ಶಹಾಬಾದ: ಪ್ರಜಾಪ್ರಭುತ್ವ ಯಶಸ್ಸಿಗೆ ಮತದಾನವೇ ಭದ್ರ ಬುನಾದಿ.ಮತದಾನ ಮಾಡುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿದೆ ಎಂದು ತಹಸೀಲ್ದಾರ ಜಗದೀಶ.ಎಸ್.ಚೌರ್ ಹೇಳಿದರು.
ಅವರು ಶನಿವಾರ ಭಾರತ ಚುನಾವಣಾ ಆಯೋಗ, ಜಿಲ್ಲಾಡಳಿತ ಮತ್ತು ಸ್ವೀಪ್ ಸಮಿತಿ ಕಲಬುರಗಿ ಹಾಗೂ ತಾಲೂಕಾ ಸ್ವೀಪ್ ಸಮಿತಿ ಸಂಯುಕ್ತಾಶ್ರಯದಲ್ಲಿ ನಗರದ ಸಿ.ಎ.ಇಂಗಿನಶೆಟ್ಟಿ ಕಾಲೇಜಿನಲ್ಲಿ ಆಯೋಜಿಸಲಾದ ಮತದಾರರ ವಿಶೇಷ ನೊಂದಣಿ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪ್ರತಿಯೊಬ್ಬ ಮತದಾರ ಸಹ ಮತದಾನದ ಮಹತ್ವವನ್ನು ಅರಿತುಕೊಂಡು ಮತದಾನ ಮಾಡಬೇಕಾಗಿದೆ. ಪ್ರಜಾಪ್ರಭುತ್ವದ ಯಶಸ್ಸಿನ ದೃಷ್ಟಿಯಿಂದ ಇದು ಅತ್ಯವಶ್ಯಕ. ಮತದಾರರು ಯೋಚಿಸಿ ಮತ ಚಲಾಯಿಸಿ,ಪ್ರಜಾಪ್ರಭುತ್ವ ಯಶಸ್ಸಿಗೆ ಮತದಾನವೇ ಭದ್ರ ಬುನಾದಿ.ದೇಶದ ಪ್ರಗತಿಗೆ ಒಳ್ಳೆಯ ನಾಯಕರನ್ನು ಆಯ್ಕೆ ಮಾಡುವ ಹಕ್ಕು ತಮಗಿದೆ.ಯಾರನ್ನು ಆಯ್ಕೆ ಮಾಡಿದರೇ ದೇಶದ ಅಭಿವೃದ್ಧಿ ಸಾಧ್ಯ. ಮಾರ್ಚ 2024ರ ಒಳಗಡೆ 18 ವರ್ಷ ತುಂಬುವ ಎಲ್ಲರೂ ನೊಂದಣಿ ಮಾಡಬೇಕು. ಪಿಯುಸಿ ಹಂತದಲ್ಲಿ ಯೋಚನೆ ಮಾಡುವಂಥ ಬುದ್ಧಿ ಬಂದಿರುತ್ತದೆ. ಯಾವುದು ಒಳ್ಳೆಯದು ಹಾಗೂ ಕೆಟ್ಟದ್ದು ವ್ಯತ್ಯಾಸ ಕಂಡುಕೊಳ್ಳುವ ಆಲೋಚನೆ ಬಂದಿರುತ್ತದೆ.ಆದ್ದರಿಂದ ಈ ಹಂತದಲ್ಲಿ ಆಲೋಚಿಸಿ ಮತದಾನ ಮಾಡಿ ಎಂದು ಹೇಳಿದರು.
ನಗರಸಭೆಯ ಪೌರಾಯುಕ್ತೆ ಪಂಕಜಾ ರಾವೂರ ಮಾತನಾಡಿ, ಕಡ್ಡಾಯ ಮತದಾನ ನಮ್ಮೆಲ್ಲರ ಜವಾಬ್ದಾರಿ ಮತ್ತು ಹಕ್ಕಾಗಿದೆ. ಜಾಗೃತ ಮತದಾನ ಮಾಡುವ ಮೂಲಕ ಪ್ರಜಾಪ್ರಭುತ್ವವನ್ನು ಉಳಿಸುವ ಕೆಲಸವಾಗಬೇಕಿದೆ. ಚುನಾವಣೆಯಲ್ಲಿ ಒಂದೊಂದು ಮತವು ನಿರ್ಣಾಯಕವಾಗಲಿದೆ. ತಾವು ಮತ ಚಲಾಯಿಸುವ ಜೊತೆಗೆ ಇತರರೂ ಮತದಾನವನ್ನು ಮಾಡುವಂತೆ ಜನತೆಯನ್ನು ಪ್ರೇರೆಪಿಸುವ ಕಾರ್ಯವನ್ನು ಮಾಡಬೇಕಾಗಿದೆ.
ಗ್ರೇಡ್-2 ತಹಸೀಲ್ದಾರ ಗುರುರಾಜ ಸಂಗಾವಿ, ಸಿಡಿಪಿಓ ಡಾ.ವಿಜಯಲಕ್ಷ್ಮಿ ಹೇರೂರ್, ಸಿ.ಎ.ಇಂಗಿನಶೆಟ್ಟಿ ಕಾಲೇಜಿನ ಕಾರ್ಯದರ್ಶಿ ದಿಲೀಪ್ ಯಲಶೆಟ್ಟಿ, ಪ್ರಾಂಶುಪಾಲ ರಾಜಗೋಪಾಲ ಜೂಜಾರೆ, ನಗರಸಭೆಯ ವ್ಯವಸ್ಥಾಪಕ ಶರಣಗೌಡ ಪಾಟೀಲ,ಶಿರಸ್ತೆದಾರ ರವಿಕುಮಾರ ಗಾಜರೆ, ಉಪನ್ಯಾಸಕರಾದ ಪ್ರವೀಣ ರಾಜನ್, ಸಾಬಣ್ಣ ಗುಡ್ಲಾ, ಶರಣು ಹಲಕರ್ಟಿ,ದೀಪಾ, ಶ್ವೇತಾ, ಅಶ್ವಿನಿ, ಪ್ರಕಾಶ ಕೋಸಗಿಕರ್ ಸೇರಿದಂತೆ ಅನೇಕರು ಇದ್ದರು.