ಕಲಬುರಗಿ: ಹಿರಿಯ ಸ್ವಾತಂತ್ರ್ಯ, ಹೋರಾಟಗಾರ, ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾ ಗೌರವಾಧ್ಯಕ್ಷ, ಮಾಜಿ ಸಚಿವ ಡಾ|ಭೀಮಣ್ಣಖಂಡ್ರೆ ಶತಮಾನೋತ್ಸವ ಹಾಗೂ ಲೋಕನಾಯಕ ಅಭಿನಂದನಾ ಗ್ರಂಥ ಸಮರ್ಪಣೆ ಕಾರ್ಯಕ್ರಮ ಡಿ.2ರಂದು ಭಾಲ್ಕಿಯ ಬಿಕೆಐಟಿ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕಲ್ಬುರ್ಗಿ ಜಿಲ್ಲೆಯ ಬಸವ ಉತ್ಸವ ಸಮಿತಿಯ ಉಪಾಧ್ಯಕ್ಷರಾದ ಮಲ್ಲಿನಾಥ್ ಪಾಟೀಲ್ ಕಾಳಗಿ ಅವರು ತಿಳಿಸಿದರು.
ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾ, ಬೀದರ್ ಶಾಂತಿವರ್ಧಕ ಶಿಕ್ಷಣ ಸಂಸ್ಥೆ ಸಹಯೋಗದಡಿ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ಕಾರ್ಯಕ್ರಮಕ್ಕೆ ಜಿಲ್ಲೆಯಿಂದ ಸುಮಾರು 10 ಸಾವಿರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು ಆಗಮಿಸಲಿದ್ದಾರೆ. ಚಿತ್ತಾಪುರ ತಾಲೂಕಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ಅವರ ಅಭಿಮಾನಿಗಳು ಭಾಗವಹಿಸಲಿದ್ದಾರೆ. ಲಿಂಗಶ್ರೀ ಹಾನಗಲ್ ಕುಮಾರಸ್ವಾಮಿ ಸ್ಥಾಪಿಸಿದ ಮಹಾಸಭಾದ 20ನೇ ಅಧ್ಯಕ್ಷರಾಗಿ ಸದಸ್ಯರ ಸಂಖ್ಯೆಯನ್ನು ಲಕ್ಷಕ್ಕೆ ಹೆಚ್ಚಿಸಿ ಬೆಂಗಳೂರು ಹೃದಯ ಭಾಗದ ಸದಾಶಿವನಗರದಲ್ಲಿ ಜಾಗ ಖರೀದಿಸಿ ಸ್ವಂತ ಕಟ್ಟಡ ನಿರ್ಮಿಸುವಲ್ಲಿ ಡಾ. ಭೀಮಣ್ಣ ಖಂಡ್ರೆ ಕೊಡುಗೆ ಅಪಾರ. ಹೀಗಾಗಿ ಅವರ ಶತಮಾನೋತ್ಸವವನ್ನು ಮಹಾಸಭಾ ಆಯೋಜಿಸಿದೆ ಎಂದರು.
ಹಿರಿಯ ಸಾಹಿತಿ ಡಾ. ಚನ್ನಬಸಪ್ಪ ಪ್ರಧಾನ ಸಂಪಾದಕತ್ವದಲ್ಲಿ ಸಿದ್ಧಪಡಿಸಿರುವ ಲೋಕನಾಯಕ 860 ಪುಟಗಳ ಬೃಹತ್ ಅಭಿನಂದನಾ ಗ್ರಂಥ ಸಮರ್ಪಣೆ ಮಾಡಲಾಗುತ್ತಿದೆ. ಸುತ್ತೂರು ಸಂಸ್ಥಾನದ ಡಾ. ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಹಾಗೂ ನಾಡಿನ ವಿವಿಧ ಮಠಾ ಧೀಶರ ಸಾನ್ನಿಧ್ಯದ ಕಾರ್ಯಕ್ರಮದಲ್ಲಿ ಎಐಸಿಸಿ ಅಧ್ಯಕ್ಷ ಡಾ. ಮಲ್ಲಿಕಾರ್ಜುನ ಖರ್ಗೆ, ಸಿಎಂ ಸಿದ್ದರಾಮಯ್ಯ ಹಾಗೂ ಹಲವು ಸಚಿವರು, ಶಾಸಕರು, ವಿವಿಧ ಕ್ಷೇತ್ರದ ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.
ಸಮಾಜದ ಎಲ್ಲ ಜಾತಿ, ವರ್ಗದ ಕಲ್ಯಾಣ, ವಂಚಿತರಿಗೆ ನ್ಯಾಯ ದೊರಕಿಸಲು ಡಾ. ಭೀಮಣ್ಣ ಖಂಡ್ರೆ ಅವಿರತ ಹೋರಾಟ ನಡೆಸಿದ್ದಾರೆ. ವಿಶೇಷವಾಗಿ ವೀರಶೈವ ಲಿಂಗಾಯಿತ ಸಮುದಾಯದ ಸವಾರ್ಂಗೀಣ ಪ್ರಗತಿಗೆ ಅವಿರತ ಶ್ರಮಿಸಿದ್ದಾರೆ. ಹೀಗಾಗಿ ಅವರ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.