ಸುರಪುರ:ತಾಲೂಕಿನ ದೇವಿಕೇರಾ ಗ್ರಾಮದಲ್ಲಿ ಇದೇ 18 ಮತ್ತು 19 ರಂದು ನಡೆಯಲಿರುವ ಗ್ರಾಮದೇವತೆ,ಮರೆಮ್ಮ,ಪಾಲ್ಕಮ್ಮ ಇವರ ಜಾತ್ರೆಯಲ್ಲಿ ಯಾವುದೇ ಕೋಣ ಕುರಿ ಬಲಿಯನ್ನು ನೀಡದಂತೆ ತಿಳಿಸಲಾಗಿದೆ ಎಂದು ತಹಸೀಲ್ದಾರ್ ಕೆ.ವಿಜಯಕುಮಾರ ತಿಳಿಸಿದರು.
ನಗರದ ತಹಸೀಲ್ದಾರ್ ಕಚೇರಿಯಲ್ಲಿ ಸುದ್ದಿಗೊಷ್ಠಿ ನಡೆಸಿ ಮಾತನಾಡಿ,ಬೆಳಿಗ್ಗೆ ದೇವಿಕೇರಾ ಗ್ರಾಮಕ್ಕೆ ನಾನು ಹಾಗೂ ಪೊಲೀಸ್ ಇನ್ಸ್ಪೇಕ್ಟರ್ ಆನಂದ ವಾಘಮೊಡೆ ಮತ್ತು ಸಿಬ್ಬಂದಿಗಳು ಹೋಗಿ ಗ್ರಾಮದಲ್ಲಿ ಮುಖಂಡರು,ವಿವಿಧ ಸಂಘ ಸಂಸ್ಥೆಗಳ ಮುಖಂಡರು ಹಾಗೂ ಸಾರ್ವಜನಿಕರೊಂದಿಗೆ ಸಭೆಯನ್ನು ನಡೆಸಲಾಗಿದ್ದು,ಸಭೆಯಲ್ಲಿ ಎಲ್ಲರಿಗೂ ತಿಳಿಸಲಾಗಿದೆ.ಅಲ್ಲಿಯ ಜನರು ಕೂಡ ನಮ್ಮಲ್ಲಿ ಯಾವುದೇ ಕೋಣ ಕುರಿ ಬಲಿಯನ್ನು ಮಾಡುವುದಿಲ್ಲ,ಬದಲಿಗೆ ಎಲ್ಲರು ತಮ್ಮ ತಮ್ಮ ಮನೆಗಳಲ್ಲಿ ಸಿಹಿ ಅಡುಗೆಯನ್ನು ಮಾಡುವ ಮೂಲಕ ನೈವೆದ್ಯ ಅರ್ಪಿಸಲಿದ್ದೇವೆ ಎಂದು ಭರವಸೆಯನ್ನು ನೀಡಿದ್ದಾರೆ ಎಂದರು.
ಹಾಗೊಮ್ಮೆ ಏನಾದರು ಕೋಣ ಕುರಿಗಳ ಬಲಿ ನೀಡಿದ್ದು ಕಂಡುಬಂದಲ್ಲಿ ಅಂತವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.ಈಗಾಗಲೇ ಜಿಲ್ಲಾಧಿಕಾರಿಗಳ ಸೂಚನೆಯಂತೆ ಗ್ರಾಮದಲ್ಲಿ ಸಭೆಯನ್ನು ನಡೆಸಲಾಗಿದೆ,ಪೊಲೀಸರು ಕೂಡ ಕರ್ತವ್ಯ ನಿರ್ವಹಿಸಲಿದ್ದಾರೆ.ಯಾವುದೇ ಕೋಣ ಕುರಿ ಬಲಿ ನಡೆಯದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪಿ.ಎಸ್.ಐ ಸಿದ್ರಾಮಪ್ಪ ಯಡ್ರಾಮಿ,ಗ್ರಾಮ ಲೆಕ್ಕಾಧಿಕಾರಿ ಮಲ್ಲಮ್ಮ ಸೇರಿದಂತೆ ಕಂದಾಯ ಇಲಾಖೆ ಸಿಬ್ಬಂದಿಗಳಿದ್ದರು.