲಬುರಗಿ,ನ.26; ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಅಲ್ಪಸಂಖ್ಯಾತ ಕಲ್ಯಾಣ ಸಂಯುಕ್ತಾಶ್ರಯದಲ್ಲಿ ರವಿವಾರ ಕಲಬುರಗಿ ತಾಲೂಕಿನ ಸಾವಳಗಿ(ಬಿ) ಗ್ರಾಮದ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ಅಧೀನದ ಮೋರಾರ್ಜಿ ದೇಸಾಯಿ ಬಾಲಕಿಯರ ವಸತಿ ಶಾಲೆ, ಸರ್ಕಾರಿ ಮುಸ್ಲಿಂ ವಸತಿ ಶಾಲೆಯಲ್ಲಿ ಹಮ್ಮಿಕೊಂಡಿದ್ದ ವಸತಿ ನಿಲಯ ಪರಿಸರ ಸ್ವಚ್ಛಗೊಳಿಸುವ “ನನ್ನ ಹಾಸ್ಟೆಲ್, ಸ್ವಚ್ಚ ಹಾಸ್ಟೆಲ್” ಅಭಿಯಾನಕ್ಕೆ ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು, ಜಿಲ್ಲೆಯಲ್ಲಿ ಸಮಾಜ ಕಲ್ಯಾಣ, ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ವ್ಯಾಪ್ತಿಯ ಸುಮಾರು 350 ವಸತಿ ನಿಲಯ, ಶಾಲಾ-ಕಾಲೇಜು ಆವರಣಗಳ ಮತ್ತು ಸುತ್ತಮುತ್ತಲಿನ ಪರಿಸರ ಸ್ವಚ್ಛವಾಗಿಟ್ಟುಕೊಳ್ಳುವ ಗುರಿಯೊಂದಿಗೆ ಈ ಸ್ವಚ್ಛತಾ ಅಭಿಯಾನ ಆರಂಭಿಸಲಾಗಿದೆ ಎಂದರು.
ಪ್ರತಿ ವಸತಿ ನಿಲಯದಲ್ಲಿ ಸುಮಾತು 0 ರಿಂದ 300ರ ವರೆಗೆ ಮಕ್ಕಳು ಇರುತ್ತಾರೆ. ವಸತಿ ನಿಲಯದ ಮಕ್ಕಳು, ಸಿಬ್ಬಂದಿ ಸ್ವಚ್ಚತೆಯ ಪ್ರತಿಜ್ಞೆಯೊಂದಿಗೆ ಮುಂದೆ ಬಂದಲ್ಲಿ ನಿಮ್ಮ ಪರಿಸರ ಅಸ್ವಚ್ಛವಾಗಿರಲು ಸಾಧ್ಯವೆ? ಇಲ್ವಲಾ ಎಂದು ಮಕ್ಕಳನ್ನು ಪ್ರಶ್ನಿಸಿದ ಜಿಲ್ಲಾಧಿಕಾರಿಗಳು, ಶುದ್ಧ ಪರಿಸರ ಇದ್ದಲ್ಲಿ ಕಲಿಕೆಗೆ ಪೂರಕ ವಾತಾವರಣ ಸಿಗಲಿದೆ. ಜೊತೆಗೆ ಉತ್ತಮ ಆರೋಗ್ಯ ಕಾಪಾಡಬಹುದಾಗಿದೆ. ಹೀಗಾಗಿ ಸ್ವಚ್ಛತೆಗೆ ಎಲ್ಲರು ಕೈಜೋಡಿಸಬೇಕು. ಎಲ್ಲೆಂದರಲ್ಲಿ ಕಸ ಬಿಸಾಕಬಾರದು, ವೈಯಕ್ತಿಕ ಶೌಚಾಲಯ ಕಡ್ಡಾಯವಾಗಿ ಬಳಕೆ ಮಾಡಬೇಕಲ್ಲದೆ ವೈಯಕ್ತಿಕ ಸ್ವಚ್ಛತೆಗೂ ಆದ್ಯತೆ ನೀಡಬೇಕು ಎಂದು ಮಕ್ಕಳಿಗೆ ಕರೆ ನೀಡಿದರು.
ಹಿಂದುಳಿದ ವರ್ಗಗಳ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಜಾವೀದ್ ಕೆ. ಕಾರಂಗಿ ಮಾತನಾಡಿ, ಮೆಟ್ರಿಕ್ ಮತ್ತು ಮೆಟ್ರಿಕ್ ನಂತರದ ಎಲ್ಲ ಹಾಸ್ಟೆಲ್‌ಗಳಲ್ಲಿ ಸ್ವಚ್ಛತೆ ಬಗ್ಗೆ ಅರಿವು ಮೂಡಿಸಲು ಈ ಅಭಿಯಾನ ಕೈಗೊಳ್ಳಲಾಗಿದೆ. ಇದಕ್ಕೆ ವಿದ್ಯಾರ್ಥಿಗಳು ಮತ್ತು ಹಾಸ್ಟೆಲ್ ಸಿಬ್ಬಂದಿ ಕೈಜೋಡಿಸಬೇಕು. ಗಾಂಧೀಜೀ ಅವರ ಆಶಯದಂತೆ ಮನೆ, ಶಾಲೆ, ಕಚೇರಿ ಹೀಗೆ ನಮ್ಮ ಸುತ್ತಮುತ್ತಲಿನ ಪರಿಸರ ಸ್ವಚ್ಚವಾಗಿಟ್ಟುಕೊಳ್ಳುವ ಜವಾಬ್ದಾರಿ ಪ್ರತಿಯೊಬ್ಬ ನಾಗರೀಕರ ಅರಿಯಬೇಕು ಎಂದರು.
ಅಭಿಯಾನದ ಅಂಗವಾಗಿ ಬೆಳಿಗ್ಗೆ ಹಾಸ್ಟೆಲ್ ಸಿಬ್ಬಂದಿ, ವಸತಿ ನಿಲಯದ ಮಕ್ಕಳು ಹಾಸ್ಟೆಲ್ ಆವರಣ ಸ್ವಚ್ಚಗೊಳಿಸಿದರು.
ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕಿ ಪಿ. ಶುಭ, ಕಲಬುರಗಿ ತಹಸೀಲ್ದಾರ ನಾಗಮ್ಮ ಕಟ್ಟಿಮನಿ, ಪ್ರಾಂಶುಪಾಲರಾದ ಡಾ. ಶಫಿಕುನ್ನಿಸಾ ರುಬೀನಾ, ಭಾಗ್ಯಶ್ರೀ ಕುಂಬಾರ ಸೇರಿದಂತೆ ವಿದ್ಯಾರ್ಥಿನಿಯರು ಇದ್ದರು. ಇದೇ ಸಮಯದಲ್ಲಿ ಎಲ್ಲರು ಸ್ವಚ್ಛತಾ ವಿಧಿಯನ್ನು ತೆಗೆದುಕೊಂಡರು.