ಕಾರ್ಮಿಕರ ಕನಿಷ್ಠ ವೇತನ 18000 ರೂ.ಗಳಿಗೆ ಹೆಚ್ಚಿಸಲು ಆಗ್ರಹಿಸಿ ಸೆಪ್ಟೆಂಬರ್ ೫ರಂದು ರಾಜ್ಯವ್ಯಾಪಿ ಮುಷ್ಕರ

0
34

ಕಲಬುರಗಿ: ಅಸಂಘಟಿತ, ಸಂಘಟಿತ ಹಾಗೂ ಯೋಜನಾ ಕಾರ್ಮಿಕರಿಗೆ ಮಾಸಿಕ ಕನಿಷ್ಠ ವೇತನ 18000 ರೂ. ಗಳನ್ನು ನಿಗದಿಪಡಿಸುವುದೂ ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಸೆಪ್ಟೆಂಬರ್ ೫ರಂದು ರಾಜ್ಯವ್ಯಾಪಿ ಮುಷ್ಕರ ಹಮ್ಮಿಕೊಳ್ಳಲಾಗಿದೆ ಎಂದು ಹಿರಿಯ ಕಾರ್ಮಿಕ ಮುಖಂಡ ಮಾರುತಿ ಮಾನ್ಪಡೆ ಅವರು ಇಲ್ಲಿ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಸಿಐಟಿಯು, ಅಖಿಲ ಭಾರತ್ ಕಿಸಾನ್ ಸಭಾ, ಅಖಿಲ ಭಾರತ್ ಕೃಷಿ ಕೂಲಿಕಾರರ ಸಂಘ ರಾಜ್ಯದ ಎಲ್ಲ ಹೋಬಳಿ, ತಾಲ್ಲೂಕು ಹಾಗೂ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಿವೆ ಎಂದರು. ಖಾಯಂ ಉದ್ಯೋಗಗಳ ಬದಲಾಗಿ ಯಾವುದೇ ಕಾನೂನು ರಕ್ಷಣೆ, ಕನಿಷ್ಠ ವೇತನ, ಸಾಮಾಜಿಕ ರಕ್ಷಣಾ ಯೋಜನೆಗಳ ಸೌಲತ್ತುಗಳಿಲ್ಲದೇ ದುಡಿಯುವ ಗುತ್ತಿಗೆ ಹಾಗೂ ತರಬೇತಿ ಕಾರ್ಮಿಕರನ್ನು ನೇಮಕ ಮಾಡುವ ನೀತಿಯಿಂದಾಗಿ ದೇಶದಲ್ಲಿ ತೀವ್ರ ನಿರುದ್ಯೋಗ ಸಮಸ್ಯೆ ಆಗಿದೆ. ಆದ್ದರಿಂದ ಗುಲಾಮ್ ಪದ್ದತಿಯನ್ನು ರದ್ದುಗೊಳಿಸಿ, ರಾಜ್ಯ ಹಾಗೂ ಕೇಂದ್ರ ಸರ್ಕಾರಗಳಲ್ಲಿ ಖಾಲಿ ಇರುವ ಉದ್ಯೋಗಗಳನ್ನು ಭರ್ತಿ ಮಾಡಬೇಕು ಹಾಗೂ ಖಾಯಂ ಉದ್ಯೋಗ ಸೃಷ್ಠಿಸುವ ಖಾತರಿಗೊಳಿಸುವ ನೀತಿಗಳನ್ನು ಜಾರಿಗೊಳಿಸಬೇಕು ಎಂದು ಅವರು ಒತ್ತಾಯಿಸಿದರು.

Contact Your\'s Advertisement; 9902492681

ಸಾರ್ವಜನಿಕ ಉದ್ಯಮಗಳನ್ನು ಖಾಸಗೀಕರಣ ಮಾಡುವ ನೀತಿಯನ್ನು ಕೈಬಿಡುವಂತೆ ಆಗ್ರಹಿಸಿದ ಅವರು, ಉತ್ಪಾದನಾ ವಲಯ, ವಿಮೆ, ಬ್ಯಾಂಕ್, ಶಿಕ್ಷಣ, ಆರೋಗ್ಯ ವಲಯಗಳಲ್ಲಿ ಸರ್ಕಾರದ ಬಂಡವಾಳದ ಎಲ್ಲ ರೀತಿಯ ಹಿಂಬಡಿಕೆಯನ್ನು ಕೈಬಿಡುವಂತೆ, ಸಾರ್ವಜನಿಕ ವಲಯವನ್ನು ದೃಢಗೊಳಿಸುವಂತೆ, ಕರ್ನಾಟಕದಲ್ಲಿನ ಭದ್ರಾವತಿಯಲ್ಲಿರುವ ಶ್ರೀ ವಿಶ್ವೇಶ್ವರಯ್ಯ ಉಕ್ಕು ಮತ್ತು ಕಬ್ಬಿಣದ ಕಾರ್ಖಾನೆಯನ್ನು ಮುಚ್ಚುವ ತೀರ್ಮಾನವನ್ನು ಹಿಂಪಡೆದು ಕಾರ್ಖಾನೆಯನ್ನು ಉಳಿಸುವಂತೆ ಒತ್ತಾಯಿಸಿದರು.

ನೆರೆ ಸಂತ್ರಸ್ತರ ಮನೆ, ಹೊಲ, ಗದ್ದೆ, ಬದುಕನ್ನು ಕಟ್ಟಿಕೊಡಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕೂಡಲೇ ಮುಂದಾಗುವಂತೆ, ಕೃಷಿ ಉತ್ಪನ್ನಗಳಿಗೆ ಯೋಗ್ಯ ಬೆಂಬಲ ಬೆಲೆ ನೀಡಲು ಬೆಲೆ ಖಾತ್ರಿಗೊಳಿಸುವ ಕಾನೂನು ರೂಪಿಸುವಂತೆ, ಪ್ರವಾಹ ಮತ್ತು ಬರಗಾಲದ ಹಿನ್ನೆಲೆಯಲ್ಲಿ ಉದ್ಯೋಗ ಖಾತ್ರಿಯನ್ನು ವ್ಯಾಪಕವಾಗಿ ಜಾರಿಗೊಳಿಸುವಂತೆ, ಕೆಲಸದ ಮಿತಿಗಳನ್ನು ತೆಗೆದುಹಾಕಿ, ಕೂಲಿಯನ್ನು ೬೦೦ರೂ.ಗಳಿಗೆ ಹೆಚ್ಚಿಸುವಂತೆ ಅವರು ಆಗ್ರಹಿಸಿದರು. ಸುದ್ದಿಗೋಷ್ಠಿಯಲ್ಲಿ ಶರಣಬಸಪ್ಪ ಮಮಶೆಟ್ಟಿ, ಗೌರಮ್ಮ ಪಾಟೀಲ್, ಅಶೋಕ್ ಮ್ಯಾಗೇರಿ, ಮೊಹ್ಮದ್ ಅಷ್ಪಾಕ್, ಶಾಂತಪ್ಪ ಪಾಟೀಲ್ ಸಣ್ಣೂರ್ ಅವರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here